ಮಡಿಕೇರಿ ರಾಜಾಸೀಟ್‌ಗೆ 15 ದಿನ ಬೀಗ; ಪ್ರವಾಸಿಗರಿಗೆ ನಿರಾಸೆ, ವ್ಯಾಪಾರಕ್ಕೆ ಹೊಡೆತ
x

ಮಡಿಕೇರಿಯ ಪ್ರಸಿದ್ಧ ರಾಜಾಸೀಟ್‌ಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ 15 ದಿನ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರವಾಸಿಗರಿಗೆ ನಿರಾಸೆ, ವ್ಯಾಪಾರಿಗಳಿಗೆ ನಷ್ಟದ ಆತಂಕ ಎದುರಾಗಿದೆ.

ಮಡಿಕೇರಿ ರಾಜಾಸೀಟ್‌ಗೆ 15 ದಿನ ಬೀಗ; ಪ್ರವಾಸಿಗರಿಗೆ ನಿರಾಸೆ, ವ್ಯಾಪಾರಕ್ಕೆ ಹೊಡೆತ

ಕಳೆದ ಒಂದು ವರ್ಷದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು. ರಸ್ತೆಯ ದುಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.


Click the Play button to hear this message in audio format

ಕೊಡಗು ಜಿಲ್ಲೆಯ ಮಡಿಕೇರಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ರಾಜಾಸೀಟ್‌ಗೆ ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಸುಮಾರು 10 ವರ್ಷಗಳ ಬಳಿಕ ರಾಜಾಸೀಟ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಜಿಲ್ಲಾಡಳಿತ, ಮುಂದಿನ 15 ದಿನಗಳ ಕಾಲ ಪ್ರವಾಸಿಗರ ಪ್ರವೇಶವನ್ನು ಬಂದ್ ಮಾಡಿದೆ. ಇದರಿಂದ ರಾಜಾಸೀಟ್‌ನ ಸುಂದರ ಪ್ರಕೃತಿ, ಬಣ್ಣಬಣ್ಣದ ಕಾರಂಜಿ ಹಾಗೂ ಮನಮೋಹಕ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೆ ನಿರಾಸೆಯಾಗಿದೆ. ಮತ್ತೊಂದೆಡೆ, ರಸ್ತೆ ಬದಿಯ ವ್ಯಾಪಾರಿಗಳಿಗೂ ನಷ್ಟದ ಆತಂಕ ಎದುರಾಗಿದೆ.

10 ವರ್ಷಗಳ ಬಳಿಕ ರಾಜಾಸೀಟ್ ರಸ್ತೆ ಅಭಿವೃದ್ಧಿ

ಮಡಿಕೇರಿ ನಗರದ ಪ್ರಮುಖ ರಸ್ತೆಗಳಲ್ಲೊಂದಾದ ರಾಜಾಸೀಟ್ ರಸ್ತೆ ಕಳೆದ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿತ್ತು. ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಾಸೀಟ್, ಹೊಸ ಬಸ್ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಕಳೆದ 10 ವರ್ಷಗಳಿಂದ ಸಮರ್ಪಕ ಡಾಂಬರೀಕರಣ ನಡೆದಿರಲಿಲ್ಲ. ಆಗಾಗ್ಗೆ ತೇಪೆ ಹಾಕುವ ಮೂಲಕ ದುರಸ್ತಿ ಮಾಡಲಾಗುತ್ತಿತ್ತು.

ಕಳೆದ ಒಂದು ವರ್ಷದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು. ರಸ್ತೆಯ ದುಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಜಿಲ್ಲಾಡಳಿತ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು, ಜಿಲ್ಲಾಧಿಕಾರಿ ಕಚೇರಿಯ ಹೆಬ್ಬಾಗಿಲಿನಿಂದ ಕುಂದುರುಮೊಟ್ಟೆ ದೇವಾಲಯದವರೆಗಿನ ಸುಮಾರು ಒಂದು ಕಿಲೋಮೀಟರ್ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲಾಗುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ರಾಜಾಸೀಟ್ ಪ್ರವೇಶ ಬಂದ್; ಪ್ರವಾಸಿಗರಿಗೆ ನಿರಾಸೆ

ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದವರೆಗೂ ರಾಜಾಸೀಟ್ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ. ಮಕ್ಕಳ ಉದ್ಯಾನವನ, ಬಣ್ಣದ ಕಾರಂಜಿ ಹಾಗೂ ಸೂರ್ಯಾಸ್ತದ ಸೊಬಗು ವೀಕ್ಷಿಸಲು ಬರುವ ಪ್ರವಾಸಿಗರು ಸದ್ಯ ರಾಜಾಸೀಟ್‌ಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಮುಖ ಪ್ರವಾಸಿ ತಾಣವನ್ನೇ 15 ದಿನಗಳ ಕಾಲ ಬಂದ್ ಮಾಡಿರುವುದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ. ಕಾಂಕ್ರೀಟ್ ಕಾಮಗಾರಿಗೆ ಅಗತ್ಯವಿರುವಷ್ಟು ದಿನ ಮಾತ್ರ ಪ್ರವೇಶ ನಿರ್ಬಂಧ ವಿಧಿಸಬಹುದಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ವ್ಯಾಪಾರಿಗಳಿಗೂ ಆರ್ಥಿಕ ಹೊಡೆತ

ರಾಜಾಸೀಟ್‌ಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಿರುವುದರಿಂದ ರಸ್ತೆಯ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ಪ್ರವಾಸಿಗರನ್ನೇ ನಂಬಿಕೊಂಡು ವ್ಯಾಪಾರ ನಡೆಸುತ್ತಿರುವ ಸ್ಥಳೀಯರಿಗೆ 15 ದಿನಗಳ ನಿರ್ಬಂಧದಿಂದ ಆರ್ಥಿಕ ನಷ್ಟ ಉಂಟಾಗುವ ಆತಂಕ ಎದುರಾಗಿದೆ.

11 ಅತ್ತಿ ಮರಗಳ ತೆರವಿಗೆ ಪರಿಸರ ಪ್ರೇಮಿಗಳ ವಿರೋಧ

ಇನ್ನು ರಸ್ತೆ ಅಭಿವೃದ್ಧಿ ಕಾಮಗಾರಿಯ ಜೊತೆಗೆ ರಸ್ತೆಯಲ್ಲಿರುವ 11 ಅತ್ತಿ ಮರಗಳನ್ನು ಕಡಿಯಲು ಮುಂದಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ತೆರವುಗೊಳಿಸುವುದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮರಗಳನ್ನು ಉಳಿಸಿಕೊಂಡೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.


Read More
Next Story