Bangalore-Pune High Speed ​​Rail Corridor Complements State
x

ಸಚಿವ ಎಂ.ಬಿ. ಪಾಟೀಲ್‌

ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ ರಾಜ್ಯದ ಪ್ರಗತಿಗೆ ಪೂರಕ: ಎಂ.ಬಿ. ಪಾಟೀಲ್ ಶ್ಲಾಘನೆ

ನೂತನ ರೈಲ್ವೆ ಕಾರಿಡಾರ್‌ನಿಂದ ರಾಜ್ಯದಲ್ಲಿ ವ್ಯಾಪಾರ, ಉದ್ಯೋಗ ಹಾಗೂ ಪ್ರವಾಸೋದ್ಯಮ ವಲಯಗಳಿಗೆ ಉತ್ತೇಜನ ಸಿಗಲಿದೆ. ಮಧ್ಯ ಹಾಗೂ ಉತ್ತರ ಕರ್ನಾಟಕಕ್ಕೂ ಅನುಕೂಲವಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.


Click the Play button to hear this message in audio format

ಐಟಿ ರಾಜಧಾನಿ ಬೆಂಗಳೂರು - ಪುಣೆ ಹೈಸ್ಪೀಡ್‌ ರೈಲು ಕಾರಿಡಾರ್‌ ಹಾಗೂ ಮುಂಬೈಗೆ ನೂತನ ರೈಲು ಘೋಷಿಸಿರುವುದರಿಂದ ರಾಜ್ಯಕ್ಕೆ ಸಾಕಷ್ಟು ಅನುಕೂಲವಾಗಲಿದ್ದು, ಈ ಯೋಜನೆಗಳು ಅಗತ್ಯವಾಗಿದ್ದವು ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ

ಗುರುವಾರ(ಫೆ.5) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೇಂದ್ರ ಬಜೆಟ್ ಮಂಡನೆಯಾದ ಕೂಡಲೇ ನಾನು ಬೆಂಗಳೂರು - ಪುಣೆ- ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯವಾಗಿದೆ ಎಂದು ಹೇಳಿದ್ದೆ. ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ ಮತ್ತು ಎಚ್. ಡಿ. ಕುಮಾರಸ್ವಾಮಿ ಈ ಬಗ್ಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ಚರ್ಚಿಸಿರುವುದಕ್ಕೆ ಧನ್ಯವಾದ ಹೇಳುತ್ತೇನೆ. ಇದರಲ್ಲಿ ರಾಜಕೀಯವೇನೂ ಇಲ್ಲ. ಇದು ಕೇವಲ ಭೇಟಿಗೆ ಮಾತ್ರ ನಿಲ್ಲದೆ, ತಾರ್ಕಿಕ ಅಂತ್ಯ ಕಾಣುವಂತೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ದೇಶದ ಐಟಿ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬೈ ನಡುವೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಬರಬೇಕು. ಇದರಿಂದ ಮಧ್ಯ ಮತ್ತು ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಭಾಗಗಳಿಗೆ ಅಪಾರ ಲಾಭವಿದೆ. ವ್ಯಾಪಾರ, ಉದ್ಯೋಗ ಹಾಗೂ ಪ್ರವಾಸೋದ್ಯಮವೂ ಹೆಚ್ಚಳವಾಗಲಿದೆ ಎಂದು ತಿಳಿಸಿದರು

ಆರ್ಥಿಕ, ಕೈಗಾರಿಕಾ ಪ್ರಗತಿ

ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಸೇರಿದಂತೆ ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ ಈ ಎರಡೂ ಯೋಜನೆಗಳಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಿಲ್ಲ. ಬೆಂಗಳೂರು-ಪುಣೆ-ಮುಂಬೈ ಮಧ್ಯೆ ಇಂತಹ ಯೋಜನೆ ಬಂದರೆ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಸಾಂಗ್ಲಿ, ಕೊಲ್ಲಾಪುರ ಹೀಗೆ ಹಲವು ಪ್ರದೇಶಗಳಿಗೆ ಪ್ರಯೋಜನವಾಗಿ, ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿ ಸಾಧ್ಯವಾಗಲಿದೆ ಎಂದು ಬಜೆಟ್ ದಿನವೇ ಹೇಳಿದ್ದೆ. ಆ ನಿಟ್ಟಿನಲ್ಲಿ ಕೇಂದ್ರ ಸಚಿವರು ಕಾರ್ಯಪ್ರವೃತ್ತರಾಗಿರುವುದು ಸ್ವಾಗತಾರ್ಹ ಎಂದರು.

ಪ್ರಧಾನಿ, ಸಚಿವರಿಗೆ ಪತ್ರ

ಇಂತಹ ಯೋಜನೆಗಳ ವಿಚಾರದಲ್ಲಿ ನಾವು ರಾಜಕೀಯ ಮಾಡಬಾರದು. ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಪ್ರಲ್ಹಾದ್‌ ಜೋಶಿ ಈ ವಿಚಾರದ ಬಗ್ಗೆ ಗಮನ ಹರಿಸಿರುವುದು ಒಳ್ಳೆಯದು. ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಚಿವ ವಿ.ಸೋಮಣ್ಣನವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಲಿಂಗಾಯತ ಶಾಸಕರ ಸಭೆ ತಪ್ಪಲ್ಲ

ಇತ್ತೀಚೆಗೆ ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಶಾಸಕರ ಸಭೆ ನಡೆದಿದ್ದು ಇದು ಶಕ್ತಿ ಪ್ರದರ್ಶನವೇನೂ ಅಲ್ಲ. ಅಶೋಕ ಪಟ್ಟಣ ಮತ್ತು ಬಿ.ಆರ್. ಪಾಟೀಲ ಈ ಸಭೆ ಕರೆದಿದ್ದರು. ಸಮುದಾಯದ ಹಿತಾಸಕ್ತಿ ಕುರಿತು ಅಲ್ಲಿ ಚರ್ಚೆ ನಡೆಯಿತು. ನಾವು ಆಗಿಂದಾಗ್ಗೆ ಸಭೆ ಸೇರುತ್ತಲೇ ಇರುತ್ತೇವೆ. ಬೇರೆ ಬೇರೆ ಸಮುದಾಯಗಳ ಶಾಸಕರೂ ಸಭೆ ಮಾಡುತ್ತಾರೆ. ಆದರೆ ನಮ್ಮ ಸಭೆಯನ್ನು ಮಾತ್ರ ಲಿಂಗಾಯತರ ಶಕ್ತಿ ಪ್ರದರ್ಶನ ಎಂದು ಬಿಂಬಿಸುವುದು ಸರಿಯಲ್ಲ ಎಂದರು.

1989ರಲ್ಲಿ ಲಿಂಗಾಯತರ ಬೆಂಬಲದಿಂದ ಕಾಂಗ್ರೆಸ್ 178 ಕಡೆ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈಗಲೂ ಕಾಂಗ್ರೆಸ್‌ನಲ್ಲಿ‌ 34 ಲಿಂಗಾಯತ ಶಾಸಕರಿದ್ದೇವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯ ಕಾಂಗ್ರೆಸ್ಸಿಗೆ ಮತಹಾಕಿದೆ. ಹೀಗಾಗಿ ಸರ್ಕಾರದಲ್ಲಿ ಹೆಚ್ಚಿನ ಪ್ರಾಧನ್ಯತೆ ನೀಡಬೇಕು ಎನ್ನುವುದರಲ್ಲಿ ತಪ್ಪೇನಿಲ್ಲ. ಆದರೆ ನಾವು ಇನ್ನೊಂದು ಸಮುದಾಯದ ಪಾಲನ್ನು ಕಿತ್ತುಕೊಳ್ಳುವುದಿಲ್ಲ ಎಂದು ತಿಳಿಸಿದರು.

ಮನರೇಗಾ ಪುನಃ ಬರಲಿ

ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಯನ್ನು ಬಿಜೆಪಿ ನಾಯಕರಾದ ಆಡ್ವಾಣಿ, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಅವರೇ ಹೊಗಳಿದ್ದರು. ಈಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ಯೋಜನೆಯನ್ನು ತಿದ್ದುಪಡಿ ಮಾಡಿ, ಯೋಜನೆಯ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಬದಲಿಸಿದೆ. ಬಿಜೆಪಿ ಸಂಸದರೇ ಈ ಬಗ್ಗೆ ಧ್ವನಿ ಎತ್ತಿ, ತಮ್ಮ ಬೆಲೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

Read More
Next Story