x

ಮೇಕೆದಾಟು ಯೋಜನೆ ತಡೆಯಲು ತಮಿಳುನಾಡು ಸಿಎಂ ಯಾರು?: ನೀರಾವರಿ ತಜ್ಞ ಕ್ಯಾಪ್ಟನ್ ರಾಜರಾವ್

ಮೇಕೆದಾಟು ಯೋಜನೆಗೆ ಹೊಸದಾಗಿ ಯಾರ ಅನುಮತಿಯೂ ಬೇಕಿಲ್ಲ. 1924ರ ಒಪ್ಪಂದದಲ್ಲೇ ಈ ಯೋಜನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ


Click the Play button to hear this message in audio format

ಮೇಕೆದಾಟು ಯೋಜನೆಗೆ 1924ರಲ್ಲೇ ಬ್ರಿಟೀಷ್ ಸರ್ಕಾರದ ಅವಧಿಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಈ ಯೋಜನೆಯನ್ನು ತಡೆಯಲು ತಮಿಳುನಾಡು ಮುಖ್ಯಮಂತ್ರಿ ಯಾವ ದೊಣ್ಣೆನಾಯಕ ಎಂದು ಖ್ಯಾತ ನೀರಾವರಿ ತಜ್ಞ ಕ್ಯಾಪ್ಟನ್ ರಾಜರಾವ್ ಖಾರವಾಗಿ ಪ್ರಶ್ನಿಸಿದ್ದಾರೆ.

'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡು ಮೇಕೆದಾಟು ಯೋಜನೆ ಹಾಗೂ ಬರಗಾಲದಲ್ಲಿ ನೀರಿನ ನಿರ್ವಹಣೆ ಕುರಿತು ಅವರು ಸವಿವರವಾಗಿ ಮಾತನಾಡಿದರು. ಯೋಜನೆಯ ಅಗತ್ಯ ಮತ್ತು ಪ್ರಸ್ತುತ ಜಲ ಬಿಕ್ಕಟ್ಟಿನ ಕುರಿತು ಅವರು ಬಿಚ್ಚಿಟ್ಟ ಪ್ರಮುಖ ಅಂಶಗಳು ಇಲ್ಲಿವೆ.

ತಮಿಳುನಾಡಿಗೆ ತಕ್ಕ ಪ್ರತ್ಯುತ್ತರ ಅಗತ್ಯ

"ಮೇಕೆದಾಟು ಯೋಜನೆ ಪ್ರಸ್ತಾಪವಾಗಿ 1924ರಲ್ಲೇ ಒಪ್ಪಿಗೆ ದೊರೆತಿದೆ. ಇದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳೂ ಲಭ್ಯವಿವೆ. ತಮಿಳುನಾಡು ಸರ್ಕಾರ ಹಾಗೂ ಅವರ ವಕೀಲರು ಈ ಸತ್ಯವನ್ನು ಗಮನಿಸಬೇಕು. ಪ್ರಸ್ತುತ ನಮ್ಮ ರಾಜ್ಯದಿಂದ ಹರಿದು ಹೋಗುವ ಹೆಚ್ಚುವರಿ ನೀರನ್ನು ತಮಿಳುನಾಡು ತನ್ನ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದೆ. ಕಾವೇರಿ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ನೀಡಿರುವ ಕೆಲವು ತೀರ್ಪುಗಳು ಸಂಪೂರ್ಣವಾಗಿ ನಮ್ಮ ರಾಜ್ಯದ ಪರವಾಗಿಯೇ ಇವೆ. ವಾಸ್ತವವಾಗಿ ನಮ್ಮಲ್ಲಿ ಮಳೆ ಕಡಿಮೆಯಾದಾಗ ನಾವು ತಮಿಳುನಾಡಿಗೆ ನೀರು ಬಿಡುವ ಅಗತ್ಯವಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ರಾಜ್ಯ ಸರ್ಕಾರ ಅನುಮತಿ ಕೋರಿದಾಗ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಆದರೆ, ಇಷ್ಟಕ್ಕೇ ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳಬಾರದು. ಕಾಯ್ದೆಯಲ್ಲಿರುವ ನಿಯಮಗಳ ಅನ್ವಯ ಸೂಕ್ತ ಮೇಲ್ಮನವಿ ಸಲ್ಲಿಸಿ, ಕಾನೂನು ಹೋರಾಟ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

ಬರಗಾಲ ನಿರ್ವಹಣೆ: 'ಗಡ್ಡಕ್ಕೆ ಬೆಂಕಿ ಬಿದ್ದಾಗ ನೀರು ಹುಡುಕುವುದಲ್ಲ'

ಬರಗಾಲದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಕುರಿತು ಮಾತನಾಡಿದ ಅವರು, ಜಲಾಶಯಗಳಲ್ಲಿನ ಡೆಡ್ ಸ್ಟೋರೇಜ್ (ಕನಿಷ್ಠ ಸಂಗ್ರಹ) ನೀರನ್ನು ಬಳಸಲು ಅವಕಾಶವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

"ಗಡ್ಡಕ್ಕೆ ಬೆಂಕಿ ಬಿದ್ದಾಗ ನೀರು ಹುಡುಕುವ ಕೆಲಸವನ್ನು ಸರ್ಕಾರ ಮಾಡಬಾರದು. ಮುನ್ನೆಚ್ಚರಿಕಾ ಕ್ರಮವಾಗಿ ನೀರು ಸಂಗ್ರಹಣಾ ಘಟಕಗಳನ್ನು ನಿರ್ಮಿಸಬೇಕು. ಪರ್ಯಾಯವಾಗಿ, ಸೋಮವಾರಪೇಟೆ ಬಳಿಯ ಕುಂಗನಹೊಳೆ ಹಾಗೂ ಕೊಕ್ಕತಹೊಳೆಯಿಂದ ನೀರು ತರಲು ಮುಕ್ತ ಅವಕಾಶವಿದೆ. ಈ ಕುರಿತು ಸರ್ಕಾರಕ್ಕೆ ಈ ಹಿಂದೆಯೇ ವಿಸ್ತೃತ ವರದಿ ಸಲ್ಲಿಸಲಾಗಿದೆ. ಸರ್ಕಾರ ಇತ್ತ ಗಮನಹರಿಸಬೇಕು" ಎಂದು ಸಲಹೆ ನೀಡಿದರು.

ಕಾಂಕ್ರೀಟ್ ನಾಡಾದರೆ ಬೆಂಗಳೂರಿಗೆ ಜಲಕಂಟಕ

ಬೆಂಗಳೂರಿನಲ್ಲಿ ಅಂತರ್ಜಲ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕ್ಯಾಪ್ಟನ್ ರಾಜರಾವ್, ನಗರದಲ್ಲಿ ಕಾಂಕ್ರೀಟೀಕರಣವನ್ನು ನಿಯಂತ್ರಿಸುವ ತುರ್ತು ಅಗತ್ಯವನ್ನು ಪ್ರತಿಪಾದಿಸಿದರು. "ಪ್ರತಿ ಕಟ್ಟಡಗಳ ಮುಂಭಾಗವನ್ನು ಸಂಪೂರ್ಣವಾಗಿ ಕಾಂಕ್ರೀಟ್‌ನಿಂದ ಮುಚ್ಚುವ ಬದಲು, ನೀರು ಇಂಗಲು ಮಣ್ಣಿನ ಜಾಗವನ್ನು ಬಿಡಬೇಕು. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಲಿದೆ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು. ಬೆಂಗಳೂರು ಇದೇ ರೀತಿ ಕಾಂಕ್ರೀಟ್ ನಾಡಾಗಿ ಬೆಳೆಯುತ್ತಾ ಹೋದರೆ ಭವಿಷ್ಯದಲ್ಲಿ ಕುಡಿಯುವ ನೀರಿಗೂ ಭಾರಿ ತತ್ವಾರ ಎದುರಾಗಲಿದೆ" ಎಂದು ಎಚ್ಚರಿಕೆ ನೀಡಿದರು.

Read More
Next Story