
Lunar Eclipse: 2026ರ ಮೊದಲ ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತಿಗೆ ಗೋಚರ?
2026ರ ಮೊದಲ ಚಂದ್ರಗ್ರಹಣ ಇಂದು (ಮಾ. 3) ಸಂಭವಿಸಲಿದೆ. ಕರ್ನಾಟಕದಲ್ಲಿ ಸಂಜೆ 6.35ರ ನಂತರ ಕೇವಲ 10 ನಿಮಿಷಗಳ ಕಾಲ ಭಾಗಶಃ ಗ್ರಹಣ ಗೋಚರಿಸಲಿದೆ. ಇದರ ಸಮಯ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಖಗೋಳ ಆಸಕ್ತರು ಮತ್ತು ವಿಜ್ಞಾನಿಗಳಿಗೆ ಇಂದು (ಮಾರ್ಚ್ 3, ಮಂಗಳವಾರ) ಒಂದು ಸಂಭ್ರಮದ ದಿನ. 2026ನೇ ವರ್ಷದ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ಸಹ, ಭಾರತದ ಹೆಚ್ಚಿನ ಭಾಗಗಳಲ್ಲಿ ಗ್ರಹಣದ ಅಂತ್ಯದ ಹಂತ ಮಾತ್ರ ಗೋಚರಿಸಲಿದೆ.
ಗ್ರಹಣದ ಸಮಯ ಮತ್ತು ಗೋಚರತೆ
ಭಾರತೀಯ ಕಾಲಮಾನದ ಪ್ರಕಾರ 2026ರ ಮೊದಲ ಚಂದ್ರಗ್ರಹಣವು ಇಂದು ಮಧ್ಯಾಹ್ನ 3:20ಕ್ಕೆ ಆರಂಭವಾಗಲಿದ್ದು, ಸಂಜೆ 4:34ರ ಸುಮಾರಿಗೆ ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಲಿದೆ. ಈ ಖಗೋಳ ಕೌತುಕವು ಸಂಜೆ 6:47ಕ್ಕೆ ಮುಕ್ತಾಯಗೊಳ್ಳಲಿದ್ದು, ಭಾರತದಲ್ಲಿ ಚಂದ್ರೋದಯದ ನಂತರ ಕೇವಲ ಕೊನೆಯ 10 ರಿಂದ 20 ನಿಮಿಷಗಳ ಕಾಲ ಮಾತ್ರ ವೀಕ್ಷಣೆಗೆ ಲಭ್ಯವಾಗಲಿದೆ.
ಕರ್ನಾಟಕದಲ್ಲಿ ಗೋಚರ ಸಮಯ
ಕರ್ನಾಟಕದಲ್ಲಿ ಗ್ರಹಣದ ಚಂದ್ರ ಕಾಣಿಸುವುದು ಕೇವಲ 9 ರಿಂದ 10 ನಿಮಿಷಗಳು ಮಾತ್ರ. ಸಂಜೆ ಚಂದ್ರೋದಯವಾಗುವ ಹೊತ್ತಿಗೆ ಗ್ರಹಣವು ಮುಕ್ತಾಯದ ಹಂತದಲ್ಲಿರುತ್ತದೆ. ಕೇವಲ ಶೇ. 8 ರಷ್ಟು ಪಾರ್ಶ್ವ ಚಂದ್ರಗ್ರಹಣ ಮಾತ್ರ ನಮಗೆ ಗೋಚರಿಸಲಿದ್ದು, ಚಂದ್ರ ಭೂಮಿಯ ನೆರಳಿನಿಂದ ಬಹುತೇಕ ಹೊರಬಂದಿರುತ್ತಾನೆ. ಹೀಗಾಗಿ ಇದನ್ನು ವೀಕ್ಷಿಸುವುದು ಸ್ವಲ್ಪ ಕಷ್ಟ ಎಂದು ಖಗೋಳ ತಜ್ಞ ಡಾ. ಎ.ಪಿ. ಭಟ್ ತಿಳಿಸಿದ್ದಾರೆ.
ಬ್ಲಡ್ ಮೂನ್ ಎಂದರೇನು?
ಸೂರ್ಯನ ಬೆಳಕು ಭೂಮಿಯ ವಾತಾವರಣವನ್ನು ಹಾದುಹೋಗುವಾಗ ವಕ್ರೀಭವನಗೊಂಡು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರನು ಕೆಂಪಾಗಿ ಗೋಚರಿಸುತ್ತಾನೆ, ಇದನ್ನೇ 'ಬ್ಲಡ್ ಮೂನ್' ಎಂದು ಕರೆಯಲಾಗುತ್ತದೆ. ಈ ಸುಂದರ ದೃಶ್ಯವನ್ನು ಯಾವುದೇ ಉಪಕರಣಗಳಿಲ್ಲದೆ ಬರಿಗಣ್ಣಿನಿಂದಲೇ ನೋಡಬಹುದು.
ದೇವಸ್ಥಾನಗಳ ದರ್ಶನ ಮತ್ತು ಪೂಜೆ
ಈ ಬಾರಿ ಸಂಭವಿಸುತ್ತಿರುವುದು 'ಗ್ರಸ್ತೋದಯ ಚಂದ್ರಗ್ರಹಣ'. ಇದು ಹುಬ್ಬಾ ನಕ್ಷತ್ರ ಮತ್ತು ಸಿಂಹ ರಾಶಿಯಲ್ಲಿ ಸಂಭವಿಸುತ್ತಿದೆ. ಕೊಲ್ಲೂರು ಮೂಕಾಂಬಿಕೆ, ಮಲೆ ಮಹದೇಶ್ವರ, ಮಂತ್ರಾಲಯ, ಗೋಕರ್ಣ ಮಹಾಬಲೇಶ್ವರ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಭಾಗಶಃ ಬೀಳುವುದರಿಂದ ದೇವಸ್ಥಾನಗಳ ಬಾಗಿಲು ಹಾಕುವ ಅವಶ್ಯಕತೆಯಿಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ. ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ಗ್ರಹಣ ಯಾವಾಗ?
ನೀವು ಇಂದಿನ ಗ್ರಹಣವನ್ನು ಮಿಸ್ ಮಾಡಿಕೊಂಡರೆ, ಮುಂದಿನ ಪೂರ್ಣ ಪ್ರಮಾಣದ ಚಂದ್ರಗ್ರಹಣ ವೀಕ್ಷಿಸಲು 2028ರವರೆಗೆ ಕಾಯಬೇಕು. ಜುಲೈ 2028 ಮತ್ತು ಡಿಸೆಂಬರ್ 31, 2028 ರಂದು ಸಂಭವಿಸುವ ಗ್ರಹಣಗಳು ಭಾರತದಾದ್ಯಂತ ಸ್ಪಷ್ಟವಾಗಿ ಗೋಚರಿಸಲಿವೆ.

