ಮೇಕೆದಾಟು ಯೋಜನೆಗೆ ಸರ್ವ ಪಕ್ಷಗಳ ಬೆಂಬಲ; ಡಿಕೆಶಿಗೆ ಆನೆ ಬಲ
ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಮೇಕೆದಾಟು ಯೋಜನೆಗೆ ಬೆಂಬಲ ವ್ಯಕ್ತಪಡಿಸಿರುವುದು ಡಿಕೆಶಿಗೆ ರಾಜಕೀಯವಾಗಿ ದೊಡ್ಡ ಬಲ ನೀಡಿದ ಬೆಳವಣಿಗೆಯಾಗಿ ವಿಶ್ಲೇಷಿಸಲಾಗುತ್ತಿದೆ.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದ ಬೆನ್ನಲ್ಲೇ ಕಾವೇರಿ ನೀರು ಬಿಡುಗಡೆ ವಿವಾದ ಹಾಗೂ ತಮಿಳುನಾಡಿನ ತಗಾದೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಂದು ಕರೆದಿದ್ದ ಮಹತ್ವದ ಸರ್ವಪಕ್ಷ ಸಭೆಯಲ್ಲಿ 'ಮೇಕೆದಾಟು ಯೋಜನೆಯೇ ಏಕೈಕ ಶಾಶ್ವತ ಪರಿಹಾರ' ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ.
ಸಿಎಂ ಗೃಹ ಕಚೇರಿ 'ಕೃಷ್ಣ'ದಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ವಿವಿಧ ಪಕ್ಷಗಳ ಹಿರಿಯ ನಾಯಕರು ಹಾಗೂ ಕಾನೂನು ತಜ್ಞರು ಪಕ್ಷಬೇಧ ಮರೆತು ರಾಜ್ಯದ ಹಿತರಕ್ಷಣೆಗೆ ಒಂದಾದರು. ಬರ ಪರಿಸ್ಥಿತಿ ಎದುರಾದಾಗಲೆಲ್ಲ ಮರುಕಳಿಸುವ ಕಾವೇರಿ ವಿವಾದಕ್ಕೆ ಸಂಕಷ್ಟ ಸೂತ್ರಕ್ಕಿಂತ ಮೇಕೆದಾಟು ಸಮತೋಲನ ಜಲಾಶಯವೇ ಶಾಶ್ವತ ಉತ್ತರ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಂಕಷ್ಟದ ಸಂದರ್ಭದಲ್ಲಿ ಇದೇ ಜಲಾಶಯದಿಂದ ತಮಿಳುನಾಡಿಗೆ ಹಂಚಿಕೆಯಾಗಿರುವ ನೀರನ್ನು ಪೂರೈಸಲು ಸಾಧ್ಯವಾಗುವುದರಿಂದ, ಡಿಪಿಆರ್ನಲ್ಲಿರುವ ಲೋಪಗಳನ್ನು ತ್ವರಿತವಾಗಿ ಸರಿಪಡಿಸಿ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ಎಲ್ಲರೂ ಒಮ್ಮತದಿಂದ ಒತ್ತಾಯಿಸಿದರು. ಕಳೆದ ಹಲವು ವರ್ಷಗಳಿಂದ ಮೇಕೆದಾಟು ಯೋಜನೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿಲುವಿಗೆ ಈ ಸರ್ವಪಕ್ಷ ಸಭೆ ಬಹುತೇಕ ರಾಜಕೀಯ ಮುದ್ರೆ ಒತ್ತಿದಂತಾಗಿದೆ.
ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಮೇಕೆದಾಟು ಯೋಜನೆಗೆ ಬೆಂಬಲ ವ್ಯಕ್ತಪಡಿಸಿರುವುದು ಡಿಕೆಶಿಗೆ ರಾಜಕೀಯವಾಗಿ ದೊಡ್ಡ ಬಲ ನೀಡಿದ ಬೆಳವಣಿಗೆಯಾಗಿ ವಿಶ್ಲೇಷಿಸಲಾಗುತ್ತಿದೆ. ಯೋಜನೆಯ ಪರವಾಗಿ ಅವರು ಇಷ್ಟು ದಿನ ನಡೆಸುತ್ತಿದ್ದ ಹೋರಾಟಕ್ಕೆ ಈಗ ಸರ್ವಪಕ್ಷಗಳ ಬೆಂಬಲವೂ ಸಿಕ್ಕಿರುವುದರಿಂದ, ರಾಜ್ಯದ ಕಾವೇರಿ ಹೋರಾಟದ ಪ್ರಮುಖ ಮುಖವಾಗಿ ಅವರ ವರ್ಚಸ್ಸು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಕನ್ನಡ ನಾಡು-ನುಡಿ, ನೆಲ-ಜಲ ವಿಷಯ ಬಂದಾಗ ತಮಿಳುನಾಡಿನಂತೆ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಸರ್ಕಾರವನ್ನು ಬೆಂಬಲಿಸಿರುವುದು ಉತ್ತಮ ಬೆಳೆವಣಿಗೆ ಎನ್ನಲಾಗಿದೆ.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರು, ವರುಣನ ಕೃಪೆಯಿಂದಾಗಿ ಕಬಿನಿ ಜಲಾಶಯದ ಹೊರಹರಿವೇ ತಮಿಳುನಾಡಿನ ಬೇಡಿಕೆ ಪೂರೈಸುತ್ತಿದೆ. ಕಬಿನಿ ಹಾಗೂ ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಸಮಸ್ಯೆಯು ಕೊಂಚ ಮಟ್ಟಿಗೆ ರಿಲೀಫ್ ನೀಡಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಇಂದಿಗೂ ಮಳೆಕೊರತೆ ತೀವ್ರ ಇದೆ. ಪ್ರತಿ ಬಾರಿ ಬರ ಹಾಗೂ ತಮಿಳುನಾಡು ತಗಾದೆ ತೆಗೆಯುವ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವ ಬದಲು ಸಂಕಷ್ಟದ ದಿನಗಳಲ್ಲಿ ಹೇಗೆ ನೀರಿನ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರಗಳು ಯೋಚಿಸಬೇಕು. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಸೂಕ್ತವಾದ ಸಂಕಷ್ಟ ಪರಿಹಾರ ಸೂತ್ರ ಸಿದ್ಧಪಡಿಸಬೇಕು ಎಂದು ಹೇಳಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮೇಕೆದಾಟು ವಿಚಾರವಾಗಿ ಕೇಂದ್ರ ಸರ್ಕಾರ ಕರ್ನಾಟಕದ ಪರವಿದೆ. ಸಂಸತ್ ಅಧಿವೇಶನದಲ್ಲಿ ಡಿಎಂಕೆ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರವೇ ಇದಕ್ಕೆ ಸಾಕ್ಷಿ. ರಾಜ್ಯ ಸರ್ಕಾರ ಕೂಡಲೇ ಪರಿಷ್ಕೃತ ಡಿಪಿಆರ್ ಸಲ್ಲಿಸಬೇಕು. ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ತಮಿಳುನಾಡಿನಲ್ಲಿ ಬೆಳೆ ಬೆಳೆಯಲು ಹಾಗೂ ಕುಡಿಯಲು ಎಷ್ಟು ಬಳಸುತ್ತಾರೆ, ಕರ್ನಾಟಕದಲ್ಲಿ ಎಷ್ಟು ಬಳಸಲಾಗುತ್ತಿದೆ ಎಂಬುದರ ಬಗ್ಗೆ ಚರ್ಚೆಯಾಗಿದೆ. ಜತೆಗೆ ಸಂಕಷ್ಟ ಸೂತ್ರ ಜಾರಿಗೊಳಿಸಿ ಎರಡೂ ರಾಜ್ಯಗಳ ನಡುವೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತಾಗಿಯೂ ಚರ್ಚೆಯಾಗಿದೆ. ಡಿಪಿಆರ್ ತಾಂತ್ರಿಕ ನೂನ್ಯತೆ ಸರಿಪಡಿಸಲು ಸಲಹೆ ನೀಡಿದ್ದೇವೆ. ಈ ವಿಚಾರದಲ್ಲಿ ಸಿಎಂ ನಡೆ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಸಂಸದ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, CWMA ಆದೇಶದಿಂದ ಸಂಕಷ್ಟ ನಿವಾರಣೆಯಾಗಿದೆ. ಎಂಟು ವರ್ಷದ ದತ್ತಾಂಶ ನೋಡಿದರೆ ತ.ನಾಡಿಗೆ ಅಂದಾಜು 370 ಟಿಎಂಸಿ ಹರಿದು ಹೋಗಿದೆ. ಮೇಕೆದಾಟು ಜಲಾಶಯ ನಿರ್ಮಿಸಿದರೆ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಕೆಆರ್ ಎಸ್ ಶೇ 45 ರಷ್ಟು ಭರ್ತಿಯಾಗಿದೆ. ಕುಡಿಯುವ ನೀರಿಗಾಗಿ ಕೆಆರ್ ಎಸ್, ಹೇಮಾವತಿಯಿಂದ ಜಲಾಶಯದಿಂದ ತಕ್ಷಣಕ್ಕೆ ನೀರು ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯ ಸರ್ಕಾರ ರೈತರು ಹಾಗೂ ರಾಜ್ಯದ ಹಿತರಕ್ಷಣೆಗೆ ಮುಂದಾಗಬೇಕು. ನೆಲ ಜಲದ ವಿಚಾರದಲ್ಲಿ ಸರ್ಕಾರದ ನಡೆಯನ್ನು ನಾವೆಲ್ಲರೂ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಸರ್ವಪಕ್ಷಗಳ ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಕಾವೇರಿ ಕಣಿವೆಯಲ್ಲೇ ಹುಟ್ಟಿ ಬೆಳೆದ ನಾನೂ ಒಬ್ಬ ರೈತರ ಮಗನೇ. ರಾಜ್ಯದ 7.5 ಕೋಟಿ ಜನರ ಹಿತ ಕಾಯುವುದು ನನ್ನ ಕರ್ತವ್ಯ. ಈ ವಿಷಯದಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.
ತಮಿಳುನಾಡಿಗೆ ಪ್ರತಿ ದಿನ ಮೂರೂವರೆ ಸಾವಿರ ಕ್ಯುಸೆಕ್ ನೀರು 15 ದಿನಗಳ ಕಾಲ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶವಾಗಿ ಮಾರ್ಪಡಿಸಿತ್ತು. ತಮಿಳುನಾಡು ಸರ್ಕಾರ 9.5 ಟಿಎಂಸಿ ನೀರು ಬಿಡುವಂತೆ ವಾದಿಸಿತ್ತು. ಆದರೆ ರಾಜ್ಯದಲ್ಲಿ ಶೇ. 35ರಷ್ಟು ಮಾತ್ರ ಮಳೆಯಾಗಿದೆ. ಬರದ ಛಾಯೆಯಿಂದ ಈ ಆದೇಶ ಭಾರೀ ಸಂಕಟ ತಂದೊಡ್ಡಿದೆ. ಆದರೆ, ನಮ್ಮ ಕಷ್ಟ ಕಂಡು ಪ್ರಕೃತಿಯೇ ಸಮಸ್ಯೆಯನ್ನು ಹತೋಟಿಗೆ ತಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ
ಒಟ್ಟಾರೆ, ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ರೈತರ ಹಿತಾಸಕ್ತಿ ಮತ್ತು ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ದ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿ ತೀವ್ರ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಹಿರಿಯ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ವೈಜ್ಞಾನಿಕ ಮತ್ತು ನಿಖರವಾದ ಸಂಕಷ್ಟ ಸೂತ್ರ ರೂಪಿಸಲು ಜಲತಜ್ಞರು ಹಾಗೂ ತಾಂತ್ರಿಕ ತಜ್ಞರ ಸಲಹೆ ಪಡೆಯಲು ನಿರ್ಧರಿಸಲಾಗಿದೆ. ರಾಜ್ಯದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನಲ್ಲಿ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಜೊತೆಗೆ, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಅವರ ಸಹಕಾರ ಪಡೆಯುವ ಪ್ರಯತ್ನ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಪ್ರತಿಪಕ್ಷಗಳು ನೀಡಿದ ಸಲಹೆಗಳನ್ನು ಪರಿಗಣಿಸಿ, ಪಕ್ಷಾತೀತವಾಗಿ ಎಲ್ಲರೂ ಒಮ್ಮತದ ನಿಲುವಿನೊಂದಿಗೆ ಮುಂದಿನ ಹೋರಾಟ ಮತ್ತು ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

