
ಸಿಎಂ ಸಿದ್ದರಾಮಯ್ಯ
ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆ ತಿದ್ದುಪಡಿಗೆ ಆಗ್ರಹ: ಸಮುದಾಯಗಳಿಗೆ ವಿಶೇಷ ಅನುದಾನಕ್ಕಾಗಿ ಸಿಎಂಗೆ ಪತ್ರ
ರಾಜ್ಯ ಸರ್ಕಾರದ ಎಲ್ಲಾ ಆಯಕಟ್ಟಿನ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಧಿಕಾರಿಗಳಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಎಂಎಲ್‌ಸಿ ಎಫ್. ಹೆಚ್. ಜಕ್ಕಪ್ಪನವರ ಮನವಿ ಮಾಡಿದ್ದಾರೆ.
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಎಸ್‌ಸಿಪಿಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7ʼಸಿʼ ಯನ್ನು ರದ್ಧುಗೊಳಿಸಿ ಪೂರ್ಣ ಪ್ರಮಾಣದ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಬಳಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಫ್. ಹೆಚ್. ಜಕ್ಕಪ್ಪನವರ ಸಿಎಂ ಗೆ ಪತ್ರ ಬರೆದಿದ್ದಾರೆ.
ಸೋಮವಾರ(ಫೆ.9) ಪತ್ರ ಬರೆದಿರುವ ಅವರು, 2026-27 ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಘೋಷಿಸಬೇಕು. ಹಣವನ್ನು ಸಮಾಜ ಕಲ್ಯಾಣ ಇಲಾಖೆಗೂ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯ ಮೊತ್ತವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ನೇರವಾಗಿ ವರ್ಗಾಯಿಸಿ ಸಬಲೀಕರಣ ಯೋಜನೆಗಳಿಗೆ ಬಳಸಬೇಕು. ಪರಿಶಿಷ್ಟ ಜಾತಿ ಉಪಯೋಜನೆಯ ಮೀಸಲು ಹಣ ಸಮಾಜ ಕಲ್ಯಾಣ ಇಲಾಖೆಯ ನಿಯಂತ್ರಣದಲ್ಲಿರಬೇಕು ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆಯ ಮೀಸಲು ಹಣವನ್ನು ಪರಿಶಿಷ್ಟ ಪಂಗಡ ಇಲಾಖೆಯ ನಿಯಂತ್ರಣದಲ್ಲಿರಬೇಕು ಮತ್ತು ಕ್ರಿಯಾ ಯೋಜನೆಗಳನ್ನು ಈ ಎರಡು ಇಲಾಖೆಗಳು ಸಿದ್ಧಪಡಿಸಿ ಜಾರಿಗೊಳಿಸಬೇಕು ಎಂದಿದ್ದಾರೆ.
ಪತ್ರದಲ್ಲೇನಿದೆ ?
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಆರ್.ವಿ. ದೇಶಪಾಂಡೆ ಸಮಿತಿಯ ಶಿಫಾರಸಿನಂತೆ ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಖಾಲಿ ಇರುವ ಹುದ್ದೆಗಳು ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಕ್ರೈಸ್ (KREIS) ನಡೆಸುತ್ತಿರುವ ಎಲ್ಲಾ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವುದು ಹಾಗೂ ಖಾಸಗಿ ಅಥವಾ ಸರ್ಕಾರಿ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಕಟ್ಟಲು ಧನ ಸಹಾಯ ಒದಗಿಸಬೇಕು ಎಂದು ತಿಳಿಸಿದ್ದಾರೆ.
ಕೆಐಎಡಿಬಿ ನಿವೇಶನಕ್ಕೆ ಆದ್ಯತೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಗಳು ನಡೆಸುತ್ತಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಸರ್ಕಾರದಿಂದ ಅನುದಾನ ನೀಡಬೇಕು. ಸಮುದಾಯದವರನ್ನು ಕೈಗಾರಿಕಾ ರಂಗಕ್ಕೆ ತರಲು "ಡಾ. ಬಿ.ಆರ್. ಅಂಬೇಡ್ಕರ್ ಉದ್ಯಮ ಶೀಲತಾ ನಿಧಿ" ಸ್ಥಾಪಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಬೇಕು. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ (KIADB) ಗಳಿಕೆಯ ಹಣದಲ್ಲಿ ಶೇ. 25 ರಷ್ಟನ್ನು ಸಮುದಾಯದ ಉದ್ಯಮಿಗಳಿಗೆ ಮೀಸಲಿಡಬೇಕು. ನಿವೇಶನ ಹಂಚಿಕೆಯಲ್ಲಿ ಉದ್ಯಮಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದು.
ಸ್ವಯಂ ಉದ್ಯೋಗ, ಶಿಕ್ಷಣ ಸೌಲಭ್ಯ ಹೆಚ್ಚಿಸಿ
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮಿಸಲು ನಿಧಿಯನ್ನು ಆಯಾ ಸಮುದಾಯದವರ ಸ್ವಯಂ ಉದ್ಯೋಗ ಮತ್ತು ಶಿಕ್ಷಣ ಸೌಲಭ್ಯಗಳಿಗೆ ಮಾತ್ರ ಬಳಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಧನ ಸಹಾಯ ನೀಡುವುದು ಹಾಗೂ ಭೂ ಒಡೆತನ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರದ ಎಲ್ಲಾ ಆಯಕಟ್ಟಿನ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಧಿಕಾರಿಗಳಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ತಿಳಿಸಿದ್ಧಾರೆ.
ರಾಜ್ಯದ ಶೋಷಿತ ವರ್ಗಗಳ ಹಿತದೃಷ್ಟಿಯಿಂದ ಈ ಮೇಲಿನ ಬೇಡಿಕೆಗಳನ್ನು ಮುಂಬರುವ ಆಯವ್ಯಯದಲ್ಲಿ ಸೇರ್ಪಡೆಗೊಳಿಸಿ, ಜಾರಿಗೊಳಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.

