ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದದ ಕಪ್ಪೆ ಪತ್ತೆ: ಕಾಳಿ ನದಿಯ ಹೆಸರಿನಲ್ಲಿ ಕಾಳಿ ನೈಟ್ ಫ್ರಾಗ್ ನಾಮಕರಣ
x
ಕಾಳಿನದಿ ಪ್ರದೇಶದಲ್ಲಿ ಪತ್ತೆಯಾದ ಹೊಸ ಪ್ರಭೇದದ ಕಪ್ಪೆ ( ಚಿತ್ರಗಳು- ಗುರುರಾಜ ಕೆ.ವಿ)

ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದದ ಕಪ್ಪೆ ಪತ್ತೆ: ಕಾಳಿ ನದಿಯ ಹೆಸರಿನಲ್ಲಿ 'ಕಾಳಿ ನೈಟ್ ಫ್ರಾಗ್' ನಾಮಕರಣ

ಬೆಂಗಳೂರಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರೀತಿ ಹೆಬ್ಬಾರ್ ನೇತೃತ್ವದ ಸಂಶೋಧನಾ ತಂಡವು ಈ ಕಪ್ಪೆಯನ್ನು ಪತ್ತೆ ಹಚ್ಚಿದೆ.


ಜೀವವೈವಿಧ್ಯದ ಕಣಜವಾಗಿರುವ ಪಶ್ಚಿಮ ಘಟ್ಟದಲ್ಲಿ ಸಂಶೋಧಕರು ಹಾಗೂ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಜಂಟಿ ಕಾರ್ಯಾಚರಣೆಯ ಫಲವಾಗಿ ಹೊಸ ಪ್ರಭೇದದ ಕಪ್ಪೆಯೊಂದು ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (KTR) ಮೊದಲು ಪತ್ತೆಯಾದ ಕಾರಣ, ಈ ಹೊಸ ಪ್ರಭೇದಕ್ಕೆ 'ನ್ಯಕ್ಟಿಬ್ಯಾಟ್ರಾಕಸ್ ಕಾಳಿ' (Nyctibatrachus kali) ಅಥವಾ 'ಕಾಳಿ ನೈಟ್ ಫ್ರಾಗ್' ಎಂದು ನಾಮಕರಣ ಮಾಡಲಾಗಿದೆ. ಈ ಮಹತ್ವದ ಸಂಶೋಧನಾ ವರದಿಯು ಇತ್ತೀಚೆಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್ 'PeerJ' ನಲ್ಲಿ ಪ್ರಕಟಗೊಂಡಿದೆ.

ಬೆಂಗಳೂರಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರೀತಿ ಹೆಬ್ಬಾರ್ ನೇತೃತ್ವದ ಸಂಶೋಧನಾ ತಂಡವು ಈ ಕಪ್ಪೆಯನ್ನು ಪತ್ತೆ ಹಚ್ಚಿದೆ. ಕುತೂಹಲದ ಸಂಗತಿಯೆಂದರೆ, ಈ ಕಪ್ಪೆಯನ್ನು ಮೊದಲು ಗುರುತಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಯಲ್ಲಾಪುರ ವಲಯದ ಬೀಟ್ ಫಾರೆಸ್ಟರ್ ರಮೇಶ್ ಬಡಿಗೇರ್ ಹಾಗೂ ಅಂಕೋಲಾ ವಲಯದ ಉಪ ವಲಯ ಅರಣ್ಯಾಧಿಕಾರಿ ಸಿ.ಆರ್. ನಾಯಕ್ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿತ್ತು. ಸಂಶೋಧನಾ ತಂಡದಲ್ಲಿ ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್‌ನ ಪ್ರೊ. ಗುರುರಾಜ ಕೆ.ವಿ. ಹಾಗೂ ಪಿಎಚ್‌ಡಿ ಸ್ಕಾಲರ್ ಅರವಿಂದ್ ಸಿ.ಕೆ. ಕೂಡ ಪ್ರಮುಖ ಪಾತ್ರ ವಹಿಸಿದ್ದರು.

ಕಾಳಿ ನದಿಯ ಒಂದು ನೋಟ ( ಚಿತ್ರ- ಗುರುರಾಜ ಕೆ. ವಿ)

ಮರ ಕಡಿಯುವ ಶಬ್ದದ ಕಪ್ಪೆ

ಈ ಹೊಸ ಪ್ರಭೇದವು 'ಕ್ರಿಪ್ಟಿಕ್' (ಗುಪ್ತ) ಪ್ರಭೇದವಾಗಿದ್ದು, ಮೇಲ್ನೋಟಕ್ಕೆ ಇದು ೨೦೧೪ರಲ್ಲಿ ಪತ್ತೆಯಾಗಿದ್ದ 'ಕುಂಬಾರ ನೈಟ್ ಫ್ರಾಗ್' (Nyctibatrachus kumbara) ರೀತಿಯೇ ಕಾಣುತ್ತದೆ. ಆದರೆ, ಈ ಕಪ್ಪೆಯ ಕೂಗಿನ ಶಬ್ದ ಹಾಗೂ ಡಿಎನ್‌ಎ ವಿಶ್ಲೇಷಣೆಯ ಆಧಾರದ ಮೇಲೆ ಇದು ಸಂಪೂರ್ಣವಾಗಿ ಹೊಸ ಪ್ರಭೇದ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಇದರ ಧ್ವನಿಯು ಅರಣ್ಯದಲ್ಲಿ ಮರ ಕತ್ತರಿಸುವಾಗ ಬರುವ ಶಬ್ದವನ್ನು ಹೋಲುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ. ಇದು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ 25ನೇ ನೈಟ್ ಫ್ರಾಗ್ ಪ್ರಭೇದವಾಗಿದೆ.

ಅರಣ್ಯ ಸಿಬ್ಬಂದಿಯ ವೈಜ್ಞಾನಿಕ ಕುತೂಹಲ

ಈ ಕಪ್ಪೆಯ ಪತ್ತೆಯ ಹಿಂದಿನ ಕಥೆ ಅತ್ಯಂತ ರೋಚಕವಾಗಿದೆ. ಅಂಕೋಲಾ ವಲಯದ ಉಪ ವಲಯ ಅರಣ್ಯಾಧಿಕಾರಿ ಸಿ.ಆರ್. ನಾಯಕ್ ಅವರು ಧಾರಾಕಾರ ಮಳೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ವಿಶಿಷ್ಟವಾದ 'ಟಕ್' ಎಂಬ ಶಬ್ದವನ್ನು ಕೇಳಿದ್ದರು. ಕುತೂಹಲದಿಂದ ಕಾಯ್ದು ನಿಂತ ಅವರು, ಕಪ್ಪೆಯ ಆ ಶಬ್ದವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಂಶೋಧಕ ಗುರುರಾಜ ಅವರಿಗೆ ಕಳುಹಿಸಿದ್ದರು. ಅದೇ ರೀತಿ, ರಮೇಶ್ ಬಡಿಗೇರ್ ಅವರು ಕ್ಯಾಸಲ್ ರಾಕ್ ಬಳಿ ಈ ಕಪ್ಪೆಗಳನ್ನು ಗುರುತಿಸಿ, ಅವುಗಳ ಸಂತಾನೋತ್ಪತ್ತಿ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಸಂಶೋಧಕರಿಗೆ ನೆರವಾಗಿದ್ದರು.

ಹೊಸ ಪ್ರಭೇದದ ಕಪ್ಪೆ (ಚಿತ್ರ- ಗುರುರಾಜ ಕೆ.ವಿ)

ಅಳಿವಿನಂಚಿನಲ್ಲಿರುವ ಉಭಯವಾಸಿಗಳು

ಪ್ರಪಂಚದಾದ್ಯಂತ ಒಟ್ಟು 9027 ಉಭಯವಾಸಿ ಪ್ರಭೇದಗಳಿದ್ದು, ಆ ಪೈಕಿ ಭಾರತದಲ್ಲಿ 474 ಪ್ರಭೇದಗಳಿವೆ. ಆದರೆ, ಆವಾಸಸ್ಥಾನಗಳ ನಾಶ, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದಾಗಿ ಜಾಗತಿಕವಾಗಿ ಪ್ರತಿ ಐದು ಉಭಯವಾಸಿ ಪ್ರಭೇದಗಳಲ್ಲಿ ಎರಡು ಅಳಿವಿನಂಚಿನಲ್ಲಿವೆ. ಈ ಹಿನ್ನೆಲೆಯಲ್ಲಿ ಕಾಳಿ ನೈಟ್ ಫ್ರಾಗ್ ನಂತಹ ಹೊಸ ಪ್ರಭೇದಗಳ ಪತ್ತೆ ಹಾಗೂ ಸಂರಕ್ಷಣೆ ಅತ್ಯಂತ ತುರ್ತು ಅಗತ್ಯವಾಗಿದೆ. ಅರಣ್ಯ ರಕ್ಷಣೆಯ ಜೊತೆಗೆ ವೈಜ್ಞಾನಿಕ ಸಂಶೋಧನೆಗೂ ಕೊಡುಗೆ ನೀಡಿದ ಅರಣ್ಯ ಸಿಬ್ಬಂದಿಯ ಕಾರ್ಯವನ್ನು ಪಿಸಿಬಿಸಿಎಫ್ ಕುಮಾರ್ ಪುಷ್ಕರ್ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ನಿಲೇಶ್ ದೇವೋಬಾ ಶಿಂಧೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Read More
Next Story