
ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ದೌರ್ಜನ್ಯ ಪ್ರಕರಣ: ಸಿಐಡಿಗೆ: ಗೃಹ ಸಚಿವ ಪರಮೇಶ್ವರ್ ಆದೇಶ
ಸೂಕ್ಷ್ಮ ಪ್ರಕರಣದ ಕುರಿತು ಸರ್ಕಾರ ಕೈಗೊಂಡಿರುವ ತ್ವರಿತ ಕಾನೂನು ಕ್ರಮಗಳು ಹಾಗೂ ಮುಂದಿನ ತನಿಖಾ ಸ್ವರೂಪದ ಬಗ್ಗೆ ಗೃಹಸಚಿವ್ರು ವಿವರವಾದ ಮಾಹಿತಿ ಹಂಚಿಕೊಂಡರು.
ಮಹಿಳೆಯರ ಮೇಲೆ ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ (ಸಿಐಡಿ) ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸೂಕ್ಷ್ಮ ಪ್ರಕರಣದ ಕುರಿತು ಸರ್ಕಾರ ಕೈಗೊಂಡಿರುವ ತ್ವರಿತ ಕಾನೂನು ಕ್ರಮಗಳು ಹಾಗೂ ಮುಂದಿನ ತನಿಖಾ ಸ್ವರೂಪದ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಹಂಚಿಕೊಂಡರು.
ಮಹಿಳಾ ಆಯೋಗದ ಅಧ್ಯಕ್ಷೆಯ ಭೇಟಿ
ಮೂಡುಬಿದರೆ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಈಗಾಗಲೇ ಸಂತ್ರಸ್ತೆಯರನ್ನು ಖುದ್ದಾಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡಗಿರುವ ಅನೇಕ ಗಂಭೀರ ವಿಚಾರಗಳ ಬಗ್ಗೆ ಅವರು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು. ಮಹಿಳಾ ಆಯೋಗದ ಅಧ್ಯಕ್ಷರು ನೀಡಿದ ಪ್ರಾಥಮಿಕ ಮಾಹಿತಿಗಳು ಹಾಗೂ ಪ್ರಕರಣದ ಸೂಕ್ಷ್ಮತೆಯನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ, ಈ ಇಡೀ ಪ್ರಕರಣವನ್ನು ಉನ್ನತ ಮಟ್ಟದ ಸಿಐಡಿ ತನಿಖೆಗೆ ವಹಿಸುವಂತೆ ಡಿಜಿಪಿ ಅವರಿಗೆ ಅಧಿಕೃತವಾಗಿ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ತಕ್ಷಣದ ಅಮಾನತು ಹಾಗೂ ಸತ್ಯಾಂಶದ ನಿರೀಕ್ಷೆ
ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆ ದೌರ್ಜನ್ಯದ ಆರೋಪ ಕೇಳಿಬಂದ ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಅವರನ್ನು ಸೇವೆಯಿಂದ ಅಮಾನತು ಮಾಡುವ ಮೂಲಕ ತಕ್ಷಣದ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ವಿಸ್ತೃತ ವರದಿ ನೀಡುವಂತೆ ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲೇ ವರದಿ ಕೈಸೇರಲಿದೆ ಎಂದು ಡಾ. ಜಿ. ಪರಮೇಶ್ವರ ತಿಳಿಸಿದರು. ಇದಲ್ಲದೆ, ಪ್ರಕರಣದಲ್ಲಿ ಇನ್ನೂ ಅನೇಕ ವಿಚಾರಗಳನ್ನು ಕೇಳಿದ ಮೇಲೆ ಹೆಚ್ಚಿನ ಹಾಗೂ ಆಳವಾದ ತನಿಖೆ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಸಿಐಡಿ ತನಿಖೆಗೆ ವಹಿಸಲಾಗಿದೆ. ಈ ಉನ್ನತ ಮಟ್ಟದ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲಿದ್ದು, ವಾಸ್ತವವಾಗಿ ಇನ್ನು ಎಷ್ಟು ಜನ ಸಂತ್ರಸ್ತರಿದ್ದಾರೆ ಎಂಬ ನಿಖರ ಮಾಹಿತಿ ತನಿಖೆಯ ವೇಳೆಯಲ್ಲೇ ಗೊತ್ತಾಗಲಿದೆ. ಇದೇ ಉದ್ದೇಶಕ್ಕಾಗಿಯೇ ಪ್ರಕರಣವನ್ನು ಸಿಐಡಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಣವಾನಂದ ಸ್ವಾಮೀಜಿ ಹೇಳಿಕೆಗೆ ಗೃಹ ಸಚಿವರ ಪ್ರತಿಕ್ರಿಯೆ
ಇದೇ ಸಂದರ್ಭದಲ್ಲಿ ಪ್ರಣವಾನಂದ ಸ್ವಾಮೀಜಿ ಅವರ ಹೇಳಿಕೆಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಮ್ಯಾಂಡೇಟ್ ಅಥವಾ ಕಾರ್ಯವೈಖರಿಯು ಸಂಪೂರ್ಣವಾಗಿ ಬೇರೆ ರೀತಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದರು. ಎಐಸಿಸಿ ನಾಯಕರು ಜನಸಮುದಾಯದ ಭಾವನೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಾರೆ. ಕೇವಲ ಭೇಟಿ ಮಾಡಿ, ಅನಿಸಿಕೆಗಳನ್ನು ಕೇಳಿಕೊಂಡು ತಕ್ಷಣಕ್ಕೆ ತೀರ್ಮಾನ ಮಾಡುವುದನ್ನು ತಾವು ಎಲ್ಲೂ ನೋಡಿಲ್ಲ ಎಂದರು. ಎಐಸಿಸಿ ತನ್ನದೇ ಆದ ಆಂತರಿಕ ವರದಿಗಳನ್ನು ತರಿಸಿಕೊಂಡು, ಅದರ ಆಧಾರದ ಮೇಲೆಯೇ ಪ್ರಮುಖ ತೀರ್ಮಾನಗಳನ್ನು ಮಾಡುತ್ತದೆ. ಹೀಗಾಗಿ, ಸ್ವಾಮೀಜಿಗಳು ನೀಡಿರುವ ಹೇಳಿಕೆಗಳು ಕೇವಲ ಸಾರ್ವಜನಿಕವಾಗಿ ವ್ಯಕ್ತವಾಗುವ ಅನಿಸಿಕೆಗಳಷ್ಟೇ ಎಂದು ಡಾ. ಜಿ. ಪರಮೇಶ್ವರ ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು.
ಪ್ರಣಾವಾನಂದ ಸ್ವಾಮೀಜಿಗಳು ಇತ್ತೀಚಗೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿದ್ದರು. ಅದಕ್ಕಾಗಿ ಹೈಕಮಾಂಡ್ ಭೇಟಿ ಮಾಡುವುದಾಗಿ ಹೇಳಿದ್ದರು.

