
ಶ್ರೀಸಾಮಾನ್ಯರ ಮೇಲೆ ಎಲ್‌ಪಿಜಿ ದರ ಏರಿಕೆ ಹೊರೆ ; ಹೋಟೆಲ್‌ಗಳಿಗೂ ತಟ್ಟಿದ ಬಿಸಿ, ಎರಡು ದಿನದಲ್ಲಿ ತೀರ್ಮಾನ
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ದಾಳಿ ನಡೆಸುತ್ತಿರುವ ಹಿನ್ನೆಲೆ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸ್ಥಗಿತಗೊಳಿಸಿದೆ. ಜಾಗತಿಕವಾಗಿ ಇಂಧನ, ತೈಲ ಮತ್ತು ಅನಿಲ ಮಾರುಕಟ್ಟೆಗಳ ಮೇಲೆ ಸಂಘರ್ಷವು ತಲ್ಲಣ ಸೃಷ್ಟಿಸಿದೆ.
ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ವ್ಯಾಪಿಸಿರುವ ಇರಾನ್-ಇಸ್ರೇಲ್ ಸಂಘರ್ಷದ ಬಿಸಿ ಇದೀಗ ನೇರವಾಗಿ ಎಲ್‌ಪಿಜಿ ಅನಿಲ ಬಳಕೆದಾರರಿಗೂ ತಟ್ಟಿದೆ. ಭಾರತದಲ್ಲಿ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯು ಕ್ರಮವಾಗಿ 60 ರೂ. ಹಾಗೂ 115 ರೂ.ಗಳಷ್ಟು ಏರಿಕೆಯಾಗಿದೆ.
ಕರ್ನಾಟಕದಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯು ಜನಸಾಮಾನ್ಯರು, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. 2025ರ ಏಪ್ರಿಲ್ 7ರಂದು ಗೃಹ ಬಳಕೆಯ ಸಿಲಿಂಡರ್ ದರವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 50 ರೂ. ಏರಿಸಿತ್ತು. ಅದಕ್ಕೂ ಮುಂಚೆ ಗೃಹ ಬಳಕೆಯ ಸಿಲಿಂಡರ್ ಬೆಲೆ 805 ರೂ.ಗಳಿತ್ತು. ಈಗ ಏಕಾಏಕಿ ದರ ಏರಿಕೆಯಾಗಿರುವುದು ಶ್ರೀಸಾಮಾನ್ಯರಿಗೆ ದೊಡ್ಡ ಹೊಡೆತ ನೀಡಿದೆ.
“ಇರಾನ್-ಇಸ್ರೇಲ್ ಯುದ್ಧವು ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಿರಬಹುದು ಎಂಬ ಮಾತುಗಳಿವೆ. ಆದರೆ, ಅನಿಲ ಪೂರೈಕೆ ಯಥಾಸ್ಥಿತಿಯಲ್ಲಿದೆ. ತೈಲ ಕಂಪನಿಗಳು ಕೊರತೆಯಾಗದಂತೆ ಅನಿಲ ಪೂರೈಸುತ್ತಿವೆ. ಸೌದಿ ಅರೇಬಿಯಾ, ಕತಾರ್‌ನಿಂದ ಎಲ್‌ಪಿಜಿ ಪೂರೈಕೆಯಾಗುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಿಂದಲೂ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇದೆ. ಅನಿಲ ಪೂರೈಕೆಯಲ್ಲಿ ಯಾವುದೇ ದೊಡ್ಡ ವ್ಯತ್ಯಾಸವಾಗಿಲ್ಲ. ಕಚ್ಚಾತೈಲದ ಬೆಲೆ ಏರಿಕೆಯ ಕಾರಣ ಕೇಂದ್ರ ಸರ್ಕಾರ ಎಲ್‌ಪಿಜಿ ಬೆಲೆ ಏರಿಸಿದೆ” ಎಂದು ದೊಡ್ಡಬಳ್ಳಾಪುರದ ಮಂಜುನಾಥ್ ಗ್ಯಾಸ್ ಏಜೆನ್ಸಿಯ ಮಾಲೀಕ ನಂದಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ದರ ಏರಿಕೆಯಿಂದ ಮಧ್ಯಮ ವರ್ಗ ಕಂಗಾಲು
ಒಂದು ವರ್ಷದಿಂದ ಸ್ಥಿರವಾಗಿದ್ದ 14.2 ಕೆ.ಜಿ. ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ 855 ರೂ.ಗಳಿಂದ 915 ರೂ.ಗಳಿಗೆ ಹೆಚ್ಚಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಾಲು, ವಿದ್ಯುತ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇದೀಗ ಎಲ್‌ಪಿಜಿ ದರ ಏರಿಕೆ ಹೊರೆಯಾಗಿ ಪರಿಣಮಿಸಿದೆ. ಉಜ್ವಲ ಯೋಜನೆಯಡಿ ಬರುವ ಎಲ್‌ಪಿಜಿ ಬಳಕೆದಾರರಿಗೆ ವಾರ್ಷಿಕ 12 ರಿಫಿಲ್‌ಗಳಿಗೆ 300 ರೂ. ಸಬ್ಸಿಡಿ ಸಿಗಲಿದೆ. ಈಗಾಗಲೇ 12 ಸಿಲಿಂಡರ್ ರಿಫಿಲ್ಲಿಂಗ್ ಮುಗಿಸಿರುವ ಗೃಹ ಬಳಕೆದಾರರಿಗೆ ಎಲ್‌ಪಿಜಿ ಬಳಕೆ ದುಬಾರಿಯಾಗಿದೆ.
“ಪ್ರತಿ ಬಾರಿ ಸಿಲಿಂಡರ್ ಪಡೆಯುವಾಗ 855 ರೂ.ಗಳ ಜತೆಗೆ ಏಜೆನ್ಸಿಯವರಿಗೆ 30 ರೂ. ನೀಡುತ್ತಿದ್ದೆವು. ಈಗ ಸಿಲಿಂಡರ್ ಬೆಲೆ ಏಕಾಏಕಿ 60 ರೂ. ಏರಿಕೆಯಾಗಿದೆ. ಈಗ 915 ರೂ.ಗಳ ಜತೆಗೆ ಸೇವಾ ಶುಲ್ಕ ನೀಡಿದರೆ ಬರೋಬ್ಬರಿ 950 ರೂ.ಗಳಾಗಲಿದೆ. ಸಿಲಿಂಡರ್‌ಗಾಗಿಯೇ 1000 ರೂ. ತೆಗೆದಿರಿಸಬೇಕಾಗಿದೆ. ಆಹಾರ ಪದಾರ್ಥಗಳು, ಎಣ್ಣೆ ಎಲ್ಲವೂ ಏರಿಕೆಯಾಗಿದೆ. ಹೀಗಾದರೆ, ಸಂಸಾರ ನಿಭಾಯಿಸುವುದು ಹೇಗೆ ಎಂಬುದೇ ತಿಳಿಯದಂತಾಗಿದೆ” ಎಂದು ಬೆಂಗಳೂರಿನ ಬೋನ್‌ಮಿಲ್ ನಿವಾಸಿ ಶಾರದಮ್ಮ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಹೋಟೆಲ್ ಉದ್ಯಮದ ಮೇಲೂ ದರ ಏರಿಕೆ ಭಾರ
ಕರ್ನಾಟಕದಲ್ಲಿ ಹೋಟೆಲ್ ಉದ್ಯಮದ ಮೇಲೂ ಎಲ್‌ಪಿಜಿ ದರ ಏರಿಕೆಯ ಬಿಸಿ ತಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬ್ಯಾರೆಲ್ ಬೆಲೆ 67 ಡಾಲರ್‌ನಿಂದ 91 ಡಾಲರ್‌ಗೆ ಏರಿಕೆಯಾಗಿರುವ ಪರಿಣಾಮ ಎಲ್‌ಪಿಜಿ ದರಗಳನ್ನು ಏರಿಸಲಾಗಿದೆ.
ಇಸ್ರೇಲ್-ಇರಾನ್ ನಡುವಿನ ಯುದ್ಧದ ಪರಿಣಾಮ ಬೆಲೆ ಏರಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ತಾತ್ಕಾಲಿಕ ಪರಿಸ್ಥಿತಿ ನಿಭಾಯಿಸದೇ ದಿಢೀರ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಈಗಾಗಲೇ ಹೋಟೆಲ್, ರೆಸ್ಟೋರೆಂಟ್‌ಗಳು ಕಸಕ್ಕೂ ತೆರಿಗೆ ಪಾವತಿಸುತ್ತಿವೆ. ವಿದ್ಯುತ್, ಎಣ್ಣೆಯ ಬೆಲೆಯೂ ಹೆಚ್ಚಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಹೆಚ್ಚಾಗಿರುವುದರಿಂದ ಕಾಫಿ, ತಿಂಡಿ ಹಾಗೂ ಊಟದ ಬೆಲೆಯನ್ನೂ ಏರಿಕೆ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ, ಗ್ರಾಹಕರ ಹಿತದೃಷ್ಟಿ ಮುಖ್ಯ. ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ ದರ ಏರಿಕೆ ತಾತ್ಕಾಲಿಕ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಯುದ್ಧದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಬೆಲೆ ಇಳಿಸದೇ ಹೋದರೆ ಹೋಟೆಲ್ ತಿಂಡಿ, ತಿನಿಸುಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಈ ಹಿಂದೆ ವಾಣಿಜ್ಯ ಬಳಕೆಯ ಸಿಲಿಂಡರ್ ಮೇಲೆ 150 ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಈಗ ಸಬ್ಸಿಡಿ ನಿಲ್ಲಿಸಲಾಗಿದೆ. ಕಳೆದ ಫೆಬ್ರುವರಿಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಮೇಲೆ 50 ರೂ. ಹೆಚ್ಚಿಸಲಾಗಿತ್ತು. ಈಗ 115 ರೂ. ಏರಿಸಲಾಗಿದೆ. ಸಬ್ಸಿಡಿ ನಿಲ್ಲಿಸಿದ್ದರಿಂದ ಹೋಟೆಲ್ ಮಾಲೀಕರ ಮೇಲೆ ಸುಮಾರು 300 ರೂ. ಹೊರೆ ಬೀಳುತ್ತಿದೆ. ಇದರಿಂದ 19 ಕೆ.ಜಿ. ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,789 ರೂ.ಗಳಿಂದ 1,814 ರೂ.ಗಳಿಗೆ ಏರಿಕೆಯಾಗಿದೆ ಎಂದು ಪಿ.ಸಿ.ರಾವ್ ತಿಳಿಸಿದರು.
“ನಮಗೆ ಈಗಾಗಲೇ ಕಾಫಿ, ತಿಂಡಿ ಬೆಲೆ ಏರಿಸುವ ಅನಿವಾರ್ಯತೆ ಇದೆ. ಆದರೆ, ಏಪ್ರಿಲ್‌ವರೆಗೂ ಅದನ್ನು ತಡೆಹಿಡಿದಿದ್ದೇವೆ. ಎಲ್‌ಪಿಜಿ ದರಗಳ ಏರಿಕೆ ತಾತ್ಕಾಲಿಕವೋ, ಇಲ್ಲವೋ ಎಂಬುದನ್ನು ಖಚಿತ ಮಾಡಿಕೊಂಡು ಎರಡು ಮೂರು ದಿನಗಳಲ್ಲಿ ಹೋಟೆಲ್ ತಿಂಡಿಗಳ ಬೆಲೆ ಏರಿಕೆ ಬಗ್ಗೆ ನಿರ್ಧಾರ ಮಾಡುತ್ತೇವೆ. ಗ್ರಾಹಕರಿಗೆ ಹೊರೆಯಾಗದ ರೀತಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸರ್ಕಾರ ದಿಢೀರನೇ ಬೆಲೆ ಏರಿಸುವ ಬದಲು, ಆ ಹೊರೆಯನ್ನು ತಾನೇ ಭರಿಸಬಹುದಿತ್ತು. ವೃಥಾ ಗ್ರಾಹಕರ ಮೇಲೆ ಹೊರೆಹಾಕಿದೆ. ಬೆಲೆಗಳನ್ನು ಇಳಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು” ಎಂದು ಪಿ.ಸಿ.ರಾವ್ ಹೇಳಿದರು.
ಎಲ್‌ಪಿಜಿ ಸಿಲಿಂಡರ್ ಮೇಲೆ ಎಷ್ಟಿದೆ ತೆರಿಗೆ?
ಎಲ್‌ಪಿಜಿ ಸಿಲಿಂಡರ್ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆಯನ್ನೂ ವಿಧಿಸುತ್ತಿವೆ. ಗೃಹ ಬಳಕೆಯ ಸಿಲಿಂಡರ್ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯದ ತೆರಿಗೆಗಳು ತಲಾ ಶೇ. 2.5ರಷ್ಟು ಇವೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಮೇಲೆ ಶೇ. 18ರಷ್ಟು ತೆರಿಗೆ ಹಾಕಲಾಗುತ್ತದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯದ ತೆರಿಗೆ ತಲಾ ಶೇ. 9ರಷ್ಟು ಇದೆ.
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸ್ಥಗಿತಗೊಳಿಸಿದೆ. ಜಾಗತಿಕವಾಗಿ ಇಂಧನ, ತೈಲ ಮತ್ತು ಅನಿಲ ಮಾರುಕಟ್ಟೆಗಳ ಮೇಲೆ ಸಂಘರ್ಷವು ತಲ್ಲಣ ಸೃಷ್ಟಿಸಿದೆ. ಭಾರತಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹೆಚ್ಚು ಕಚ್ಚಾ ತೈಲ ಆಮದಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 91 ಡಾಲರ್ ಇದ್ದರೆ, ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 94 ಡಾಲರ್‌ಗೆ ಏರಿಕೆಯಾಗಿದೆ.

