Ground Report: ಹಣದ ಮುಂದೆ ಜೀವಗಳಿಗೆ ಇಲ್ಲ ಬೆಲೆ: ಮಾದಾಪಟ್ಟಣ ಕ್ವಾರಿ ದುರಂತಕ್ಕೆ ಸ್ಥಳೀಯರ ಹಿಡಿಶಾಪ
x

Ground Report: ಹಣದ ಮುಂದೆ ಜೀವಗಳಿಗೆ ಇಲ್ಲ ಬೆಲೆ: ಮಾದಾಪಟ್ಟಣ ಕ್ವಾರಿ ದುರಂತಕ್ಕೆ ಸ್ಥಳೀಯರ ಹಿಡಿಶಾಪ

ಸ್ಥಳೀಯರು ಗಣಿ ಇಲಾಖೆ ಮತ್ತು ಮಾಲೀಕರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ವರ್ಷಗಳಿಂದ ಈ ಕ್ವಾರಿ ನಡೆಯುತ್ತಿದೆ. ಧೂಳು, ಶಬ್ದ ಮಾಲಿನ್ಯದಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


Click the Play button to hear this message in audio format

ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾದಾಪಟ್ಟಣ ಬಳಿಯ ಕಲ್ಲು ಗಣಿಗಾರಿಕೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ ಏಳು ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸುಮಾರು 150 ರಿಂದ 200 ಅಡಿ ಎತ್ತರದ ಬಂಡೆಯೊಂದು ಏಕಾಏಕಿ ಕುಸಿದುಬಿದ್ದ ಪರಿಣಾಮ, ಕೆಲಸದ ವಿರಾಮದಲ್ಲಿ ತಿಂಡಿ ತಿನ್ನಲು ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಗ್ಗಿನ ಜಾವದ ಕೆಲಸ ಮುಗಿಸಿ ಪ್ರಾಣ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದ ಕಾರ್ಮಿಕರು, ಕೊಂಚ ನೆಮ್ಮದಿಯ ಕ್ಷಣಕ್ಕಾಗಿ ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದರು. ಅವರ ಕೈಯಲ್ಲಿದ್ದ ರಾಗಿ ಮುದ್ದೆ, ಸಾಂಬಾರ್ ಬಟ್ಟಲುಗಳು ಹಾಗೆಯೇ ಉಳಿದುಕೊಂಡಿವೆ, ಆದರೆ ಆ ಕಾರ್ಮಿಕರು ಬಂಡೆಯ ಅಡಿಯಲ್ಲಿ ನಜ್ಜುಗುಜ್ಜಾಗಿದ್ದಾರೆ. ಸ್ಥಳದಲ್ಲಿ ರಕ್ತದ ಕಲೆಗಳು ಇನ್ನೂ ಹಸಿರಾಗಿದ್ದು, ಘಟನೆಯ ಭೀಕರತೆಯನ್ನು ಸಾರಿ ಹೇಳುತ್ತಿವೆ.

ಸ್ಥಳೀಯರ ಆಕ್ರೋಶ ಮತ್ತು ಭ್ರಷ್ಟಾಚಾರದ ಆರೋಪ:

ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ. "ವರ್ಷಗಳಿಂದ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸುರಕ್ಷತಾ ಕ್ರಮಗಳೇ ಇಲ್ಲ. ಲಾರಿಗಳ ಹಾವಳಿ, ದೂಳು, ಶಬ್ದ ಮಾಲಿನ್ಯದಿಂದ ನಮ್ಮ ಬದುಕು ನರಕವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಣ ಕೊಟ್ಟರೆ ಸಾಕು, ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ಸತ್ತವರ ಬದುಕಿಗೆ ಬೆಲೆ 5000 ರೂಪಾಯಿಯೇ? ನಮ್ಮ ಅಜ್ಜ-ತಾತಂದಿರ ಆಸ್ತಿ ಕಬಳಿಸಿ ದೌರ್ಜನ್ಯ ಎಸಗುತ್ತಿರುವ ಇವರು ರೌಡಿಗಳೇ?" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಸ್‌ಟಿ ಸೋಮಶೇಖರ್ ತರಾಟೆ:

ಘಟನಾ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಶಾಸಕ ಎಸ್‌ಟಿ ಸೋಮಶೇಖರ್, ಅಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ನಾನು ಈ ಬಗ್ಗೆ ಅಸೆಂಬ್ಲಿಯಲ್ಲಿ ದನಿ ಎತ್ತಿದ್ದೆ, ಪೆಟಿಷನ್ ಕಮಿಟಿಯಲ್ಲಿ ದೂರು ನೀಡಿದ್ದೆ. ಇಷ್ಟೆಲ್ಲಾ ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರಲು ಕಾರಣವೇನು? ಗಣಿ ಮಾಲೀಕನ ಹಣಬಲ, ತೋಳ್ಬಲದ ಮುಂದೆ ಸರ್ಕಾರವೇ ಮಂಡಿಯೂರಿತ್ತೇ? ಸಾಯಂಕಾಲದೊಳಗೆ ಮಾಲೀಕನನ್ನು ಬಂಧಿಸದಿದ್ದರೆ ಕ್ಷೇತ್ರದಾದ್ಯಂತ ಧರಣಿ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದರು. ಗಣಿ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದ ಶಾಸಕರು, ಅಧಿಕಾರಿಗಳೇ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಗಣಿ ಇಲಾಖೆಯ ಸ್ಪಷ್ಟನೆ:

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, "ಗಣಿಗಾರಿಕೆಗೆ ಕಾನೂನುಬದ್ಧ ಪರವಾನಗಿ ನೀಡಲಾಗಿದೆ. ಆದರೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಕಾರ್ಮಿಕರು ಹೆಲ್ಮೆಟ್ ಧರಿಸಿರಲಿಲ್ಲ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗಣಿಗಾರಿಕಾ ಲೈಸೆನ್ಸ್ ಅನ್ನು ತಕ್ಷಣವೇ ತಾತ್ಕಾಲಿಕವಾಗಿ ಅಮಾನತುಗೊಳಿಸುತ್ತೇವೆ. ಇನ್ಸ್ಪೆಕ್ಷನ್ ಆಗಿಲ್ಲ ಎಂಬ ಆರೋಪ ತಪ್ಪು, ನಾವು ನಿಯಮಿತವಾಗಿ ಭೇಟಿ ನೀಡುತ್ತಿದ್ದೆವು" ಎಂದು ಸಮಜಾಯಿಷಿ ನೀಡಿದರು.

ಉತ್ತರವಿಲ್ಲದ ಪ್ರಶ್ನೆಗಳು:

ಘಟನೆ ನಡೆದ ಐದಾರು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಳ್ಳದಿದ್ದುದು ಏಕೆ? ಅಧಿಕಾರಿಗಳು ಕ್ವಾರಿಯ ಮಾಲೀಕರ ಕೈಗೊಂಬೆಯಾಗಿದ್ದರೇ? ಏಳು ಜೀವಗಳನ್ನು ಬಲಿ ಪಡೆದ ಈ ದುರಂತಕ್ಕೆ ಯಾರು ಹೊಣೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಇಂತಹ ಅಕ್ರಮ ಗಣಿಗಾರಿಕೆಗಳಿಗೆ ಕಡಿವಾಣ ಹಾಕುತ್ತದೆಯೇ ಅಥವಾ ಮತ್ತೊಂದು ದುರಂತಕ್ಕೆ ಕಾಯುತ್ತದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Read More
Next Story