ಬೀದರ್-ಬೆಂಗಳೂರು ವಿಮಾನ ವೇಳಾಪಟ್ಟಿ ಬದಲಾವಣೆ: ಸಚಿವ ಈಶ್ವರ ಖಂಡ್ರೆ ತೀವ್ರ ಅಸಮಾಧಾನ
x

ಬೀದರ್-ಬೆಂಗಳೂರು ವಿಮಾನ ವೇಳಾಪಟ್ಟಿ ಬದಲಾವಣೆ: ಸಚಿವ ಈಶ್ವರ ಖಂಡ್ರೆ ತೀವ್ರ ಅಸಮಾಧಾನ

ಪ್ರತಿದಿನ ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದ 84 ಆಸನಗಳ ವಿಮಾನವು 7.45ಕ್ಕೆ ಬೀದರ್ ತಲುಪುತ್ತಿತ್ತು. ನಂತರ ಬೀದರ್‌ನಿಂದ 8.15ಕ್ಕೆ ಹೊರಟು 9.30ಕ್ಕೆ ಬೆಂಗಳೂರಿಗೆ ತಲುಪುತ್ತಿತ್ತು.


Click the Play button to hear this message in audio format

ರಾಜ್ಯದ ಗಡಿ ಜಿಲ್ಲೆಯಾದ ಬೀದರ್‌ನ ಜನರ ಬಹುದಿನದ ಕನಸಾಗಿರುವ ವಿಮಾನಯಾನ ಸೇವೆಯ ವೇಳಾಪಟ್ಟಿಯಲ್ಲಿ ಸ್ಟಾರ್ ಏರ್ ಸಂಸ್ಥೆ ಮಾಡಿರುವ ದಿಢೀರ್ ಬದಲಾವಣೆಯು ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟುಮಾಡಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ, ಈ ಬದಲಾವಣೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಹಿಂದಿನ ವೇಳಾಪಟ್ಟಿಯಂತೆ, ಪ್ರತಿದಿನ ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದ 84 ಆಸನಗಳ ವಿಮಾನವು 7.45ಕ್ಕೆ ಬೀದರ್ ತಲುಪುತ್ತಿತ್ತು. ನಂತರ ಬೀದರ್‌ನಿಂದ 8.15ಕ್ಕೆ ಹೊರಟು 9.30ಕ್ಕೆ ಬೆಂಗಳೂರಿಗೆ ತಲುಪುತ್ತಿತ್ತು. ಈ ಸಮಯವು ಬೀದರ್, ನೆರೆಯ ಜಿಲ್ಲೆಗಳು ಮತ್ತು ತೆಲಂಗಾಣದ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾಗಿತ್ತು. ಆದರೆ, ಈಗ ಸ್ಟಾರ್ ಏರ್ ಸಂಸ್ಥೆಯು ಯಾವುದೇ ಮುನ್ಸೂಚನೆ ನೀಡದೆ, ಬುಧವಾರದಿಂದ ಜಾರಿಗೆ ಬರುವಂತೆ ಹೊಸ ವೇಳಾಪಟ್ಟಿ ಪ್ರಕಟಿಸಿದೆ. ಹೊಸ ವೇಳಾಪಟ್ಟಿಯಂತೆ ವಿಮಾನವು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ಹೊರಟು 1.45ಕ್ಕೆ ಬೀದರ್ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 2.30ಕ್ಕೆ ಹೊರಟು 3.30ಕ್ಕೆ ಬೆಂಗಳೂರು ತಲುಪಲಿದೆ. ಈ ಬದಲಾವಣೆಯು ಪ್ರಯಾಣಿಕರ ಪಾಲಿಗೆ ಯಾವುದೇ ಪ್ರಯೋಜನವಿಲ್ಲದ ಸಮಯವಾಗಿದೆ ಎಂದು ಸಚಿವರು ಟೀಕಿಸಿದ್ದಾರೆ.

ಬದಲಾವಣೆ ಪ್ರಯಾಣಿಕರಿಗೆ ಹೊಡೆತ?

ಮುಂಜಾನೆಯ ವಿಮಾನವು ಕೆಲಸಕ್ಕೆ ಹೋಗುವವರಿಗೆ ಮತ್ತು ದಿನದ ವ್ಯಾಪಾರ ವಹಿವಾಟು ನಡೆಸುವವರಿಗೆ ಅನುಕೂಲವಾಗಿತ್ತು. ಮಧ್ಯಾಹ್ನದ ವಿಮಾನವು ಪ್ರಯಾಣಿಕರಿಗೆ ಇಡೀ ದಿನವನ್ನು ವ್ಯರ್ಥ ಮಾಡಲಿದೆ. ಅನುಕೂಲಕರವಲ್ಲದ ಸಮಯದಿಂದಾಗಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಸರ್ಕಾರವು ಪ್ರಯಾಣಿಕರ ಅನುಕೂಲಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದ 'ವಯಬಲಿಟಿ ಗ್ಯಾಪ್ ಫಂಡ್' (ಬಿಜಿಎಫ್‌) ಅನ್ನು ಸಂಸ್ಥೆಗೆ ನೀಡುತ್ತಿದೆ. ಸಾರ್ವಜನಿಕರ ಹಣವನ್ನು ಬಳಸುವಾಗ ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡದಿರುವುದು ಸರಿಯಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಮಾನಯಾನ ಸೇವೆಯ ಹಿಂದಿನ ಕಷ್ಟದ ಹಾದಿ

ಬೀದರ್ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಗೆ ಸೇರಿದ್ದು, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಿಮಾನ ಸೇವೆ ಆರಂಭವಾಗಿತ್ತು. ಆದರೆ ಕೇಂದ್ರ ಸರ್ಕಾರ ಸಬ್ಸಿಡಿ ನಿಲ್ಲಿಸಿದ್ದರಿಂದ ಒಂದೂವರೆ ವರ್ಷಗಳ ಕಾಲ ಈ ಸೇವೆ ಸ್ಥಗಿತಗೊಂಡಿತ್ತು. ಬಳಿಕ ರಾಜ್ಯ ಸರ್ಕಾರವು ಮುತುವರ್ಜಿ ವಹಿಸಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮತ್ತು ರಾಜ್ಯ ಸರ್ಕಾರದ ವತಿಯಿಂದ 13.48 ಕೋಟಿ ರೂಪಾಯಿಗಳ ಬಿಜಿಎಫ್‌ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು. ಈ ಆರ್ಥಿಕ ಬೆಂಬಲದ ಹಿನ್ನೆಲೆಯಲ್ಲಿ 2026ರ ಜೂನ್ 1ರಿಂದ ಸೇವೆ ಪುನರಾರಂಭಗೊಂಡಿತ್ತು. ಹೀಗೆ ಕಷ್ಟಪಟ್ಟು ಆರಂಭಿಸಿದ ಸೇವೆಯು ಇದೀಗ ಸ್ಟಾರ್ ಏರ್‌ನ ಅವೈಜ್ಞಾನಿಕ ವೇಳಾಪಟ್ಟಿಯಿಂದಾಗಿ ಹಳಿ ತಪ್ಪುವ ಭೀತಿಯಲ್ಲಿದೆ.

ಪ್ರಯಾಣಿಕರ ಹಿತದೃಷ್ಟಿಯಿಂದ ಹಳೆಯ ವೇಳಾಪಟ್ಟಿಯನ್ನೇ (ಬೆಳಗ್ಗಿನ ಸೇವೆ) ಮುಂದುವರಿಸಬೇಕು. ಈ ಹಿಂದೆ ವಾಯುಪಡೆ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಬೆಳಗಿನ ವೇಳಾಪಟ್ಟಿಗೇ ಅನುಮತಿ ನೀಡಿದ್ದವು. ಹೀಗಾಗಿ ಸಮಯ ಬದಲಾವಣೆಗೆ ಯಾವುದೇ ಸಮರ್ಥನೆಗಳಿಲ್ಲ. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ತಕ್ಷಣ ಮಧ್ಯಪ್ರವೇಶಿಸಿ, ಸ್ಟಾರ್ ಏರ್ ಸಂಸ್ಥೆಯ ಜೊತೆ ಮಾತುಕತೆ ನಡೆಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ಮರುಸ್ಥಾಪಿಸಬೇಕು ಎಂದು ಸಚಿವ ಈಶ್ವರ್‌ ಖಂಡ್ರೆ ಆಗ್ರಹಿಸಿದ್ದಾರೆ.

Read More
Next Story