
ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ಹೆಚ್ಚಿದ ಭಿನ್ನಮತ; ಮುಸ್ಲಿಂ ಶಾಸಕರ ಆರೋಪದ ಹಿಂದಿದೆಯೇ ಜಮೀರ್ ಸಚಿವ ಸ್ಥಾನ ಕಸಿಯುವ ತಂತ್ರ?
ಸಿಎಂ ಸಿದ್ದರಾಮಯ್ಯ ಆಪ್ತರಾದ ಜಮೀರ್ ಅವರನ್ನು ಸಂಪುಟದಿಂದ ಕೈಬಿಡುವುದು ಸುಲಭವಲ್ಲ, ಆದರೂ, ಇತರೆ ಮುಸ್ಲಿಂ ಶಾಸಕರು ಒಗ್ಗಟ್ಟಾಗಿ ದೆಹಲಿ ಮಟ್ಟದಲ್ಲಿ ಒತ್ತಡ ಹೇರುವ ಪ್ರಯತ್ನದ ಭಾಗವಾಗಿ ಹೈಕಮಾಂಡ್‌ಗೆ ವರದಿ ನೀಡಲು ಮುಂದಾಗಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಚುನಾವಣಾ ಪ್ರಚಾರ ಕಣದಿಂದ ಸಚಿವ ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ದೂರ ಉಳಿದ ವಿಚಾರವೇ ಈಗ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ನಡುವೆ ಆಂತರಿಕ ಕಲಹಕ್ಕೆ ಕಾರಣವಾಗಿದೆ.
ತಮ್ಮದೇ ಸಮುದಾಯದ ನಾಯಕರ ವಿರುದ್ಧ ಷಡ್ಯಂತ್ರ್ಯ ಆರೋಪ ಮಾಡಿದ ಪರಿಷತ್ ಸದಸ್ಯ ಸಲೀಂ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ಬಿಲ್ಕಿಸ್ ಬಾನು ಅವರ ನಡೆಯಿಂದ ಬೇಸತ್ತ ವಿಧಾನ ಪರಿಷತ್ ಸದಸ್ಯ ಹಾಗೂ ಜಮೀರ್ ಬೆಂಬಲಿಗರಾಗಿರುವ ಅಬ್ದುಲ್ ಜಬ್ಬಾರ್ ಅವರು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಅಲ್ಪಸಂಖ್ಯಾತ ಸಮುದಾಯದೊಳಗಿನ ಭಿನ್ನಮತವನ್ನು ತೀವ್ರಗೊಳಿಸಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಮುನಿಸಿಕೊಂಡಿದ್ದ ಜಮೀರ್ ಅಹಮದ್, ಆಕಾಂಕ್ಷಿ ಅಬ್ದುಲ್ ಜಬ್ಬಾರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ಚುನಾವಣಾ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದರು. ಜಮೀರ್ ಅವರ ನಡೆಯನ್ನು ಸಮುದಾಯದ ನಾಯಕರಾದ ಸಲೀಂ ಅಹಮದ್ ಹಾಗೂ ರಿಜ್ವಾನ್ ಅರ್ಷದ್ ಟೀಕಿಸಿ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಷಡ್ಯಂತ್ರ್ಯ ರೂಪಿಸಿದ ಆರೋಪ ಮಾಡಿದ್ದರು. ಅಲ್ಲದೇ ಹೈಕಮಾಂಡ್ ಗೆ ವರದಿ ಸಲ್ಲಿಸಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರಿಗೂ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸ್ಥಾನದ ಮೇಲೆ ಕಣ್ಣು
ಸಲೀಂ ಅಹಮದ್, ರಿಜ್ವಾನ್ ಅರ್ಷದ್ ಅವರು ಜಮೀರ್ ವಿರುದ್ಧ ಮಾಡಿರುವ ಆರೋಪದ ಹಿಂದೆ ಸಚಿವ ಸ್ಥಾನದ ಲಾಬಿಯೂ ಇದೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ.
ಸಚಿವ ಜಮೀರ್ ಅವರು, ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದನ್ನೇ ದಾಳವಾಗಿ ಬಳಸಿಕೊಂಡಿದ್ದು, ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ಜಮೀರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ, ಆ ಜಾಗಕ್ಕೆ ಸಮುದಾಯದ ಬೇರೆ ನಾಯಕರಿಗೆ ಅವಕಾಶ ನೀಡಬೇಕೆಂಬುದು ಶಾಸಕರ ಒತ್ತಡ ತಂತ್ರವಾಗಿದೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು.
ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದವರೇ ಆದ ಹಿರಿಯ ಹಾಗೂ ಮೂಲ ಕಾಂಗ್ರೆಸ್ಸಿಗರು ಇದ್ದಾರೆ. ಆದರೆ, ಇತ್ತೀಚೆಗೆ ಜಮೀರ್ ಒಬ್ಬರೇ ಸಮುದಾಯದ ನಾಯಕರೆಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಇತರೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಸ್ಲಿಂ ಸಮುದಾಯಕ್ಕೆ ಜಮೀರ್ ಒಬ್ಬರೇ ನಾಯಕರಲ್ಲ, ಬೇರೆಯವರೂ ಇದ್ದಾರೆ ಎಂಬ ಸಂದೇಶ ರವಾನಿಸುವ ಸಲುವಾಗಿ ಮುಸ್ಲಿಂ ಶಾಸಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಆರೋಪ ಹೊರಿಸಿರುವುದು ಕುತೂಹಲ ಕೆರಳಿಸಿದೆ. ಆ ಮೂಲಕ ಇಷ್ಟೂ ದಿನಗಳಿಂದ ಮುಸ್ಲಿಂ ನಾಯಕರ ಮಧ್ಯೆ ನಡೆಯುತ್ತಿದ್ದ ಶೀತಲ ಸಮರವೂ ಬೀದಿಗೆ ಬಂದಂತಾಗಿದೆ.
ಜಮೀರ್ ವಿರುದ್ಧ ಅಸಮಾಧಾನ ಏಕೆ?
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಬೆಂಬಲಿಗ ಹಾಗೂ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಬ್ದುಲ್ ಜಬ್ಬಾರ್ ಅವರಿಗೇ ಟಿಕೆಟ್ ನೀಡುವಂತೆ ಸಚಿವ ಜಮೀರ್ ಅಹಮದ್ ಅವರು ಲಾಬಿ ನಡೆಸಿದ್ದರು. ಆದರೆ, ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂಬ ಕಾರಣ ಹೈಕಮಾಂಡ್ ನಾಯಕರು ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದರು. ಇದರಿಂದ ಅಸಮಾಧಾನಿತರಾಗಿ ಜಮೀರ್ ಅಹಮದ್ ಹಾಗೂ ಆಕಾಂಕ್ಷಿ ಅಬ್ದುಲ್ ಜಬ್ಬಾರ್ ಅವರು ಚುನಾವಣಾ ಪ್ರಚಾರ ಕಣದಿಂದ ದೂರ ಉಳಿದಿದ್ದರು.
ಕ್ಷೇತ್ರದಲ್ಲಿ ಸಮುದಾಯದ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ, ಮತ ವಿಭಜನೆ ತಡೆಯಲು ಶಾಸಕರಾದ ಸಲೀಂ ಅಹಮದ್ ಹಾಗೂ ರಿಜ್ವಾನ್ ಅರ್ಷದ್ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಜಮೀರ್ ಅವರ ಗೈರುಹಾಜರಿ ಸಮುದಾಯದ ಮತಗಳನ್ನು ವಿಭಜಿಸುವ ಆತಂಕ ಎದುರಾಗಿತ್ತು. ಇದನ್ನರಿತ ಸಿಎಂ ಸಿದ್ದರಾಮಯ್ಯ ಅವರು ಜಮೀರ್ ಅವರಿಗೆ ದಾವಣಗೆರೆಯಲ್ಲಿ ಪ್ರಚಾರಕ್ಕೆ ತೆರಳಲು ಸೂಚಿಸಿದ್ದರು. ಕೊನೆಗೂ ದಾವಣಗೆರೆಗೆ ಭೇಟಿ ನೀಡಿದ್ದ ಜಮೀರ್ ಅವರು ಎಳ್ಳಷ್ಟೂ ಪ್ರಚಾರದಲ್ಲಿ ತೊಡಗಿಸಿಕೊಂಡಿರಲಿಲ್ಲ. ಜಮೀರ್ ಅವರ ವಿವಾದಾತ್ಮಕ ಹೇಳಿಕೆಗಳಿಂದ ಇಡೀ ಸಮುದಾಯವೇ ಕೆಲ ಸಂದರ್ಭಗಳಲ್ಲಿ ಮುಜುಗರಕ್ಕೆ ಒಳಗಾಗುತ್ತಿದೆ ಎಂಬ ಮುಸ್ಲಿಂ ಶಾಸಕರ ಅಭಿಪ್ರಾಯವಾಗಿದೆ.
ಜಮೀರ್ ಮುನಿಸಿನಿಂದ ಮತ ವಿಭಜನೆ?
ಸಚಿವ ಜಮೀರ್ ಅಹಮದ್ ಅವರ ಅಸಮಾಧಾನದಿಂದ ಸಮುದಾಯದ ಮತಗಳು ವಿಭಜನೆಯಾಗಿವೆ ಎಂಬ ಆರೋಪ ಪಕ್ಷದಲ್ಲೇ ಕೇಳಿ ಬರುತ್ತಿವೆ. ಮುಸ್ಲಿಮರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಇಡೀ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದೆ ಎಂಬ ಸಂದೇಶ ಕ್ಷೇತ್ರದಲ್ಲಿ ಹರಿದಾಡಿತ್ತು. ಈ ಎಲ್ಲಾ ಬೆಳವಣಿಗೆಗಳಿಗೆ ಸಚಿವ ಜಮೀರ್ ಅಹಮದ್ ಅವರೇ ಕಾರಣ ಎಂಬುದು ಸಮುದಾಯದ ಇತರೆ ಶಾಸಕರ ಆರೋಪವಾಗಿದೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ವರಿಷ್ಠರ ನಿರ್ಧಾರವನ್ನೂ ಗೌರವಿಸದ ಜಮೀರ್ ಅಹಮದ್ ಅವರನ್ನು ಸಚಿವ ಸ್ಥಾನದಿಂದಲೂ ಕೆಳಗಿಳಿಸಬೇಕು. ಇತ್ತೀಚಿನ ದಿನಗಳಲ್ಲಿ ಜಮೀರ್ ಅಹಮದ್ ಅವರ ಕಾರ್ಯವೈಖರಿ ಮತ್ತು ವಿವಾದಾತ್ಮಕ ಹೇಳಿಕೆಗಳು ಪಕ್ಷದ ವರ್ಚಸ್ಸಿಗೆ ಹಾನಿ ತಂದಿದೆ ಎಂದೂ ದೂರಲಾಗಿದೆ.
ಮುಸ್ಲಿಂ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಜಮೀರ್ ಅವರು ಸಕ್ರಿಯವಾಗಿ ಪಾಲ್ಗೊಂಡಿಲ್ಲ, ಇದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಮುಸ್ಲಿಂ ಶಾಸಕರು ವ್ಯಕ್ತಪಡಿಸಿದ್ದಾರೆ.
"ಪಕ್ಷದವರೇ ಆದ ಕೆಲ ಹಿರಿಯ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಷಡ್ಯಂತ್ರ ನಡೆಸಿದ್ದರು. ಪಕ್ಷದೊಳಗಿನ ಬಂಡಾಯವು ಅಭ್ಯರ್ಥಿಯನ್ನು ಸೋಲಿಸುವ ತಂತ್ರದವರೆಗೂ ಹೋಗಿತ್ತು" ಎಂದು ಶಾಸಕ ಸಲೀಂ ಅಹಮದ್ ಪರೋಕ್ಷವಾಗಿ ಸಚಿವ ಜಮೀರ್ ಅಹಮದ್ ವಿರುದ್ಧ ದೂರಿದ್ದರು. ಅದೇ ರೀತಿ ಶಾಸಕ ರಿಜ್ವಾನ್ ಅರ್ಷದ್ ಕೂಡ, ಅಬ್ದುಲ್ ಜಬ್ಬಾರ್ ಅವರಿಗೆ ದಾವಣಗೆರೆ ಕ್ಷೇತ್ರದಲ್ಲಿ ಜನಪ್ರಿಯತೆ ಇರಲಿಲ್ಲ. ಗೆಲ್ಲುವ ಸಾಮರ್ಥ್ಯದ ಬಗ್ಗೆ ಸಂಶಯವಿದೆ ಎಂಬ ವರದಿ ಬಂದಿತ್ತು. ಹಾಗಾಗಿ, ಜಬ್ಬಾರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಕುರಿತು ನಡೆದ ಮುಖಂಡರ ಸಭೆಯಲ್ಲಿ ಸಚಿವ ಜಮೀರ್ ಅಹಮದ್ ಅವರು ಭಾಗಿಯಾಗಿದ್ದರು. ಆದರೂ, ನಮ್ಮಲ್ಲಿನ ಕೆಲ ನಾಯಕರು ಅಹಕಾರ ತೋರಿದರು ಎಂದು ಆರೋಪಿಸಿದ್ದರು.
ವಿವಾದಗಳಲ್ಲೇ ಮುಳುಗಿದ ಜಮೀರ್
ಸಚಿವ ಜಮೀರ್ ಅಹಮದ್ ಅವರು ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಾದರೂ ವಿವಾದಗಳಿಂದ ಹೊರತಾಗಿಲ್ಲ. ಹಲವು ಸಂದರ್ಭಗಳಲ್ಲಿ ನೀಡಿದ ವೈಯಕ್ತಿಕ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತಂದಿದ್ದವು. ಅಲ್ಲದೇ ತಾವೊಬ್ಬರೇ ಸಮುದಾಯದ ಪ್ರಭಾವಿ ನಾಯಕ ಎಂದು ಬಿಂಬಿಸಿಕೊಳ್ಳುವ ಜಮೀರ್ ಅವರ ಪ್ರಯತ್ನವು ಉಳಿದ ಶಾಸಕರಿಗೆ ಅಪಥ್ಯಯಾಗಿತ್ತು.
ಅಲ್ಪಸಂಖ್ಯಾತ ಸಮುದಾಯದಲ್ಲಿ ಸಚಿವ ಜಮೀರ್ ಅಹಮದ್ ಅವರ ಏಕಪಕ್ಷೀಯ ಧೋರಣೆಯಿಂದ ಬೇಸತ್ತಿದ್ದ ಹಲವರು, ಜಮೀರ್ ಒಬ್ಬರೇ ನಾಯಕರಲ್ಲ, ನಮಗೂ ಅವಕಾಶ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎಸ್ಡಿಪಿಐ ಅಭ್ಯರ್ಥಿ ಸೇರಿ 14 ಮಂದಿ ಪಕ್ಷೇತರ ಅಭ್ಯರ್ಥಿಗಳನ್ನು ನಿಲ್ಲಿಸುವಲ್ಲಿ ಜಮೀರ್ ಪಾತ್ರದ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಜಮೀರ್ ಅಹಮದ್ ಅವರು ಮತ ವಿಭಜನೆ ಸಲುವಾಗಿ ಎಸ್‌ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ವಸತಿ ಸಚಿವರಾಗಿ ಮನೆಗಳ ಹಂಚಿಕೆಗೆ ಲಂಚ ಪಡೆದಿದ್ದಾರೆಂದು ಪಕ್ಷದ ಶಾಸಕರೇ ಆರೋಪ ಮಾಡಿದ್ದರು. ಇತ್ತೀಚೆಗೆ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿದ ಮಹಿಳೆಯರು ನೀಡಿದ ಅರ್ಜಿಯನ್ನು ಎಸೆದ ವಿಡಿಯೋ ವೈರಲ್ ಆಗಿ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲ ಕಾರಣಗಳಿಂದ ಸಂಪುಟ ಪುನಾರಚನೆಯಲ್ಲಿ ಜಮೀರ್ ಅಹಮದ್ ಅವರನ್ನು ಕೈಬಿಡಬೇಕು ಎಂಬ ಒತ್ತಡ ಸಮುದಾಯದವರಿಂದಲೇ ಕೇಳಿಬರುತ್ತಿದೆ.
ಜಮೀರ್ ವರ್ಸಸ್ ಮುಸ್ಲಿಂ ಶಾಸಕರು
ಕೆಪಿಸಿಸಿ ಕಚೇರಿಯಲ್ಲಿ ಮುಸ್ಲಿಂ ಶಾಸಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪರೋಕ್ಷವಾಗಿ ಜಮೀರ್ ವಿರುದ್ಧ ಹರಿಹಾಯ್ದಿರುವುದು ಪಕ್ಷದ ಅಲ್ಪಸಂಖ್ಯಾತರ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿದೆ. ಜಮೀರ್ ವಿರುದ್ಧ ಸಮುದಾಯದ ಶಾಸಕರ ಆರೋಪಗಳ ಹಿಂದೆ ಸಚಿವ ಸ್ಥಾನದ ಲಾಬಿಯೂ ಕೆಲಸ ಮಾಡುತ್ತಿದೆ ಎಂಬುದು ವೇದ್ಯವಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅವರನ್ನು ಸಂಪುಟದಿಂದ ಕೈಬಿಡುವುದು ಸುಲಭವಲ್ಲ, ಆದರೂ, ಇತರೆ ಮುಸ್ಲಿಂ ಶಾಸಕರು ಒಗ್ಗಟ್ಟಾಗಿ ದೆಹಲಿ ಮಟ್ಟದಲ್ಲಿ ಒತ್ತಡ ಹೇರುವ ಪ್ರಯತ್ನದ ಭಾಗವಾಗಿ ಹೈಕಮಾಂಡ್‌ಗೆ ಜಮೀರ್ ವಿರುದ್ಧ ವರದಿ ನೀಡಲು ಮುಂದಾಗಿದ್ದಾರೆ.
ಪಂಚರಾಜ್ಯ ಚುನಾವಣೆ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ ದಟ್ಟವಾಗಿದ್ದು, ಜಮೀರ್ ವಿರುದ್ಧ ಕೇಳಿಬರುತ್ತಿರುವ ಆರೋಪಗಳೇ ಅವರಿಗೆ ಮುಳುವಾಗಲಿವೆ ಎನ್ನಲಾಗಿದೆ. ಸಲೀಂ ಅಹಮದ್, ರಿಜ್ವಾನ್ ಅರ್ಷದ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿರುವುದರಿಂದ ಮುಸ್ಲಿಂ ನಾಯಕರ ಮಧ್ಯೆ ಭಿನ್ನಮತ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

