
ನೀಲಿ ಮಾರ್ಗದ ಮೆಟ್ರೋ ಕಾಮಗಾರಿಗೆ ವೇಗ: ಟ್ರ್ಯಾಕ್ ಅಳವಡಿಕೆಗೆ ರೈಲ್ವೆ ಮಂಡಳಿ ಗ್ರೀನ್ ಸಿಗ್ನಲ್
ಕೆ.ಆರ್. ಪುರ ಮತ್ತು ಸಿಲ್ಕ್ ಬೋರ್ಡ್ ನಡುವಿನ ಕೆಲ ಸ್ಥಳಗಳಲ್ಲಿ ಕಾಮಗಾರಿ ಬಾಕಿ ಇರುವುದರಿಂದ, ವಾಣಿಜ್ಯ ಕಾರ್ಯಾಚರಣೆಯು ಮುಂದಿನ ವರ್ಷದ ಮಧ್ಯಭಾಗಕ್ಕೆ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಮಾರ್ಗವಾಗಿರುವ ಬಹುನಿರೀಕ್ಷಿತ ʼನಮ್ಮ ಮೆಟ್ರೋʼ ನೀಲಿ ಮಾರ್ಗದ ಹಂತ-2ಎ ಹಾಗೂ 2 ಬಿ ಯೋಜನೆಯಡಿ ಮಟ್ರೋ ಹಳಿ ಅಳವಡಿಸಲು ಕೇಂದ್ರ ರೈಲ್ವೆ ಮಂಡಳಿ ಅಧಿಕೃತ ಅನುಮೋದನೆ ನೀಡಿದೆ. ಇದರಿಂದ ಕಾಮಗಾರಿಗೆ ಮತ್ತಷ್ಟು ವೇಗ ಸಿಗಲಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರ ಹಾಗೂ ಯಲಹಂಕದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58 ಕಿ.ಮೀ. ಉದ್ದದ ಏರ್‌ಪೋರ್ಟ್ ಸಂಪರ್ಕ ಮಾರ್ಗ ಇದಾಗಿದೆ. ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಿಸರ್ಚ್ ಡಿಸೈನ್ ಅಂಡ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್ (RDSO) ಜೊತೆ ಸಮಾಲೋಚಿಸಿ ರೈಲ್ವೆ ಮಂಡಳಿ ಈ ಹಸಿರು ನಿಶಾನೆ ತೋರಿಸಿದೆ.
ಕೆ.ಆರ್. ಪುರ ಮತ್ತು ಸಿಲ್ಕ್ ಬೋರ್ಡ್ ನಡುವಿನ ಕೆಲ ಸ್ಥಳಗಳಲ್ಲಿ ಕಾಮಗಾರಿ ಬಾಕಿ ಇರುವುದರಿಂದ, ವಾಣಿಜ್ಯ ಕಾರ್ಯಾಚರಣೆಯು ಮುಂದಿನ ವರ್ಷದ ಮಧ್ಯಭಾಗಕ್ಕೆ ವಿಸ್ತರಣೆಯಾಗುವ ಸಾಧ್ಯತೆಯಿದೆ.
ರೈಲ್ವೆ ಮಂಡಳಿಯಿಂದ ಸಮ್ಮತಿ
ಬಿಎಂಆರ್‌ಸಿಎಲ್ ಕಳೆದ ಜುಲೈ 2 ರಂದೇ ಆರ್‌ಡಿಎಸ್‌ಒ ಆನ್‌ಲೈನ್ ಪೋರ್ಟಲ್ ಮೂಲಕ ಅಗತ್ಯ ದಾಖಲೆ ಹಾಗೂ ಅನುಸರಣೆ ವಿವರಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ ಇದನ್ನು ಪರಿಶೀಲಿಸಿರುವ ರೈಲ್ವೆ ಮಂಡಳಿಯು, ಅನುಮೋದಿತ ಟ್ರ್ಯಾಕ್ ರಚನೆಯ ಪ್ರತಿಯನ್ನು ಬಿಎಂಆರ್‌ಸಿಎಲ್‌ಗೆ ಅಧಿಕೃತವಾಗಿ ರವಾನಿಸಿದೆ. ಇದರಿಂದಾಗಿ ನಿಲ್ದಾಣಗಳ ನಡುವೆ ಟ್ರ್ಯಾಕ್ ಅಳವಡಿಸುವ ಪ್ರಕ್ರಿಯೆಗೆ ಇದ್ದ ಕಾನೂನುಬದ್ಧ ಹಾಗೂ ತಾಂತ್ರಿಕ ತೊಡಕುಗಳು ನಿವಾರಣೆಯಾಗಿವೆ.
ʼಹಂತ 2ಎʼ ಯೋಜನೆಯು ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರದವರೆಗೆ ಸಾಗಿದರೆ, ಹಂತ 2ಬಿ ಯಡಿ ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗೆ ಇರಲಿದೆ. ಈ ಮಾರ್ಗವು ಪೂರ್ಣಗೊಂಡರೆ ಐಟಿ ಕಾರಿಡಾರ್ ಹಾಗೂ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ದಟ್ಟಣೆಯಿಲ್ಲದೆ ಸುಲಭವಾಗಿ ಸಂಚರಿಸಲು ಅನುಕೂಲವಾಗಲಿದೆ.

