
ಅ.1 ರಿಂದ ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ ಕಡ್ಡಾಯ; ಬಯೋಮೆಟ್ರಿಕ್ ಕೊಡದಿದ್ದರೆ ಸಬ್ಸಿಡಿ ಕಟ್
ಈವರೆಗೂ ಇ-ಕೆವೈಸಿ ಮಾಡಿಸದಿರುವವರು ಸಿಲಿಂಡರ್ ಡೆಲಿವರಿ ಮಾಡಲು ಬರುವ ಸಿಬ್ಬಂದಿಯ ಮೊಬೈಲ್ ಆ್ಯಪ್ ಮೂಲಕವೇ ಬೆರಳಚ್ಚು ನೀಡಿ ಇ-ಕೆವೈಸಿ ಮುಗಿಸಬಹುದು.
ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಮತ್ತು ಕೇಂದ್ರ ಸರ್ಕಾರ ಮಹತ್ವದ ಸೂಚನೆಯೊಂದನ್ನು ನೀಡಿವೆ. ಅ.1 ರಿಂದ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಮತ್ತು ಸಬ್ಸಿಡಿ ಪಡೆಯಲು ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ.
ಒಂದು ವೇಳೆ ಗ್ರಾಹಕರು ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಹಣ ಸ್ಥಗಿತವಾಗಲಿದೆ. ಗ್ಯಾಸ್ ಬುಕ್ಕಿಂಗ್‌ಗೂ ಸಮಸ್ಯೆಯಾಗಲಿದೆ. ಈ ಹಿಂದೆ ತೈಲ ಕಂಪನಿಗಳು ಆಗಸ್ಟ್ 16 ರವರೆಗೆ ಇ-ಕೆವೈಸಿ ಮಾಡಿಸಲು ಗಡುವು ನೀಡಿದ್ದವು. ಈ ಅವಧಿಯಲ್ಲಿ ದೇಶದಲ್ಲಿರುವ ಒಟ್ಟು 30.4 ಕೋಟಿ ಎಲ್‌ಪಿಜಿ ಗ್ರಾಹಕರ ಪೈಕಿ 27.43 ಕೋಟಿ ಗ್ರಾಹಕರು ಬಯೋಮೆಟ್ರಿಕ್ ಕೊಟ್ಟಿದ್ದರು. ಇನ್ನೂ 3.16 ಕೋಟಿ ಜನರು ಇ-ಕೆವೈಸಿ ಮಾಡಿರುವುದು ಬಾಕಿ ಇರುವ ಹಿನ್ನೆಲೆಯಲ್ಲಿ ಮತ್ತೊಂದು ಅವಕಾಶ ನೀಡಲಾಗಿದೆ.
ಈವರೆಗೂ ಇ-ಕೆವೈಸಿ ಮಾಡಿಸದಿರುವವರು ಸಿಲಿಂಡರ್ ಡೆಲಿವರಿ ಮಾಡಲು ಬರುವ ಸಿಬ್ಬಂದಿಯ ಮೊಬೈಲ್ ಆ್ಯಪ್ ಮೂಲಕವೇ ಬೆರಳಚ್ಚು ನೀಡಿ ಇ-ಕೆವೈಸಿ ಮುಗಿಸಬಹುದು. ಇಲ್ಲವೇ ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಮತ್ತೊಂದೆಡೆ, ಸ್ಮಾರ್ಟ್‌ಫೋನ್ ಬಳಕೆದಾರರು ಆ್ಯಪ್ ಮೂಲಕ ಸ್ವತಃ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶವಿದೆ.
ಇಂಡಿಯನ್ ಆಯಿಲ್ ಬಳಕೆದಾರರು ‘ಇಂಡಿಯನ್ ಆಯಿಲ್ ಒನ್’ ಆ್ಯಪ್, ಭಾರತ್ ಗ್ಯಾಸ್ ಬಳಕೆದಾರರು ‘ಹಲೋ ಬಿಪಿಸಿಎಲ್’ ಆ್ಯಪ್ ಹಾಗೂ ಹೆಚ್‌ಪಿ ಗ್ಯಾಸ್ ಬಳಕೆದಾರರು ‘ಹೆಚ್‌ಪಿ ಪೇ’ ಆ್ಯಪ್ ಮೂಲಕ ಇ-ಕೆ.ವೈಸಿ ಮಾಡಿಸಬಹುದು.
ಸಬ್ಸಿಡಿ ಬೇಡವಾದರೆ ಇ-ಕೆವೈಸಿ ಬೇಡ
ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಗ್ಯಾ ಸ್ ಸಿಲಿಂಡರ್ ಬೇಡ ಎಂದಾದಲ್ಲಿ ಅಂತಹವರು ಬಯೋಮೆಟ್ರಿಕ್ ಅಥವಾ ಇ-ಕೆವೈಸಿ ಮಾಡಿಸುವುದು ಕಡ್ಡಾಯವಲ್ಲ. ಆದರೆ, ಈ ಬಗ್ಗೆ ಮೊಬೈಲ್ ಆ್ಯಪ್ ಅಥವಾ ಡಿಜಿಟಲ್ ಮಾಧ್ಯಮಗಳ ಮೂಲಕ ಸ್ವಯಂ ಘೋಷಣೆ ನೀಡಬೇಕು. ಬಯೋಮೆಟ್ರಿಕ್ ನೀಡದ ಅಥವಾ ಇ-ಕೆವೈಸಿ ಮಾಡಿಸದ ಗ್ರಾಹಕರು ಮುಂದೆ ಸಬ್ಸಿಡಿ ರಹಿತ ಮಾರುಕಟ್ಟೆ ದರದಲ್ಲೇ ಸಿಲಿಂಡರ್ ಪಡೆಯಬೇಕಾಗುತ್ತದೆ.

