Nandini Milk: ನಂದಿನಿ ಹಾಲಿನಲ್ಲಿ ಕಲಬೆರಕೆ; 3,049 ಮಾದರಿಗಳಲ್ಲಿ ಉಪ್ಪು, ಸಕ್ಕರೆ ಅಂಶ ಪತ್ತೆ
x

Nandini Milk: ನಂದಿನಿ ಹಾಲಿನಲ್ಲಿ ಕಲಬೆರಕೆ; 3,049 ಮಾದರಿಗಳಲ್ಲಿ ಉಪ್ಪು, ಸಕ್ಕರೆ ಅಂಶ ಪತ್ತೆ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ವಯ ಹಾಲು ಕಲಬೆರಕೆ ಅಪರಾಧ. ಪ್ರಕರಣದ ತೀವ್ರತೆ ಆಧರಿಸಿ ಕನಿಷ್ಠ 3 ತಿಂಗಳಿನಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.


ರಾಜ್ಯದ ಹೆಮ್ಮೆಯ 'ನಂದಿನಿ' ಹಾಲಿನಲ್ಲಿ ಕಲಬೆರಕೆ ಅಂಶ ಕಂಡುಬಂದಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ ಪರೀಕ್ಷೆ ನಡೆಸಿದ ಸಾವಿರಾರು ಹಾಲಿನ ಮಾದರಿಗಳಲ್ಲಿ ಸಕ್ಕರೆ ಮತ್ತು ಉಪ್ಪಿನಂಶ ಪತ್ತೆಯಾಗಿದೆ.

ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಲಿಖಿತ ಉತ್ತರದಲ್ಲಿ ಈ ಆತಂಕಕಾರಿ ಸಂಗತಿ ಬಯಲಾಗಿದೆ. ಕೆಎಂಎಫ್ ಅಧೀನದ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿಗೆ ಉಪ್ಪು ಮತ್ತು ಸಕ್ಕರೆ ಸೇರಿಸುತ್ತಿರುವುದು ಪತ್ತೆಯಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ.

ಜ.16 ರಂದು ನಂದಿನಿ ಸೇರಿದಂತೆ ಹಲವು ಕಂಪನಿಗಳ ಕಲಬೆರಕೆ ಹಾಲು ತಯಾರಿಸುತ್ತಿದ್ದ ಎಂಟು ಮಂದಿಯನ್ನು ಕೆಜಿಎಫ್‌ನಲ್ಲಿ ಆಂಡರ್ಸನ್‌ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

ವೈದ್ಯೆ ವಿರುದ್ಧ ಕೇಸ್​ ದಾಖಲಿಸಿದ್ದ ಕೆಎಂಎಫ್​

'ನಂದಿನಿ' ಉತ್ಪನ್ನಗಳಲ್ಲಿ ಕಲಬೆರಕೆ ಅಂಶವಿರುವ ಬಗ್ಗೆ ಮಾಹಿತಿ ಹರಡಿದ ಆರೋಪದ ಮೇಲೆ ಫೆ.19 ರಂದು ವೈದ್ಯೆ ಡಾ. ಶರಣ್ಯ ಎಂಬುವರ ವಿರುದ್ಧ ಕೆಎಂಎಫ್‌ ಅಧಿಕಾರಿಗಳು, ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಡಾ. ಶರಣ್ಯ ಅವರು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡು, ನಂದಿನಿ ಹಾಲಿನ ಉತ್ಪನ್ನಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿದ್ದು, ಆರೋಗ್ಯಕ್ಕೆ ಹಾನಿಕಾರಕ ಎಂಬ ಹೇಳಿಕೆ ನೀಡಿದ್ದರು. ಯಾವುದೇ ವೈಜ್ಞಾನಿಕ ಆಧಾರ ಇಲ್ಲದ ಇಂತಹ ಗಂಭೀರ ಹೇಳಿಕೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪರೀಕ್ಷೆ ನಡೆಸಿದ ಮಾದರಿಗಳೆಷ್ಟು?

ಜನವರಿ 2025 ರಿಂದ ಜನವರಿ 2026ರವರೆಗೆ ಒಟ್ಟು 15,15,575 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದ್ದು, 3,049 ಮಾದರಿಗಳಲ್ಲಿ ಕಲಬೆರಕೆ ಪತ್ತೆಯಾಗಿದೆ. ಅಂದರೆ ಸಂಗ್ರಹವಾಗುವ ಹಾಲಿನಲ್ಲಿ ಶೇ. 0.20 ರಷ್ಟು ಕಲಬೆರಕೆ ಕಂಡುಬಂದಿದೆ.

ಇನ್ನೊಂದೆಡೆ ಮಾರುಕಟ್ಟೆಯಲ್ಲಿರುವ ಖಾಸಗಿ ಕಂಪನಿಯ 'ದೊಡ್ಲಾʼ ಹಾಲಿನಲ್ಲಿಯೂ ಕಲಬೆರಕೆ ಅಂಶಗಳು ಪತ್ತೆಯಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಅವರು ನೀಡಿದ ಉತ್ತರದಲ್ಲಿ ಪ್ರಸ್ತಾಪಿಸಲಾಗಿದೆ.

ಜಿಲ್ಲಾವಾರು ಕಲಬೆರಕೆ ವಿವರ

ಸರ್ಕಾರ ನೀಡಿರುವ ಉತ್ತರದ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ. 0.79 ರಷ್ಟು ಕಲಬೆರಕೆ ಅಂಶ ಕಂಡುಬಂದಿದೆ. ರಾಯಚೂರು, ಬಳ್ಳಾರಿ ವಲಯದಲ್ಲಿ ಶೇ. 0.74, ಬೆಳಗಾವಿಯಲ್ಲಿ ಶೇ. 0.58 ಮತ್ತು ಹಾಸನದಲ್ಲಿ ಶೇ. 0.48 ರಷ್ಟು ಹಾಲಿನ ಮಾದರಿಗಳು ಕಲಬೆರಕೆಯಿಂದ ಕೂಡಿವೆ. ಅದೇ ರೀತಿ ಮೈಸೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಅತಿ ಕಡಿಮೆ ಅಂದರೆ ಶೇ. 0.001 ರಷ್ಟು ಕಲಬೆರಕೆ ಅಂಶ ಇರುವುದು ಪತ್ತೆಯಾಗಿದೆ.

ಜೈಲು ಶಿಕ್ಷೆಯ ಎಚ್ಚರಿಕೆ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಸೆಕ್ಷನ್ 59ರ ಅನ್ವಯ ಹಾಲು ಕಲಬೆರಕೆ ಮಾಡುವುದು ಗಂಭೀರ ಅಪರಾಧ. ಪ್ರಕರಣದ ತೀವ್ರತೆಯನ್ನು ಆಧರಿಸಿ ಕನಿಷ್ಠ 3 ತಿಂಗಳಿನಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ಕಲಬೆರಕೆ ತಡೆಗೆ ಸರ್ಕಾರದ ಕ್ರಮಗಳೇನು?

ಕಲಬೆರಕೆ ಪತ್ತೆ ಹಚ್ಚಲು ಎಲ್ಲಾ ಪ್ರಾಥಮಿಕ ಸಂಘಗಳಿಗೆ 'ಕಲಬೆರಕೆ ಪರೀಕ್ಷಾ ಕಿಟ್ʼ ಒದಗಿಸಲಾಗಿದೆ. ಹಾಲಿನಲ್ಲಿ ಸೋಡಾ, ಯೂರಿಯಾ, ಸ್ಟಾರ್ಚ್, ಸಕ್ಕರೆ ಅಥವಾ ಉಪ್ಪು ಪತ್ತೆಯಾದಲ್ಲಿ ಅಂತಹ ಹಾಲನ್ನು ತಕ್ಷಣವೇ ತಿರಸ್ಕರಿಸಲು ಕೆಎಂಎಫ್‌ ನಿರ್ಧರಿಸಿದೆ.

ಕೆಎಂಎಫ್‌ನ ಕೇಂದ್ರ ಜಾಗೃತ ದಳವು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಮಾರಾಟವಾಗುವ ಹಾಲಿನ ಗುಣಮಟ್ಟದ ಮೇಲೆ ನಿರಂತರ ನಿಗಾ ವಹಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Read More
Next Story