ನಂದಿನಿ ಹಾಲಿನ ಬೆನ್ನಲ್ಲೇ ಮೊಸರಿನ ಬೆಲೆಯೂ ಭಾರೀ ಏರಿಕೆ
x

ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ಬೆಲೆಯೂ ಹೆಚ್ಚಳವಾಗಿದೆ. ಲೀಟರ್ ಮೊಸರಿಗೆ 14 ರೂ., ಅರ್ಧ ಲೀಟರ್ ಪ್ಯಾಕೆಟ್‌ಗೆ 6 ರೂ. ಏರಿಕೆಯಾಗಿದ್ದು, ನಾಳೆಯಿಂದಲೇ ಹೊಸ ದರ ಜಾರಿಯಾಗಲಿದೆ.

ನಂದಿನಿ ಹಾಲಿನ ಬೆನ್ನಲ್ಲೇ ಮೊಸರಿನ ಬೆಲೆಯೂ ಭಾರೀ ಏರಿಕೆ

ನಂದಿನಿ ಮೊಸರಿನ ಒಂದು ಲೀಟರ್ ಪ್ಯಾಕೆಟ್ ಬೆಲೆಯನ್ನು 54 ರೂಪಾಯಿಯಿಂದ 68 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ ಪ್ರತಿ ಲೀಟರ್ ಮೊಸರಿನ ಬೆಲೆಯಲ್ಲಿ ಬರೋಬ್ಬರಿ 14 ರೂಪಾಯಿ ಏರಿಕೆಯಾಗಿದೆ.


Click the Play button to hear this message in audio format

ಬೆಲೆ ಏರಿಕೆಯ ಬಿಸಿಯಿಂದ ಈಗಾಗಲೇ ಕಂಗಾಲಾಗಿರುವ ರಾಜ್ಯದ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಎದುರಾಗಿದೆ. ನಂದಿನಿ ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಮೊಸರಿನ ಬೆಲೆಯನ್ನೂ ಗಣನೀಯವಾಗಿ ಏರಿಕೆ ಮಾಡಲಾಗಿದ್ದು, ಪ್ರತಿನಿತ್ಯ ನಂದಿನಿ ಉತ್ಪನ್ನಗಳನ್ನು ಅವಲಂಬಿಸಿರುವ ಲಕ್ಷಾಂತರ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಹಾಲಿನ ದರ ಪರಿಷ್ಕರಣೆಯ ಜೊತೆಗೆ ಮೊಸರಿನ ದರದಲ್ಲೂ ಭಾರಿ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರಗಳ ಅನ್ವಯ, ನಂದಿನಿ ಮೊಸರಿನ ಒಂದು ಲೀಟರ್ ಪ್ಯಾಕೆಟ್ ಬೆಲೆಯನ್ನು 54 ರೂಪಾಯಿಯಿಂದ ಬರೋಬ್ಬರಿ 68 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ, ಪ್ರತಿ ಲೀಟರ್ ಮೊಸರಿನ ಮೇಲೆ 14 ರೂಪಾಯಿಗಳಷ್ಟು ಅಧಿಕ ಹೊರೆ ಗ್ರಾಹಕರ ಮೇಲೆ ಬಿದ್ದಿದೆ. ಅದೇ ರೀತಿ, ದಿನನಿತ್ಯ ಅತಿಹೆಚ್ಚು ಮಾರಾಟವಾಗುವ ಅರ್ಧ ಲೀಟರ್ ಮೊಸರಿನ ಪ್ಯಾಕೆಟ್ ಬೆಲೆಯನ್ನೂ 28 ರೂಪಾಯಿಯಿಂದ 34 ರೂಪಾಯಿಗೆ ಏರಿಸಲಾಗಿದೆ. ಈ ಮೂಲಕ ಅರ್ಧ ಲೀಟರ್ ಪ್ಯಾಕೆಟ್ ಖರೀದಿಸುವ ಗ್ರಾಹಕರು ಇನ್ಮುಂದೆ 6 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಿದೆ.

ಹಾಲಿನ ದರವೂ ಲೀಟರ್‌ಗೆ 8 ರೂ. ಏರಿಕೆ

ಕೆಲವೇ ದಿನಗಳ ಹಿಂದಷ್ಟೇ ನಂದಿನಿ ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿಯಷ್ಟು ಹೆಚ್ಚಿಸಲು ನಿರ್ಧರಿಸಲಾಗಿತ್ತು. ಈ ನಿರ್ಧಾರದ ಬೆನ್ನಲ್ಲೇ ಮೊಸರಿನ ದರವನ್ನು ಪರಿಷ್ಕರಿಸುವ ಮೂಲಕ ಪರೋಕ್ಷವಾಗಿ ಜನಸಾಮಾನ್ಯರ ದೈನಂದಿನ ಬಜೆಟ್ ಮೇಲೆ ಗಂಭೀರ ಪರಿಣಾಮ ಬೀರಲಾಗಿದೆ. ಹಾಲು ಮತ್ತು ಮೊಸರು ಪ್ರತಿಯೊಂದು ಕುಟುಂಬದ ಅಗತ್ಯ ವಸ್ತುಗಳಾಗಿರುವುದರಿಂದ ಈ ದರ ಏರಿಕೆ ಅನಿವಾರ್ಯವಾಗಿ ಎಲ್ಲರ ಮೇಲೂ ಆರ್ಥಿಕ ಒತ್ತಡ ತರಲಿದೆ.

ನವೆಂಬರ್ 1ರಿಂದಲೇ ಹೊಸ ದರ ಜಾರಿ

ಪರಿಷ್ಕೃತಗೊಂಡಿರುವ ನಂದಿನಿ ಹಾಲು ಹಾಗೂ ಮೊಸರಿನ ನೂತನ ದರಗಳು ನವೆಂಬರ್ 1ರಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿವೆ. ನಾಳೆಯಿಂದಲೇ ಗ್ರಾಹಕರು ಹೊಸ ದರದಲ್ಲಿ ಉತ್ಪನ್ನಗಳನ್ನು ಖರೀದಿಸಬೇಕಿದೆ. ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯ ನಡುವೆ, ಸಾರ್ವಜನಿಕ ವಲಯದ ನಂದಿನಿ ಉತ್ಪನ್ನಗಳ ದರವೂ ಏರಿಕೆಯಾಗಿರುವುದು ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

Read More
Next Story