ಭರವಸೆ ಈಡೇರಿಸಿ: ಕಾಂಗ್ರೆಸ್ ವಿರುದ್ಧ ಮುಸ್ಲಿಂ ಒಕ್ಕೂಟ ಅಭಿಯಾನ
ಚುನಾವಣಾ ಪ್ರಣಾಳಿಕೆಯ ಭರವಸೆಗಳು ಈಡೇರಿಲ್ಲ ಎಂದು ಆರೋಪಿಸಿದ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ, ರಾಜ್ಯವ್ಯಾಪಿ ಆಗ್ರಹ ಅಭಿಯಾನ ಆರಂಭಿಸಿದ್ದು, ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ.
ಚುನಾವಣೆಗೂ ಮುನ್ನ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಪ್ರಣಾಳಿಕೆಯ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಇದುವರೆಗೆ ಈಡೇರಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ರಾಜ್ಯವ್ಯಾಪಿ 'ಆಗ್ರಹ ಅಭಿಯಾನ'ಕ್ಕೆ ಚಾಲನೆ ನೀಡಿದೆ. 'ದ ಫೆಡರಲ್ ಕರ್ನಾಟಕ'ದ 'ಸ್ಪೆಷಲ್ ಅಟ್ 7 PM' ಕಾರ್ಯಕ್ರಮದಲ್ಲಿ ಒಕ್ಕೂಟದ ಸಂಚಾಲಕರಾದ ಸುಹೇಲ್ ಅಹಮದ್ ಮರೂರ್ ಅವರು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕಳೆದ ಸಮಾವೇಶದ ಒತ್ತಡದಿಂದಾಗಿ ಸರ್ಕಾರ ಹಿಜಾಬ್ ಮೇಲಿನ ನಿಷೇಧವನ್ನು ವಾಪಸ್ ಪಡೆದಿದೆ. ಆದರೆ, ಉಳಿದ 9 ಪ್ರಮುಖ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರಮುಖ ಬೇಡಿಕೆಗಳು
2B ಮೀಸಲಾತಿ ಮರುಸ್ಥಾಪನೆ ಮತ್ತು ಸಶಾಕ್ತೀಕರಣ.
ಗೋಹತ್ಯೆ ತಡೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳ ತಿದ್ದುಪಡಿ/ವಾಪಸಾತಿ.
ಜಾತಿ ಗಣತಿ ವರದಿ ಶೀಘ್ರ ಅನುಷ್ಠಾನ
ಅಲ್ಪಸಂಖ್ಯಾತರ ಅಭಿವೃದ್ಧಿಗೆ 10,000 ಕೋಟಿ ರೂ. ಬಜೆಟ್ ಹಂಚಿಕೆ.
ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ದ್ವೇಷ ಭಾಷಣ ವಿರುದ್ಧ ಕಠಿಣ ಕಾನೂನು ಕ್ರಮ.
ರಾಜ್ಯವ್ಯಾಪಿ ಅಭಿಯಾನ ಮತ್ತು ಮುಂದಿನ ಹೋರಾಟ
20ನೇ ತಾರೀಖಿನಿಂದ ಮುಂದಿನ ತಿಂಗಳ 5ನೇ ತಾರೀಖಿನವರೆಗೆ ರಾಜ್ಯವ್ಯಾಪಿ ಅಭಿಯಾನ ನಡೆಯಲಿದೆ. 48ಕ್ಕೂ ಹೆಚ್ಚು ಸಂಘಟನೆಗಳು, ಉಲಮಾಗಳು ಹಾಗೂ ಮಸೀದಿಗಳ ಬೆಂಬಲದೊಂದಿಗೆ ಸಹಿ ಸಂಗ್ರಹ ಮತ್ತು ಜನಜಾಗೃತಿ ನಡೆಸಲಾಗುವುದು. ಮುಂದಿನ ಅಧಿವೇಶನದೊಳಗೆ ಸರ್ಕಾರ ಸ್ಪಂದಿಸದಿದ್ದರೆ, ದಾವಣಗೆರೆ ಹಾಗೂ ಮಂಗಳೂರಿನಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸುವುದಾಗಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್‌ಗೆ ಎಚ್ಚರಿಕೆ: 'ಪರ್ಯಾಯ ಆಯ್ಕೆ'ಯ ಸುಳಿವು
"ಮುಸ್ಲಿಮರಿಗೆ ಬೇರೆ ರಾಜಕೀಯ ಆಯ್ಕೆ ಇಲ್ಲ ಎಂಬ ನಿರ್ಲಕ್ಷ್ಯದ ಮನಸ್ಥಿತಿ ಕಾಂಗ್ರೆಸ್ ನಾಯಕರಿಗೆ ಇರಬಹುದು. ಆದರೆ, ಸಾಮಾಜಿಕ ನ್ಯಾಯದ ಭರವಸೆ ಈಡೇರದಿದ್ದರೆ ಮುಂಬರುವ ದಿನಗಳಲ್ಲಿ ಸಮುದಾಯವೇ ಪರ್ಯಾಯ ರಾಜಕೀಯ ಹಾದಿಯನ್ನು ಕಂಡುಕೊಳ್ಳಲಿದೆ" ಎಂದು ಸುಹೇಲ್ ಎಚ್ಚರಿಸಿದ್ದಾರೆ.
ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಈ ವಿಳಂಬಕ್ಕೆ ಕಾರಣ ಎಂದಿರುವ ಒಕ್ಕೂಟ, ಮುಸ್ಲಿಂ ಶಾಸಕರು ಮತ್ತು ಮಂತ್ರಿಗಳು ತಕ್ಷಣವೇ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದೆ.

