
ರೈತನ 'ಗಾಂಧಿಗಿರಿ'ಗೆ ಮಣಿದ ಭ್ರಷ್ಟ ವ್ಯವಸ್ಥೆ; ಆಂದೋಲನ ರೂಪ ಪಡೆದ ಅಹಿಂಸಾತ್ಮಕ ಹೋರಾಟ
ಭ್ರಷ್ಟ ಅಧಿಕಾರಿಗಳ ವಿರುದ್ಧ ʼಗಾಂಧಿಗಿರಿʼ ಅಸ್ತ್ರ ಪ್ರಯೋಗಿಸಿ ಜಯ ಗಳಿಸಿದ ರೈತ ಪ್ರಸನ್ನಕುಮಾರ್ ಇದೀಗ ರೈತರ ಪಾಲಿಗೆ ಹಿರೋ ಆಗಿದ್ದಾರೆ. ಪ್ರಸನ್ನಕುಮಾರ್ ಹೋರಾಟದ ಮಾದರಿಯಲ್ಲೇ ರೈತರು ʼಗಾಂಧಿಗಿರಿʼ ಚಳವಳಿ ಯೋಜನೆ ರೂಪಿಸಿದ್ದಾರೆ.
ಜಡ ತುಂಬಿದ ಆಡಳಿತ ವ್ಯವಸ್ಥೆ ವಿರುದ್ಧ ಮಧುಗಿರಿ ಅನ್ನದಾತ ನಡೆಸಿದ ʼಗಾಂಧಿಗಿರಿʼ ಇದೀಗ ಚಳವಳಿಯ ರೂಪ ಪಡೆದುಕೊಂಡಿದೆ. ಯಾವುದೇ ಆವೇಶ, ಆಕ್ರೋಶ, ಉಗ್ರ ಪ್ರತಿಭಟನೆಗಳಿಗೆ ಆಸ್ಪದ ನೀಡದೇ ಆಡಳಿತ ಲೋಪವನ್ನು ಸೌಮ್ಯವಾಗಿಯೇ ಸಮಾಜದ ಮುಂದಿಟ್ಟ ರೈತ ಪ್ರಸನ್ನಕುಮಾರ್ ಅವರ ʼಗಾಂಧಿಗಿರಿʼ, ಇಡೀ ರೈತ ಕುಲಕ್ಕೆ ಸ್ಫೂರ್ತಿಯಾಗಿದೆ.
ಅನ್ನದಾತನಿಗೆ ಹಸಿವು ನೀಗಿಸುವ ಭೂಮಿಯೇ ಸರ್ವಸ್ವ. ಮಣ್ಣಿನೊಂದಿಗೆ ಅವಿನಾಭವ ನಂಟು ಹೊಂದಿರುವ ತನ್ನ ಭೂಮಿಗೆ ಅಪ್ಪಿತಪ್ಪಿಯೂ ಸಮಸ್ಯೆಯಾದರೆ ಸಹಿಸುವುದಿಲ್ಲ. ಅದೇ ರೀತಿಯಾಗಿ ಗುರುವಾರ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿ ರೈತ ಪ್ರಸನ್ನ ಕುಮಾರ್ ಸಹ ತನ್ನ ಜಮೀನಿನ ದಾರಿಗಾಗಿ ವರ್ಷಗಳ ಕಾಲ ಕಚೇರಿಗಳಿಗೆ ಅಲೆದಿದ್ದಾರೆ. ಆದರೆ, ರೈತನ ಕೂಗು, ಅಳಲು ಆಲಿಸದೇ ಸರ್ಕಾರಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟಾಗ ಅವರಿಗೆ ಹೊಳೆದ ಏಕೈಕ ದಾರಿಯೇ ಗಾಂಧಿ ಮಾರ್ಗ.
ಅಹಿಂಸಾತ್ಮಕ ಹೋರಾಟಕ್ಕೆ ಅನುಶಾಸನದಂತೆ ಇರುವ ಗಾಂಧಿಮಾರ್ಗದಿಂದಲೇ ರೈತ ಪ್ರಸನ್ನಕುಮಾರ್ ಅವರ ಎರಡು ವರ್ಷಗಳ ಬವಣೆಗೆ ಮುಕ್ತಿ ದೊರೆತಿದೆ. ರೈತನ ʼಗಾಂಧಿಗಿರಿʼಗೆ ಮಣಿದ ಆಡಳಿತವು ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಬಗೆಹರಿಸಿದೆ. ಪ್ರಸನ್ನಕುಮಾರ್ ಅವರ ಈ ಏಕಾಂಗಿ ಹೋರಾಟದಲ್ಲಿ ಅನುಸರಿಸಿದ ಗಾಂಧಿಗಿರಿಯೇ ಇದೀಗ ರೈತ ಸಮೂಹಕ್ಕೆ ಪ್ರೇರಣೆಯಾಗಿದೆ.
ರೈತನ ಹೋರಾಟದ ಕಥೆಯೇನು?
ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿಯ ರೈತ ಪ್ರಸನ್ನಕುಮಾರ್ ತಮ್ಮ ಜಮೀನಿನಲ್ಲಿರುವ ನಕಾಶೆ ರಸ್ತೆ ಮಾಡಿಕೊಡುವಂತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ, ಲೋಕಾಯುಕ್ತರಿಂದ ಆದೇಶ ತಂದರೂ ಅಧಿಕಾರಿಗಳ ಜಡತ್ವ ಬಿಟ್ಟಿರಲಿಲ್ಲ.
ನಕಾಶೆ ರಸ್ತೆ ಮಾಡಿಕೊಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಾಗ, "ನನ್ನ ಬಳಿ ಹಣವಿಲ್ಲ, ನಾನು ಬೆಳೆದಿರುವ ಮೂಲಂಗಿ ಇದೆ, ಬೇಕಾದರೆ ತಿನ್ನಿ" ಎಂದು ಸರ್ಕಾರಿ ಕಚೇರಿ ಮುಂದೆ ನಿಂತು ಪ್ರಸನ್ನಕುಮಾರ್ ಅವರು ಮೈಕ್‌ನಲ್ಲಿ ಕೂಗಿದ ಮಾತುಗಳು ಕೇವಲ ಒಬ್ಬ ವ್ಯಕ್ತಿಯ ಕಿರುಚಾಟವಾಗಿರಲಿಲ್ಲ. ನ್ಯಾಯಕ್ಕಾಗಿ ಹಂಬಲಿಸುವ ಶ್ರೀಸಾಮಾನ್ಯರ ದನಿಯಾಗಿತ್ತು. ರೈತನ ಆ ಅಸಹಾಯಕತೆಯು ಅಧಿಕಾರಿಗಳ ಅಹಂಕಾರವನ್ನೇ ಮಣ್ಣು ಮುಕ್ಕಿಸಿತು.
"ಜಮೀನಿಗೆ ದಾರಿ ಮಾಡಿಕೊಡುವಂತೆ ಮನವಿ ಮಾಡಿದ್ದೆ. ತಹಶೀಲ್ದಾರ್ ಅವರು ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಯಾವುದೇ ಕೆಲಸ ಮಾಡಿಕೊಟ್ಟಿರಲಿಲ್ಲ. ಎರಡು ತಿಂಗಳ ಹಿಂದೆ ಲೋಕಾಯುಕ್ತರು ಬಂದು, ತಿಂಗಳೊಳಗೆ ದಾರಿ ಮಾಡಿಕೊಡಲು ಸೂಚಿಸಿದ್ದರು. ಈವರೆಗೆ ಯಾರೂ ಬಂದಿಲ್ಲ, ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ದಿನಾ ಒಂದೊಂದು ಕಥೆ ಹೇಳಿ ಕಳುಹಿಸುತ್ತಿದ್ದರು. ಅಧಿಕಾರಿಗಳಿಗೆ ಹಣ ಕೊಡಲು ನನ್ನ ಬಳಿ ಹಣವಿರಲಿಲ್ಲ. ನಾನು ತರಕಾರಿ ಮಾರಾಟ ಮಾಡಿಕೊಂಡು ಬದುಕುತ್ತಿದ್ದೇನೆ. ಆಗ ನಾನು ಬೆಳೆದ ಮೂಲಂಗಿಯನ್ನೇ ಲಂಚದ ರೂಪದಲ್ಲಿ ನೀಡಲು ನಿರ್ಧರಿಸಿದೆ" ಎಂದು ರೈತ ಪ್ರಸನ್ನಕುಮಾರ್ ಆಕ್ರೋಶ ಹೊರಹಾಕಿದ್ದರು.
ಅಹಿಂಸಾ ಮಾರ್ಗದಲ್ಲಿ ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಸನ್ನಕುಮಾರ್ ಅವರ ಈ ಮೂಲಂಗಿ ಪ್ರತಿಭಟನೆ ತಮಾಷೆಯಾಗಿ ಕಂಡರೂ ಇಡೀ ರಾಜ್ಯದ ರೈತರನ್ನು ಗಮನ ಸೆಳೆಯಿತು. ಕೊನೆಗೂ ಗಾಂಧಿಗಿರಿಗೆ ಮಣಿದ ಅಧಿಕಾರಿಗಳು, ಒಂದೇ ದಿನದಲ್ಲಿ ಜಮೀನಿಗೆ ರಸ್ತೆ ಮಾಡಿಕೊಟ್ಟರು. ಪ್ರಸನ್ನ ಕುಮಾರ್ ಅವರ ʼಗಾಂಧಿಗಿರಿʼಯೇ ಇತರ ರೈತರ ಹೋರಾಟಕ್ಕೂ ಸ್ಫೂರ್ತಿಯಾಗಿದೆ.
ರೈತ ಕುಲಕ್ಕೆ ಪ್ರೇರಣೆಯಾದ ಹೋರಾಟ
ಭ್ರಷ್ಟ ಅಧಿಕಾರಿಗಳ ವಿರುದ್ಧ ʼಗಾಂಧಿಗಿರಿʼ ಅಸ್ತ್ರ ಪ್ರಯೋಗಿಸಿ ಜಯ ಗಳಿಸಿದ ರೈತ ಪ್ರಸನ್ನಕುಮಾರ್ ಇದೀಗ ರೈತರ ಪಾಲಿಗೆ ಹಿರೋ ಆಗಿದ್ದಾರೆ. ಪ್ರಸನ್ನಕುಮಾರ್ ಹೋರಾಟದ ಮಾದರಿಯಲ್ಲೇ ರೈತರು ʼಗಾಂಧಿಗಿರಿʼ ಚಳವಳಿ ಯೋಜನೆ ರೂಪಿಸಿದ್ದಾರೆ.
ಪ್ರಸನ್ನಕುಮಾರ್ ಅವರ ಗೆಲುವಿನ ವಿಚಾರ ತುಮಕೂರು ಜಿಲ್ಲೆ ಹಾಗೂ ರಾಜ್ಯಾದ್ಯಂತ ಪ್ರಚಾರ ಪಡೆದುಕೊಳ್ಳುತ್ತಿದ್ದಂತೆ ಬೇರೆ ಬೇರೆ ರೈತರು ಸಹ ಕರೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಾ, ನಾವು ನಿಮ್ಮಂತೆಯೇ ಮಾಡುತ್ತೇವೆ ಎಂದು ಚರ್ಚೆ ನಡೆಸಿರುವುದು ಚಳವಳಿಯ ಸ್ವರೂಪದ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜ್ಯ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿ, ರೈತರ ಅಭ್ಯುದಯಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಅನುಷ್ಠಾನದ ಹಂತದಲ್ಲಿ ವಿಫಲವಾಗುತ್ತಿದೆ. ಇದರಿಂದ ರೈತರು ಸಂಕಷ್ಟಗಳ ಸಂಕೋಲೆಗಳಲ್ಲೇ ಬದುಕುವಂತಾಗಿದೆ. ಈಗ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗಾಂಧಿ ಮಾರ್ಗವನ್ನೇ ಪರಿಣಾಮಕಾರಿಯಾಗಿ ಅನುಸರಿಸಲು ರೈತ ಸಮೂಹ ಮುಂದಾಗಿದೆ.
ಸಂಘ ಕಟ್ಟಲು ರೈತರ ಸಲಹೆ
ಅಧಿಕಾರಿಗಳ ಬಳಿ ರೈತರು ಅಲೆದರೂ ಕೆಲಸ ಮಾಡಿಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವು ಕೂಡ ಪ್ರಸನ್ನಕುಮಾರ್ ಮಾದರಿಯಲ್ಲೇ ಹೋರಾಟ ಮಾಡುತ್ತೇವೆ. ಬೆಂಬಲ ಕೊಡಿ, ಸಹಾಯ ಮಾಡಿ ಎಂದು ಅನೇಕ ರೈತರು ಮನವಿ ಮಾಡುತ್ತಿದ್ದಾರೆ.
ಕೆಲ ನೊಂದ ರೈತರೇ ಸೇರಿ ಸಂಘ ಕಟ್ಟೋಣ, ಆ ಸಂಘದ ಮೂಲಕ ತರಕಾರಿ ತೆಗೆದುಕೊಂಡು ಹೋಗಿ ಕೆಲಸ ಮಾಡಿ, ಇಲ್ಲವಾದರೆ ತರಕಾರಿ ತೆಗೆದುಕೊಂಡು ಲಂಚ ತೆಗೆದುಕೊಳ್ಳಿ ಎಂದು ಹೇಳಲು ತೀರ್ಮಾನಿಸಿದ್ದಾರೆ.
ನೂರಾರು ರೈತರಿಂದ ಕರೆ
ಭ್ರಷ್ಟ ಅಧಿಕಾರಿಗಳಿಗೆ ʼಗಾಂಧಿಗಿರಿʼ ಮೂಲಕವೇ ಪಾಠ ಕಲಿಸಿದ ರೈತ ಪ್ರಸನ್ನಕುಮಾರ್ ರಾಜ್ಯದ ಹಲವೆಡೆಗಳಿಂದ ರೈತರು ಕರೆ ಮಾಡಿ, ಶಹಬ್ಬಾಶ್ ಗಿರಿ ಹೇಳುತ್ತಿದ್ದಾರೆ. ಅಲ್ಲದೇ, ಪ್ರಸನ್ನಕುಮಾರ್ ಅವರ ಅಹಿಂಸಾ ಮಾರ್ಗವನ್ನೇ ತಾವೂ ಅನುಸರಿಸುವುದಾಗಿ ಹೇಳುತ್ತಿದ್ದಾರೆ. ಕೋಲಾರ, ತುಮಕೂರು ಒಳಗೊಂಡ ಬಯಲು ಸೀಮೆ ಜಿಲ್ಲೆಗಳು ಹಾಗೂ ಹಳೆ ಮೈಸೂರು ಪ್ರಾಂತ್ಯದ ಮಂಡ್ಯ, ಮೈಸೂರು ಜಿಲ್ಲೆಗಳಿಂದಲೂ ಈವರೆಗೆ ಸುಮಾರು 150 ಕ್ಕೂ ಹೆಚ್ಚು ರೈತರು ಕರೆ ಮಾಡಿ, ಹೋರಾಟ ಸಂಘಟಿಸುವ ಕುರಿತು ಮಾತನಾಡಿದ್ದಾರೆ. ರೈತರೆಲ್ಲರೂ ಗಾಂಧಿ ಮಾರ್ಗದ ಮೂಲಕವೇ ಹೋರಾಟ ಮಾಡಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಒಂದು ಸಭೆ ಸೇರಿ ಚರ್ಚಿಸಬೇಕು ಎಂದು ರೈತರು ಸಲಹೆ ನೀಡಿದ್ದಾರೆ.
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ ಪ್ರಸನ್ನಕುಮಾರ್, ನ್ಯಾಯಯುತವಾಗಿ ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಬೇಕು. ಆದರೆ, ವರ್ಷಗಟ್ಟಲೆ ರೈತರನ್ನು ಅಲೆದಾಡಿಸುತ್ತಾರೆ. ರೈತರು ರಾಜಕೀಯ ಪುಢಾರಿಗಳ ಜತೆ ಸೇರಿ ಸಂಘಟನೆ ಮಾಡದೇ ನಾವೇ ಹೋರಾಟ ಮಾಡಬೇಕು. ಈಗಾಗಲೇ ಅನೇಕ ರೈತರು ನನ್ನ ರೀತಿಯಲ್ಲೇ ʼಗಾಂಧಿಗಿರಿʼ ಮಾದರಿಯಲ್ಲಿ ಹೋರಾಟ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ನಾವೆಲ್ಲಾ ಸೇರಿ ಈ ಬಗ್ಗೆ ಒಂದು ಸಂಘ ಕಟ್ಟಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಹೋರಾಟಕ್ಕೆ ಬಗ್ಗದವರು ರೈತನಿಗೆ ಬಾಗಿದರು
ರಾಜ್ಯದಲ್ಲಿ ರೈತ ಸಂಘಟನೆಗಳು ಸಾಕಷ್ಟಿವೆ. 1980 ರಲ್ಲಿ ರೈತ ನಾಯಕ ಎಂ.ಡಿ. ನಂಜುಂಡಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹುಟ್ಟಿಕೊಂಡಿತು. ಗಾಂಧಿವಾದಿಯಾಗಿದ್ದ ನಂಜುಂಡಸ್ವಾಮಿ ಅವರು ರೈತರ ಹಕ್ಕುಗಳು, ಜಾಗತೀಕರಣ ವಿರೋಧಿ ಅಭಿಯಾನದ ಪ್ರಮುಖ ರೂವಾರಿಯಾಗಿದ್ದರು.
ರಾಮ ಮನೋಹರ್ ಲೋಹಿಯಾ ಹಾಗೂ ಶಾಂತವೇರಿ ಗೋಪಾಲಗೌಡ ಅವರಂತಹ ಸಮಾಜವಾದಿಗಳೊಂದಿಗೆ ನಿಕಟ ಕೆಲಸ ಮಾಡಿದ್ದರು. 1975 ರಲ್ಲಿ ಕರ್ನಾಟಕದಲ್ಲಿ ಜೆಪಿ ಚಳವಳಿ ಆರಂಭಿಸಿದ್ದು, ಕೃಷಿ ಪೇಟೆಂಟ್ ಪಡೆಯುವುದರ ವಿರುದ್ಧ ಅಭಿಯಾನ ಮುನ್ನಡೆಸಿದ್ದರು. ಅಂದಿನ ಕಾಲಘಟ್ಟದಲ್ಲಿ ರೈತ ಸಂಘಟನೆಗಳೆಂದರೆ ಅಧಿಕಾರಿಗಳು, ರಾಜಕಾರಣಿಗಳು ಹೆದರುತ್ತಿದ್ದರು. ನಂಜುಂಡಸ್ವಾಮಿ ಅವರ ಬಳಿಕ ರೈತ ಸಂಘ ಬಣಗಳಾಯಿತು.
ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ಸಂಘಟನೆಗಳು ಎಷ್ಟೇ ಹೋರಾಟ ನಡೆಸಿದರೂ ಸರ್ಕಾರ ಹಾಗೂ ಅಧಿಕಾರಿಗಳು ಸೊಪ್ಪು ಹಾಕುತ್ತಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಮಧುಗಿರಿ ರೈತನ ವಿನೂತನ ಶೈಲಿಯ ಮೂಲಂಗಿ ಚಳವಳಿಗೆ ಅಧಿಕಾರಿಗಳು ಬೆಚ್ಚಿ ಬಿದ್ದಿರುವುದು ರೈತ ಹೋರಾಟಕ್ಕೆ ಹೊಸ ಆಯಾಮ ನೀಡಿದೆ.

