
Rajya Sabha Election| ರಾಜ್ಯಸಭೆಗೆ ದೇವೇಗೌಡರ ಪುನರಾಯ್ಕೆಗೆ ಕಸರತ್ತು? ಮೊಮ್ಮಕ್ಕಳ ಮಾತಿನ ಮರ್ಮವೇನು?
ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಹಾಗೂ ಸೂರಜ್ ರೇವಣ್ಣ ಕೂಡ ದೇವೇಗೌಡರ ಮರು ಆಯ್ಕೆ ಕುರಿತು ಇಂಗಿತ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದಿಗೂ ರಾಜ್ಯದ ಹಿತಕ್ಕಾಗಿ ಸಂಸತ್ತಿನಲ್ಲಿ ದನಿ ಎತ್ತುತ್ತಿದ್ದು, ರಾಜ್ಯಸಭೆಗೆ ಮತ್ತೊಮ್ಮೆ ಮರುಆಯ್ಕೆ ಮಾಡಬೇಕೆಂಬ ಒತ್ತಾಯ ಜೆಡಿಎಸ್ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ. ಇದಲ್ಲದೇ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಹಾಗೂ ಸೂರಜ್ ರೇವಣ್ಣ ಕೂಡ ದೇವೇಗೌಡರ ಮರು ಆಯ್ಕೆ ಕುರಿತು ಇಂಗಿತ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
93 ವರ್ಷದ ಎಚ್.ಡಿ.ದೇವೇಗೌಡರ ರಾಜ್ಯಸಭೆ ಅವಧಿ ಜೂನ್ ತಿಂಗಳಲ್ಲಿ ಅಂತ್ಯವಾಗಲಿದ್ದು, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮಗದೊಮ್ಮೆ ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಪಕ್ಷದಲ್ಲಿ ಕೇಳಿ ಬರುತ್ತಿದೆ.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸೂರಜ್ ರೇವಣ್ಣ ಅವರು, ದೇವೇಗೌಡರ ಮರು ಆಯ್ಕೆ ಕುರಿತು ಇಂಗಿತ ವ್ಯಕ್ತಪಡಿಸಿದ್ದರು. ಶುಕ್ರವಾರ(ಏ.10) ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ತಮ್ಮ ಹೇಳಿಕೆ ಪುನರುಚ್ಚರಿಸುವ ಮೂಲಕ ದೇವೇಗೌಡರ ಮರು ಆಯ್ಕೆ ಬೆಂಬಲಿಸಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಬೆಂಬಲದೊಂದಿಗೆ ಎಚ್.ಡಿ.ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಕಳೆದ ಲೋಕಸಭೆ ಚುನಾವಣೆ ಬಳಿಕ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಸಂಸತ್ತಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ದೇವೇಗೌಡರ ಮಧ್ಯೆ ವಾಕ್ಸಮರವೂ ನಡೆದಿತ್ತು.
ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆ ಪ್ರವೇಶ
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ವೇಳೆ (2020 ) ಮಲ್ಲಿಕಾರ್ಜುನ ಖರ್ಗೆ ಹಾಗೂ ಎಚ್.ಡಿ.ದೇವೇಗೌಡರನ್ನು ರಾಜ್ಯ ಸಭೆಗೆ ಕಳುಹಿಸಲಾಗಿತ್ತು. ಬಳಿಕ ರಾಜ್ಯದಲ್ಲಿನ ರಾಜಕೀಯ ಬದಲಾವಣೆಯಿಂದಾಗಿ ಸಮ್ಮಿಶ್ರ ಸರಕಾರ ಪತನಗೊಂಡು, ಪ್ರಸ್ತುತ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಆದರೆ, ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದ ವೇಳೆ ರಾಜ್ಯದಲ್ಲಿ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರೆ ಮುಖ್ಯಮಂತ್ರಿಯಾಗಿದ್ದರು. ಆದರೀಗ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ.
ಒಟ್ಟು 6 ವರ್ಷಗಳ ರಾಜ್ಯಸಭಾ ಸದಸ್ಯರ ಅಧಿಕಾರವಧಿ ಸದ್ಯದಲ್ಲೇ ಅಂತ್ಯಗೊಳ್ಳಲಿದೆ. ಹೀಗಾಗಿ ಮತ್ತೊಂದು ಸುತ್ತಿನ ಅವಧಿಗೆ ತಮ್ಮನೇ ಆಯ್ಕೆ ಮಾಡಿ ಎನ್ನುವ ಪರೋಕ್ಷ ಬೇಡಿಕೆ ಅವರದು ಎಂದು ವಿಶ್ಲೇಷಿಸಲಾಗಿದೆ. ಇಲ್ಲವೆ ಅವರ ಸ್ಥಾನಕ್ಕೆ ಆಪ್ತರಾದ ಯಾರನ್ನಾದರೂ ತಂದು ಕೂರಿಸುವ ಯೋಜನೆಯು ಅವರಲ್ಲಿರಬಹುದು. ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣಕ್ಕೆ ಬಿಜೆಪಿ ಬೆಂಬಲದಿಂದ ಮತ್ತೆ ರಾಜ್ಯಸಭಾ ಪ್ರವೇಶಕ್ಕೆ ದೇವೇಗೌಡರು ಬಯಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಕರ್ನಾಟಕದಿಂದ ಒಟ್ಟು 12 ಮಂದಿ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. 6 ವರ್ಷದ ಅಧಿಕಾರವಧಿಯ ಈ ಸ್ಥಾನದಲ್ಲಿ 2026 ನೇ ಸಾಲಿನಲ್ಲಿ ರಾಜ್ಯದಿಂದ ಒಟ್ಟು 4 ಸದಸ್ಯರ ಅಧಿಕಾರವಧಿ ಅಂತ್ಯಗೊಳ್ಳಲಿದೆ. ಎಚ್.ಡಿ.ದೇವೇಗೌಡ (ಜೆಡಿಎಸ್), ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್), ಈರಣ್ಣ ಕಡಾಡಿ (ಬಿಜೆಪಿ), ಕೆ.ನಾರಾಯಣ (ಬಿಜೆಪಿ) ಅವರ ಅಧಿಕಾರವಧಿ ಜೂ.24ರಂದು ಕೊನೆಗೊಳ್ಳಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ ಮತ್ತು ಅಷ್ಟೇ ಸಂಖ್ಯೆಯ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಒಟ್ಟು 12 ಮಂದಿ ಸದಸ್ಯರ ಪೈಕಿ ಐದು ಮಂದಿ ಕಾಂಗ್ರೆಸ್, ನಾಲ್ಕು ಬಿಜೆಪಿ ಹಾಗೂ ಒಬ್ಬರು ಜೆಡಿಎಸ್ ಪಕ್ಷದ ಸದಸ್ಯರಿದ್ದಾರೆ. ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅತೀ ಹೆಚ್ಚಿನ ಶಾಸಕರನ್ನು ಹೊಂದಿರುವ ಕಾರಣಕ್ಕೆ ಮೂರು ಮಂದಿ ಕಾಂಗ್ರೆಸ್‌ನಿಂದಲೇ ಆಯ್ಕೆಯಾಗುವ ಸಾಧ್ಯತೆಗಳಿವೆ. ಒಬ್ಬ ಅಭ್ಯರ್ಥಿ ಗೆಲ್ಲಲು ಸರಿಸುಮಾರು 45 ರಿಂದ 46 ಮೊದಲ ಪ್ರಾಶಸ್ತ್ಯದ (ಶಾಸಕರ) ಮತಗಳ ಅಗತ್ಯವಿದೆ. ಕಾಂಗ್ರೆಸ್ ಬಳಿ 136 ಶಾಸಕರಿರುವ ಕಾರಣಕ್ಕೆ ತಲಾ 45 ಮತಗಳಂತೆ ಮೂರು ಅಭ್ಯರ್ಥಿಗಳು ಸುಲಭವಾಗಿ ಆಯ್ಕೆಯಾಗಬಹುದು. ಬಿಜೆಪಿ ಬಳಿ 63 ಹಾಗೂ ಜೆಡಿಎಸ್ ಬಳಿ 18 ಶಾಸಕರಿದ್ದಾರೆ. ಹೀಗಾಗಿ ಮೈತ್ರಿಯಾಗಿ ಒಬ್ಬ ಅಭ್ಯರ್ಥಿ ಆಯ್ಕೆಯಾಗಬಹುದು. ಹೀಗಾಗಿ ದೇವೇಗೌಡರು ರಾಜ್ಯದಿಂದ ಮತ್ತೊಮ್ಮೆ ಆಯ್ಕೆಯಾಗುವ ಲೆಕ್ಕಾಚಾರಗಳು ಅವರ ಮಾತಿನ ಹಿಂದಿರಬಹುದು.
ಗೌಡರತ್ತ ಖರ್ಗೆ ವ್ಯಂಗ್ಯ
ಸಂಸತ್ತಿನಲ್ಲಿ ದೇವೇಗೌಡರನ್ನು ಉದ್ದೇಶಿಸಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ನಮ್ಮನ್ನು ಪ್ರೀತಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮದುವೆಯಾಗಿದ್ದಾರೆ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದರು. ಖರ್ಗೆ ಅವರ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಂತರ ತೀಕ್ಷ್ಮವಾಗಿಯೇ ತಿರುಗೇಟು ನೀಡಿದ್ದರು.
"ನಾನು ಸದನದಲ್ಲಿ ಇಲ್ಲದಿದ್ದಾಗ ಖರ್ಗೆ ಅವರು ನಮ್ಮ ಬಗ್ಗೆ ಮಾತನಾಡಿದ್ದಾರೆ. ನಾವೇನೋ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದೇವೆ ಎಂಬಂತೆ ಬಿಂಬಿಸಿದ್ದಾರೆ. ಆದರೆ, ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ತಮಗೆ ಹಾಗೂ ತಮ್ಮ ಪಕ್ಷಕ್ಕೆ ದೊಡ್ಡ ಮಟ್ಟದ ದ್ರೋಹವಾಗಿದೆ," ಎಂದು ಹರಿಹಾಯ್ದಿದ್ದರು.
ಪ್ರಧಾನಿ ತೀರ್ಮಾನಕ್ಕೆ ಮೊರೆ
"ದೇವೇಗೌಡರ ಮರು ಆಯ್ಕೆ ವಿಷಯದಲ್ಲಿ ನಾವು ಯಾರ ಮೇಲೆಯೂ ಒತ್ತಡ ಹೇರುತ್ತಿಲ್ಲ. ಯಾವುದೇ ಷರತ್ತುಗಳಿಲ್ಲದೆ ನಾವು ಎನ್‌ಡಿಎ ಮೈತ್ರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ದೇವೇಗೌಡರ ಮರು ಆಯ್ಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ," ಎಂದು ನಿಖಿಲ್ ಕುಮಾರಸ್ವಾಮಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ದೇವೇಗೌಡರು ರಾಜ್ಯದ ನೀರಾವರಿ ಸಮಸ್ಯೆಗಳು, ವಿಶೇಷವಾಗಿ ಎತ್ತಿನಹೊಳೆ ಯೋಜನೆಯ ಕುರಿತು ಈಗಾಗಲೇ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಗಮನ ಸೆಳೆದಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಅವರ ಗಟ್ಟಿ ಧ್ವನಿ ದೆಹಲಿಯಲ್ಲಿ ಮೊಳಗುವುದು ಅಗತ್ಯವಿದೆ ಎಂದರು.
ಇದೇ ವಿಷಯವಾಗಿ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, "ದೇವೇಗೌಡರಂತಹ ದೂರದೃಷ್ಟಿಯುಳ್ಳ ನಾಯಕರು ರಾಜ್ಯಸಭೆಗೆ ಆಯ್ಕೆಯಾದರೆ ಅದು ಇಡೀ ರಾಜ್ಯಕ್ಕೆ ಲಾಭದಾಯಕ. ನೀರಾವರಿ ಯೋಜನೆಗಳು ಸೇರಿದಂತೆ ಹತ್ತಾರು ಜನಪರ ಕಾರ್ಯಕ್ರಮಗಳ ಬಗ್ಗೆ ಸಂಸತ್ತಿನಲ್ಲಿ ಧೈರ್ಯವಾಗಿ ಮಾತನಾಡಬಲ್ಲ ಸಾಮರ್ಥ್ಯ ಅವರಿಗಿದೆ. ಇಂತಹ ಅನುಭವ ಸಂಪನ್ನ ನಾಯಕತ್ವ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಇಂದು ಅನಿವಾರ್ಯವಾಗಿದೆ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಸತ್ತಿನಲ್ಲಿ ಗುಡುಗಿದ್ದ ದೇವೇಗೌಡರು
93ನೇ ವಯಸ್ಸಿನಲ್ಲೂ ರಾಜ್ಯದ ಹಿತಕ್ಕಾಗಿ ದೇವೇಗೌಡರು ಹಲವು ಬಾರಿ ದನಿ ಎತ್ತಿದ್ದರು. ಎತ್ತಿನಹೊಳೆ ಸೇರಿದಂತೆ ರಾಜ್ಯದ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಸಹಕಾರ ನೀಡುವಂತೆ ಮನವಿ ಮಾಡಿದ್ದರು.
2026 ಫೆಬ್ರವರಿ ತಿಂಗಳಲ್ಲಿ ನೀರಾವರಿ ಯೋಜನೆಗಳ ಕುರಿತು ಸಂಸತ್ತಿನಲ್ಲಿ ಗಂಭೀರ ವಿಷಯ ಪ್ರಸ್ತಾಪಿಸಿ, ಕೇಂದ್ರ ಸರ್ಕಾರಕ್ಕೆ ಭಾವುಕವಾಗಿ ಮನವಿ ಸಲ್ಲಿಸಿದ್ದರು.
"65 ವರ್ಷಗಳಿಂದ ರಾಜ್ಯದ ನೀರಾವರಿಗಾಗಿ ಹೋರಾಟ ಮಾಡಿದ್ದೇನೆ. ನನ್ನ ಜೀವನದ ಕೊನೆಯ ದಿನಗಳಲ್ಲಿ ರಾಜ್ಯದ ನೀರಾವರಿ ಸಮಸ್ಯೆ ಪರಿಹಾರವಾಗುವುದನ್ನು ನೋಡಬೇಕಿದೆ," ಎಂದು ಕೈಮುಗಿದು ಬೇಡಿಕೊಂಡಿದ್ದರು. ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ 25 ಟಿಎಂಸಿ ಅಡಿ ನೀರು ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದ್ದರು. ಸದ್ಯ ಹಂಚಿಕೆಯಾಗಿರುವ 15.891 ಟಿಎಂಸಿ ನೀರು ಸಾಕಾಗುವುದಿಲ್ಲ ಎಂದು ವಾದಿಸಿದ್ದರು.
ನೀರಾವರಿ ವಿಷಯದಲ್ಲಿ ರಾಜಕೀಯ ಬೇಡ, ರಾಜ್ಯದ ಹಿತಾಸಕ್ತಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲರೊಂದಿಗೆ ಕೈಜೋಡಿಸಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಅವರು ಘೋಷಿಸಿದ್ದರು. ಅಲ್ಲದೇ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿ, ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಕೋರಿದ್ದರು.

