ಅನಿಲ ಅಭಾವ; ಸೌದೆಗೆ ಬೇಡಿಕೆ, ವನಸಂಪತ್ತು ರಕ್ಷಣೆಗೆ ಅರಣ್ಯ ಇಲಾಖೆ ಅಲರ್ಟ್
x
ಎಐ ಚಿತ್ರ

ಅನಿಲ ಅಭಾವ; ಸೌದೆಗೆ ಬೇಡಿಕೆ, ವನಸಂಪತ್ತು ರಕ್ಷಣೆಗೆ ಅರಣ್ಯ ಇಲಾಖೆ ಅಲರ್ಟ್

ಬೆಂಗಳೂರಿನಲ್ಲಿ ತ್ರಿಸ್ಟಾರ್‌ ಹೋಟೆಲ್‌ ಒಂದರಲ್ಲಿ ಗ್ಯಾಸ್‌ ಇಲ್ಲದೇ ಸೌದೆ ಬಳಸಲು ತಯಾರಿ ನಡೆಸುತ್ತಿರುವುದು ಹಾಗೂ ಕೆಲವೆಡೆ ಸೌದೆ ಒಲೆ ಸಿದ್ಧಪಡಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.


ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಯುದ್ಧದ ಭೀತಿಯಿಂದಾಗಿ ದೇಶಾದ್ಯಂತ ಅಡುಗೆ ಅನಿಲ (ಎಲ್‌ಪಿಜಿ) ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಇದರ ನೇರ ಪರಿಣಾಮ ಹೋಟೆಲ್‌ ಉದ್ಯಮ ಹಾಗೂ ಗ್ರಾಹಕರಿಗೆ ತಟ್ಟಿದ್ದು, ಅನಿವಾರ್ಯವಾಗಿ ಸೌದೆ ಬಳಕೆಯತ್ತ ಚಿತ್ತ ಹರಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜನ ಉರುವಲಿಗಾಗಿ ಸೌದೆ ಬಳಕೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ, ಅರಣ್ಯ ಸಂಪತ್ತಿನ ಮೇಲೆ ಕೊಡಲಿ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ. ಇದರಿಂದ ರಾಜ್ಯದ ಪ್ರಮುಖ ಹೋಟೆಲ್‌ಗಳು, ರೆಸಾರ್ಟ್‌ಗಳು ಹಾಗೂ ಹೋಂ ಸ್ಟೇಗಳು ಸಂಕಷ್ಟಕ್ಕೆ ಸಿಲುಕಿವೆ. ಗೃಹ ಬಳಕೆ ಸಿಲಿಂಡರ್‌ಗಳ ವಿತರಣೆಯಲ್ಲೂ ವಿಳಂಬ ಆಗುತ್ತಿರುವುದರಿಂದ, ಪರ್ಯಾಯ ವ್ಯವಸ್ಥೆಯಿಲ್ಲದೆ ಗ್ರಾಹಕರು ಸೌದೆಯ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರಿನ ತ್ರೀ-ಸ್ಟಾರ್‌ (Three-star) ಹೋಟೆಲ್‌ ಒಂದರಲ್ಲಿ ಗ್ಯಾಸ್‌ ಇಲ್ಲದೆ ಸೌದೆ ಬಳಸಲು ತಯಾರಿ ನಡೆಸುತ್ತಿರುವುದು ಹಾಗೂ ಹಲವೆಡೆ ಸೌದೆ ಒಲೆ ಸಿದ್ಧಪಡಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಮರಮುಟ್ಟು ಕಡಿತದ ಆತಂಕ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ

ಅನಿಲ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಸೌದೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅರಣ್ಯದೊಳಗಿನ ಮರಗಳು, ಅರಣ್ಯದಂಚಿನ ಗಿಡಗಳು, ಇಲಾಖೆಯ ನೆಡುತೋಪುಗಳು, ಸರ್ಕಾರಿ ಜಮೀನು ಹಾಗೂ ರಸ್ತೆ ಬದಿಯ ಮರಗಳನ್ನೂ ಉರುವಲಿಗಾಗಿ ಕಡಿಯುವ ಸಾಧ್ಯತೆ ಇರುವುದರಿಂದ ಅರಣ್ಯ ನಾಶದ ಅಪಾಯ ಹೆಚ್ಚಾಗಿದೆ. ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

"ಯಾವುದೇ ಕಾರಣಕ್ಕೂ ರಾಜ್ಯದ ಅರಣ್ಯ ಸಂಪತ್ತಿನ ಮೇಲೆ ಅಕ್ರಮವಾಗಿ ಕೊಡಲಿ ಪೆಟ್ಟು ಬೀಳಬಾರದು. ಸೌದೆಗಾಗಿ ಮರಗಳನ್ನು ಕಡಿಯುವ ಕೃತ್ಯಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು," ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಗಲು-ರಾತ್ರಿ ಗಸ್ತು, ಶಿಸ್ತು ಕ್ರಮದ ಎಚ್ಚರಿಕೆ

ರಾಜ್ಯದ ಎಲ್ಲಾ ಅರಣ್ಯ ವೃತ್ತಗಳು ಮತ್ತು ವಲಯಗಳಲ್ಲಿ ಅರಣ್ಯ ಸಿಬ್ಬಂದಿ ನಿರಂತರವಾಗಿ ಹಗಲು-ರಾತ್ರಿ ಗಸ್ತು ತಿರುಗಲು ಸೂಚಿಸಲಾಗಿದೆ. ಅರಣ್ಯ ಅಥವಾ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮರ ಕಡಿದರೆ ಆಯಾ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.

ಕೇವಲ ದಟ್ಟ ಅರಣ್ಯ ಮಾತ್ರವಲ್ಲದೆ, ರಸ್ತೆ ಬದಿಯ ಮರಗಳು ಮತ್ತು ಸಾರ್ವಜನಿಕ ಆಸ್ತಿಯಲ್ಲಿರುವ ಗಿಡಮರಗಳ ಕಳ್ಳತನ ತಡೆಯುವುದರ ಮೇಲೆಯೂ ಇಲಾಖೆ ಕಟ್ಟೆಚ್ಚರ ವಹಿಸಿದೆ. ಅನಿಲ ಅಭಾವ ಪರಿಸ್ಥಿತಿ ತಿಳಿಯಾಗುವವರೆಗೂ ಈ ಬಿಗಿ ಕ್ರಮಗಳು ಮುಂದುವರಿಯಲಿವೆ. ಸೌದೆಗಾಗಿ ಯಾರೂ ಕೂಡ ಅಕ್ರಮವಾಗಿ ಮರಗಳನ್ನು ಕಡಿಯಬಾರದು ಹಾಗೂ ಅರಣ್ಯ ರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

ಕೇಂದ್ರದ ವಿರುದ್ಧ ಡಿ.ಕೆ. ಶಿವಕುಮಾರ್ ಆಕ್ರೋಶ

ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, "ಕೇಂದ್ರ ಸರ್ಕಾರವೇ ಅನಿಲದ ಅಭಾವಕ್ಕೆ ನೇರ ಕಾರಣವಾಗಿದ್ದು, ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ಸೌದೆ ಬಳಕೆಗೆ ಅನುಮತಿ ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read More
Next Story