
ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಈ ಭ್ರಷ್ಟಾಚಾರ ಹಾಗೂ ರೋಗಿಗಳ ಶೋಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ಮೇಲೆ ಲೋಕಾಯುಕ್ತರ ದಾಳಿ: ಅವ್ಯವಸ್ಥೆಗಳು ಬಯಲು
ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಈ ಭ್ರಷ್ಟಾಚಾರ ಹಾಗೂ ರೋಗಿಗಳ ಶೋಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯ (ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆ) ಟ್ರಾಮಾ ಕೇರ್ ಸೆಂಟರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಹಲವು ಗಂಭೀರ ಅವ್ಯವಸ್ಥೆಗಳು ಬಯಲಾಗಿವೆ.
ಲೋಕಾಯುಕ್ತರ ವಿಶೇಷ ತಂಡವು ಪರಿಶೀಲನೆ ನಡೆಸಿದಾಗ, ಐಸಿಯುನಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿವೆ. ಇದಲ್ಲದೆ, ಐಸಿಯುನಲ್ಲಿ ಹಲವು ಹಾಸಿಗೆಗಳು ಖಾಲಿ ಇದ್ದರೂ ಸಹ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ದಾಖಲಾತಿ ನಿರಾಕರಿಸಲಾಗುತ್ತಿತ್ತು ಎಂಬುದು ಸಾಬೀತಾಗಿದೆ. ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ನೆಪವೊಡ್ಡಿ ರೋಗಿಗಳನ್ನು ವಾಪಸ್ ಕಳುಹಿಸುತ್ತಿರುವುದು ಆಸ್ಪತ್ರೆ ಆಡಳಿತದ ತೀವ್ರ ನಿರ್ಲಕ್ಷ್ಯವನ್ನು ಎತ್ತಿತೋರಿಸಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಂಬ್ಯುಲೆನ್ಸ್ ಹಾಗೂ ಮಧ್ಯವರ್ತಿಗಳ ಮಾಫಿಯಾ ಹಾವಳಿ
ಆಸ್ಪತ್ರೆಯ ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಮತ್ತು ಮಧ್ಯವರ್ತಿಗಳ ದೊಡ್ಡ ಜಾಲವೇ ಸಕ್ರಿಯವಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಸಾಮಾನ್ಯ ರೋಗಿಗಳ ಸೋಗಿನಲ್ಲಿ ಗುಪ್ತ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ, ರೋಗಿಗಳಿಗೆ "ಇಲ್ಲಿ ಸರಿಯಾದ ಸೌಲಭ್ಯಗಳಿಲ್ಲ, ವೆಂಟಿಲೇಟರ್ ಇಲ್ಲ" ಎಂದು ಹೆದರಿಸಿ ಬಲವಂತವಾಗಿ ಮೊದಲೇ ನಿಗದಿಪಡಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಮಧ್ಯವರ್ತಿಗಳು ಒತ್ತಡ ಹೇರುತ್ತಿದ್ದದ್ದು ಕಂಡುಬಂದಿದೆ. ಈ ದಂಧೆಯಲ್ಲಿ ಆಸ್ಪತ್ರೆಯ ಕೆಲವು ವೈದ್ಯರು ಮತ್ತು ಸಿಬ್ಬಂದಿ ಕೂಡ ಶಾಮೀಲಾಗಿ ಖಾಸಗಿ ಆಂಬ್ಯುಲೆನ್ಸ್ ಬಳಸುವಂತೆ ರೋಗಿಗಳ ಸಂಬಂಧಿಕರ ಮೇಲೆ ಒತ್ತಡ ಹೇರುತ್ತಿದ್ದರು ಎಂದು ವರದಿಯಾಗಿದೆ.
ಈ ಮಧ್ಯವರ್ತಿಗಳ ಹಾವಳಿ ಎಷ್ಟರ ಮಟ್ಟಿಗೆ ಮಿತಿಮೀರಿತ್ತೆಂದರೆ, ಕೆಲವು ಬಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ಮೇಲೂ ಹಲ್ಲೆಗಳು ನಡೆದಿವೆ ಎಂದು ಟ್ರಾಮಾ ಕೇರ್ ಸೆಂಟರ್‌ನ ಡಾ. ಅಸೀಮಾ ಅವರು ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದಾರೆ.
ಪ್ರೀಪೇಯ್ಡ್ ಆಂಬ್ಯುಲೆನ್ಸ್ ವ್ಯವಸ್ಥೆ
ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಈ ಭ್ರಷ್ಟಾಚಾರ ಹಾಗೂ ರೋಗಿಗಳ ಶೋಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಖಾಸಗಿ ಆಂಬ್ಯುಲೆನ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ತಕ್ಷಣವೇ ಪ್ರೀಪೇಯ್ಡ್ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸೂಚಿಸಿದ್ದಾರೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ನೋಟಿಸ್ ನೀಡಲಾಗಿದ್ದು, ಏಪ್ರಿಲ್ 27ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ಅಲ್ಲದೆ, ಆಸ್ಪತ್ರೆ ಆವರಣದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಹಾಗೂ ಮಧ್ಯವರ್ತಿಗಳನ್ನು ನಿಯಂತ್ರಿಸಲು ತಕ್ಷಣವೇ ಪೊಲೀಸ್ ಭದ್ರತೆಯನ್ನು ಹೆಚ್ಚಿಸುವಂತೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೆ ಸೂಚನೆ ನೀಡಿದ್ದಾರೆ.

