
ಮಹಾತ್ಮಗಾಂಧೀಜಿ (ಸಂಗ್ರಹ ಚಿತ್ರ)
ಸರಳತೆಯ ಸಾಕಾರಮೂರ್ತಿ ಗಾಂಧೀಜಿ ಹೆಸರಲ್ಲಿ ಕೋಟಿ ಕೋಟಿ ಖರ್ಚು!
ʼಗ್ರಾಮೋದ್ಯೋಗʼ ಕ್ಕೆ ಒತ್ತು ನೀಡಿದ್ದ ಮಹಾತ್ಮ ಗಾಂಧೀಜಿ ಅವರನ್ನೇ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕೋಟಿಗಟ್ಟಲೆ ಹಣ ವ್ಯಯಿಸುತ್ತಿರುವುದು ಸರಳಜೀವಿ ಗಾಂಧೀಜಿಯ ಆಶಯಗಳಿಗೆ ವೈರುಧ್ಯವಾಗಿದೆ.
ಸತ್ಯ, ಅಹಿಂಸೆ ಪ್ರತಿಪಾದಕ, ಸರಳತೆಯ ಪ್ರತೀಕದಂತಿದ್ದ ಮಹಾತ್ಮ ಗಾಂಧೀಜಿ ಅವರ ಆಶಯಗಳು ನವ ಸಮಾಜದಲ್ಲಿ ಬೆಲೆ ಕಳೆದುಕೊಳ್ಳುತ್ತಿವೆ. ಬಡಕಲು ದೇಹ, ಮೈಮೇಲೆ ಅರೆಬಟ್ಟೆ ತೊಟ್ಟು, ಊರುಗೋಲು ಹಿಡಿದು ಹಿಂಸೆಗೆ ಚರಮಗೀತೆ ಹಾಡಿದ್ದ ಗಾಂಧೀಜಿ ಅವರು ಧ್ಯೇಯಗಳು ರಾಜಕೀಯ ದಾಳವಾಗಿ ಬಳಕೆಯಾಗುತ್ತಿವೆ. ʼಗ್ರಾಮೋದ್ಯೋಗʼಕ್ಕೆ ಒತ್ತು ನೀಡಿದ್ದ ಗಾಂಧೀಜಿ ಹೆಸರಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕೋಟಿಗಟ್ಟಲೆ ಹಣ ವ್ಯರ್ಥ ಮಾಡುತ್ತಿರುವುದು ಅವರ ಸರಳತೆಯನ್ನು ಅಣಕಿಸುವಂತಿದೆ.
ಗಾಂಧೀಜಿ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಗಾಂಧಿ ಮೂಲಕವೇ ಬಿಜೆಪಿಗೆ ಠಕ್ಕರ್ ನೀಡಲು ಕೋಟಿಗಟ್ಟಲೇ ಸಾರ್ವಜನಿಕರ ತೆರಿಗೆ ಹಣ ಖರ್ಚು ವ್ಯಯಿಸುತ್ತಿದ್ದಾರೆ. ಇದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಷ್ಟ್ರೀಯವಾದಿ ಪಕ್ಷ ಬಿಜೆಪಿ, ಅಹಿಂಸವಾದಿ ಗಾಂಧಿ ಮೂಲಕವೇ ಕಾಂಗ್ರೆಸ್ ನಾಯಕರಿಗೆ ದೊಣ್ಣೆಯಿಂದ ಹೊಡೆಯುವಂತಹ ಜಾಹಿರಾತು ನೀಡಿ ಅಹಿಂಸಾತತ್ವವನ್ನೇ ಮರೆತು, ಹಿಂಸೆಗೆ ಪ್ರಚೋದಿಸಿದೆ.
"ಗಾಂಧೀಜಿ ಅನುಯಾಯಿಗಳು ಎನ್ನುವ ಕಾಂಗ್ರೆಸ್ ನಾಯಕರು ಗಾಂಧಿ ಅವರಂತೆ ಸರಳ ಜೀವನ ನಡೆಸುತ್ತಿದ್ದಾರೆಯೇ?, ಅವರ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿರುವ ಇಂತಹವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?, ಅವರ ಅನುಕೂಲಕ್ಕೆ ತಕ್ಕಂತೆ ಗಾಂಧಿಯನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಇಂದಿನ ತಲೆಮಾರಿಗೆ ಗಾಂಧೀಜಿಯವರು ಮಹಾತ್ಮನಂತೆ ಕಾಣದೇ ಬೇರೆ ಬೇರೆ ರೀತಿಯಲ್ಲಿ ಟ್ರೋಲ್ ಆಗುತ್ತಿದ್ದಾರೆ. ಸರಳ ಜೀವನದ ಗಾಂಧಿ ಆಶಯಗಳು ಜಾಹೀರಾತು ಮೂಲಕ ದುಬಾರಿಯಾಗಿಬಿಟ್ಟಿವೆ" ಎಂದು ಗಾಂಧಿ ಅನುಯಾಯಿ ರುದ್ರಪ್ಪ "ದ ಫೆಡರಲ್ ಕರ್ನಾಟಕ"ದೊಂದಿಗೆ ಬೇಸರ ವ್ಯಕ್ತಪಡಿಸಿದರು.
ಗಲಾಟೆ ಯಾಕೆ?
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಈ ಎರಡೂ ವೈರುಧ್ಯಗಳಿಗೆ ಕಾರಣವಾಗಿದ್ದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ʼವಿಬಿ-ಜಿ ರಾಮ್ ಜಿʼ ಯೋಜನೆ. ಈ ಯೋಜನೆಯು ಮೊದಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಎಂಬ ಹೆಸರಿನಲ್ಲಿತ್ತು. ಕೇಂದ್ರ ಸರ್ಕಾರ ಯೋಜನೆಯ ಸ್ವರೂಪ, ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸಿದೆ. ಈಗ ಇದೇ ಯೋಜನೆ ಉಭಯ ಪಕ್ಷಗಳ ಮಧ್ಯೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ತಂದಿರುವ ಹೊಸ ಯೋಜನೆ ಟೀಕಿಸುವ ಸಲುವಾಗಿ ಫೆ.3 ರಂದು ಕಾಂಗ್ರೆಸ್ ಸರ್ಕಾರವು ರಾಜ್ಯದ ಕನ್ನಡ, ಇಂಗ್ಲಿಷ್ ಸೇರಿದಂತೆ ಬಹುತೇಕ ಎಲ್ಲ ಪತ್ರಿಕೆಗಳಿಗೂ ಮುಖಪುಟದ ಜಾಹಿರಾತು ನೀಡಿತ್ತು.
ಗಾಂಧೀಜಿ ಮೂಲಕವೇ ಬಿಜೆಪಿಯವರನ್ನು ಪರೋಕ್ಷವಾಗಿ ʼಸಂಘಪ್ಪʼ ಎಂದು ಮೂದಲಿಸಿತ್ತು. (ಆರ್‌ಎಸ್‌ಎಸ್- ಸಂಘ ಪರಿವಾರ). ಇದಕ್ಕೆ ಪ್ರತಿಯಾಗಿ ಶುಕ್ರವಾರ (ಫೆ.6) ಬಿಜೆಪಿ ಪಕ್ಷದ ವತಿಯಿಂದ ನೀಡಿದ ಜಾಹೀರಾತಿನಲ್ಲಿ ಕಾಂಗ್ರೆಸ್ ನಾಯಕರನ್ನು ಗಾಂಧೀಜಿ ಅವರೇ ದೊಣ್ಣೆಯಿಂದ ಹೊಡೆಯುವಂತೆ ತೋರಿಸಲಾಗಿದೆ.
ಈ ಜಾಹೀರಾತುಗಳಿಗೆ ಎರಡೂ ಪಕ್ಷಗಳು ಕೋಟಿ ಕೋಟಿ ಹಣ ಖರ್ಚು ಮಾಡಿರುವುದೇ ವಿಪರ್ಯಾಸ. ದೇಶದ ಕೋಟ್ಯಂತರ ಜನರಿಗೆ ಮೈತುಂಬಾ ಬಟ್ಟೆ ಧರಿಸುವ ಶಕ್ತಿಯಿಲ್ಲದಿರುವಾಗ, ತಾನು ಮಾತ್ರ ಐಷಾರಾಮಿ ಬಟ್ಟೆ ಧರಿಸುವುದು ಸರಿಯಲ್ಲ ಎಂಬ ನಿಲುವಿಗೆ ಅಂಟಿಕೊಂಡೇ ಗಾಂಧೀಜಿಯವರು ಅರೆಬೆತ್ತಲೆಯಾಗಿ ಅಹಿಂಸಾತ್ಮಕ ಹೋರಾಟ ಮಾಡಿದ್ದರು.
ಎಷ್ಟಿದೆ ಜಾಹೀರಾತು ದರ?
ಪತ್ರಿಕೆಗಳ ಬ್ರ್ಯಾಂಡ್ ಹಾಗೂ ಪ್ರಸರಣ ಸಂಖ್ಯೆಯ ಆಧಾರದ ಮೇಲೆ ಜಾಹೀರಾತು ದರ ನಿಗದಿಯಾಗಲಿದೆ. ಅದರಲ್ಲೂ ಸರ್ಕಾರಿ ದರವು ಸಾಮಾನ್ಯ ದರದ ಜಾಹೀರಾತಿಗಿಂತ ಹೆಚ್ಚಾಗಿಯೇ ಇರಲಿದೆ. ಕನ್ನಡದ ರಾಜ್ಯಮಟ್ಟದ ಪತ್ರಿಕೆಯಲ್ಲಿ ಪೂರ್ಣಪುಟದ ಜಾಹೀರಾತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ದರ ಪಟ್ಟಿಯಂತೆ ಅಂದಾಜು10 ಲಕ್ಷ ರೂ. ನೀಡಬೇಕು. ಇಂಗ್ಲಿಷ್ ಪತ್ರಿಕೆಗೆ ಕನಿಷ್ಟ 13 ರಿಂದ 14 ಲಕ್ಷ ರೂ. ಪಾವತಿಸಬೇಕು. ಇನ್ನುಳಿದಂತೆ ಪ್ರಾದೇಶಿಕ, ಜಿಲ್ಲಾ ಮಟ್ಟದ ಪತ್ರಿಕೆಗಳನ್ನು ಲೆಕ್ಕಹಾಕಿದರೆ ಒಂದು ದಿನದ ಜಾಹೀರಾತಿಗೆ ರಾಜ್ಯ ಸರ್ಕಾರ ಕನಿಷ್ಠ 2 ಕೋಟಿಗೂ ಅಧಿಕ ಹಣ ವ್ಯಯಿಸಿದೆ. ರಾಜ್ಯ, ಪ್ರಾದೇಶಿಕ, ಜಿಲ್ಲಾ ಮಟ್ಟದ ಪತ್ರಿಕೆಗಳು ಸೇರಿ ವಾರ್ತಾ ಇಲಾಖೆಯ ಮಾನ್ಯತೆ ಪಡೆದ 1 ಸಾವಿರಕ್ಕೂ ಹೆಚ್ಚಿನ ಪತ್ರಿಕೆಗಳಿವೆ ಎಂದು ಅಂದಾಜಿಸಬಹುದು. ಈ ಎಲ್ಲ ಪತ್ರಿಕೆಗಳಿಗೂ ಸೇರಿ ರಾಜ್ಯ ಸರಕಾರ ಕೋಟಿಗಟ್ಟಲೆ ಹಣ ಸುರಿದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಗಾಂಧೀಜಿ ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ಅವರು ಎಂದಿಗೂ ದುಂದು ವೆಚ್ಚಕ್ಕೆ ಪ್ರೋತ್ಸಾಹ ನೀಡಲಿಲ್ಲ. ದುಡ್ಡು ವೆಚ್ಚ ಮಾಡಿಕೊಂಡು ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳಲಿಲ್ಲ. ತಮ್ಮ ಶ್ರೀಮಂತಿಕೆಯನ್ನು ತ್ಯಜಿಸಿ ಖಾದಿ ವಸ್ತ್ರಗಳನ್ನು ಧರಿಸಿ ಮಹಾತ್ಮ ಎನಿಸಿಕೊಂಡವರು. ಅವರ ಹೆಸರನ್ನು ಉಳಿಸುವ ಕಾಂಗ್ರೆಸ್ ಸರ್ಕಾರದ ಉದ್ದೇಶವೇನೂ ಸರಿ ಇದೆ. ಅದಕ್ಕೆ ಗಾಂಧೀಜಿ ಅವರ ಹಾಕಿಕೊಟ್ಟ ಹಲವು ಮಾರ್ಗಗಳಿವೆ. ಅವೆಲ್ಲವನ್ನೂ ಬಿಟ್ಟು ಅವರ ಹೆಸರಲ್ಲಿ ಜಾಹೀರಾತಿಗೆ ಕೋಟಿಗಟ್ಟಲೆ ಸುರಿದು, ವಿರೋಧಿಗಳ ಕೈಯಲ್ಲಿ ಗಾಂಧಿಗೆ ಇನ್ನಷ್ಟು ಅಪಮಾನ ಮಾಡಿಸಿದ್ದ ಶುದ್ಧ ತಪ್ಪು ಎಂದು ಬೆಂಗಳೂರಿನ ಬಸವನಗುಡಿಯ ಚೇತನ್ ಎಂಬುವರು ಅಭಿಪ್ರಾಯಪಟ್ಟಿದ್ದಾರೆ.

