ಕುಡಿಯುವ ನೀರಿನ ಸಮಸ್ಯೆಯಾದರೆ ತಹಸೀಲ್ದಾರ್, ಎಸಿಗಳ ಮೇಲೆ ಕಾನೂನು ಕ್ರಮ
x

ಕುಡಿಯುವ ನೀರಿನ ಸಮಸ್ಯೆಯಾದರೆ ತಹಸೀಲ್ದಾರ್, ಎಸಿಗಳ ಮೇಲೆ ಕಾನೂನು ಕ್ರಮ

ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸಂಬಂಧಪಟ್ಟ ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.


Click the Play button to hear this message in audio format

ಮಂಡ್ಯ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸಂಬಂಧಪಟ್ಟ ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಶೇ. 25ರಷ್ಟು ನೀರಿಲ್ಲದ ಹಾಗೂ ಬರ ಆವರಿಸಿರುವ ಕೆರೆಗಳ ಮಾಹಿತಿಯನ್ನು ಸಿದ್ಧಪಡಿಸಿ, ಅಧಿಕಾರಿಗಳು ದಿನದ 24 ಗಂಟೆಯೂ ಸ್ಥಳೀಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದು ಅಲರ್ಟ್ ಆಗಿರಬೇಕು ಎಂದು ಸೂಚಿಸಿದರು. ಎಇಇ ಸೇರಿದಂತೆ ಎಂಜಿನಿಯರ್‌ಗಳು ಸಂಪರ್ಕಕ್ಕೆ ಸಿಗದಿದ್ದರೆ ಕೆಲಸ ಕಳೆದುಕೊಂಡು ಮನೆ ಸೇರಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ನಿತ್ಯ ಎರಡು ಬಾರಿ ಜಿಲ್ಲಾಧಿಕಾರಿ ಹಾಗೂ ಸಿಇಒ ಈ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದರು. ಮದ್ದೂರು ಪಟ್ಟಣಕ್ಕೆ ನೀರು ಹರಿಸುವ ಮಾರ್ಗಮಧ್ಯೆ ಗ್ರಾಮೀಣ ಭಾಗಕ್ಕೂ ನೀರು ಪೂರೈಸುತ್ತಿರುವುದರಿಂದ ಪಟ್ಟಣಕ್ಕೆ ನೀರಿನ ರಭಸ ಕಡಿಮೆಯಾಗಿದೆ ಎಂಬ ಅಧಿಕಾರಿಗಳ ಮಾಹಿತಿಗೆ ಪ್ರತಿಕ್ರಿಯಿಸಿದ ಸಚಿವರು, ಜಲಧಾರೆ ಯೋಜನೆಯಡಿ ಗ್ರಾಮಗಳಿಗೆ ನೀರು ಪೂರೈಸಿ, ಕಾವೇರಿ ನೀರನ್ನು ನೇರವಾಗಿ ಮದ್ದೂರು ಪಟ್ಟಣಕ್ಕೆ ನೀಡುವಂತೆ ನಿರ್ದೇಶಿಸಿದರು. ನೀರಿನ ಸಮಸ್ಯೆ ಬಗೆಹರಿಸಲು ಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಬೇಕು, ಸೋರಿಕೆಯಾಗುತ್ತಿರುವ ನೀರಿನ ಬಳಕೆಗೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಮತ್ತು ಆರ್ಥಿಕ ಸಮಸ್ಯೆ ಇದ್ದರೆ ಆರ್ಥಿಕ ಇಲಾಖೆಗೆ ಪತ್ರ ಬರೆಯುವಂತೆ ಸೂಚಿಸಿದರು. ಜತೆಗೆ ಜಿಲ್ಲೆಯಲ್ಲಿ ಬಾಕಿ ಇರುವ 16 ಸಾವಿರ ಫಲಾನುಭವಿಗಳಿಗೆ ಕೂಡಲೇ ಬೆಳೆ ಪರಿಹಾರ ಬಿಡುಗಡೆ ಮಾಡಲು ಆದೇಶಿಸಿದರು.

ನಿವೇಶನ ಹಂಚಿಕೆ, ಕಾಮಗಾರಿಗಳಿಗೆ ಗಡುವು

ಕಬ್ಬಿನ ಗದ್ದೆಗಳಲ್ಲಿ ವಿದ್ಯುತ್ ಲೈನ್ ಬಿದ್ದು ನಾಶಗೊಂಡಿರುವ ಬೆಳೆಗೆ ಪರಿಹಾರ ನೀಡಲು ನಾಲ್ಕು ವರ್ಷ ವಿಳಂಬ ಮಾಡಿರುವ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಸಚಿವರು ಕೆಂಡಾಮಂಡಲರಾದರು. "ಚೆಸ್ಕಾಂ ಎಂಡಿಗಳೊಂದಿಗೆ ಸಭೆ ನಡೆಸಿ ಪರಿಹಾರ ನೀಡುವುದನ್ನು ಬಿಟ್ಟು ಏನು ಮಾಡುತ್ತಿದ್ದೀರಿ? ಸೂಪರಿಂಟೆಂಡೆಂಟ್ ಎಂಜಿನಿಯರ್‌ಗೆ ಮಾಹಿತಿಯೇ ಇಲ್ಲ. ಇನ್ನುಳಿದ ಯಾವುದೇ ಹರಿಕಥೆಗಳು ಬೇಕಿಲ್ಲ. ತಾಲೂಕುವಾರು ಸರ್ವೆ ನಡೆಸಿ ಇನ್ನೆರಡು ದಿನಗಳಲ್ಲಿ ಡಿಸಿ ಹಾಗೂ ಶಾಸಕರಿಗೆ ವರದಿ ಸಲ್ಲಿಸಿ ಪರಿಹಾರ ವಿತರಿಸಬೇಕು" ಎಂದು ತಾಕೀತು ಮಾಡಿದರು. ರಾಜ್ಯದಲ್ಲಿ ನಿವೇಶನ ರಹಿತರಿಗೆ 30x40 ಅಳತೆಯ 15 ಲಕ್ಷ ನಿವೇಶನ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಗ್ರಾಪಂ ಮತ್ತು ನಗರ ಪ್ರದೇಶಗಳ ಪಕ್ಕದಲ್ಲೇ ನಿವೇಶನ ಗುರುತಿಸಲು ಹಾಗೂ ಅಗತ್ಯವಿದ್ದರೆ ಖಾಸಗಿ ಜಮೀನು ಖರೀದಿಸಲು ಸಿದ್ಧತೆ ನಡೆಸುವಂತೆ ಸೂಚಿಸಿದರು. ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಕಡತಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಮತ್ತು ಪ್ರತಿ ತಾಲೂಕು ಕಚೇರಿಯಲ್ಲಿ ಕನಿಷ್ಠ ಶೇ. 50ರಷ್ಟು ಸಿಬ್ಬಂದಿ ಸಕ್ರಿಯವಾಗಿರಬೇಕು ಎಂದರು. ಅಲ್ಲದೆ, ಡಿಸೆಂಬರ್ ಒಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಜೂನ್ ಒಳಗೆ ಎನ್‌ಒಸಿ ನೀಡಬೇಕು; ನಿರ್ಲಕ್ಷ್ಯ ವಹಿಸಿದರೆ ನಿರ್ಮಿತಿ ಕೇಂದ್ರ, ಪಿಆರ್‌ಡಿ, ಪಿಡಬ್ಲ್ಯೂಡಿ, ಲ್ಯಾಂಡ್ ಆರ್ಮಿ ಸೇರಿದಂತೆ ಯಾವುದೇ ಇಲಾಖೆ ಮೇಲೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಚ್.ಡಿ. ಕುಮಾರಸ್ವಾಮಿಗೆ ಟಾಂಗ್

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಡಿಕೆಯಂತೆ ಕೈಗಾರಿಕಾ ಪ್ರದೇಶಕ್ಕೆ ಈಗಾಗಲೇ 100 ಎಕರೆ ಸರ್ಕಾರಿ ಭೂಮಿ ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಮಾರ್ಚ್‌ನಲ್ಲಿ ಡ್ರೋನ್ ಸರ್ವೆ ಹಾಗೂ ಜಿಯೋ ಟ್ಯಾಗ್ ಮಾಡಿ ಎಆರ್‌ಎಐ ಸಂಸ್ಥೆಯೂ ಒಪ್ಪಿಗೆ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸಭೆಗೆ ತಿಳಿಸಿದರು. ಇದೇ ಭೂಮಿಗಾಗಿ 114ಕ್ಕೂ ಹೆಚ್ಚು ರೈತರು ಸಲ್ಲಿಸಿದ್ದ ಅರ್ಜಿಗಳು ವರ್ಷಗಳ ಹಿಂದೆಯೇ ತಿರಸ್ಕೃತಗೊಂಡು ಇಡೀ ಭೂಮಿ ಸರ್ಕಾರಿ ದಾಖಲೆಯಲ್ಲಿದ್ದು, ಸಂಪುಟ ನಿರ್ಣಯವಾದ ಕೂಡಲೇ ಮಂಜೂರಾಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ ಅವರು, "ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ ಎಚ್‌ಡಿಕೆ ಕಥೆ. ಭೂಮಿ ನೀಡಲು ನಾವು ಎಲ್ಲಾ ಸಿದ್ಧತೆ ಮಾಡಿದ್ದರೂ ಕೈಗಾರಿಕೆ ತರಲು ಕುಮಾರಸ್ವಾಮಿ ಅವರಿಂದ ಆಗುತ್ತಿಲ್ಲ; ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಿಡಘಟ್ಟ ಸಮೀಪ ಎಕ್ಸ್‌ಪ್ರೆಸ್ ವೇ ಎಂಟ್ರಿ-ಎಕ್ಸಿಟ್ ಅನ್ನು ನಿತಿನ್ ಗಡ್ಕರಿ ಬಳಿ ಹತ್ತೇ ನಿಮಿಷದಲ್ಲಿ ಕ್ಲಿಯರ್ ಮಾಡಿಸಬಹುದು, ಅದನ್ನು ಮಾಡಿಸಿ. ಕೆಆರ್‌ಎಸ್‌ನಲ್ಲಿ ಐಐಟಿ ತರಲು ಅವಕಾಶವಿದೆ, ಅದನ್ನು ಸ್ಥಾಪಿಸಿ. ನಾವು 100 ಎಕರೆ ಭೂಮಿಗೆ ಅನುಮೋದನೆ ಕೊಡಿಸುತ್ತೇವೆ, ಎಆರ್‌ಎಐ ಸ್ಥಾಪಿಸಲು ಹೇಳಿ" ಎಂದು ಜೆಡಿಎಸ್ ಶಾಸಕರಿಗೆ ತಿರುಗೇಟು ನೀಡಿದರು. ಹೆದ್ದಾರಿ ಎಂಟ್ರಿ-ಎಕ್ಸಿಟ್ ಸೇರಿದಂತೆ ಸ್ಥಗಿತಗೊಂಡಿರುವ (ಲ್ಯಾಪ್ಸ್) ಕೇಂದ್ರದ ಯೋಜನೆಗಳನ್ನು ಪಟ್ಟಿ ಮಾಡಿ ಎಚ್‌ಡಿಕೆಗೆ ಪತ್ರ ಬರೆಯುವಂತೆ ಡಿಸಿ ಅವರಿಗೆ ಸೂಚಿಸಿದ ಸಚಿವರು, ಜೆಡಿಎಸ್ ಶಾಸಕ ಮಂಜು ಹಾಗೂ ಎಂಎಲ್‌ಸಿ ವಿವೇಕಾನಂದ ಅವರಿಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸಮಸ್ಯೆಗಳಿಗೆ ಕೇಂದ್ರ ಸಚಿವರ ಬಳಿ ಹೇಳಿ ತಾರ್ಕಿಕ ಅಂತ್ಯ ಕೊಡಿಸುವಂತೆ ಮನವಿ ಮಾಡಿದರು.

ಆರೋಗ್ಯ, ಟೌನ್‌ಶಿಪ್, 336 ಕೋಟಿ ರೂ. ಯೋಜನೆ

ಆರೋಗ್ಯ ಇಲಾಖೆಯ ಖಾಲಿ ಹುದ್ದೆ ಭರ್ತಿ ಹಾಗೂ ಅಗತ್ಯ ಉಪಕರಣಗಳ ಪಟ್ಟಿ ನೀಡಿದರೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು, ಡಿಸೆಂಬರ್‌ನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಒಪಿಡಿ ಹಾಗೂ ಕ್ಯಾನ್ಸರ್ ಆಸ್ಪತ್ರೆ ಲೋಕಾರ್ಪಣೆಗೆ ಸಿದ್ಧತೆ ನಡೆಸಲು ಸೂಚಿಸಿದರು. ಬಿಡದಿ ಮಾದರಿಯಲ್ಲಿ ಮಂಡ್ಯ ನಗರದ 12 ಎಕರೆ ಖಾಲಿ ಜಾಗದಲ್ಲಿ ಸಕಲ ಸೌಲಭ್ಯಗಳ ಟೌನ್‌ಶಿಪ್ ನಿರ್ಮಿಸಲು ಸಿಎಂ ಜತೆ ಚರ್ಚಿಸಿ ಅನುಮೋದನೆ ಕೊಡಿಸುವುದಾಗಿ ಶಾಸಕ ರವಿಕುಮಾರ್ ಗಣಿಗ ಅವರಿಗೆ ಭರವಸೆ ನೀಡಿದರು. ಅರಣ್ಯ ಇಲಾಖೆಯವರು ತಾವೇ ಸರ್ವಾಧಿಕಾರಿಗಳಂತೆ ವರ್ತಿಸದೆ ಕಂದಾಯ ಇಲಾಖೆಯೊಂದಿಗೆ ಸಹೋದರರಂತೆ ಕೆಲಸ ಮಾಡಿ, ಲೋಪಗಳಿದ್ದರೆ ಡಿಸಿ ಗಮನಕ್ಕೆ ತರಬೇಕು. ಏಕಾಏಕಿ ಕ್ರಮ ಕೈಗೊಂಡರೆ ರಾಜಕೀಯ ಸಂಘರ್ಷ ಮತ್ತು ತಪ್ಪುಗ್ರಹಿಕೆಗೆ ಕಾರಣವಾಗುತ್ತದೆ ಎಂದು ಸಲಹೆ ನೀಡಿದರು. ಇನ್ನು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ, ಆಶ್ರಮ ಶಾಲೆ ಹಾಗೂ ಸಹಾಯಧನಕ್ಕೆ ಕೇಂದ್ರ ಸರ್ಕಾರ ಹಿಂದೇಟು ಹಾಕಿ ರಾಜ್ಯದ ಮೇಲೆ ಭಾರ ಹಾಕಿದ್ದರೂ, ರಾಜ್ಯ ಸರ್ಕಾರ 336 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದರು. ಇದೇ ಸಭೆಯಲ್ಲಿ 'ಸ್ಮಾರ್ಟ್ ಮಂಡ್ಯ' ಯೋಜನೆಯ ಪಿಪಿಟಿ ಪ್ರದರ್ಶಿಸಿ, ನಗರಸಭೆ ಖಾಲಿ ನಿವೇಶನಗಳಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ಅಪಾರ್ಟ್‌ಮೆಂಟ್, ಮಾಲ್, ಕೆಫೆ, ಟಾಯ್ ಟ್ರೈನ್ ಹಾಗೂ ಹಂಪಿ ಥಿಯೇಟರ್ ನಿರ್ಮಿಸುವ ನೀಲನಕ್ಷೆಯನ್ನು ಪ್ರಸ್ತಾಪಿಸಲಾಯಿತು.

Read More
Next Story