
ನಮ್ಮ ಬೆಂಗಳೂರು- ಬರೀ ಐಟಿ ಸಿಟಿ ಅಲ್ಲ; ವಿಶ್ವದ 'ಸೆಮಿಕಂಡಕ್ಟರ್' ರಾಜಧಾನಿ!
ಚಿಪ್ ಡಿಸೈನ್ ಹಬ್ ಆದ ಬೆಂಗಳೂರು ಇದೀಗ 2nm ಚಿಪ್‌ಸೆಟ್ ಸೇರಿ ಹಲವು ಸಾಧನೆಗಳ ಅನಾವರಣ ಮಾಡಿದ್ದು, ಚಿಪ್ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ.
ಬೆಂಗಳೂರಿಗೆ ಭಾರತದ ಸಿಲಿಕಾನ್ ಸಿಟಿ ಎಂಬ ಬಿರುದು ಸುಮ್ಮನೆ ಬಂದಿಲ್ಲ. ಅದರ ಇತಿಹಾಸವೇ ರೋಚಕ. ಈ ದಾಖಲೆಗಳ ಪುಸ್ತಕಕ್ಕೆ ಇದೀಗ ಇನ್ನೂ ಹಲವು ಸಾಧನೆಗಳು ಸೇರ್ಪಡೆಗೊಂಡಿವೆ. ಕೆಲವು ದಶಕಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತನ್ನೇ ಆಳುತ್ತಿರುವ ಬೆಂಗಳೂರು, ಈಗ ಹಾರ್ಡ್‌ವೇರ್ ಮತ್ತು ಸೆಮಿಕಂಡಕ್ಟರ್ (Semiconductor) ಕ್ಷೇತ್ರದ ಜಾಗತಿಕ ರಾಜಧಾನಿಯಾಗುತ್ತಿರುವುದು ಕೂಡ ಅವಿಸ್ಮರಣಿಯ ಸಾಧನೆಯೇ ಸರಿ.
ಇದಕ್ಕೆ ಸಾಕ್ಷಿ ಎಂಬಂತೆ, ಫೆಬ್ರವರಿ 7ರ ಶನಿವಾರ ಒಂದೇ ದಿನ ನಗರದಲ್ಲಿ ನಾಲ್ಕು ಬೃಹತ್ ಸೆಮಿ ಕಂಡಕ್ಟರ್ ಆಧಾರಿತ ತಂತ್ರಜ್ಞಾನ ಕಂಪನಿಗಳು ಹೊಸ ಘೋಷಣೆಗಳನ್ನು ಮಾಡಿವೆ. ಅವುಗಳೆಂದರೆ, ಕ್ವಾಲ್ಕಾಮ್ನ 2ಎನ್ಎಮ್ ಚಿಪ್‌ಸೆಟ್, ಸಿ- ಡಾಕ್ನಿಂದ ಚಿಪ್ ಟೆಸ್ಟಿಂಗ್ ಕೇಂದ್ರ ಸ್ಥಾಪನೆ, ಏರೋಸ್ಪೇಸ್ ಪಾರ್ಕ್‌ನಲ್ಲಿ ಝೆಟ್ವರ್ಕ್ ಘಟಕ ಆರಂಭ ಹಾಗೂ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯ ಹೂಡಿಕೆಯ ವಿಸ್ತರಣೆ.
ಕಳೆದ ಮೂರು ದಶಕಗಳಿಂದ ಬೆಂಗಳೂರು ಐಟಿ ಕ್ಷೇತ್ರದ ಹಬ್ ಆಗಿ ಬೆಳೆಯಲು ಇಲ್ಲಿನ ಐಟಿ ಪೂರಕ ವ್ಯವಸ್ಥೆ, ಪ್ರತಿಭಾವಂತ ಎಂಜಿನಿಯರ್ಗಳ ಲಭ್ಯತೆ ಹಾಗೂ ಸರ್ಕಾರಗಳ ಪ್ರೇರಣೆಯೂ ಕಾರಣ. ಹೀಗಾಗಿ ಬೆಂಗಳೂರು ಎಂದರೆ ಐಟಿ ಕಂಪನಿಗಳ ತವರೂರು ಎಂಬಷ್ಟು ಮಟ್ಟಿಗೆ ಬೆಳೆಯಿತು. ಅದೇ ಬೆಳವಣಿಗೆ ಇದೀಗ ಜಾಗತಿಕವಾಗಿ ಅತಿ ಹೆಚ್ಚು ಬೇಡಿಕೆ ಇರುವ ಸೆಮಿ ಕಂಡಕ್ಟರ್ ಕ್ಷೇತ್ರದಲ್ಲೂ ಆಗುತ್ತಿದ್ದು, ಪ್ರಮುಖವಾಗಿ ಸಿಲಿಕಾನ್ ಚಿಪ್‌ಸೆಟ್ ವಿನ್ಯಾಸದಲ್ಲಿ ಬೆಂಗಳೂರು ಜಾಗತಿಕವಾಗಿ ನಂಬರ್ ಒನ್ ಕೇಂದ್ರವಾಗಿ ಬೆಳೆದಿದೆ.
ಬೆಂಗಳೂರು ಮೂಲದ ಧಿಹಿ ಲ್ಯಾಬ್ಸ್ ಪ್ರವೇಟ್ ಲಿಮೆಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತಿಂದ್ರನಾಥ್ ಟಿ ಅವರು ಈ ಕುರಿತು 'ದ ಫೆಡರಲ್ ಕರ್ನಾಟಕದ' ಜತೆ ಮಾತನಾಡಿ, ಇದು ಹೊಸ ಬೆಳವಣಿಗೆ ಎಂದು ಅನಿಸಿದರೂ, ಪ್ರಕ್ರಿಯೆ ಆರಂಭವಾಗಿ ವರ್ಷಗಳಾಗಿವೆ ಎನ್ನುತ್ತಾರೆ. "ಬೆಂಗಳೂರಿನ ಟೆಕ್ ಕ್ಷೇತ್ರ ವ್ಯಾಪಕವಾಗಿ ಬೆಳೆಯಲು ಇಲ್ಲಿ ಲಭ್ಯವಿರುವ ಪ್ರತಿಭಾವಂತ ಎಂಜಿನಿಯರ್ಗಳೇ ಕಾರಣ. ಡಿಆರ್ಡಿಒಗೆ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಸಂಬಂಧಿಸಿದ 12 ಸಂಶೋಧನಾ ಕೇಂದ್ರಗಳು ಇಲ್ಲಿರುವುದೇ ಈ ಮಾತಿಗೆ ಸಾಕ್ಷಿ. ಸಾಫ್ಟ್‌ವೇರ್ ಇರಲಿ, ಹಾರ್ಡ್‌ವೇರ್ ಇರಲಿ, ಬೆಂಗಳೂರಿನಲ್ಲಿ ವೃತ್ತಿ ನಿರತ ಎಂಜಿನಿಯರ್ಗಳಿಗೆ ಸರಿಸಾಟಿ ಯಾರೂ ಇಲ್ಲ'' ಎಂದು ಹೇಳುತ್ತಾರೆ.
ಸಾಂದರ್ಭಿಕ ಚಿತ್ರ (ಎಕ್ಸ್ ಪೋಸ್ಟ್)
ಮುಂದುವರಿದ ಅವರು ''ಕರ್ನಾಟಕವು ಒಂದು ಹಂತದಲ್ಲಿ ಅತಿ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದ್ದ ರಾಜ್ಯವಾಗಿತ್ತು. ಹೀಗಾಗಿ ಅಲ್ಲಿ ಉದಯೋನ್ಮುಖ ಪ್ರತಿಭೆಗಳು ಸಾಕಷ್ಟು ಹುಟ್ಟಿಕೊಂಡವು. ಅವರು ಜಾಗತಿಕ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿನ ಪರಿಣತ ಹಾಗೂ ಹೊಂದಾಣಿಕೆ ಸ್ವಭಾವ ಬೇರೆ ದೇಶದ ಕಂಪನಿಗಳಿಗೆ ಬೆಂಗಳೂರಿನಲ್ಲಿ ಕಂಪನಿ ತೆರೆಯಲು ಪ್ರೇರಣೆ ಕೊಟ್ಟಿತು,'' ಎಂದು ಯತೀಂದ್ರ ಅವರು ಅಭಿಪ್ರಾಯಪಡುತ್ತಾರೆ.
''ಬೆಂಗಳೂರಿನ ವಾತಾವರಣ ಹಾಗೂ ಉದ್ಯಮಗಳಿಗೆ ಯುಕ್ತ ಪರಿಸರ ವ್ಯವಸ್ಥೆಯು ಸಾಫ್ಟ್‌ವೇರ್ ರೀತಿಯಲ್ಲಿ ಹಾರ್ಡ್‌ವೇರ್ ಕ್ಷೇತ್ರದಲ್ಲೂ ಬೆಂಗಳೂರು ಬೆಳೆಯಲು ಸಾಧ್ಯವಾಗಿದೆ. ಅಲ್ಲದೆ, ಟೆಸ್ಟಿಂಗ್ ಹಾಗೂ ಆರ್ ಆ್ಯಂಡ್ ಡಿ ಕೇಂದ್ರಗಳ ಬೆಳವಣಿಗೆಯಿಂದಾಗಿ ಸ್ಟಾರ್ಟ್ಅಪ್ಗಳ ಸಂಖ್ಯೆಯೂ ಸಹಜವಾಗಿ ಬೆಳೆದಿದೆ,'' ಎಂದು ವಿವರಿಸಿದ್ದಾರೆ.
ಬೆಂಗಳೂರು ವಿಶ್ವದಲ್ಲೇ ನಂಬರ್ ಒನ್ ಕೇಂದ್ರ
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಮೈಸೂರು ಕ್ಲಸ್ಟರ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕ್ಲಸ್ಟರ್ ಹೆಡ್ ಸುಧೀರ್ ಕೆ. ಎಸ್ ಅವರು 'ದ ಫಡರಲ್ ಕರ್ನಾಟಕ'ಕ್ಕೆ ಸಿಲಿಕಾನ್ ಚಿಪ್ ಕ್ಷೇತ್ರದ ಕುರಿತ ಸಮಗ್ರ ವಿವರಣೆ ನೀಡಿದ್ದಾರೆ. ಅವರ ಪ್ರಕಾರ ಚಿಪ್‌ಗಳ ಡಿಸೈನ್ನಲ್ಲಿ ಬೆಂಗಳೂರು ವಿಶ್ವದಲ್ಲೇ ನಂಬರ್ ಒನ್ ಹಾಗೂ ಸದ್ಯದ ಮಟ್ಟಿಗೆ ಇಲ್ಲಿನ ವಿನ್ಯಾಸ ಸಾಮರ್ಥ್ಯವನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಚಿಪ್‌ಗಳನ್ನು ಉತ್ಪಾದಿಸುವ ಪ್ರಮಾಣದಲ್ಲಿ ಚೀನಾ ಹಾಗೂ ಕೊರಿಯಾ ಮುಂಚೂಣಿಯಲ್ಲಿದ್ದರೂ ವಿನ್ಯಾಸದ ವಿಚಾರಕ್ಕೆ ಬಂದಾಗ ಬೆಂಗಳೂರೇ ಅಗ್ರ ಸ್ಥಾನಿ ಎಂದು ಅವರು ಹೇಳುತ್ತಾರೆ.
''ಚಿಪ್ ವಿನ್ಯಾಸದಲ್ಲಿ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಭಾರೀ ಬೆಳವಣಿಗೆ ಕಂಡಿರುವ ಹೊರತಾಗಿಯೂ, ಕಳೆದ ಒಂದು ದಶಕಕ್ಕಿಂತ ಹಿಂದೆನಿಂದಲೂ ಇಲ್ಲಿ ಚಿಪ್ ವಿನ್ಯಾಸದಲ್ಲಿ ಆವಿಷ್ಕಾರಗಳು ಆರಂಭಗೊಂಡಿವೆ ಹಾಗೂ ಕಂಪನಿಗಳು ಸ್ಥಾಪನೆಗೊಂಡಿವೆ. ನುರಿತ ಎಂಜಿನಿಯರ್ಗಳ ಲಭ್ಯತೆಯೇ ಇದಕ್ಕೆ ಮೊದಲ ಕಾರಣ. ಅತಿ ಹೆಚ್ಚು ಕೌಶಲ ಬೇಡುವ ಈ ಕೆಲಸಕ್ಕೆ ಬೇಕಾಗುವ ಎಂಜಿನಿಯರ್ಗಳನ್ನು ಕರ್ನಾಟಕದ ಕಾಲೇಜುಗಳು ನಿರಂತರವಾಗಿ ಸಿದ್ಧಪಡಿಸುತ್ತಿವೆ. ಹೀಗಾಗಿ ಕಂಪನಿಗಳ ಇಲ್ಲಿ ಹೂಡಿಕೆ ಮಾಡಲು ಹಿಂಜರಿಯಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಬೆಂಗಳೂರಿನ ಹೊರವರ್ತುಲ ರಸ್ತೆಯ ವ್ಯಾಪ್ತಿಯಲ್ಲಿ 400ಕ್ಕೂ ಅಧಿಕ ಸಿಲಿಕಾನ್ ಚಿಪ್ ಸಿದ್ಧಪಡಿಸುವ ಕಂಪನಿಗಳಿವೆ. ಇತ್ತೀಚಿನ ದಿನಗಳಲ್ಲಿ ಬಿಯಾಂಡ್ ಬೆಂಗಳೂರು ಎಂಬ 'ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್' ಯೋಜನೆ ಮೂಲಕ ಕೆಲವು ಕಂಪನಿಗಳು ಮೈಸೂರು ಹಾಗೂ ಹುಬ್ಬಳ್ಳಿಯಲ್ಲೂ ಸ್ಥಾಪನೆಗೊಂಡಿವೆ ಎಂದು ಅವರು ವಿವರಿಸಿದ್ದಾರೆ.
ಚಿಪ್ ತಯಾರಿ ಅತ್ಯಂತ ಸೂಕ್ಷ್ಮ ಕೆಲಸ
ಸಿಲಿಕಾನ್ ಚಿಪ್ ತಯಾರಿ ಅತಿ ಸೂಕ್ಷ್ಮ ಕೆಲಸ ಎಂದೇ ಸುಧೀರ್ ಅವರು ವಿವರಿಸುತ್ತಾರೆ. ''ಒಟ್ಟಾರೆಯಾಗಿ ಮರಳನ್ನು ಸಿಲಿಕಾನ್ ಆಗಿ ಪರಿವರ್ತಿಸುವ ಕಾರ್ಯ. ಆದರೆ, ಅಂತಿಮ ಚಿಪ್ 99.999 ರಷ್ಟು ಶುದ್ಧ ಸಿಲಿಕಾನ್ಗಳಾಗಿರುತ್ತವೆ. ಅವುಗಳನ್ನು 8 ಮೈಕ್ರೊ ಮೀಟರ್ ಪೈಪ್ಗಳ ಆಕಾರಕ್ಕೆ ತಂದು, 10 ಎನ್ಎಮ್ (ಒಂದು ಮಿಲಿ ಮೀಟರ್ನ 100ನೇ ಒಂದು ಭಾಗ) ಹಾಳೆಗಳನ್ನಾಗಿ ಪರಿವರ್ತಿಸಲಾಗುತ್ತದೆ. ಅವುಗಳ ಮೇಲೆ ಫೋಟೊ ಆಫ್ಟಿಕ್ ಕೆಮಿಕಲ್ ಪ್ರಕ್ರಿಯೆ ನಡೆಸಿ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯೇ ಅತ್ಯಂತ ಕ್ಲಿಷ್ಟಕರ ಹಾಗೂ ಬೆಂಗಳೂರಿನ ಕಂಪನಿಗಳು ಹಾಗೂ ಎಂಜಿನಿಯರ್ಗಳು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ಮಾಡುತ್ತಾರೆ. ಹೀಗಾಗಿ ಬೆಂಗಳೂರು ವಿನ್ಯಾಸ ಕೇಂದ್ರವಾಗಿ ಬೆಳೆದಿದೆ,'' ಎಂದು ಅವರು ವಿವರಿಸಿದ್ದಾರೆ.
ಕ್ವಾಲ್ ಕಾಮ್ ಸಿದ್ಧಪಡಿಸಿರುವಂತಹ 2 ಎನ್ಎಮ್ ಚಿಪ್ ಜಾಗತಿಕವಾಗಿ ಪ್ರಸ್ತುತ ಇರುವ ಅತ್ಯಾಧುನಿಕ ತಂತ್ರಜ್ಞಾನ. ಹೀಗಾಗಿ ಈ ವಿಚಾರದಲ್ಲಿಯೂ ಬೆಂಗಳೂರು ಅತ್ಯುನ್ನತ ಸ್ಥಾನ ಪಡೆದುಕೊಂಡಿದೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಂದ ಆರಂಭಗೊಂಡಂತೆ ಆ ಬಳಿಕ ಬಂದಿರುವ ಎಲ್ಲ ಸರ್ಕಾರಗಳ ಸಿಎಂಗಳು ಹಾಗೂ ಐಟಿ-ಬಿಟಿ ಸಚಿವರ ಕೊಡುಗೆಯೂ ಇಲ್ಲಿದೆ. ಯಾವ ಸರ್ಕಾರವೂ ಈ ನಿಟ್ಟಿನಲ್ಲಿ ಬೆಂಗಳೂರು ಇರುವ ಬೆಳೆಯುವ ಅವಕಾಶವವನ್ನು ನಷ್ಟ ಮಾಡಿಕೊಂಡಿಲ್ಲ ಎಂದು ಸುಧೀರ್ ಅವರು ವಿವರಿಸಿದ್ದಾರೆ.
ಅಂದ ಹಾಗೆ ಬೆಂಗಳೂರು ಚಿಪ್ ತಾಂತ್ರಿಕತೆಯಲ್ಲಿ ಮತ್ತೊಮ್ಮೆ ಜಾಗತಿಕವಾಗಿ ಗಮನ ಸೆಳೆಯಲು ಕಾರಣವಾದ ಕಂಪನಿಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಝಟ್ವರ್ಕ್ ಸಂಶೋಧನಾ ಕೇಂದ್ರದ ಉದ್ಘಾಟನೆ ವೇಳೆಯ ಚಿತ್ರ (ಎಕ್ಸ್ ಪೋಸ್ಟ್)
ತಂತ್ರಜ್ಞಾನ ವಿನ್ಯಾಸಕ್ಕೆ ಸೀಮಿತವಾಗಬಾರದು. ಮುಂದುವರಿದು ಉತ್ಪಾದನೆಯಾಗಿಯೂ ಮಾರುಕಟ್ಟೆಗೆ ಬರಬೇಕು. ಈ ನಿಟ್ಟಿನಲ್ಲಿ, ಜಾಗತಿಕ ಉತ್ಪಾದನಾ ಸೇವೆಗಳ ಯುನಿಕಾರ್ನ್ ಕಂಪನಿಯಾಗಿರುವ 'ಝೆಟ್ವರ್ಕ್', ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನಲ್ಲಿ ತನ್ನ ಹೊಸ ಉತ್ಪಾದನಾ ಘಟಕ ಪ್ರಾರಂಭಿಸಿದೆ. ಇಲ್ಲಿ ರಕ್ಷಣಾ ವಲಯ (Defense), ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಬೇಕಾದ ಅತ್ಯಾಧುನಿಕ ಬಿಡಿಭಾಗಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ತಯಾರಾಗಿ ಹೊರಕ್ಕೆ ಬರಲಿದೆ. ರಕ್ಷಣಾ ಇಲಾಖೆಗೆ ಬೇಕಾದ ಎಲೆಕ್ಟ್ರಾನಿಕ್ ಚಿಪ್ ಆಧಾರಿತ ಉಪಕರಣಗಳು ಇಲ್ಲಿಂದಲೇ ಪೂರೈಕೆಯಾಗಲಿದೆ.
4. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (TI) ವಿಸ್ತರಣೆ
ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಒಂದಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (Texas Instruments), ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ತನ್ನ ನೂತನ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರವನ್ನು ಶನಿವಾರವೇ ತೆರೆದಿದೆ. 1985ರಲ್ಲೇ ಬೆಂಗಳೂರಿಗೆ ಕಾಲಿಟ್ಟ ಮೊದಲ ಬಹುರಾಷ್ಟ್ರೀಯ ಟೆಕ್ ಕಂಪನಿಗಳಲ್ಲಿ ಟಿಐ ಕೂಡ ಒಂದು. ಈಗ ನಾಲ್ಕು ದಶಕಗಳ ನಂತರವೂ ಅದು ಬೆಂಗಳೂರಿನಲ್ಲಿ ತನ್ನ ಹೂಡಿಕೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಈ ಕೇಂದ್ರದಲ್ಲಿ ಅನಲಾಗ್ ಚಿಪ್ಸ್ (Analog Chips) ಮತ್ತು ಎಂಬೆಡೆಡ್ ಪ್ರೊಸೆಸರ್‌ಗಳ (Embedded Processors) ಸಂಶೋಧನೆ ನಡೆಯಲಿದೆ. ಎಲೆಕ್ಟ್ರಿಕ್ ವಾಹನಗಳು (EV) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸಾಧನಗಳಿಗೆ ಬೇಕಾದ ಚಿಪ್‌ಗಳನ್ನು ಇಲ್ಲಿ ಅಭಿವೃದ್ದಿಪಡಿಸಲಾಗುತ್ತದೆ.
ಇದರ ಜತೆಗೆ ಬ್ರಿಟನ್ ಮೂಲದ ಹಾಗೂ ಸಾಫ್ಟ್‌ಬ್ಯಾಂಕ್ ನೆರವು ಪಡೆಯುತ್ತಿರುವ ಸೆಮಿಕಂಡಕ್ಟರ್ ಕಂಪನಿ 'ಗ್ರಾಫ್‌ಕೋರ್' (Graphcore), ಭಾರತದಲ್ಲಿ ತನ್ನ ಮೊದಲ ಕಚೇರಿ ತೆರೆಯಲು ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿದೆ. ನಗರದ ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್‌ನಲ್ಲಿ ಕಚೇರಿ ಸ್ಥಾಪನೆಗೆ ಜಾಗ ಗುತ್ತಿಗೆಗೆ ಪಡೆದಿದೆ. ಕೃತಕ ಬುದ್ಧಿಮತ್ತೆ ಎಂಜಿನಿಯರಿಂಗ್ ಕ್ಯಾಂಪಸ್ ಸ್ಥಾಪನೆ ಇದರ ಪ್ರಮುಖ ಉದ್ದೇಶ.
ಬೆಂಗಳೂರು ಈಗ ಕೇವಲ ಐಟಿ ಸಿಟಿ ಅಲ್ಲ!
ಎಲ್ಲ ಬೆಳವಣಿಗೆಗಳನ್ನು ನೋಡಿದಾಗ ಬೆಂಗಳೂರು ಇನ್ನು ಮುಂದೆ ಕೇವಲ ಸಾಫ್ಟ್‌ವೇರ್ ಕೋಡಿಂಗ್ ಮಾಡುವ ನಗರವಷ್ಟೇ ಅಲ್ಲ. ಅದು ಹಾರ್ಡ್‌ವೇರ್, ಚಿಪ್ ಡಿಸೈನ್, ಟೆಸ್ಟಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್‌ಗಳ ದೊಡ್ಡ ಹಬ್ ಆಗಿ ಬೆಳೆಯುವುದು ಖಾತರಿ. ಜಗತ್ತಿನಲ್ಲಿ ಎಲ್ಲಿಯೇ ಚಿಪ್ ತಯಾರಾಗಲಿ, ಅದರಲ್ಲಿ ಬೆಂಗಳೂರಿನ ಪಾತ್ರ ದೊಡ್ಡದು ಎಂಬ ಮಾತು ಈಗ ಉತ್ಪ್ರೇಕ್ಷೆಯಲ್ಲ. ಜತೆಗೆ ಬೆಂಗಳೂರು ಜಾಗತಿಕವಾಗಿ ಭರವಸೆಯ ಸೃಷ್ಟಿಸುತ್ತಿದೆ.
ಈಗಾಗಲೇ ಇಂಟೆಲ್, ಎನ್‌ವಿಡಿಯಾ, ಎಎಮ್‌ಡಿ ಮತ್ತು ಸ್ಯಾಮ್‌ಸಂಗ್‌ನಂತಹ ಜಾಗತಿಕ ದೈತ್ಯ ಸಂಸ್ಥೆಗಳು ಅತ್ಯಾಧುನಿಕ ಚಿಪ್‌ಗಳ ವಿನ್ಯಾಸವನ್ನು ಬೆಂಗಳೂರಿನಲ್ಲಿ ರೂಪಿಸುತ್ತಿದ್ದು, ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಸೂಪರ್ ಕಂಪ್ಯೂಟರ್‌ಗಳವರೆಗೆ ಬಳಸಲಾಗುವ ಸಂಕೀರ್ಣ ಚಿಪ್‌ಗಳಲ್ಲಿ ಬೆಂಗಳೂರಿನ ಎಂಜಿನಿಯರ್ಗಳ ಕೈಚಳಕ ಕಾಣುತ್ತಿದೆ.
ವಿನ್ಯಾಸಗೊಂಡ ಚಿಪ್ ಮಾರುಕಟ್ಟೆಗೆ ಹೋಗುವ ಮೊದಲು, ಕಠಿಣ ಪರೀಕ್ಷೆಗಳಿಗೆ ಒಳಪಡಿಸಬೇಕಾಗಿದ್ದು, ಬೆಂಗಳೂರು ಈ ಕ್ಷೇತ್ರದಲ್ಲೂ ವಿಶೇಷ ಪರಿಣತಿ ಸಾಧಿಸುತ್ತಿದೆ. ಚಿಪ್‌ಗಳ ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ATMP) ಘಟಕಗಳು ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತಲೆ ಎತ್ತುತ್ತಿದ್ದು, ಫಾಕ್ಸ್‌ಕಾನ್ ಕಂಪನಿ ಇದಕ್ಕೆ ಉತ್ತಮ ಉದಾಹರಣೆ.

