ಶಾಸಕರ ಭವನದ ವಾಹನಗಳ ದುರ್ಬಳಕೆಗೆ ಕಡಿವಾಣ: ಸಚಿವಾಲಯದಿಂದ ಕಠಿಣ ನಿಯಮ ಜಾರಿ
x

ಶಾಸಕರ ಭವನದ ವಾಹನಗಳ ದುರ್ಬಳಕೆಗೆ ಕಡಿವಾಣ: ಸಚಿವಾಲಯದಿಂದ ಕಠಿಣ ನಿಯಮ ಜಾರಿ

ಶಾಸಕರ ಹೆಸರನ್ನು ಬಳಸಿಕೊಂಡು ಅವರ ಆಪ್ತ ಸಹಾಯಕರು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಈ ವಾಹನಗಳನ್ನು ತಮ್ಮ ಸ್ವಂತ ಪ್ರವಾಸಗಳಿಗೆ ಅಥವಾ ಹೊರಜಿಲ್ಲೆಗಳಿಗೆ ಪ್ರಯಾಣಿಸಲು ಬಳಸುತ್ತಿದ್ದರು.


Click the Play button to hear this message in audio format

ರಾಜ್ಯದ ವಿವಿಧ ಮೂಲೆಗಳಿಂದ ಬರುವ ಶಾಸಕರಿಗೆ ಸೌಕರ್ಯ ಒದಗಿಸಲು ಶಾಸಕರ ಭವನ ಕಲ್ಪಿಸಲಾಗಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಶಾಸಕರ ಭವನಕ್ಕೆ ಮೀಸಲಾದ ಸರ್ಕಾರಿ ವಾಹನಗಳ ದುರ್ಬಳಕೆ ಕುರಿತಾದ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ವಿಧಾನಸಭೆ ಸಚಿವಾಲಯವು ಅತೀವ ಎಚ್ಚರಿಕೆ ವಹಿಸಿದ್ದು, ವಾಹನಗಳ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಶಾಸಕರ ಭವನದಲ್ಲಿರುವ ಸರ್ಕಾರಿ ವಾಹನಗಳು ಕೇವಲ ಶಾಸಕರ ಅಧಿಕೃತ ಕಾರ್ಯಗಳಿಗೆ ಬಳಕೆಯಾಗಬೇಕಾದವು. ಆದರೆ, ಶಾಸಕರ ಹೆಸರನ್ನು ಬಳಸಿಕೊಂಡು ಅವರ ಆಪ್ತ ಸಹಾಯಕರು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ್ತು ವೈಯಕ್ತಿಕ ಅತಿಥಿಗಳು ಈ ವಾಹನಗಳನ್ನು ತಮ್ಮ ಸ್ವಂತ ಪ್ರವಾಸಗಳಿಗೆ ಅಥವಾ ಹೊರಜಿಲ್ಲೆಗಳಿಗೆ ಪ್ರಯಾಣಿಸಲು ಬಳಸುತ್ತಿದ್ದರು. ಇದರಿಂದಾಗಿ, ಬೆಂಗಳೂರಿಗೆ ಅಧಿವೇಶನ ಅಥವಾ ಸಮಿತಿ ಸಭೆಗಳಿಗೆ ಬರುವ ಶಾಸಕರಿಗೆ ವಾಹನಗಳ ಕೊರತೆ ಉಂಟಾಗುತ್ತಿತ್ತು. ತುರ್ತು ಸಂದರ್ಭಗಳಲ್ಲಿಯೂ ವಾಹನಗಳು ಲಭ್ಯವಿಲ್ಲದ ಕಾರಣ ಸಚಿವಾಲಯಕ್ಕೆ ಮುಜುಗರ ಉಂಟಾಗುತ್ತಿತ್ತು. ಈ ನಿಟ್ಟಿನಲ್ಲಿ, ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಮೂಲಕ ಈ ಅಕ್ರಮಗಳಿಗೆ ಕಡಿವಾಣ ಹಾಕಿದ್ದಾರೆ.

ಹೊಸ ಮಾರ್ಗಸೂಚಿಗಳು

ಇನ್ಮುಂದೆ ಶಾಸಕರ ಭವನದ ವಾಹನಗಳು ಕೇವಲ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯೊಳಗೆ ಮಾತ್ರ ಚಲಿಸಬೇಕು. ಬೆಂಗಳೂರು ನಗರದ ಗಡಿಯಾಚೆಗೆ ವಾಹನಗಳನ್ನು ಕೊಂಡೊಯ್ಯುವಂತಿಲ್ಲ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಮಾತ್ರ ವಿನಾಯಿತಿ ನೀಡಲಾಗಿದೆ. ಉಳಿದಂತೆ ಯಾವುದೇ ಕಾರಣಕ್ಕೂ ನಗರದ ಗಡಿ ದಾಟುವಂತಿಲ್ಲ. ಒಂದು ವೇಳೆ ಅನಿವಾರ್ಯ ಅಥವಾ ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರಿನಿಂದ ಹೊರಗೆ ವಾಹನಗಳನ್ನು ಕೊಂಡೊಯ್ಯಬೇಕಾದ ಪರಿಸ್ಥಿತಿ ಬಂದರೆ, ಖುದ್ದು ಸಭಾಧ್ಯಕ್ಷ ಅವರಿಂದ ಲಿಖಿತ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಶಾಸಕರು ತಮ್ಮ ಆಪ್ತರು ಅಥವಾ ಪರಿಚಯಸ್ಥರಿಗೆ ಶಿಫಾರಸು ಪತ್ರ ನೀಡಿ ವಾಹನಗಳನ್ನು ಬಳಸಲು ಅವಕಾಶ ನೀಡುವಂತಿಲ್ಲ. ಅಂತಹ ಶಿಫಾರಸುಗಳನ್ನು ಸಚಿವಾಲಯವು ಸಂಪೂರ್ಣವಾಗಿ ನಿಷೇಧಿಸಿದೆ.

ವಾಹನಗಳ ಲಭ್ಯತೆ ಮತ್ತು ಸವಾಲು

ಪ್ರಸ್ತುತ, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಸೇರಿದಂತೆ ಶಾಸಕರಿಗಾಗಿ ಸುಮಾರು 80 ವಾಹನಗಳು ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸದಸ್ಯರಿಗಾಗಿ 40 ವಾಹನಗಳು ಲಭ್ಯವಿವೆ. ಒಟ್ಟು 120 ವಾಹನಗಳಿದ್ದರೂ, ನಿರ್ವಹಣಾ ಕೊರತೆ ಮತ್ತು ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ವಾಹನಗಳ ಕೊರತೆ ಎದುರಾಗಿದೆ. ವಾಹನ ಚಾಲಕರ ಕೊರತೆಯೂ ಇರುವುದರಿಂದ, ಲಭ್ಯವಿರುವ ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಬಳಸಬೇಕಾದ ಅಗತ್ಯವಿದೆ.

ಪಾರದರ್ಶಕತೆ, ನಗದು ರಹಿತ ವ್ಯವಸ್ಥೆ

ಈ ಹೊಸ ನಿಯಮದ ಅತಿದೊಡ್ಡ ಬದಲಾವಣೆಯೆಂದರೆ ಪಾರದರ್ಶಕತೆಯಾಗಿದೆ. ವಾಹನಗಳ ಬಳಕೆಗೆ ಪ್ರತಿ ಕಿಲೋಮೀಟರ್‌ಗೆ 8 ರೂಪಾಯಿಯಿಂದ 12 ರೂಪಾಯಿವರೆಗೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ. ಇದನ್ನು ಸಂಪೂರ್ಣವಾಗಿ ನಗದು ರಹಿತ ವ್ಯವಹಾರವನ್ನಾಗಿ ಮಾಡಲಾಗಿದೆ. ಶಾಸಕರು ಬಳಸಿದ ವಾಹನದ ಬಾಡಿಗೆಯನ್ನು ಅವರ ಮಾಸಿಕ ವೇತನದಿಂದಲೇ ನೇರವಾಗಿ ಕಡಿತಗೊಳಿಸಲಾಗುತ್ತದೆ. ಮಾಜಿ ಶಾಸಕರಾಗಿದ್ದರೆ ಅವರ ಪಿಂಚಣಿಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. ಈ ಕ್ರಮದಿಂದಾಗಿ, ಯಾವ ವಾಹನವನ್ನು ಯಾರು ಬಳಸಿದರು ಎಂಬ ನಿಖರವಾದ ಲೆಕ್ಕಪತ್ರ ಸಿಗುತ್ತದೆ. ತಮ್ಮ ಹೆಸರಿನಲ್ಲಿ ಹಣ ಕಡಿತವಾಗುವುದರಿಂದ, ಶಾಸಕರು ಅನಗತ್ಯವಾಗಿ ತಮ್ಮ ಆಪ್ತರಿಗೆ ವಾಹನಗಳನ್ನು ಶಿಫಾರಸು ಮಾಡಲು ಹಿಂಜರಿಯುತ್ತಾರೆ ಎಂಬುದು ಸಚಿವಾಲಯದ ಲೆಕ್ಕಾಚಾರವಾಗಿದೆ.

ನಿಜವಾದ ಅಗತ್ಯವಿರುವ ಶಾಸಕರಿಗೆ ವಾಹನಗಳು ಯಾವಾಗಲೂ ಲಭ್ಯವಿರುತ್ತವೆ. ವಾಹನಗಳ ದುರುಪಯೋಗ ಕಡಿಮೆಯಾದಂತೆ, ಇಂಧನ ಮತ್ತು ನಿರ್ವಹಣಾ ವೆಚ್ಚದಲ್ಲಿ ಸರ್ಕಾರಕ್ಕೆ ಉಳಿತಾಯವಾಗಲಿದೆ. ನಿಯಮಗಳ ಉಲ್ಲಂಘನೆಯಾಗುವುದಿಲ್ಲ ಎಂದು ಖಾತ್ರಿಪಡಿಸುವ ಮೂಲಕ ಜನಪ್ರತಿನಿಧಿಗಳ ಗೌರವ ಹೆಚ್ಚಲಿದೆ. ಸರ್ಕಾರಿ ವಾಹನಗಳು ಸಾರ್ವಜನಿಕರ ತೆರಿಗೆ ಹಣದಿಂದ ನಿರ್ವಹಿಸಲ್ಪಡುತ್ತವೆ. ಹೀಗಿರುವಾಗ, ಜನಪ್ರತಿನಿಧಿಗಳ ಆಪ್ತರು ಅಥವಾ ರಾಜಕೀಯ ಬೆಂಬಲಿಗರು ವೈಯಕ್ತಿಕ ಲಾಭಕ್ಕಾಗಿ ಈ ವಾಹನಗಳನ್ನು ಬಳಸುವುದರಿಂದ ಸರ್ಕಾರಿ ಬೊಕ್ಕಸಕ್ಕೆ ನಷ್ಟವಾಗುತ್ತಿತ್ತು. ಈಗಿನ ಈ ಕ್ರಮವು, ಸಾರ್ವಜನಿಕ ಆಸ್ತಿಯನ್ನು ಗೌರವಿಸುವ ಮತ್ತು ಅದರ ಜವಾಬ್ದಾರಿಯುತ ಬಳಕೆಯನ್ನು ಖಾತ್ರಿಪಡಿಸುವ ದಿಕ್ಕಿನಲ್ಲಿ ಒಂದು ಉತ್ತಮ ಹೆಜ್ಜೆಯಾಗಿದೆ.

Read More
Next Story