
ಮುಡಾ ನಿವೇಶನ ಪ್ರಕರಣ; ಸಚಿವ ಡಾ. ಯತೀಂದ್ರ ಖಾತೆ ಬದಲಾವಣೆಗೆ ಒತ್ತಾಯಿಸಿ ಸಿಎಂಗೆ ಪತ್ರ
"ಮುಡಾ ಹಗರಣದಲ್ಲಿ ಸಚಿವ ಯತೀಂದ್ರ ಅವರ ತಂದೆ ಮತ್ತು ತಾಯಿಯೇ ಪ್ರಮುಖ ಆರೋಪಿಗಳಾಗಿರುವ ಹಿನ್ನೆಲೆ ಇಲಾಖೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವುದು ಸ್ಪಷ್ಟವಾಗಿ ‘ಹಿತಾಸಕ್ತಿ ಸಂಘರ್ಷ’ಕ್ಕೆ ಎಡೆಮಾಡಿಕೊಡಲಿದೆ ಎಂಬ ಆತಂಕ ವ್ಯಕ್ತಪಡಿಸಲಾಗಿದೆ.
ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನ ಹಂಚಿಕೆ ಪ್ರಕರಣದ ವಿವಾದ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುಡಾ ಪ್ರಕರಣದಲ್ಲಿ ತಮ್ಮ ತಂದೆ ಸಿದ್ದರಾಮಯ್ಯ ಹಾಗೂ ತಾಯಿ ಪಾರ್ವತಿ ಅವರ ಹೆಸರು ಕೇಳಿ ಬಂದಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಲಿದೆ. ಹಾಗಾಗಿ, ಡಾ. ಯತೀಂದ್ರ ಅವರಿಗೆ ನೀಡಿರುವ ನಗರಾಭಿವೃದ್ಧಿ ಖಾತೆ ಹಿಂಪಡೆದು, ಬೇರೊಂದು ಖಾತೆ ನೀಡುವಂತೆ ಒತ್ತಾಯಿಸಿ ನೈಜ ಹೋರಾಟಗಾರರ ವೇದಿಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.
ಮುಡಾ ಅಕ್ರಮಗಳ ಕುರಿತ ತನಿಖೆ ನಡೆಯುತ್ತಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿದ್ದಾರೆ. ಸಚಿವರ ತಾಯಿ ಪಾರ್ವತಿ ಅವರು ಎರಡನೇ ಆರೋಪಿಯಾಗಿದ್ದಾರೆ. ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ ತನಿಖೆ ನಡೆಯುತ್ತಿದೆ. ಜತೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯದಲ್ಲೂ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಯತೀಂದ್ರ ಅವರ ಖಾತೆ ಬದಲಾವಣೆ ಮಾಡಬೇಕು ಎಂದು ವೇದಿಕೆಯ ಪರವಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
"ಮುಡಾ ಹಗರಣದಲ್ಲಿ ಸಚಿವ ಯತೀಂದ್ರ ಅವರ ತಂದೆ ಮತ್ತು ತಾಯಿಯೇ ಪ್ರಮುಖ ಆರೋಪಿಗಳಾಗಿರುವ ಹಿನ್ನೆಲೆ ಇಲಾಖೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವುದು ಸ್ಪಷ್ಟವಾಗಿ ‘ಹಿತಾಸಕ್ತಿ ಸಂಘರ್ಷ’ಕ್ಕೆ ಎಡೆಮಾಡಿಕೊಡಲಿದೆ. ತಂದೆ-ತಾಯಿಯ ರಕ್ಷಣೆಗಾಗಿ ಇಲ್ಲಿ ಅಧಿಕಾರ ದುರುಪಯೋಗವಾಗುವ ಸಾಧ್ಯತೆಯೂ ಇರಲಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಡಾ. ಯತೀಂದ್ರ ಅವರು ಇದೇ ಇಲಾಖೆಯ ಮುಖ್ಯಸ್ಥರಾಗಿ ಮುಂದುವರಿದರೆ ಮುಡಾ ಪ್ರಕರಣದ ನಿಷ್ಪಕ್ಷಪಾತ ತನಿಖೆಗೂ ಅಡ್ಡಿಯಾಗಲಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಂವಿಧಾನದ 311 ವಿಧಿಯನ್ವಯ ಪಾರದರ್ಶಕತೆ ಕಾಯ್ದುಕೊಳ್ಳಲು ಅವರನ್ನು ತಕ್ಷಣವೇ ನಗರಾಭಿವೃದ್ಧಿ ಇಲಾಖೆಯಿಂದ ದೂರವಿಡಬೇಕು" ಎಂದು ಹೆಚ್.ಎಂ. ವೆಂಕಟೇಶ್ ಒತ್ತಾಯಿಸಿದ್ದಾರೆ.

