ಮೇಕೆದಾಟು ಯೋಜನೆ ಜಾರಿಗೆ ಶಪಥ; ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಸೂಚನೆ
x

ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು

ಮೇಕೆದಾಟು ಯೋಜನೆ ಜಾರಿಗೆ ಶಪಥ; ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಸೂಚನೆ

ಯೋಜನೆಯ ಡಿಪಿಆರ್‌ಗೆ ತಾಂತ್ರಿಕ ಅನುಮೋದನೆ ಪಡೆಯುವ ಪ್ರಕ್ರಿಯೆ ಚುರುಕುಗೊಂಡಿದೆ. ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿ, ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.


ಮೇಕೆದಾಟು ಯೋಜನೆ ಜಾರಿಗಾಗಿ ಅಧಿಕಾರಿಗಳು ತ್ವರಿತವಾಗಿ ಯೋಜನೆ ಸಂಬಂಧಿತ ಪ್ರಕ್ರಿಯೆಗಳನ್ನು ಮುಗಿಸಬೇಕು ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಸೂಚಿಸಿದ್ದಾರೆ.

ಇಂದು ವಿಕಾಸಸೌಧದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಅವರು, ಯೋಜನೆಗಾಗಿ ಮುಳುಗಡೆಯಾಗುವ ಭೂಮಿಗೆ ಪ್ರತಿಯಾಗಿ ಪರಿಹಾರ ನೀಡಲು ಶೀಘ್ರದಲ್ಲೇ ಪರ್ಯಾಯ ಜಮೀನು ಹುಡುಕುವಂತೆ ಆದೇಶಿಸಿದ್ದಾರೆ. ಯಾವುದೇ ಕಾರಣಕ್ಕೂ ವಸತಿ ಪ್ರದೇಶಗಳನ್ನು ವರದಿಯಲ್ಲಿ ಸೇರಿಸಬಾರದು. ಡೀಮ್ಡ್ ಅರಣ್ಯ ಪ್ರದೇಶದ ಜೊತೆಗೆ ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನಷ್ಟೇ ಗುರುತಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಅನುಮೋದನೆ ಪ್ರಕ್ರಿಯೆ ಚುರುಕು

ಯೋಜನೆಯ ಡಿಪಿಆರ್‌ಗೆ ತಾಂತ್ರಿಕ ಅನುಮೋದನೆ ಪಡೆಯುವ ಪ್ರಕ್ರಿಯೆ ಚುರುಕುಗೊಂಡಿದೆ. ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿ, ಡಿಪಿಆರ್ ಸಿದ್ಧಪಡಿಸಲಾಗಿದೆ. ಯೋಜನೆಗಾಗಿ ಮುಳುಗಡೆಯಾಗಲಿರುವ 5,096 ಹೆಕ್ಟೇರ್ ಅರಣ್ಯ ಭೂಮಿಗೆ ಪರ್ಯಾಯವಾಗಿ ರಾಜ್ಯ ಸರ್ಕಾರದಿಂದ ಭೂಮಿ ನೀಡಬೇಕಿದ್ದು, ಕಂದಾಯ ಇಲಾಖೆಯು ಈಗಾಗಲೇ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಿದೆ. ಆದರೆ, ಅರಣ್ಯ ಬೆಳೆಸಲು ಅಗತ್ಯವಿರುವ 5 ಸಾವಿರ ಹೆಕ್ಟೇರ್ ಭೂಮಿಯನ್ನು ತ್ವರಿತವಾಗಿ ಒದಗಿಸಬೇಕಿದೆ ಎಂದು ಹೇಳಿದ್ದಾರೆ.

ಡೀಮ್ಡ್ ಅರಣ್ಯವು ಕಂದಾಯ ಇಲಾಖೆ ವ್ಯಾಪ್ತಿಗೆ ಸೇರುವುದರಿಂದ 1:2 ಅನುಪಾತದಲ್ಲಿ ಪರ್ಯಾಯ ಭೂಮಿ ನೀಡಲು ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ಅವಕಾಶಗಳಿವೆ. ಇಲಾಖೆ ಸಮ್ಮತಿಸಿದರೆ ಮಂಡ್ಯ ಜಿಲ್ಲೆಯೊಂದರಲ್ಲೇ ಲಭ್ಯವಿರುವ 30 ಸಾವಿರ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶದಿಂದಲೇ ಇಡೀ ಪರಿಹಾರದ ಭೂಮಿ ಒದಗಿಸುವ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಕಂದಾಯ ಇಲಾಖೆಯ ಭೂಮಿಯನ್ನಷ್ಟೆ ಪರಿಗಣಿಸಿದರೆ, ಯೋಜನೆಗಾಗಿ ಮುಳುಗಡೆಯಾಗಲಿರುವ ಪ್ರದೇಶದಷ್ಟೆ ಭೂಮಿ ನೀಡಲು ರಾಜ್ಯದ ಎಲ್ಲ ಜಿಲ್ಲೆಗಳು ಸಿದ್ದತೆ ಮಾಡಿಕೊಳ್ಳುವಂತೆ ಸಚಿವರು ಸೂಚನೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯಿಂದ 772 ಹೆಕ್ಟೇರ್ ಭೂಮಿ ನೀಡಲು ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಉಳಿದ ಭೂಮಿಗಾಗಿ ಡೀಮ್ಡ್ ಅರಣ್ಯವನ್ನೇ ಅವಲಂಬಿಸಬೇಕಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳು ಸಭೆಗೆ ವಿವರಿಸಿದ್ದಾರೆ. ಈಗಾಗಲೇ ಚಿತ್ರದುರ್ಗ, ರಾಯಚೂರು, ದಾವಣಗೆರೆ, ಬಾಗಲಕೋಟೆ, ಯಾದಗಿರಿ, ಹಾವೇರಿ, ಗದಗ, ವಿಜಯನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳು 'ಸಿ ಮತ್ತು ಡಿ' ದರ್ಜೆಯ ಜಮೀನುಗಳ ಸರ್ವೆ ನಡೆಸಿ ಲಭ್ಯವಿರುವ ಭೂಮಿಯ ವರದಿ ಸಲ್ಲಿಸಿವೆ. ಕಂದಾಯ ವ್ಯಾಪ್ತಿಯ ಭೂಮಿಗೆ ಮಂಡ್ಯ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಅದೇ ಮಾದರಿಯಲ್ಲಿ ಅರಣ್ಯ ಭೂಮಿ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸುವಂತೆ ಸೂಚಿಸಿದ್ಧಾರೆ.

ಮುಂದಿನ ವಾರ ದೆಹಲಿ ಭೇಟಿ

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇದೇ ತಿಂಗಳ 7ರಂದು ದೆಹಲಿಗೆ ಭೇಟಿ ನೀಡಲಿದ್ದು, 8 ರಂದು ಡೀಮ್ಡ್ ಅರಣ್ಯವನ್ನು ಪರಿಹಾರ ಭೂಮಿಯನ್ನಾಗಿ ಪರಿಗಣಿಸುವ ಬಗ್ಗೆ ಸ್ಪಷ್ಟನೆ ಸಿಗುವ ನಿರೀಕ್ಷೆಯಿದೆ. ಒಮ್ಮೆ ಒಪ್ಪಿಗೆ ದೊರೆತರೆ ವಿಳಂಬವಿಲ್ಲದೆ ತಕ್ಷಣವೇ ಭೂಮಿ ಹಸ್ತಾಂತರಿಸಬೇಕು. ಹಣಕಾಸಿನ ಅಗತ್ಯವಿದ್ದರೆ ನೀರಾವರಿ ನಿಗಮಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಸಚಿವರು, ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆಯ ನಿಯಮಾವಳಿಗಳನ್ನು ಕಿಂಚಿತ್ತೂ ಉಲ್ಲಂಘಿಸದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ತಿಳಿಸಿದ್ದಾರೆ.

ಮೇಕೆದಾಟು ಯೋಜನೆ ಸಂಬಂಧ ಮುಂದಿನ ಹತ್ತು ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ಅಷ್ಟರೊಳಗೆ ಎಲ್ಲ ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಒಟ್ಟಾಗಿ, ಭೂಮಿ ಸರ್ವೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ.

ಗೈರಾದ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ

ಮೇಕೆದಾಟು ಯೋಜನೆಗೆ ಆದಷ್ಟು ಶೀಘ್ರವಾಗಿ ಅಡಿಗಲ್ಲು ಹಾಕಲೇಬೇಕು ಎಂಬ ದೃಢ ಸಂಕಲ್ಪ ವ್ಯಕ್ತಪಡಿಸಿದ ಸಚಿವರು, ಸಭೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಈ ಯೋಜನೆಗೆ ಯಾವುದೇ ಹಂತದಲ್ಲೂ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ಪೂರ್ವ ಮಾಹಿತಿ ನೀಡದೆ ವಿಡಿಯೋ ಕಾನ್ಫರೆನ್ಸ್ಗೆ ಗೈರುಹಾಜರಾದ ಕೆಲವು ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ನೋಟಿಸ್ ಜಾರಿ ಮಾಡುವಂತೆ ಸರ್ಕಾರದ ಕಾರ್ಯದರ್ಶಿಗೆ ಖಡಕ್ ಸೂಚನೆ ನೀಡಿದ್ದಾರೆ.

ತಾವೂ ಸಹ ಮುಖ್ಯಮಂತ್ರಿಗಳೊಂದಿಗಿನ ಬರ ಪರಿಶೀಲನೆ ಕಾರ್ಯಕ್ರಮದ ನಡುವೆಯೂ, ಮೇಕೆದಾಟು ಯೋಜನೆಗೆ ಪ್ರಥಮ ಆದ್ಯತೆ ನೀಡಿ ಈ ಸಭೆ ನಡೆಸುತ್ತಿರುವುದಾಗಿ ತಿಳಿಸಿದ ಸಚಿವರು, ಅಧಿಕಾರಿಗಳಿಂದಲೂ ಅದೇ ಮಟ್ಟದ ಬದ್ಧತೆ ಹಾಗೂ ಕಾರ್ಯತತ್ಪರತೆ ನಿರೀಕ್ಷಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Read More
Next Story