
ಬೆಂಗಳೂರಿನ ಟೆಕ್ ಕಾರಿಡಾರ್‌ಗೆ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ಒಂಬತ್ತನೇ ರೈಲು ಪೂರೈಕೆಯಾಗುತ್ತಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 9ನೇ ರೈಲು ರವಾನೆ: ಮೇ ತಿಂಗಳಿಂದ ಸಂಚಾರ ದಟ್ಟಣೆ ಇಳಿಕೆ ನಿರೀಕ್ಷೆ
ಹಳದಿ ಮಾರ್ಗದಲ್ಲಿ ಪ್ರಸ್ತುತ ಪೀಕ್ ಅವರ್‌ನಲ್ಲಿ (ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4 ರಿಂದ ರಾತ್ರಿ 9) 9 ನಿಮಿಷಕ್ಕೊಮ್ಮೆ ಮತ್ತು ಸಾಮಾನ್ಯ ಅವಧಿಯಲ್ಲಿ 14 ನಿಮಿಷಕ್ಕೊಮ್ಮೆ ರೈಲು ಸಂಚರಿಸುತ್ತಿದೆ.
ಬೆಂಗಳೂರಿನ ಟೆಕ್ ಕಾರಿಡಾರ್‌ಗೆ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ಒಂಬತ್ತನೇ ರೈಲು ಪೂರೈಕೆಯಾಗುತ್ತಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಮೀಪವಿರುವ ಟಿಟಾಗರ್ ರೈಲ್ ಸಿಸ್ಟಮ್ಸ್ ಘಟಕದಿಂದ ಒಂಬತ್ತನೇ ಡ್ರೈವರ್‌ಲೆಸ್ ಮೆಟ್ರೋ ರೈಲನ್ನು ಟ್ರೇಲರ್ ಮೂಲಕ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ರವಾನಿಸಲಾಗಿದ್ದು, ಏಪ್ರಿಲ್ ಮಧ್ಯಭಾಗದ ವೇಳೆಗೆ ಹೆಬ್ಬಗೋಡಿ ಡಿಪೋವನ್ನು ತಲುಪುವ ನಿರೀಕ್ಷೆಯಿದೆ.
ಇದರ ಬೆನ್ನಲ್ಲೇ ಹತ್ತನೇ ರೈಲನ್ನು ಸಹ ತ್ವರಿತವಾಗಿ ರವಾನಿಸಲಾಗುವುದು ಎಂದು ಬಿಎಂಆರ್‌ಸಿಎಲ್ (BMRCL) ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರ್.ವಿ ರಸ್ತೆ-ಬೊಮ್ಮಸಂದ್ರ ನಡುವಿನ 19.15 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಪ್ರಸ್ತುತ 8 ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದು, ಹೊಸ ರೈಲುಗಳ ಸೇರ್ಪಡೆಯಿಂದ ಪ್ರಯಾಣಿಕರಿಗೆ ಭಾರಿ ರಿಲೀಫ್ ಸಿಗಲಿದೆ.
5-6 ನಿಮಿಷಕ್ಕೊಂದು ರೈಲು
ಹಳದಿ ಮಾರ್ಗದಲ್ಲಿ ಪ್ರಸ್ತುತ ಪೀಕ್ ಅವರ್‌ನಲ್ಲಿ (ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4 ರಿಂದ ರಾತ್ರಿ 9) 9 ನಿಮಿಷಕ್ಕೊಮ್ಮೆ ಮತ್ತು ಸಾಮಾನ್ಯ ಅವಧಿಯಲ್ಲಿ 14 ನಿಮಿಷಕ್ಕೊಮ್ಮೆ ರೈಲು ಸಂಚರಿಸುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯಂತಹ ಐಟಿ ಹಬ್‌ಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪ್ರತಿದಿನ ಸರಾಸರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿರುವುದರಿಂದ, ಹಾಲಿ ಇರುವ ರೈಲುಗಳ ಸಂಚಾರ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮೇ ತಿಂಗಳ ವೇಳೆಗೆ ಒಟ್ಟು 10 ರೈಲುಗಳು ಕಾರ್ಯಾಚರಣೆಗೆ ಇಳಿಯಲಿದ್ದು, ಆಗ ಪೀಕ್ ಅವರ್‌ನಲ್ಲಿ ಪ್ರತಿ 5-6 ನಿಮಿಷಕ್ಕೊಂದು ರೈಲು ಲಭ್ಯವಾಗಲಿದೆ ಮತ್ತು ನಾನ್-ಪೀಕ್ ಅವರ್‌ನಲ್ಲಿ 10-12 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ.
ತಜ್ಞರ ಲೆಕ್ಕಾಚಾರ ಮತ್ತು ಚರ್ಚೆ
10 ರೈಲುಗಳ ಸೇರ್ಪಡೆಯಿಂದ 5 ನಿಮಿಷದ ಆವರ್ತನ ಸಾಧ್ಯವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟಿಕೊಂಡಿದೆ. ತಜ್ಞರ ಲೆಕ್ಕಾಚಾರದ ಪ್ರಕಾರ, ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಿನ ಒಂದು ರೌಂಡ್ ಟ್ರಿಪ್ ಪೂರ್ಣಗೊಳಿಸಲು ಸರಿಸುಮಾರು 75 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. 10 ರೈಲುಗಳ ಪೈಕಿ ಒಂದನ್ನು ತುರ್ತು ಪರಿಸ್ಥಿತಿಗಾಗಿ ಕಾಯ್ದಿರಿಸಿ, ಉಳಿದ 9 ರೈಲುಗಳನ್ನು ನಿರಂತರವಾಗಿ ಕಾರ್ಯಾಚರಣೆಗೊಳಿಸಿದರೂ (75/9=8.3), ಸರಾಸರಿ 7 ರಿಂದ 8 ನಿಮಿಷಗಳಿಗೊಮ್ಮೆ ಮಾತ್ರ ರೈಲು ಒದಗಿಸಲು ಸಾಧ್ಯವಾಗಬಹುದು ಎಂಬುದು ಪ್ರಯಾಣಿಕರ ವಾದವಾಗಿದೆ. ಆದಾಗ್ಯೂ, ಬಿಎಂಆರ್‌ಸಿಎಲ್ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಇನ್ಫೋಸಿಸ್ ಮತ್ತು ಆರ್.ವಿ ರಸ್ತೆ ನಿಲ್ದಾಣಗಳ ನಡುವೆ ಮಾತ್ರ ಶಾರ್ಟ್-ಲೂಪ್ ಕಾರ್ಯಾಚರಣೆ ಮಾಡುವ ಮೂಲಕ 5-6 ನಿಮಿಷದ ಆವರ್ತನ ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

