
ಎತ್ತಿನಹೊಳೆ ಯೋಜನೆ: ಲಕ್ಕೇನಹಳ್ಳಿ ಡ್ಯಾಂ ನಿರ್ಮಾಣಕ್ಕೆ ಸ್ಥಳೀಯರ ವಿರೋಧ
ಎತ್ತಿನಹೊಳೆ ಯೋಜನೆಯೇ ಕಾನೂನುಬಾಹಿರ. ಜಲಾಶಯ ನಿರ್ಮಾಣವು ಜನವಿರೋಧಿ, ಜೀವ ವಿರೋಧಿಯಾಗಿದೆ. ಕೂಡಲೇ ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಕೈಬಿಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಲಕ್ಕೇನಹಳ್ಳಿ ಜಲಾಶಯ ನಿರ್ಮಾಣ ಪ್ರಸ್ತಾವ ಕೈಬಿಡುವಂತೆ ಹಾಗೂ ಈ ಸಂಬಂಧ ಜು. 2 ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಲು ಆಗ್ರಹಿಸಿ ಮುಳುಗಡೆ ಗ್ರಾಮಗಳ ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಸುಮಾರು 9 ಗ್ರಾಮಗಳ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಎತ್ತಿನಹೊಳೆ ಯೋಜನೆಗಾಗಿ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಬಳಿ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಸುತ್ತಲಿನ ಗ್ರಾಮಗಳಾದ ದಾಸರಪಾಳ್ಯ, ಸಿಂಗೇನಹಳ್ಳಿ, ಶ್ರೀರಾಮನಹಳ್ಳಿ, ಸಾಸಲು ಸೇರಿದಂತೆ ಹಲವು ಗ್ರಾಮಗಳು ಸ್ಥಳಾಂತರದ ಭೀತಿ ಎದುರಿಸುತ್ತಿವೆ. ಹಾಗಾಗಿ, ಯಾವುದೇ ಕಾರಣಕ್ಕೂ ಜಲಾಶಯ ನಿರ್ಮಾಣಕ್ಕೆ ರೈತರು ಭೂಮಿ ನೀಡುವುದಿಲ್ಲ. ಜತೆಗೆ ಗ್ರಾಮಗಳನ್ನು ತೊರೆಯುವುದಿಲ್ಲ. ಜಲಾಶಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವುದಕ್ಕೆ ಸ್ಥಳೀಯರ ವಿರೋಧವಿದೆ. ಕೂಡಲೇ ಜಲಾಶಯ ನಿರ್ಮಾಣ ಯೋಜನೆ ಕೈ ಬಿಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಎತ್ತಿನಹೊಳೆ ಯೋಜನೆಯೇ ಕಾನೂನುಬಾಹಿರ. ಜಲಾಶಯ ನಿರ್ಮಾಣವು ಜನವಿರೋಧಿ, ಜೀವ ವಿರೋಧಿಯಾಗಿದೆ. ಕೂಡಲೇ ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಕೈಬಿಡಬೇಕು. ಎತ್ತಿನಹೊಳೆ ಯೋಜನೆ ಸಂಬಂಧ ಶ್ವೇತ ಪತ್ರ ಹೊರಡಿಸಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಿಎಜಿ ನೀಡಿರುವ ವರದಿಗೆ ರಾಜ್ಯ ಸರ್ಕಾರ ಸಮರ್ಪಕ ಉತ್ತರ ನೀಡಬೇಕು. ಕುಡಿಯುವ ನೀರಿನ ಯೋಜನೆ ಎಂದು ಆರಂಭಿಸಿ, ಇದೀಗ ನೀರಾವರಿ ಯೋಜನೆ ಎಂದು ಹೇಳುತ್ತಿದೆ. ಯೋಜನೆ ವಿಳಂಬದಿಂದ ವರ್ಷದಿಂದ ವರ್ಷಕ್ಕೆ ವೆಚ್ಚವೂ ಹೆಚ್ಚುತ್ತಿದೆ. ರಾಜಕಾರಣಿಗಳಿಗೆ ಎತ್ತಿನಹೊಳೆ ಯೋಜನೆ ಎಟಿಎಂ ನಂತಿದೆ. ಇಂತಹ ಜನವಿರೋಧಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂದು ಆಗ್ರಹಿಸಿದ್ದಾರೆ.
ಮುಖಂಡರಾದ ಶಿವಣ್ಣ, ಮಂಜುನಾಥ್, ಹನುಮಂತಯ್ಯ, ಗೋವಿಂದರಾಜ್, ಲಕ್ಷ್ಮಮ್ಮ, ವಕೀಲರಾದ ಎಸ್.ಎನ್.ನರಸಿಂಹಗೌಡ ಇತರರು ಭಾಗವಹಿಸಿದ್ದರು.

