
"ಪ್ರಧಾನಿ ಮೋದಿ ಸುಳ್ಳಿನ ಸರದಾರ": ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ
ಬಿಜೆಪಿಯ ಅಸ್ತಿತ್ವಕ್ಕೆ ಮೋದಿ ಎಂಬ ಹೆಸರೇ ಒಂದು ಸರಕಾಗಿತ್ತು, ಆದರೆ ಈಗ ಆ ಸರಕು ಖಾಲಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, "ದೇಶ ಕಂಡ ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ" ಎಂದು ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯ ರಾಜಕೀಯ ತಂತ್ರಗಳು ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದರು.
ಬಿಜೆಪಿಯ ಅಸ್ತಿತ್ವಕ್ಕೆ ಮೋದಿ ಎಂಬ ಹೆಸರೇ ಒಂದು ಸರಕಾಗಿತ್ತು, ಆದರೆ ಈಗ ಆ ಸರಕು ಖಾಲಿಯಾಗಿದೆ ಎಂದು ವ್ಯಂಗ್ಯವಾಡಿದ ಮಧು ಬಂಗಾರಪ್ಪ, "ಮೋದಿ ಹೆಸರಿನಲ್ಲಿ ಇನ್ನು ಮುಂದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಅರಿವಾಗಿದೆ. ಹೀಗಾಗಿ, ಎಸ್‌ಐಆರ್ ಹೆಸರಿನಲ್ಲಿ ಕೋಟ್ಯಂತರ ಮತದಾರರ ಹೆಸರುಗಳನ್ನು ಅಳಿಸುವ ವಂಚನೆಯ ಹಾದಿಯನ್ನು ಹಿಡಿದಿದೆ" ಎಂದು ಆರೋಪಿಸಿದರು. ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, "ಮುಖ್ಯ ಚುನಾವಣಾ ಆಯುಕ್ತರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮತದಾನದ ಹಕ್ಕು ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಪವಿತ್ರ ಹಕ್ಕು. ಅದನ್ನು ಕಸಿದುಕೊಳ್ಳುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೆಲಸ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಮಾಧ್ಯಮಗಳು ಮೌನ ವಹಿಸದೆ, ಸತ್ಯಾಂಶವನ್ನು ಜನರ ಮುಂದಿಡಬೇಕೆಂದು ಅವರು ಆಗ್ರಹಿಸಿದರು.
ಜೆನ್-ಝಿ ಯುವಜನತೆಯಿಂದ ಮೋದಿಗೆ ತಿರಸ್ಕಾರ
ಮೋದಿ ಅವರ ಆಡಳಿತದ ಬಗ್ಗೆ ಯುವಜನತೆಯ ಅಸಮಾಧಾನದ ಬಗ್ಗೆ ಮಾತನಾಡಿದ ಸಚಿವರು, ಇಂದಿನ ಯುವಜನತೆ ಮೋದಿ ಅವರ ಸುಳ್ಳು ಭರವಸೆಗಳನ್ನು ನಂಬುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಮೋದಿಯನ್ನು ಲೇವಡಿ ಮಾಡುತ್ತಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ, 15 ಲಕ್ಷ ಹಣದ ಭರವಸೆಗಳು ಎಲ್ಲಿಗೆ ಹೋದವು ಎಂದು ಯುವಕರು ಪ್ರಶ್ನಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇದೇ ಯುವಶಕ್ತಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ ಎಂದು ಭವಿಷ್ಯ ನುಡಿದರು. ರಾಷ್ಟ್ರಪತಿಗಳ ನಿಯೋಗದ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, "ಮೌನ ರಾಷ್ಟ್ರಪತಿಗಳಿಂದ ನಾವು ಏನು ನಿರೀಕ್ಷಿಸಲು ಸಾಧ್ಯ? ಪ್ರಧಾನಿ ಮೋದಿ ಏನು ಹೇಳುತ್ತಾರೋ ಅದನ್ನೇ ಕೇಳುವ ಸ್ಥಿತಿಯಲ್ಲಿ ಅವರಿದ್ದಾರೆ" ಎಂದು ಹರಿಹಾಯ್ದರು. ದೇಶದ ಇಂಧನ ಆಡಳಿತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಜಯೇಂದ್ರ ವಿರುದ್ಧ ಗುಡುಗು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗಿನ ವಾಕ್ಸಮರದ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, "ಯಡಿಯೂರಪ್ಪ ಅವರು ತಮ್ಮ ಮಗ ವಿಜಯೇಂದ್ರನಿಗೆ ಮಧು ಬಂಗಾರಪ್ಪನ ಬಗ್ಗೆ ಹೆಚ್ಚು ಮಾತನಾಡಬೇಡ ಎಂದು ಎಚ್ಚರಿಸಿದ್ದಾರೆ. ಬಂಗಾರಪ್ಪ ಅವರ ರಾಜಕೀಯ ಶಕ್ತಿ ಏನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ" ಎಂದರು. ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, "ತಮ್ಮ ಸ್ವಂತ ತಂದೆಯನ್ನೇ ಜೈಲಿಗೆ ಕಳುಹಿಸಿದ ವ್ಯಕ್ತಿ ಯಾವ ಪುರುಷಾರ್ಥಕ್ಕೆ 'ವಿಜಯ ಯಾತ್ರೆ' ಮಾಡುತ್ತಿದ್ದಾರೆ? ಅವರು ಸಾಧಿಸಿದ ವಿಜಯವೇನು ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ತೀಕ್ಷ್ಣವಾಗಿ ಉತ್ತರಿಸಿದರು. "ನನ್ನನ್ನು ಕೆಣಕಲು ಬಂದರೆ ನಾನು ಅವರ ಬುಡಕ್ಕೇ ಕೈ ಹಾಕುತ್ತೇನೆ" ಎಂದು ಎಚ್ಚರಿಕೆ ನೀಡಿದರು.
ಗ್ಯಾರಂಟಿ ಯೋಜನೆಗಳು ಸುರಕ್ಷಿತ
ಗ್ಯಾರಂಟಿ ಯೋಜನೆಗಳ ಬಗ್ಗೆ ನಡೆಯುತ್ತಿರುವ ಟೀಕೆಗಳನ್ನು ತಳ್ಳಿಹಾಕಿದ ಮಧು ಬಂಗಾರಪ್ಪ, "ನಾವು ಅರ್ಹ ಫಲಾನುಭವಿಗಳಿಗೆ ಹಣ ತಲುಪಿಸಲು ಪರಿಶೀಲನೆ ನಡೆಸುತ್ತಿದ್ದೇವೆ. ಇದು ನಿರಂತರ ಪ್ರಕ್ರಿಯೆ. ಕಳೆದ ಮೂರು ತಿಂಗಳ ಬಗ್ಗೆ ಮಾತ್ರ ಮಾತನಾಡುವವರು, ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ನೆರವಿನ ಬಗ್ಗೆಯೂ ಮಾತನಾಡಲಿ" ಎಂದರು. ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ಅರ್ಹರಿಗೆ ತಲುಪುತ್ತದೆ ಎಂದು ಸ್ಪಷ್ಟಪಡಿಸಿದರು. ಹನಿಟ್ರ್ಯಾಪ್ ಮತ್ತು ಸ್ಟಿಂಗ್ ಆಪರೇಷನ್‌ಗಳ ಮೂಲಕ ರಾಜಕಾರಣಿಗಳನ್ನು ಮುಜುಗರಕ್ಕೆ ಸಿಲುಕಿಸುವ ಪ್ರಯತ್ನಗಳ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಗಳನ್ನು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಲಿದ್ದಾರೆ ಎಂದು ತಿಳಿಸಿದ ಸಚಿವರು, ತಾವು ಶಾಲಾ ಶಿಕ್ಷಣ ಇಲಾಖೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಿಳಿಸಿದರು.
