ವಾಹನ ಸವಾರರೇ ಗಮನಿಸಿ| ಹೆದ್ದಾರಿ ಟೋಲ್‌ಗಳಲ್ಲಿ ಇಂದಿನಿಂದಲೇ ನಗದು ರಹಿತ ಸೇವೆ ಜಾರಿ
x
ರಾಷ್ಟ್ರೀಯ ಹೆದ್ದಾರಿಯೊಂದರ ಟೋಲ್‌ ಪ್ಲಾಜಾ

ವಾಹನ ಸವಾರರೇ ಗಮನಿಸಿ| ಹೆದ್ದಾರಿ ಟೋಲ್‌ಗಳಲ್ಲಿ ಇಂದಿನಿಂದಲೇ ನಗದು ರಹಿತ ಸೇವೆ ಜಾರಿ

ಟೋಲ್ ಸಿಬ್ಬಂದಿ ನಗದು ಸ್ವೀಕರಿಸಲು ನಿರಾಕರಿಸುತ್ತಿದ್ದು, ಕೇವಲ ಫಾಸ್ಟ್‌ಟ್ಯಾಗ್‌ ಅಥವಾ ಫೋನ್‌ ಪೇ, ಗೂಗಲ್‌ ಪೇ ಅಂತಹ ಯುಪಿಐ ಸ್ಕ್ಯಾನರ್‌ಗಳ ಮೂಲಕ ಪಾವತಿಸುವವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.


ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್‌ಗಳಲ್ಲಿ ಇಂದಿನಿಂದಲೇ (ಏಪ್ರಿಲ್ 1) ನಗದು ಪಾವತಿ ರದ್ದಾಗಿದೆ. ಇನ್ನು ಮುಂದೆ ವಾಹನ ಸವಾರರು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್‌ ಅಥವಾ ಡಿಜಿಟಲ್ ಪಾವತಿ ವಿಧಾನಗಳ ಮೂಲಕವೇ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ಬಂದಿದೆ.

ನೆಲಮಂಗಲ ಟೋಲ್‌ನಲ್ಲಿ ಜಾರಿ

ಬೆಂಗಳೂರು ಸಮೀಪದ ನೆಲಮಂಗಲ ಟೋಲ್ ಪ್ಲಾಜಾದಲ್ಲಿ ಇಂದು ಬೆಳಗ್ಗಿನಿಂದಲೇ ಈ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಟೋಲ್ ಸಿಬ್ಬಂದಿ ನಗದು ಸ್ವೀಕರಿಸಲು ನಿರಾಕರಿಸುತ್ತಿದ್ದು, ಕೇವಲ ಫಾಸ್ಟ್‌ಟ್ಯಾಗ್‌ ಅಥವಾ ಫೋನ್‌ ಪೇ, ಗೂಗಲ್‌ ಪೇ ಅಂತಹ ಯುಪಿಐ ಸ್ಕ್ಯಾನರ್‌ಗಳ ಮೂಲಕ ಪಾವತಿಸುವವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಫಾಸ್ಟ್‌ಟ್ಯಾಗ್‌ ಇದ್ದರೆ ಲಾಭ

ಹೊಸ ನಿಯಮದ ಪ್ರಕಾರ ವಿವಿಧ ಪಾವತಿ ವಿಧಾನಗಳಿಗೆ ಬೇರೆ ಬೇರೆ ದರ ನಿಗದಿಪಡಿಸಲಾಗಿದೆ. ಫಾಸ್ಟ್‌ಟ್ಯಾಗ್‌ ಮೂಲಕ ಪಾವತಿಸುವವರಿಗೆ ಮೂಲ ದರ 37 ರೂ. ಇರಲಿದೆ. ಡಿಜಿಟಲ್ ಸ್ಕ್ಯಾನಿಂಗ್ ಬಳಸುವವರು 45 ರೂ. ಪಾವತಿಸಬೇಕಾಗಿದೆ. ಈ ಹಿಂದೆ ನಗದು ಪಾವತಿ ವೇಳೆ ಮೂಲದರ 80 ರೂ. ಪಡೆಯಲಾಗುತ್ತಿತ್ತು. ಆದರೆ ನಗದು ಪಾವತಿ ಇಂದಿನಿಂದ ರದ್ದಾಗಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಫಾಸ್ಟ್‌ಟ್ಯಾಗ್‌ ಕೇಂದ್ರಗಳ ಪುನರಾರಂಭ

ನಗದು ಪಾವತಿ ಬಂದ್ ಆದ ಹಿನ್ನೆಲೆ ಟೋಲ್ ಪ್ಲಾಜಾಗಳ ಬಳಿ ಫಾಸ್ಟ್‌ಟ್ಯಾಗ್‌ ಪಡೆಯುವವರ ಮತ್ತು ಹಳೆಯ ಟ್ಯಾಗ್‌ಗಳನ್ನು ಸಕ್ರಿಯಗೊಳಿಸುವವರ ಸಂಖ್ಯೆ ಏರಿಕೆಯಾಗಿದೆ. ಹಲವು ವಾಹನ ಸವಾರರು ಕೊನೆ ಕ್ಷಣದಲ್ಲಿ ಫಾಸ್ಟ್‌ಟ್ಯಾಗ್‌ ಮಾಡಿಸಿಕೊಳ್ಳಲು ಮುಗಿಬೀಳುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಫಾಸ್ಟ್‌ಟ್ಯಾಗ್‌ ಮಾರಾಟ ಕೇಂದ್ರಗಳು ಮತ್ತೆ ಸಕ್ರಿಯವಾಗಿವೆ.

ಬದಲಾವಣೆಯ ಉದ್ದೇಶವೇನು?

ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಾಲು ನಿಲ್ಲುವುದನ್ನು ತಪ್ಪಿಸಲು, ಸಮಯ ಉಳಿತಾಯ ಮಾಡಲು ಮತ್ತು ಪಾರದರ್ಶಕ ಆರ್ಥಿಕ ವಹಿವಾಟು ನಡೆಸಲು ಈ ಕ್ರಮ ಅನಿವಾರ್ಯ ಎಂದು ಹೆದ್ದಾರಿ ಪ್ರಾಧಿಕಾರ ಸಮರ್ಥಿಸಿಕೊಂಡಿದೆ.

ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಯಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದೆ. ಏ.1 ರ ನಂತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರು ಫಾಸ್ಟ್‌ಟ್ಯಾಗ್‌ಗಳಲ್ಲಿ ಸಾಕಷ್ಟು ಬ್ಯಾಲೆನ್ಸ್ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇಲ್ಲವಾದರೆ, ಮೊಬೈಲ್‌ನಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಹೊಂದಿರಬೇಕಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.

Read More
Next Story