ಸಿಬಿಎಸ್‌ಇ ವಿರುದ್ಧ ಸಿಡಿದೆದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಆದೇಶ ಹಿಂಪಡೆಯಲು ಒತ್ತಾಯ
x

ಸಿಬಿಎಸ್‌ಇ ವಿರುದ್ಧ ಸಿಡಿದೆದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಆದೇಶ ಹಿಂಪಡೆಯಲು ಒತ್ತಾಯ

ಸಿಬಿಎಸ್‌ಇ ಮಂಡಳಿಯು ತನ್ನ ಅಧೀನದಲ್ಲಿರುವ ಶಾಲೆಗಳ ಮುಖ್ಯಸ್ಥರಿಗೆ ಸುತ್ತೋಲೆಯನ್ನು ಕಳುಹಿಸಿದೆ. 2015ರಿಂದ ಕರ್ನಾಟಕದಲ್ಲಿರುವ ಕನ್ನಡ ಭಾಷಾ ಕಲಿಕಾ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಲಾಗಿದೆ.


Click the Play button to hear this message in audio format

ಕರ್ನಾಟಕದಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಭಾಷೆಯನ್ನು ಕಲಿಯಬೇಕು ಎಂಬುದು ರಾಜ್ಯದ ಸ್ಪಷ್ಟ ನೀತಿ. ಆದರೆ, ಇತ್ತೀಚೆಗೆ ಸಿಬಿಎಸ್‌ಇ ಮಂಡಳಿ ಹೊರಡಿಸಿರುವ ಹೊಸ ಆದೇಶವು ಕನ್ನಡ ಭಾಷಾ ಕಲಿಕಾ ಕಾಯ್ದೆಗೆ ಪೆಟ್ಟು ನೀಡುವಂತಿದ್ದು, ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಪತ್ರ ಬರೆದು, ಕೇಂದ್ರ ಮಂಡಳಿಯ ಏಕಪಕ್ಷೀಯ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಸಿಬಿಎಸ್‌ಇ ಮಂಡಳಿಯು ತನ್ನ ಅಧೀನದಲ್ಲಿರುವ ಎಲ್ಲಾ ಶಾಲೆಗಳ ಮುಖ್ಯಸ್ಥರಿಗೆ ಒಂದು ಸುತ್ತೋಲೆಯನ್ನು ಕಳುಹಿಸಿದೆ. ಈ ಸುತ್ತೋಲೆಯು 2015ರಿಂದ ಕರ್ನಾಟಕದಲ್ಲಿ ಜಾರಿಯಲ್ಲಿರುವ ಕನ್ನಡ ಭಾಷಾ ಕಲಿಕಾ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಲಾಗಿದೆ. ರಾಜ್ಯದ ಕಾನೂನುಗಳನ್ನು ಗೌರವಿಸದ ಈ ಆದೇಶವು ಕನ್ನಡದ ಅಸ್ಮಿತೆಗೆ ಧಕ್ಕೆ ತರುವಂತಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮೊದಲ ಅಥವಾ ಎರಡನೇ ಭಾಷೆಯಾಗಿ ಕಲಿಸುವುದು ಕಡ್ಡಾಯ. ರಾಜ್ಯದ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಆದರೆ, ಸಿಬಿಎಸ್‌ಇ ಮಂಡಳಿಯು ರಾಜ್ಯ ಸರ್ಕಾರದೊಂದಿಗೆ ಯಾವುದೇ ಚರ್ಚೆ ನಡೆಸದೆ, ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವ ವಿಷಯ ಎಂಬ ಸತ್ಯವನ್ನು ಮರೆತು ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಅಕ್ಷಮ್ಯ ಎಂದು ಟೀಕಿಸಿದ್ದಾರೆ.


ಎನ್.ಒ.ಸಿ. ನಿಯಮಗಳ ಬಿಗಿ ಹಿಡಿತಕ್ಕೆ ಆಗ್ರಹ

ರಾಜ್ಯದಲ್ಲಿ ಸಿಬಿಎಸ್‌ಇ ಶಾಲೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಒಮ್ಮೆ ಶಾಲೆಗಳಿಗೆ ನಿರಾಕ್ಷೇಪಣಾ ಪತ್ರ ನೀಡಿದ ನಂತರ, ಶಿಕ್ಷಣ ಇಲಾಖೆಯ ನಿಯಂತ್ರಣ ಆ ಶಾಲೆಗಳ ಮೇಲೆ ಕಡಿಮೆಯಾಗುತ್ತಿದೆ. ಇದನ್ನು ಬಳಸಿಕೊಂಡು ಹಲವು ಖಾಸಗಿ ಶಾಲೆಗಳು ಕನ್ನಡ ಕಲಿಕೆಯನ್ನು ಕಡೆಗಣಿಸುತ್ತಿವೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಎನ್.ಒ.ಸಿ. ನಿಯಮಗಳನ್ನು ಸಂಪೂರ್ಣವಾಗಿ ಪರಿಷ್ಕರಿಸಬೇಕು. ಕರ್ನಾಟಕದಲ್ಲಿರುವ ಎಲ್ಲಾ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಬೇಕು. ಇದನ್ನು ಯಾವುದೇ ಕಾರಣಕ್ಕೂ ಬದಿಗಿಡದಂತೆ ನೋಡಿಕೊಳ್ಳಬೇಕು. ಶಾಲೆಗಳಿಗೆ ನೀಡುವ ಎನ್.ಒ.ಸಿ.ಯನ್ನು ಶಾಶ್ವತವಾಗಿರದೆ, ವಾರ್ಷಿಕ ನವೀಕರಣಕ್ಕೆ ಒಳಪಡಿಸಬೇಕು. ಕನ್ನಡ ಬೋಧನೆ, ಶಿಕ್ಷಕರ ನೇಮಕಾತಿ ಮತ್ತು ಮಕ್ಕಳ ಆಯ್ಕೆಯ ಸಂಪೂರ್ಣ ವರದಿಯನ್ನು ಪರಿಶೀಲಿಸಿದ ನಂತರವೇ ನವೀಕರಣ ನೀಡಬೇಕು. ಕನ್ನಡದ ಕಡ್ಡಾಯ ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳ ಎನ್.ಒ.ಸಿ.ಯನ್ನು ತಕ್ಷಣವೇ ರದ್ದುಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ತನ್ನ ಬಳಿ ಇಟ್ಟುಕೊಳ್ಳಬೇಕು. ಕನ್ನಡವನ್ನು ಕೇವಲ ಪಠ್ಯಕ್ರಮದಲ್ಲಿ ಸೇರಿಸಿದರೆ ಸಾಲದು, ಅರ್ಹ ಶಿಕ್ಷಕರನ್ನು ನೇಮಿಸುವುದು ಕಡ್ಡಾಯವಾಗಬೇಕು. ಮಕ್ಕಳಿಗೆ ಸಮರ್ಪಕವಾಗಿ ಕನ್ನಡ ಬೋಧನೆ ನಡೆಯುತ್ತಿದೆಯೇ ಎಂಬುದು ಮುಖ್ಯ. ರಾಜ್ಯದ ಭಾಷಾ ನೀತಿಯನ್ನು ಉಲ್ಲಂಘಿಸುವ ಶಾಲೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತಜ್ಞರ ಸಮಿತಿಯೊಂದನ್ನು ರಚಿಸಿ, ಆ ಮೂಲಕ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಜವಾಬ್ದಾರಿ

ರಾಜ್ಯದ ಭೂಮಿಯಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ನಾಡಿನ ಭಾಷೆಯೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಸಿಬಿಎಸ್‌ಇ ಮಂಡಳಿಯು ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು. ಒಂದು ವೇಳೆ ಕೇಂದ್ರ ಮಂಡಳಿಯು ಹಠಮಾರಿ ಧೋರಣೆ ಮುಂದುವರಿಸಿದರೆ, ಕಾನೂನುಬದ್ಧವಾಗಿ ಮತ್ತು ಸಾಂವಿಧಾನಿಕವಾಗಿ ರಾಜ್ಯ ಸರ್ಕಾರ ದೃಢವಾದ ನಿಲುವು ತಳೆಯಬೇಕು ಎಂದು ಒತ್ತಾಯಿಸಿದ್ದಾರೆ.

ಭಾಷಾ ವಿಷಯದಲ್ಲಿ ಕೇಂದ್ರದ ಮಂಡಳಿಗಳು ರಾಜ್ಯದ ಕಾನೂನುಗಳನ್ನು ಗೌರವಿಸದಿರುವುದು ಹೊಸತೇನಲ್ಲ. ಆದರೆ, ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ, ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕನ್ನಡವನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಪೋಷಕರು ಕೂಡ ತಮ್ಮ ಮಕ್ಕಳು ಕನ್ನಡ ಕಲಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದಿದ್ದಾರೆ.

Read More
Next Story