
'ಅಂಬಾರಿ'ಯಲ್ಲಿ ದಸರಾ ದೀಪಾಲಂಕಾರ ವೀಕ್ಷಣೆ: ಪ್ರವಾಸಿಗರಿಗೆ ಹೊಸ ಅನುಭವ
ಮೈಸೂರಿಗೆ ಬರುವ ಪ್ರವಾಸಿಗರು ಅರಮನೆಗೆ ಸೀಮಿತವಾಗದೆ, ಬದಲಾಗಿ ಸುತ್ತಮುತ್ತಲಿನ ನೈಸರ್ಗಿಕ, ಸಾಂಸ್ಕೃತಿಕ ತಾಣಗಳನ್ನೂ ನೋಡಬೇಕು ಎಂಬ ಉದ್ದೇಶದಿಂದ ಏಳು ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಹರಿದು ಬರುತ್ತಾರೆ. ಈ ಬಾರಿ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಅವರಿಗೆ ಮೈಸೂರಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ತಾಣಗಳನ್ನು ಅತ್ಯಂತ ಸುಗಮವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಎಸ್‌ಟಿಡಿಸಿ ವಿಶೇಷ ಪ್ರವಾಸ ಪ್ಯಾಕೇಜ್‌ಗಳು ಮತ್ತು ಅಂಬಾರಿ ಬಸ್ ಸೇವೆಗಳನ್ನು ಆರಂಭಿಸಿದೆ.
ಮೈಸೂರು ದಸರಾಕ್ಕೆ ದೀಪಾಲಂಕಾರವೇ ಜೀವಾಳ. ನಗರದ ಪ್ರಮುಖ ವೃತ್ತಗಳು, ಅರಮನೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ದೀಪಾಲಂಕಾರದಿಂದ ಕಂಗೊಳಿಸುವ ತಾಣಗಳನ್ನು ಮೇಲಿನ ಅಂತಸ್ತಿನಿಂದ ವೀಕ್ಷಿಸುವುದೇ ಒಂದು ವಿಶೇಷ ಅನುಭವ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೊಂಬೆ ಬಸ್ ಸಂಚರಿಸಲಿದ್ದು, ಪ್ರತಿ ವ್ಯಕ್ತಿಗೆ 250 ರೂ. ದರ ನಿಗದಿಪಡಿಸಲಾಗಿದೆ. ನಗರದ ಐತಿಹಾಸಿಕ ಸ್ಥಳಗಳನ್ನು ನೋಡಲು ಇದು ಅತ್ಯುತ್ತಮ ಆಯ್ಕೆ. ಸಂಜೆ 6.30, ರಾತ್ರಿ 8 ಹಾಗೂ 9.30ಕ್ಕೆ ವಿಶೇಷ ಸವಾರಿಗಳಿದ್ದು, ದೀಪಾಲಂಕಾರದ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕೆಳಗಿನ ಡೆಕ್‌ಗೆ 250 ರೂ. ಹಾಗೂ ಮೇಲಿನ ಡೆಕ್‌ಗೆ 500 ರೂ. ದರ ನಿಗದಿಪಡಿಸಲಾಗಿದೆ.
ವೈವಿಧ್ಯಮಯ ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳು
ಮೈಸೂರಿಗೆ ಬರುವ ಪ್ರವಾಸಿಗರು ನಗರದ ಅರಮನೆಗೆ ಮಾತ್ರ ಸೀಮಿತವಾಗಬಾರದು, ಬದಲಾಗಿ ಸುತ್ತಮುತ್ತಲಿನ ನೈಸರ್ಗಿಕ ಮತ್ತು ಸಾಂಸ್ಕೃತಿಕ ತಾಣಗಳನ್ನೂ ನೋಡಬೇಕು ಎಂಬ ಉದ್ದೇಶದಿಂದ ಕೆಎಸ್‌ಟಿಡಿಸಿ ಏಳು ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಎರಡು ದಿನಗಳ ವಿಶೇಷ ಪ್ರವಾಸವಾಗಿದ್ದು, ಮೈಸೂರಿನಿಂದ ಊಟಿಯ ರಮಣೀಯ ತಾಣಗಳ ವೀಕ್ಷಣೆ. ಮೈಸೂರಿನ ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ ಮತ್ತು ಇತರೆ ಪ್ರಮುಖ ತಾಣಗಳಿಗೆ ಒಂದು ದಿನದ ಪ್ಯಾಕೇಜ್. ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳದ ಕಲಾ ವೈಭವವನ್ನು ಪರಿಚಯಿಸುವ ಪ್ರವಾಸ. ಪ್ರಕೃತಿ ಪ್ರಿಯರಿಗಾಗಿ ಕೊಡಗಿನ ಪ್ರಮುಖ ತಾಣಗಳಿಗೆ ಕರೆದೊಯ್ಯುವ ಯೋಜನೆ. ಜಲಪಾತ ಮತ್ತು ಧಾರ್ಮಿಕ ಕೇಂದ್ರಗಳ ವೀಕ್ಷಣೆ. ನಂಜನಗೂಡಿನ ನಂಜುಂಡೇಶ್ವರ ದೇಗುಲಕ್ಕೆ ಭೇಟಿ. ಪ್ರವಾಸಿಗರ ಸಮಯ ಮತ್ತು ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದಾದ ವಿವಿಧ ಆಯ್ಕೆಗಳಾಗಿವೆ.
"ಪ್ರವಾಸೋದ್ಯಮವೇ ಮೈಸೂರಿನ ಶಕ್ತಿ" - ಕೆ.ಜೆ.ಜಾರ್ಜ್
ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿ, "ಪ್ರವಾಸಿಗರಿಗೆ ಕೇವಲ ದಸರಾ ಕಾರ್ಯಕ್ರಮ ತೋರಿಸುವುದು ನಮ್ಮ ಗುರಿಯಲ್ಲ, ಅವರಿಗೆ ಕರ್ನಾಟಕದ ಸಂಸ್ಕೃತಿಯ ಸಂಪೂರ್ಣ ಪರಿಚಯ ಮಾಡಿಸುವುದು ನಮ್ಮ ಉದ್ದೇಶ. ಸುಗಮ ಪ್ರಯಾಣ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ನೀಡಲು ಕೆಎಸ್‌ಟಿಡಿಸಿ ಬದ್ಧವಾಗಿದೆ" ಎಂದು ತಿಳಿಸಿದರು. ದಸರಾ ಸಂದರ್ಭದಲ್ಲಿ ಮೈಸೂರು ನಗರದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಸ್ಥಳೀಯ ಆರ್ಥಿಕತೆಗೂ ಚೈತನ್ಯ ನೀಡುವ ಪ್ರಯತ್ನ ಇದಾಗಿದೆ.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮತ್ತು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್. ಮಾತನಾಡಿ, ಅತಿಯಾದ ಪ್ರವಾಸಿಗರ ದಟ್ಟಣೆಯನ್ನು ನಿರ್ವಹಿಸಲು ಆನ್‌ಲೈನ್ ಬುಕ್ಕಿಂಗ್ ಮತ್ತು ಸಹಾಯವಾಣಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರವಾಸಿಗರು ಅನಗತ್ಯವಾಗಿ ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯವಿಲ್ಲ, ಕೆಎಸ್‌ಟಿಡಿಸಿ ಅಧಿಕೃತ ವೆಬ್‌ಸೈಟ್ ಮೂಲಕವೇ ಪ್ಯಾಕೇಜ್‌ಗಳನ್ನು ಬುಕ್ ಮಾಡಬಹುದು ಎಂದು ತಿಳಿಸಿದರು.
ಪ್ರವಾಸಿಗರಿಗೆ ಸಂಪರ್ಕ ಮಾಹಿತಿ
ಪ್ರವಾಸಿಗರು ತಮ್ಮ ಟಿಕೆಟ್ ಮತ್ತು ಪ್ಯಾಕೇಜ್ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-4334 4334 / 35 / 36 / 42, ಮೈಸೂರು ಕಚೇರಿ ದೂ.ಸಂ: 0821-2423652, ಮೊಬೈಲ್ ಸಂಖ್ಯೆ: 8970656400, ವೆಬ್‌ಸೈಟ್: www.kstdc.co, ಇ-ಮೇಲ್: info@kstdc.co ಗೆ ಸಂಪರ್ಕಿಸಬಹುದಾಗಿದೆ.
ದಸರಾ ಸಂದರ್ಭದಲ್ಲಿ ಮೈಸೂರು ನಗರವು ದೀಪಾಲಂಕಾರದಿಂದ ಝಗಮಗಿಸುತ್ತಿದ್ದರೆ, ಮತ್ತೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಕೆಎಸ್‌ಟಿಡಿಸಿಯ ಈ ವಿಶೇಷ ಪ್ಯಾಕೇಜ್‌ಗಳು ಪ್ರವಾಸಿಗರಿಗೆ ಸಮಯದ ಉಳಿತಾಯದೊಂದಿಗೆ, ಸುರಕ್ಷಿತ ಮತ್ತು ಆರಾಮದಾಯಕ ಅನುಭವವನ್ನು ನೀಡಲಿವೆ. ಮೈಸೂರಿನ ಪರಂಪರೆ, ಕಲೆ ಮತ್ತು ಪ್ರಕೃತಿಯನ್ನು ಏಕಕಾಲದಲ್ಲಿ ಸವಿಯಲು ಬಯಸುವ ಪ್ರವಾಸಿಗರಿಗೆ ಈ ಸೌಲಭ್ಯಗಳು ಖಂಡಿತವಾಗಿಯೂ ಒಂದು ವರದಾನವಾಗಲಿವೆ.
