
ಶಾಸಕ ವಿರೇಂದ್ರ ಪಪ್ಪಿ
ಬೆಟ್ಟಿಂಗ್ ದಂಧೆ| ಶಾಸಕ ವೀರೇಂದ್ರ ಪಪ್ಪಿ ಸಹೋದರನಿಗೆ ನಿರೀಕ್ಷಣಾ ಜಾಮೀನು ಮಂಜೂರು
ಇ.ಡಿ. ಅಧಿಕಾರಿಗಳು 2025ರ ಆ.22 ಮತ್ತು 23ರಂದು ಕೆ.ಸಿ.ವೀರೇಂದ್ರ, ಅವರ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿದಂತೆ 31 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.
ಆನ್‌ಲೈನ್-ಆಫ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನ ಭೀತಿ ಎದುರಿಸುತ್ತಿದ್ದ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಹೋದರ ಮತ್ತು ಸಂಬಂಧಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುಎ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವೀರೇಂದ್ರ ಪಪ್ಪಿ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಮತ್ತು ಸಂಬಂಧಿ ಪೃಥ್ವಿ ಎನ್.ರಾಜ್‌ಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ವೀರೇಂದ್ರ ಪಪ್ಪಿ ಈಗಾಗಲೇ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದಾರೆ. ಸಹೋದರ ತಿಪ್ಪೇಸ್ವಾಮಿ ಅವರು ವೀರೇಂದ್ರ ಪಪ್ಪಿಗೆ ಸೇರಿದ ಕೋಟ್ಯಂತರ ರೂ. ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ
ಆನ್‌ಲೈನ್ ಆಫ್‌ಲೈನ್ ಬೆಟ್ಟಿಂಗ್ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು 2025ರ ಆ.22 ಮತ್ತು 23ರಂದು ಕೆ.ಸಿ.ವೀರೇಂದ್ರ, ಅವರ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿ ರಾಜ್ಯ ಹಾಗೂ ಹೊರರಾಜ್ಯಗಳ 31 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಶೋಧ ಕಾರ್ಯದ ವೇಳೆ ಸುಮಾರು 12 ಕೋಟಿ ರೂ. ನಗದು, ಸುಮಾರು 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, 10 ಕೆ.ಜಿ. ಬೆಳ್ಳಿ ವಸ್ತುಗಳು, 1 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ, ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದರು. ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಅಂತೆಯೇ ವೀರೇಂದ್ರ ಪಪ್ಪಿಗೆ ಸೇರಿದ 17 ಬ್ಯಾಂಕ್ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳನ್ನು ಸ್ಥಗಿತಗೊಳಿಸಿದ್ದರು.
ಸೆ.6ರಂದು ಚಳ್ಳಕೆರೆಯಲ್ಲಿ ಕೆ.ಸಿ.ವೀರೇಂದ್ರ ಹಾಗೂ ಸಂಬಂಧಿತರ ಮನೆ ಹಾಗೂ ಕಚೇರಿಗಳ ಮೇಲೆ ನಡೆಸಿದ ದಾಳಿ ವೇಳೆ 24 ಕ್ಯಾರೆಟ್‌ನ 21.43 ಕೆ.ಜಿ. ಚಿನ್ನದ ಗಟ್ಟಿ, 10.985 ಕೆ.ಜಿ. ತೂಕದ ಚಿನ್ನ ಲೇಪಿತ 11 ಬೆಳ್ಳಿಗಟ್ಟಿಗಳು ಹಾಗೂ 1 ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಿದ್ದರು. ಈ ಮೂಲಕ ಈವರೆಗೆ ಒಟ್ಟು ಸುಮಾರು 100 ಕೋಟಿ ರೂ. ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.
ಚುನಾವಣೆಗೆ ಫಂಡಿಂಗ್ ಮಾಡಲು ಒಪ್ಪಿದ್ದರೇ ಪಪ್ಪಿ ?
ಹಲವು ತಿಂಗಳುಗಳ ಹಿಂದೆ ಮುಕ್ತಾಯವಾದ ಬಿಹಾರ ಚುನಾವಣೆ ವಿವಿಧ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಬಿಹಾರ ಚುನಾವಣೆಗೂ ಇವರ ಹಣ ಬಳಕೆಯಾಗಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿತ್ತು. ಬಿಹಾರ ವಿಧಾನಸಭಾ ಚುನಾವಣೆಗಾಗಿ ಕರ್ನಾಟಕದಿಂದ ಸುಮಾರು 300 ಕೋಟಿ ರೂ.ಗೂ ಅಧಿಕ ಹಣವನ್ನು ವೀರೇಂದ್ರ ಪಪ್ಪಿ ಮೂಲಕ ರವಾನಿಸಲಾಗಿದೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು. ಬಿಹಾರ ಚುನಾವಣೆ ನಡೆಯುತ್ತಿದ್ದ ಸಮಯದಲ್ಲಿ ಜಾರಿ ನಿರ್ದೇಶನಾಲಯವು ಈ ಅಕ್ರಮ ಹಣದ ಮೂಲವನ್ನು ಕೆದಕಲು ಆರಂಭಿಸಿತ್ತು. ಚುನಾವಣೆ ಅವಧಿಯಲ್ಲಿ ಹರಿಯುವ ಹಣದ ಹರಿವಿನ ಮೇಲೆ ನಿಗಾ ಇಟ್ಟಿದ್ದ ಇಡಿ, ವೀರೇಂದ್ರ ಪಪ್ಪಿ ಅವರ 31ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಸಂಗ್ರಹಿಸಿತ್ತು.

