FOREST|ಮೈಸೂರಿನಲ್ಲಿ ಅರಣ್ಯ ಕಮಾಂಡ್ ಸೆಂಟರ್‌; ವನ್ಯಜೀವಿ-ಮಾನವ ಸಂಘರ್ಷಕ್ಕೆ ಹೈಟೆಕ್ ಮದ್ದು!
x

ಕಮಾಂಡ್ ಸೆಂಟರ್‌ ಉದ್ಘಾಟಿಸಿದ್ದ ಅರಣ್ಯ ಸಚಿವ  ಈಶ್ವರಖಂಡ್ರೆ

FOREST|ಮೈಸೂರಿನಲ್ಲಿ ಅರಣ್ಯ ಕಮಾಂಡ್ ಸೆಂಟರ್‌; ವನ್ಯಜೀವಿ-ಮಾನವ ಸಂಘರ್ಷಕ್ಕೆ ಹೈಟೆಕ್ ಮದ್ದು!

ಅರಣ್ಯ ಇಲಾಖೆಯ ವಿಭಾಗೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಮೂಲಕ ಕುಳಿತಲ್ಲಿಯೇ ಇಡೀ ಕಾಡಿನ ಸಮಗ್ರ ಚಿತ್ರಣ ನೋಡಬಹುದು. ಅರಣ್ಯ ರಕ್ಷಣೆಯೊಂದಿಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೂ ಮುಕ್ತಿ ನೀಡುವ ಹೈಟೆಕ್‌ ಚಿಂತನೆ ಇದು.


Click the Play button to hear this message in audio format

ಕಾಡಂಚಿನ ಜನರಿಗೆ ನಿದ್ದೆಗೆಡಿಸಿರುವ ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದೆ. ಮೈಸೂರಿನಲ್ಲಿ ರಾಜ್ಯದ 5ನೇ 'ವಿಭಾಗೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ' ಕಾರ್ಯಾರಂಭ ಮಾಡಿದ್ದು, ಇನ್ಮುಂದೆ ಕಾಡಿನ ಚಟುವಟಿಕೆಗಳು 'ಡಿಜಿಟಲ್ ಕಣ್ಣಿನ' ನಿಗಾದಲ್ಲಿರಲಿವೆ. ಹುಲಿ, ಆನೆ, ಚಿರತೆಗಳ ಚಲನವಲನವಿದ್ದರೆ ಕ್ಷಣಾರ್ಧದಲ್ಲಿ ಮಾಹಿತಿ ರವಾನಿಸುವ ಈ ಅತ್ಯಾಧುನಿಕ ಕೇಂದ್ರ, ಮಾನವ-ಪ್ರಾಣಿ ಸಂಘರ್ಷ ತಡೆಗೆ ಹೊಸ ಭರವಸೆ ಮೂಡಿಸಿದೆ.

ಹುಲಿ, ಚಿರತೆ ಹಾಗೂ ಆನೆಗಳ ದಾಳಿ ಸೇರಿದಂತೆ ಮಾನವ-ವನ್ಯಜೀವಿ ಸಂಘರ್ಷದ ಮಾಹಿತಿ ಲಭ್ಯವಾದ ತಕ್ಷಣವೇ ಎಚ್ಚರಿಕೆ (Alert) ನೀಡುವ ಈ ಕೇಂದ್ರವು, ಅರಣ್ಯ ಪ್ರದೇಶಗಳ ಮೇಲೆ ಸಂಪೂರ್ಣ ನಿಗಾ ಇಡಲಿದೆ. ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಅತ್ಯಾಧುನಿಕ ನಿಯಂತ್ರಣ ಕೇಂದ್ರ ಸ್ಥಾಪನೆಯಾಗಿದ್ದು, ಇಂಟರ್ನೆಟ್ ಮೂಲಕ ಕುಳಿತಲ್ಲಿಯೇ ಮಾಹಿತಿ ರವಾನಿಸುವ ವ್ಯವಸ್ಥೆಯನ್ನು ಹೊಂದಿದೆ.

ಈ ಬಗ್ಗೆ ಮೈಸೂರು ವೃತ್ತದ ಎಸಿಎಫ್‌ ಪರಮೇಶ್‌ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, ವಿಭಾಗೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಮೂಲಕ ಕುಳಿತಲ್ಲಿಯೇ ಎಲ್ಲವನ್ನು ಮಾನಿಟರಿಂಗ್‌ ಮಾಡಬಹುದು. ಸಿಬ್ಬಂದಿಗಳ ಕಾರ್ಯಶೈಲಿ ಜತೆಗೆ ಅರಣ್ಯದಲ್ಲಿನ ಮಾನವ-ವನ್ಯಜೀವಿ ಸಂಘರ್ಷಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಕೂಡಲೇ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಈ ಭಾಗದಲ್ಲಿ ಹೆಚ್ಚಾಗಿದ್ದ ವನ್ಯಜೀವಿಗಳ ಹಾವಳಿಯನ್ನು ಈ ಕೇಂದ್ರದ ಮೂಲಕ ನಿಯಂತ್ರಿಸಬಹುದಾಗಿದೆ ಎಂದರು.

ವಿಭಾಗೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಡಿಸಿಎಫ್ (DCF) ಅಧೀನದಲ್ಲಿ ಡಿಆರ್‌ಪಿ, ಅರಣ್ಯ ಪಾಲಕ ಹಾಗೂ ಹೊರಗುತ್ತಿಗೆ ನೌಕರರು ಸೇರಿದಂತೆ ನಾಲ್ವರು ಸಿಬ್ಬಂದಿ ಕೇಂದ್ರದ ಮೇಲ್ವಿಚಾರಣೆ ವಹಿಸಲಿದ್ದಾರೆ.

ಇದು ಐದನೇ ಕೇಂದ್ರ

ಈ ಹಿಂದೆ ಕೊಡಗು, ಚಾಮರಾಜನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಿಯಂತ್ರಣ ಕೇಂದ್ರ ಸ್ಥಾಪನೆಗೊಂಡಿತ್ತು. ಇದೀಗ ಮೈಸೂರಿನಲ್ಲಿಯೂ ಆರಂಭಗೊಂಡಿದ್ದು, ಇವುಗಳ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ರಾಜ್ಯದ ಪ್ರತಿ ಅರಣ್ಯ ವಿಭಾಗಗಳಲ್ಲಿಯೂ ಈ ರೀತಿ ನಿಯಂತ್ರಣ ಕೇಂದ್ರ ತೆರೆಯುವ ಉದ್ದೇಶ ಹೊಂದಿರುವ ಅರಣ್ಯ ಇಲಾಖೆಯು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಈ ಆಧುನಿಕ ಕೇಂದ್ರದಲ್ಲಿ ಅರಣ್ಯ ಪ್ರದೇಶಗಳ ಚಲನವಲನಗಳ ಮಾಹಿತಿ ಕ್ಷಣಕ್ಷಣಕ್ಕೂ ವರದಿಯಾಗಲಿದೆ. ವನ್ಯಜೀವಿಗಳು ಎಲ್ಲಿ ಕಾಣಿಸಿಕೊಂಡಿವೆ, ಅವುಗಳನ್ನು ಹೇಗೆ ಸೆರೆಹಿಡಿಯಬೇಕು, ಕಾಡಿಗೆ ಅಟ್ಟುವುದು ಹೇಗೆ ಹಾಗೂ ಸಿಬ್ಬಂದಿ ಯಾವ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಯೂ ಈ ಕೇಂದ್ರದಲ್ಲಿನ ಪರದೆ (Dashboard) ಮೇಲೆ ಕಾಣಿಸಿಕೊಳ್ಳಲಿದೆ.

ವ್ಯಾಪ್ತಿಗಳು ಎಲ್ಲೆಲ್ಲಿ?

ಮೈಸೂರು ಅರಣ್ಯ ವ್ಯಾಪ್ತಿಯ ಸರಗೂರು, ಟಿ. ನರಸೀಪುರ, ಎಚ್.ಡಿ. ಕೋಟೆ, ಮೇಲುಕೋಟೆ, ಮೈಸೂರು, ನಂಜನಗೂಡು ಹಾಗೂ ಹಸಿರು ನಗರೀಕರಣ (Green Urbanism) ಅರಣ್ಯ ವ್ಯಾಪ್ತಿಗಳ ಇ-ಗಸ್ತು, ಪೆಟ್ರೋಲಿಂಗ್, ಆನೆ ಕ್ಯಾಂಪ್ ಸಿಬ್ಬಂದಿ ಹಾಜರಾತಿ ಸೇರಿದಂತೆ ಹಲವು ವಿವರಗಳನ್ನು ಕುಳಿತಲ್ಲಿಯೇ ಈ ಪರದೆಗಳ ಮೂಲಕ ತಕ್ಷಣವೇ ನೋಡಬಹುದಾಗಿದೆ.

ಅರಣ್ಯ ರಕ್ಷಿಸುವ ಸಾಧನ

ಅರಣ್ಯ ಇಲಾಖೆಯ ವಿಭಾಗೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವು ಆಧುನಿಕ ತಂತ್ರಜ್ಞಾನ ಬಳಸಿ ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸುವ ಒಂದು ಅತ್ಯಾಧುನಿಕ ವ್ಯವಸ್ಥೆಯಾಗಿದೆ. ಎ.ಐ ಕ್ಯಾಮೆರಾ, ಥರ್ಮಲ್ ಡ್ರೋನ್‌, ರಿಯಲ್-ಟೈಮ್ ನಿಗಾವ್ಯವಸ್ಥೆ ಇಲ್ಲಿರಲಿದೆ. ಕಾಡು ಹಾಗೂ ಅದಕ್ಕೆ ಸಮೀಪವಿರುವ ಗ್ರಾಮಗಳ ಗಡಿಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಜತೆಗೆ, ಥರ್ಮಲ್ ಡ್ರೋನ್ ಗಳನ್ನು ಹಾರಿಬಿಡಲಾಗುತ್ತದೆ. ಇವು ನಿರಂತರವಾಗಿ ಕಾಡು ಹಾಗೂ ಗ್ರಾಮಗಳನ್ನು ಸರ್ವೇ ಮಾಡುತ್ತವೆ. ಈ ಡ್ರೋನ್ ಗಳಲ್ಲಿ ಕತ್ತಲಲ್ಲಿ ಪ್ರಾಣಿಗಳು ಸಂಚರಿಸಿದರೂ ಅವುಗಳ ಶರೀರದ ಉಷ್ಣಾಂಶದ ಆಧಾರದ ಮೇಲೆ ಯಾವುದೋ ಕಾಡುಪ್ರಾಣಿಯು ಅಡ್ಡಾಡುತ್ತಿರುವ ಬಗ್ಗೆ ಮಾಹಿತಿ ನೀಡುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎ.ಐ) ತಂತ್ರಜ್ಞಾನದಿಂದಾಗಿ ಕ್ಯಾಮೆರಾ ನಿಗಾವಹಿಸುವ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಜೀವಿಯ ಸಣ್ಣದೊಂದು ಚಲನವಲನ ಕಂಡರೂ ಅದರ ಮಾಹಿತಿಯನ್ನು ತಕ್ಷಣವೇ ಗುರುತಿಸುವ ಈ ಕ್ಯಾಮೆರಾಗಳು ಅದರ ಫೋಟೋದೊಂದಿಗೆ ಅವು ಯಾವ ದಿಕ್ಕಿನತ್ತ ಚಲಿಸುತ್ತಿವೆ ಎಂಬುದರ ಮಾಹಿತಿಯನ್ನು ಸಮಗ್ರ ಕಮಾಂಡ್ ಸೆಂಟರ್ ಗೆ ಕಳಿಸುತ್ತವೆ. ಇತ್ತ, ಸಮಗ್ರ ಕಮಾಂಡ್ ಸೆಂಟರ್ ನಲ್ಲಿರುವ ಸಿಬ್ಬಂದಿ, ಕ್ಯಾಮೆರಾಗಳಿಂದ ಬಂದ ಫೋಟೋ ಇಲ್ಲವೆ ವಿಡಿಯೋಗಳನ್ನು ಅವಲೋಕಿಸಿ, ಅವು ಯಾವ ಗ್ರಾಮಗಳ ಕಡೆಗೆ ಹೋಗುತ್ತವೆ ಎಂಬುದನ್ನು ಗ್ರಹಿಸಿ ಆಯಾ ಗ್ರಾಮದ ಜನರಿಗೆ ಅಲರ್ಟ್ ಮಾಡುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾಗುವ ಸಿಬ್ಬಂದಿಗೆ ಕಾಡಿನಂಚಿನ ಗ್ರಾಮಗಳಿಗೆ ಕೂಡಲೇ ಎಚ್ಚರಿಕೆ ನೀಡಲು ಸಾಧ್ಯವಾಗುತ್ತದೆ.

ಈ ಚಿತ್ರಗಳ ಮೂಲಕ ಅರಣ್ಯ ಪ್ರದೇಶದಲ್ಲಿ ನಡೆಯುವ ಯಾವುದೇ ಅಕ್ರಮ ಒತ್ತುವರಿ ಅಥವಾ ಮರಗಳ ಕಳ್ಳಸಾಗಣೆಯನ್ನು ತಕ್ಷಣವೇ ಗುರುತಿಸಬಹುದು. ಅರಣ್ಯದ ಗಡಿಗಳಲ್ಲಿ ಯಾವುದಾದರೂ ಅಸಹಜ ಚಟುವಟಿಕೆ ಕಂಡುಬಂದಲ್ಲಿ ಈ ಕೇಂದ್ರಕ್ಕೆ ಕೂಡಲೇ ಎಚ್ಚರಿಕೆ ರವಾನೆಯಾಗುತ್ತದೆ. ಬೇಸಿಗೆಯ ಸಮಯದಲ್ಲಿ ಕಾಡ್ಗಿಚ್ಚು ಸಂಭವಿಸಿದಾಗ, ಬೆಂಕಿ ಕಾಣಿಸಿಕೊಂಡ ನಿಖರವಾದ ಸ್ಥಳವನ್ನು (GPS Location) ಪತ್ತೆಹಚ್ಚಿ ಹತ್ತಿರದ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ ಬೆಂಕಿ ನಂದಿಸಲು ನೆರವಾಗುತ್ತದೆ.

ಮಾಹಿತಿ ನೀಡಬಹುದು

ಗ್ರಾಮಗಳಲ್ಲಿ ವನ್ಯಜೀವಿಗಳು ಕಾಣಿಸಿಕೊಂಡಾಗ ಗ್ರಾಪಂ, ತಾಪಂ ಹಾಗೂ ಜಿಪಂ ಜನಪ್ರತಿನಿಧಿಗಳು ಸಿಬ್ಬಂದಿಗೆ ಮಾಹಿತಿ ನೀಡಬಹುದು. ಅದರ ಆಧಾರದ ಮೇಲೆ “ಮಾಸ್ ಮೆಸೇಜ್ ಸಬ್ ಸಿಸ್ಟಮ್” ಮೂಲಕ ಸಂಜೆ ವೇಳೆಗೆ ಸಂಬಂಧಿತ ಪ್ರದೇಶದ ಜನರಿಗೆ ಎಚ್ಚರಿಕೆ ಸಂದೇಶ ಕಳುಹಿಸಲಾಗುತ್ತದೆ. ರೈಲ್ವೆ ಬ್ಯಾರಿಕೇಡ್‌, ಸೋಲಾರ್ ಫೆನ್ಸ್‌ಗಳ ಸ್ಥಿತಿ ಹಾಗೂ ಸಿಬ್ಬಂದಿಯ ಗಸ್ತು ಕಾರ್ಯಗಳ ಮೇಲ್ವಿಚಾರಣೆಯೂ ಇದೇ ಕೇಂದ್ರದಿಂದ ಸಾಧ್ಯವಾಗಲಿದೆ.

ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926ಕ್ಕೆ ಸಾರ್ವಜನಿಕರು ಅಥವಾ ಕಾಡಂಚಿನ ನಿವಾಸಿಗಳು ಕರೆ ಮಾಡಿದರೆ, ಮಾಹಿತಿ ನೇರವಾಗಿ ಕಮಾಂಡ್ ಸೆಂಟರ್‌ಗೆ ರವಾನೆಯಾಗುತ್ತದೆ. ನಂತರ ಚಿರತೆ ಕಾರ್ಯಪಡೆ (LTF) ಮತ್ತು ಆನೆ ಕಾರ್ಯಪಡೆ (ETF) ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಿದ್ದಾರೆ. ಅಗತ್ಯವಿದ್ದರೆ ಡ್ರೋನ್‌ಗಳ ಸಹಾಯದಿಂದ ವನ್ಯಜೀವಿಗಳ ಚಲನವಲನವನ್ನು ಪತ್ತೆಹಚ್ಚಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.

Read More
Next Story