ತೆರಿಗೆ ಪ್ರಸ್ತಾವನೆಯಲ್ಲೂ ರಾಷ್ಟ್ರ ಮೊದಲು ಮನೋಭಾವವಿರಲಿ: ನಿರ್ಮಲಾ ಸೀತಾರಾಮನ್
x

ತೆರಿಗೆ ಪ್ರಸ್ತಾವನೆಯಲ್ಲೂ ರಾಷ್ಟ್ರ ಮೊದಲು ಮನೋಭಾವವಿರಲಿ: ನಿರ್ಮಲಾ ಸೀತಾರಾಮನ್

ಬಜೆಟ್ ಸಿದ್ಧತೆ ಎಂದರೆ ಕೇವಲ ಕೆಲ ತೆರಿಗೆ ಬದಲಾವಣೆಯ ಪಟ್ಟಿ ಮಾಡುವುದಲ್ಲ. ಮುಂದಿನ ಎರಡು ದಶಕಗಳಲ್ಲಿ ದೇಶದ ಆರ್ಥಿಕತೆ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.


Click the Play button to hear this message in audio format

ದೇಶದ ತೆರಿಗೆ ವ್ಯವಸ್ಥೆಯು ಕೇವಲ ದರಗಳ ಕಡಿತ, ರಿಯಾಯಿತಿ ಅಥವಾ ವಿನಾಯಿತಿಗಳನ್ನು ಕೋರುವ ಸಾಧನವಾಗಬಾರದು. ಬದಲಿಗೆ, ಪ್ರತಿಯೊಂದು ತೆರಿಗೆ ಪ್ರಸ್ತಾವನೆಯಲ್ಲೂ ರಾಷ್ಟ್ರ ಮೊದಲು ಎಂಬ ತತ್ವ ಅಡಗಿರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ 'ನವಯುಗದ ತೆರಿಗೆ' ಕುರಿತಾದ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಸಂಶೋಧನೆ ಮತ್ತು ವಿಶ್ಲೇಷಣೆಗಳು ಅತ್ಯಂತ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಉದ್ಯಮಗಳು, ಸಂಸ್ಥೆಗಳು ಮತ್ತು ಸಂಘಟನೆಗಳು ಬಜೆಟ್ ಪೂರ್ವ ಸಮಾಲೋಚನೆಗಳಲ್ಲಿ ತೆರಿಗೆ ದರಗಳ ಕಡಿತ ಅಥವಾ ಸಬ್ಸಿಡಿಗಳನ್ನು ಕೇಳುತ್ತವೆ. ಆದರೆ, ಅಂತಹ ಬೇಡಿಕೆಗಳನ್ನು ಸಲ್ಲಿಸುವಾಗ ಈ ಕ್ರಮದಿಂದ ದೇಶದ ಆರ್ಥಿಕತೆಗೆ ಆಗುವ ಲಾಭವೇನು? ಎಂಬುದನ್ನು ಮೊದಲು ಯೋಚಿಸಬೇಕು. ದೇಶದ ಹಿತಾಸಕ್ತಿಯನ್ನು ಬದಿಗೊತ್ತಿ ಕೇವಲ ವೈಯಕ್ತಿಕ ಅಥವಾ ವಲಯವಾರು ರಿಯಾಯಿತಿಗಳನ್ನು ಕೇಳುವ ಪ್ರವೃತ್ತಿ ಬದಲಾಗಬೇಕು ಎಂದು ಕಿವಿಮಾತು ಹೇಳಿದರು.

'ವಿಕಸಿತ ಭಾರತ 2047'ಕ್ಕೆ ದೂರದೃಷ್ಟಿಯ ತೆರಿಗೆ ನೀತಿ ಅಗತ್ಯ

ಬಜೆಟ್ ಪೂರ್ವ ಸಮಾಲೋಚನೆಗಳ ಕುರಿತು ಮಾತನಾಡಿದ ಸಚಿವರು, ಬಜೆಟ್ ಸಿದ್ಧತೆ ಎಂದರೆ ಕೇವಲ ಕೆಲವು ತೆರಿಗೆ ಬದಲಾವಣೆಗಳ ಪಟ್ಟಿ ಮಾಡುವುದಲ್ಲ. ಇದು ಮುಂದಿನ ಎರಡು ದಶಕಗಳಲ್ಲಿ ಭಾರತದ ಆರ್ಥಿಕತೆ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ. ನಾವು 'ವಿಕಸಿತ ಭಾರತ 2047'ರ ಗುರಿಯನ್ನು ತಲುಪಲು ಹೊರಟಿದ್ದೇವೆ. ಈ ದಾರಿಯಲ್ಲಿ ನಮ್ಮ ತೆರಿಗೆ ವ್ಯವಸ್ಥೆಯು ಜಾಗತಿಕ ಸ್ಪರ್ಧೆಗೆ ಪೂರಕವಾಗಿರಬೇಕು ಮತ್ತು ದೀರ್ಘಾವಧಿಯ ಬೆಳವಣಿಗೆಯನ್ನು ಉತ್ತೇಜಿಸುವಂತಿರಬೇಕು ಎಂದು ವಿವರಿಸಿದರು. ದೇಶದ ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ಚಿಂತಕರಿಗೆ ಸಚಿವರು ವಿಶೇಷ ಮನವಿ ಮಾಡಿದರು. ತೆರಿಗೆ ನೀತಿಗಳ ಬಗ್ಗೆ ಕೇವಲ ಸರ್ಕಾರದ ಅಭಿಪ್ರಾಯಗಳಿಗೆ ಸೀಮಿತವಾಗದೆ, ಸ್ವತಂತ್ರವಾಗಿ ಸಂಶೋಧನೆ ನಡೆಸಬೇಕು. ಇಂತಹ ಸಂಶೋಧನೆಗಳು ಸಾರ್ವಜನಿಕ ಚರ್ಚೆಯ ಭಾಗವಾಗಬೇಕು. ಅವುಗಳನ್ನು ಪರಿಶೀಲಿಸಲು, ಪ್ರಶ್ನಿಸಲು ಮತ್ತು ಸುಧಾರಿಸಲು ಅವಕಾಶವಿರಬೇಕು. ಈ ರೀತಿಯ ಮುಕ್ತ ಚರ್ಚೆಗಳಿಂದಲೇ ಅತ್ಯುತ್ತಮ ತೆರಿಗೆ ನೀತಿಗಳು ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ತೆರಿಗೆ ನೀತಿಯಲ್ಲಿ ಸಮತೋಲನ ಅತ್ಯಗತ್ಯ

ಒಂದು ವೇಳೆ ಸರ್ಕಾರ ಯಾವುದಾದರೂ ತೆರಿಗೆಯನ್ನು ಕಡಿತಗೊಳಿಸಿದರೆ ಅಥವಾ ವಿನಾಯಿತಿ ನೀಡಿದರೆ, ಅದರಿಂದ ಖಜಾನೆಗೆ ಉಂಟಾಗುವ ಆದಾಯದ ನಷ್ಟವನ್ನು ಸರಿದೂಗಿಸುವುದು ಹೇಗೆ? ಇದಕ್ಕೆ ಸಂಬಂಧಿಸಿದಂತೆ ಕಾರ್ಯಸಾಧ್ಯವಾದ ಪರ್ಯಾಯಗಳನ್ನು ಸಂಶೋಧಕರು ಸೂಚಿಸಬೇಕು. ಒಂದು ಉತ್ತಮ ತೆರಿಗೆ ನೀತಿಯು ಕೇವಲ ಒಂದು ದೃಷ್ಟಿಕೋನವನ್ನು ಹೊಂದಿರಬಾರದು. ಎಲ್ಲಾ ಆಯಾಮಗಳನ್ನೂ ಪರಿಗಣಿಸಬೇಕು, ನೀತಿಯು ಯಾರ ಮೇಲೆ ಮತ್ತು ಹೇಗೆ ಪರಿಣಾಮ ಬೀರುತ್ತದೆ ಎಂಬ ಸಮಗ್ರ ಚಿತ್ರಣವನ್ನು ಹೊಂದಿರಬೇಕು. ನೀತಿಯು ಜಾರಿಯಾದ ನಂತರ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ವಿಶ್ಲೇಷಿಸಬೇಕು. ಯಾವುದಕ್ಕೆ ಆದ್ಯತೆ ನೀಡಬೇಕು ಮತ್ತು ಯಾವುದನ್ನು ಬಿಟ್ಟುಕೊಡಬೇಕು ಎಂಬ ಸ್ಪಷ್ಟ ಅರಿವು ಇರಬೇಕು ಎಂದು ಹೇಳಿದರು.

ಆರ್ಥಿಕ ಪ್ರಗತಿಗೆ ತೆರಿಗೆಯ ಪಾತ್ರ

ಕೇವಲ ಆದಾಯ ಸಂಗ್ರಹವೇ ತೆರಿಗೆಯ ಗುರಿಯಲ್ಲ, ಬದಲಾಗಿ ದೇಶದ ಅಭಿವೃದ್ಧಿಯನ್ನು ವೇಗಗೊಳಿಸುವ ಪ್ರೇರಕ ಶಕ್ತಿಯಾಗಿ ತೆರಿಗೆ ವ್ಯವಸ್ಥೆ ಇರಬೇಕು. ಇಂದಿನ ವೇಗವಾಗಿ ಬದಲಾಗುತ್ತಿರುವ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ, ಭಾರತವು ಸರಳ, ಪಾರದರ್ಶಕ ಮತ್ತು ಸ್ಥಿರವಾದ ತೆರಿಗೆ ವ್ಯವಸ್ಥೆಯನ್ನು ಹೊಂದಿರಬೇಕಾದ ಅವಶ್ಯಕತೆಯಿದೆ. ಇದಕ್ಕಾಗಿ ಸರ್ಕಾರವು ಸಿದ್ಧವಾಗಿದೆ, ಆದರೆ ಅದಕ್ಕೆ ತಜ್ಞರ ಬೆಂಬಲ ಮತ್ತು ಸಕಾರಾತ್ಮಕ ಸಲಹೆಗಳು ಬೇಕು ಎಂದು ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ತಿಳಿಸಿದರು.

Read More
Next Story