x

ನಮ್ಮ ಮೆಟ್ರೋ ಕ್ರೆಡಿಟ್ ವಾರ್: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭಿನ್ನ ಲೆಕ್ಕಾಚಾರದ ಅಸಲಿಯತ್ತೇನು?

ಪ್ರಸ್ತುತ ಹಂತ 2, 2ಎ ಮತ್ತು 2ಬಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮೂರನೇ ಹಂತದ ಕಾಮಗಾರಿಗಳಿಗೆ ಪೂರ್ವಸಿದ್ಧತೆಗಳು ನಡೆಯುತ್ತಿದ್ದು, ಮತ್ತಷ್ಟು ಭಾಗಗಳು ಮೆಟ್ರೊ ಸಂಪರ್ಕ ಸಿಗಲಿವೆ.


Click the Play button to hear this message in audio format

ಬೆಂಗಳೂರಿನ ಜೀವನಾಡಿ 'ನಮ್ಮ ಮೆಟ್ರೋ' ಯೋಜನೆಯ ಯಶಸ್ಸು ಮತ್ತು ಹಣಕಾಸು ಹಂಚಿಕೆ ವಿಚಾರ ಇದೀಗ ತೀವ್ರ ರಾಜಕೀಯ ಕ್ರೆಡಿಟ್ ವಾರ್‌ಗೆ ಸಾಕ್ಷಿಯಾಗಿದೆ. ಮೆಟ್ರೋ ನಿರ್ಮಾಣದ ಒಟ್ಟು ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಎಷ್ಟು ಎಂಬ ಬಗ್ಗೆ ಉಭಯ ನಾಯಕರು ಭಿನ್ನ ಅಂಕಿ-ಅಂಶಗಳನ್ನು ಮುಂದಿಡುತ್ತಿದ್ದಾರೆ. ನಾಳೆ ನೂತನವಾಗಿ ನಿರ್ಮಾಣವಾಗಿರುವ ಗುಲಾಬಿ ಮಾರ್ಗ ಉದ್ಘಾಟನೆಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅನುದಾನದ ಪಾಲುದಾರಿಕೆಯ ಚರ್ಚೆ ಮುನ್ನೆಲೆಗೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಕಾರ, ಮೆಟ್ರೋ ಯೋಜನೆಯ ಸಿಂಹಪಾಲು ಜವಾಬ್ದಾರಿಯನ್ನು ಕರ್ನಾಟಕವೇ ಹೊತ್ತಿದೆ. ಸಚಿವ ಕೃಷ್ಣ ಬೈರೇಗೌಡರು ನೀಡಿರುವ ಮಾಹಿತಿಯಂತೆ, ಯೋಜನೆಯ ಒಟ್ಟು 77,891 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಪಾಲು 65,291 ಕೋಟಿ ರೂಪಾಯಿಗಳಾಗಿದ್ದು, ಇದು ಒಟ್ಟು ವೆಚ್ಚದ ಶೇಕಡ 83.8ರಷ್ಟಾಗಿದೆ. ಕೇಂದ್ರದ ಪಾಲು ಕೇವಲ 12,600 ಕೋಟಿ ರೂಪಾಯಿ ಅಂದರೆ ಶೇಕಡ 16.2ರಷ್ಟಾಗಿದೆ. ಇದರ ಜತೆಗೆ ಮೆಟ್ರೋ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ವೆಚ್ಚ, ಸಾಲದ ಮರುಪಾವತಿ ಹಾಗೂ ಕಾರ್ಯಾಚರಣೆಯ ನಷ್ಟವನ್ನೂ ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸುತ್ತಿದೆ. 2026-27ರ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಮಂಡಿಸಿದ ಅಂಕಿ-ಅಂಶಗಳ ಪ್ರಕಾರ, ಈವರೆಗೆ ಮೆಟ್ರೋಗೆ ಖರ್ಚಾದ 67,460 ಕೋಟಿ ರೂಪಾಯಿಗಳಲ್ಲಿ ರಾಜ್ಯ 59,376 ಕೋಟಿ ರೂಪಾಯಿ ಹಾಗೂ ಕೇಂದ್ರ 8,084 ಕೋಟಿ ರೂಪಾಯಿ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿಯೂ ಮೆಟ್ರೋಗಾಗಿ 2,110 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಸಂಸದ ತೇಜಸ್ವಿ ಸೂರ್ಯ ಲೆಕ್ಕಾಚಾರ: ಸಾರ್ವಭೌಮ ಖಾತರಿಯೇ ಆಧಾರ

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಸಂಪೂರ್ಣ ಭಿನ್ನವಾದ ಲೆಕ್ಕಾಚಾರವನ್ನು ಒದಗಿಸಿದ್ದಾರೆ. ಅವರ ಪ್ರಕಾರ ಮೆಟ್ರೋ ಯೋಜನೆಯು ಶೇಕಡ 20:20:60 ಆರ್ಥಿಕ ಮಾದರಿಯಲ್ಲಿ ನಡೆಯುತ್ತಿದೆ. ಯೋಜನಾ ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ತಲಾ ಶೇಕಡ 20ರಷ್ಟು ಭರಿಸಲಿದ್ದು, ಉಳಿದ ಶೇಕಡ 60ರಷ್ಟು ಹಣವನ್ನು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಾಗಿದೆ. ಅತಿಮುಖ್ಯವಾಗಿ, ಈ ಬೃಹತ್ ಮೊತ್ತದ ಸಾಲಗಳಿಗೆ ಕೇಂದ್ರ ಸರ್ಕಾರದ 'ಸಾರ್ವಭೌಮ ಖಾತರಿ' ಪ್ರಮುಖ ಆಧಾರವಾಗಿದೆ. ಈ ಖಾತರಿಯನ್ನು ಹಣಕಾಸು ಬದ್ಧತೆ ಎಂದು ಪರಿಗಣಿಸಿದರೆ, ಮೆಟ್ರೋ ಯೋಜನೆಗೆ ಕೇಂದ್ರದ ಒಟ್ಟು ಬದ್ಧತೆ 41,557 ಕೋಟಿ ರೂಪಾಯಿಗಳಾಗುತ್ತದೆ. ಅದೇ ರೀತಿ ರಾಜ್ಯದ ಬದ್ಧತೆ 36,332 ಕೋಟಿ ರೂಪಾಯಿಗಳಷ್ಟಿದೆ ಎಂದು ಅವರು ವಿವರಿಸಿದ್ದಾರೆ.

ಲೆಕ್ಕಾಚಾರದ ಗೊಂದಲಕ್ಕೆ ಕಾರಣಗಳೇನು?

ಈ ಎರಡೂ ಲೆಕ್ಕಾಚಾರಗಳನ್ನು ಗಮನಿಸಿದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇರೆಬೇರೆ ಮಾನದಂಡಗಳನ್ನು ಆಧರಿಸಿ ಅಂಕಿ-ಅಂಶಗಳನ್ನು ನೀಡುತ್ತಿರುವುದು ಸ್ಪಷ್ಟವಾಗುತ್ತದೆ. ರಾಜ್ಯ ಸರ್ಕಾರವು ತನ್ನ ನೇರ ಹೊಣೆಗಾರಿಕೆ, ಭೂಸ್ವಾಧೀನ ವೆಚ್ಚ ಮತ್ತು ವಾಸ್ತವಿಕ ಖರ್ಚನ್ನು ಆಧರಿಸಿ ಶೇಕಡ 84ರ ಲೆಕ್ಕ ನೀಡುತ್ತಿದೆ. ಆದರೆ, ಸಂಸದ ತೇಜಸ್ವಿ ಸೂರ್ಯ ಅವರು ಮೆಟ್ರೋ ನಿಗಮ ಪಡೆದಿರುವ ಸಾಲದ ಮೇಲಿನ ಕೇಂದ್ರದ ಸಾರ್ವಭೌಮ ಖಾತರಿಯನ್ನೂ ಕೇಂದ್ರದ ಆರ್ಥಿಕ ಬದ್ಧತೆಯಡಿಯೇ ಪರಿಗಣಿಸಿ ಲೆಕ್ಕಾಚಾರ ನೀಡಿದ್ದಾರೆ. ಹೀಗಾಗಿ, ಎರಡೂ ವಾದಗಳು ತಮ್ಮದೇ ಆದ ಪ್ರತ್ಯೇಕ ಹಣಕಾಸು ವ್ಯಾಖ್ಯಾನಗಳನ್ನು ಹೊಂದಿದ್ದು, ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ.

ದರ ಏರಿಕೆ ವಿವಾದ

ಪ್ರಸ್ತುತ ಬೆಂಗಳೂರು ಮೆಟ್ರೋ ಜಾಲವು 96.1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಲ್ಲಿದೆ. ನವೆಂಬರ್ ಹದಿಮೂರರಂದು ಗುಲಾಬಿ ಮಾರ್ಗದ ಏಳೂವರೆ ಕಿಲೋಮೀಟರ್ ಮಾರ್ಗ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದ್ದು, ಒಟ್ಟು ಜಾಲ 103.6 ಕಿಲೋಮೀಟರ್‌ಗೆ ಏರಿಕೆಯಾಗಲಿದೆ. ಪ್ರಸ್ತುತ ಹಂತ 2, 2ಎ ಮತ್ತು 2ಬಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮೂರನೇ ಹಂತದ ಕಾಮಗಾರಿಗಳಿಗೆ ಪೂರ್ವಸಿದ್ಧತೆಗಳು ನಡೆಯುತ್ತಿವೆ.

ಇದರ ನಡುವೆ, 2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮವು ಸುಮಾರು ಏಳೂವರೆ ವರ್ಷಗಳ ಬಳಿಕ ಪ್ರಯಾಣ ದರವನ್ನು ಪರಿಷ್ಕರಿಸಿತ್ತು. ಕೆಲವು ಮಾರ್ಗಗಳಲ್ಲಿ ದರ ಶೇಕಡ 100ರಷ್ಟು ಏರಿಕೆಯಾಗಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಿಗಮವು 450 ನಿಲ್ದಾಣಗಳ ನಡುವಿನ ದರ ಲೆಕ್ಕಾಚಾರದಲ್ಲಿದ್ದ ವ್ಯತ್ಯಾಸಗಳನ್ನು ಸರಿಪಡಿಸಿ, ಗರಿಷ್ಠ ದರ ಏರಿಕೆಯನ್ನು ಶೇಕಡ 70ಕ್ಕೆ ಮಿತಿಗೊಳಿಸಿ ವಿವಾದವನ್ನು ಶಮನಗೊಳಿಸಿತ್ತು.

Read More
Next Story