
ಅಂಗನವಾಡಿ ಕಾರ್ಯಕರ್ತೆಯರ ಅನುದಾನ; ಕೇಂದ್ರದಿಂದ ಅನ್ಯಾಯ ಎಂದ ಸಚಿವೆ ಹೆಬ್ಬಾಳ್ಕರ್
ಕೇಂದ್ರವು ಒಂದು ಹೆಜ್ಜೆ ಮುಂದೆ ಬಂದರೆ, ನಾವು ಎರಡು ಹೆಜ್ಜೆ ಮುಂದೆ ಹೋಗಲು ಸಿದ್ಧರಿದ್ದೇವೆ. ಸರ್ಕಾರವು ತನ್ನ ಶಕ್ತಿಯ ಮೀರಿ ಸಹಾಯ ಮಾಡುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಳದ ಕುರಿತು ಸದನದಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಅಂಗನವಾಡಿ ಕಾರ್ಯಕರ್ತೆಯರ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೌರವಧನ ಹೆಚ್ಚಳದ ವಿಷಯದಲ್ಲಿ ಕೇವಲ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ, ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ತನ್ನ ಪಾಲು ಮತ್ತು ಜವಾಬ್ದಾರಿಯನ್ನು ಅರಿಯಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಸಿಗುವ ಒಟ್ಟು ಗೌರವಧನದಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವುದು ಕೇವಲ 2,700 ರೂ. ಮಾತ್ರ ಆಗಿದೆ. ಉಳಿದ ಸಿಂಹಪಾಲು, ಅಂದರೆ 9,800 ರೂ. ರಾಜ್ಯ ಸರ್ಕಾರವೇ ಭರಿಸುತ್ತಿದೆ. ಗೌರವಧನ ಹೆಚ್ಚಳದ ಬೇಡಿಕೆ ಬಂದಾಗಲೆಲ್ಲ ಕೇವಲ ರಾಜ್ಯ ಸರ್ಕಾರದ ಕಡೆಗೆ ಬೆರಳು ತೋರಿಸುವುದು ಸರಿಯಲ್ಲ. ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಕಣ್ತೆರೆಯಬೇಕು. ಕೇಂದ್ರವು ಒಂದು ಹೆಜ್ಜೆ ಮುಂದೆ ಬಂದರೆ, ನಾವು ಎರಡು ಹೆಜ್ಜೆ ಮುಂದೆ ಹೋಗಲು ಸಿದ್ಧರಿದ್ದೇವೆ. ರಾಜ್ಯ ಸರ್ಕಾರವು ಈಗಾಗಲೇ ತನ್ನ ಶಕ್ತಿಯ ಮೀರಿ ಸಹಾಯ ಮಾಡುತ್ತಿದ್ದು, ಕೇಂದ್ರ ಸರ್ಕಾರವು ತನ್ನ ಪಾಲನ್ನು ಹೆಚ್ಚಿಸಿದರೆ ಕಾರ್ಯಕರ್ತೆಯರ ಬದುಕು ಮತ್ತಷ್ಟು ಹಸನಾಗಲಿದೆ ಎಂದು ಹೇಳಿದರು.
ಗೌರವಧನ ನೀಡಿಕೆಯಲ್ಲಿ ರಾಜ್ಯದ ಸ್ಥಾನ
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಅತಿ ಹೆಚ್ಚು ಗೌರವಧನ ನೀಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಹರಿಯಾಣ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಮೊದಲ ಮೂರು ಸ್ಥಾನಗಳಲ್ಲಿದ್ದರೆ, ಕರ್ನಾಟಕವು ತನ್ನ ಆರ್ಥಿಕ ಇಕ್ಕಟ್ಟಿನ ನಡುವೆಯೂ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಹಾಗೂ ಸಹಾಯಕಿಯರಿಗೆ 750 ರೂ. ಗೌರವಧನವನ್ನು ಹೆಚ್ಚಳ ಮಾಡಿದೆ. ಆದರೂ, ಪ್ರಸ್ತುತ ಇರುವ ಜೀವನ ವೆಚ್ಚ ಮತ್ತು ಅವರು ಮಾಡುತ್ತಿರುವ ಅಪಾರವಾದ ಕೆಲಸಕ್ಕೆ ಈ ಮೊತ್ತ ಸಾಲದು ಎಂಬ ಅರಿವು ಸರ್ಕಾರಕ್ಕಿದೆ ಎಂದರು.
ಹಣಕಾಸು ಇಲಾಖೆಗೆ ಮನವಿ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳಿಂದ ಬಂದಿರುವ ಮನವಿಗಳನ್ನು ಪುರಸ್ಕರಿಸಿರುವ ಇಲಾಖೆಯು ಗೌರವಧನವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. ಅಂಗನವಾಡಿ ಕೇಂದ್ರಗಳನ್ನು ಕೇವಲ ಪೌಷ್ಟಿಕ ಆಹಾರ ನೀಡುವ ಕೇಂದ್ರಗಳನ್ನಾಗಿ ಮಾತ್ರವಲ್ಲದೆ, ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರಗಳನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಕೇವಲ ಸಹಾಯಕಿ ಎಂಬಂತೆ ನೋಡದೆ, ಅವರಲ್ಲಿರುವ ಶೈಕ್ಷಣಿಕ ಅರ್ಹತೆಯನ್ನು ಬಳಸಿಕೊಳ್ಳಲು ಸರ್ಕಾರ ಯೋಜಿಸಿದೆ. ಪ್ರಸ್ತುತ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪೈಕಿ ಸುಮಾರು 17 ಸಾವಿರ ಕಾರ್ಯಕರ್ತೆಯರು ಬಿಎ, ಬಿಎಡ್, ಎಂಎ, ಮತ್ತು ಎಂಕಾಂನಂತಹ ಉನ್ನತ ಪದವಿಗಳನ್ನು ಹೊಂದಿದ್ದಾರೆ. ಈ ಸುಶಿಕ್ಷಿತ ಕಾರ್ಯಕರ್ತೆಯರ ಸೇವೆಯನ್ನು ಮಾಂಟೆಸ್ಸರಿ ಶಿಕ್ಷಣದಲ್ಲಿ ಬಳಸಿಕೊಳ್ಳುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಮಹಿಳಾ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ, ವಿಶೇಷವಾಗಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೈಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ದೊಡ್ಡದು. ಕೋವಿಡ್ ಸಮಯದಲ್ಲಿ ಅವರು ಜೀವದ ಹಂಗು ತೊರೆದು ಕೆಲಸ ಮಾಡಿದ್ದರು. ಇಂತಹ "ಕೊರೊನಾ ವಾರಿಯರ್ಸ್" ಗಳ ಹಿತರಕ್ಷಣೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ. ಕೇವಲ ವೇತನ ಮಾತ್ರವಲ್ಲದೆ, ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿರುವುದಾಗಿ ಹೇಳಿದರು.

