ಕುಮಾರ ಪರ್ವತ ಚಾರಣಿಗರಿಗೆ ಗುಡ್ ನ್ಯೂಸ್: ಬೆಳಗ್ಗೆ 5.30ಕ್ಕೆ ಚಾರಣ ಆರಂಭಿಸಲು ಒಪ್ಪಿಗೆ
x

ಕುಮಾರ ಪರ್ವತ ಚಾರಣಿಗರಿಗೆ ಗುಡ್ ನ್ಯೂಸ್: ಬೆಳಗ್ಗೆ 5.30ಕ್ಕೆ ಚಾರಣ ಆರಂಭಿಸಲು ಒಪ್ಪಿಗೆ

ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೆಳಗ್ಗೆ 5.30ಕ್ಕೆ ಆರಂಭಿಸಿ ಸಂಜೆ 6 ಗಂಟೆಯೊಳಗೆ ಕಡ್ಡಾಯವಾಗಿ ವಾಪಸ್ ಬರಬೇಕು ಎಂಬ ಷರತ್ತನ್ನು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ವಿಧಿಸಿದ್ದಾರೆ.


Click the Play button to hear this message in audio format

ರಾಜ್ಯದ ಅತ್ಯಂತ ಕಠಿಣ ಹಾಗೂ ಪ್ರಸಿದ್ಧ ಚಾರಣ ಮಾರ್ಗಗಳಲ್ಲಿ ಒಂದಾದ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣದ ನಿಯಮಾವಳಿಗಳು ಮತ್ತು ರಾಜ್ಯದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಸ್ಥಗಿತಗೊಳಿಸಿದ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಕುಮಾರ ಪರ್ವತ ಚಾರಣವನ್ನು ಬೆಳಗ್ಗೆ 5.30 ಗಂಟೆಗೆ ಆರಂಭಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಒಪ್ಪಿಗೆ ಸೂಚಿಸಿದರು.‌

ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಹೋಗುವ ಚಾರಣಿಗರಿಗೆ ಕಳೆದ ಕೆಲವು ದಿನಗಳಿಂದ ವಿಧಿಸಲಾಗಿದ್ದ ಸಮಯದ ನಿರ್ಬಂಧದ ಬಗ್ಗೆ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯಾ ಪ್ರಶ್ನೋತ್ತರ ಅವಧಿಯಲ್ಲಿ ಧ್ವನಿ ಎತ್ತಿದರು. ಈ ಹಿಂದೆ ಚಾರಣವು ಮುಂಜಾನೆ 5 ಗಂಟೆಗೆ ಆರಂಭವಾಗುತ್ತಿತ್ತು, ಆದರೆ ಇತ್ತೀಚೆಗೆ ಅದನ್ನು ಬೆಳಿಗ್ಗೆ 6 ಗಂಟೆಗೆ ಬದಲಾಯಿಸಲಾಗಿತ್ತು. ಈ ಒಂದು ಗಂಟೆಯ ವ್ಯತ್ಯಾಸದಿಂದಾಗಿ ಚಾರಣಿಗರು ನಿಗದಿತ ಸಮಯಕ್ಕೆ ಶಿಖರ ತಲುಪಲು ಸಾಧ್ಯವಾಗುತ್ತಿಲ್ಲ ಮತ್ತು ಶೇಷಗಿರಿ ಪರ್ವತದಂತಹ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ಎಂಬ ಅಂಶವನ್ನು ಸರ್ಕಾರದ ಗಮನಕ್ಕೆ ತಂದರು. ಚಾರಣಿಗರ ಅನುಕೂಲಕ್ಕಾಗಿ ಹಳೆಯ ಪದ್ಧತಿಯನ್ನೇ ಮುಂದುವರಿಸಬೇಕೆಂದು ಮನವಿ ಮಾಡಿದರು.

ಶಾಸಕಿಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ, ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಾರಣ ಆರಂಭದ ಸಮಯವನ್ನು ಬೆಳಿಗ್ಗೆ 5.30ಕ್ಕೆ ನಿಗದಿಪಡಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಆದರೆ, ಚಾರಣಿಗರು ಸಂಜೆ 6 ಗಂಟೆಯೊಳಗೆ ಕಡ್ಡಾಯವಾಗಿ ವಾಪಸ್ ಬರಬೇಕು ಎಂಬ ಷರತ್ತನ್ನು ವಿಧಿಸಿದರು.

ಕುಮಾರ ಪರ್ವತ ಚಾರಣದ ಕಠಿಣತೆಯನ್ನು ವಿವರಿಸಿದ ಸಚಿವರು, ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಹೋಗಿ ಬರಲು ಸುಮಾರು 24 ಕಿಲೋಮೀಟರ್ ದೂರ ಕ್ರಮಿಸಬೇಕು. ಹಳೆಯ ಪದ್ಧತಿಯಲ್ಲಿ ಚಾರಣಿಗರು ಅಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ, ದಟ್ಟ ಕಾಡಿನಲ್ಲಿ ಕಾಡುಪ್ರಾಣಿಗಳ ಸಂಚಾರವಿರುವುದರಿಂದ ಪ್ರವಾಸಿಗರ ರಕ್ಷಣೆ ನಮಗೆ ಮುಖ್ಯವಾಗಿದೆ. 19 ರಿಂದ 24 ಕಿ.ಮೀ ಚಾರಣಕ್ಕೆ ಕನಿಷ್ಠ 10 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ, ಪ್ರವಾಸಿಗರು ರಾತ್ರಿ ಕಾಡಿನಲ್ಲಿ ಉಳಿಯದಂತೆ ತಡೆಯಲು ಮತ್ತು ಸಂಜೆ 6ರೊಳಗೆ ಸುರಕ್ಷಿತವಾಗಿ ಮರಳುವಂತೆ ಮಾಡಲು ಸಮಯದ ಮಿತಿಯನ್ನು ಹೇರಲಾಗಿದೆ ಎಂದರು. ಅಲ್ಲದೆ, ಬೇಸಿಗೆಯ ಸಮಯದಲ್ಲಿ ಕಾಡ್ಗಿಚ್ಚಿನ ಅಪಾಯವಿರುವುದರಿಂದ ಮತ್ತು ಸಾವಿರಾರು ಜನರು ಒಂದೇ ಕಡೆ ಜಮಾಯಿಸುವುದರಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಯಲು ಈ ಕಟ್ಟುನಿಟ್ಟಿನ ಕ್ರಮಗಳು ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಸಫಾರಿಯನ್ನು ಏಕಾಏಕಿ ಸ್ಥಗಿತಗೊಳಿಸಿರುವ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದರು. ಸಫಾರಿ ಸ್ಥಗಿತದಿಂದಾಗಿ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಸುಮಾರು 4 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಿವೆ. ಯಾವುದೇ ವೈಜ್ಞಾನಿಕ ಸಮೀಕ್ಷೆ ನಡೆಸದೆ ಇಂತಹ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ ಖಂಡ್ರೆ, ಸಫಾರಿಯನ್ನು ಕೇವಲ ಪ್ರವಾಸೋದ್ಯಮದ ದೃಷ್ಟಿಯಿಂದ ನೋಡುವುದಕ್ಕಿಂತ ಜೀವಹಾನಿಯ ತಡೆಗಟ್ಟುವಿಕೆಯ ದೃಷ್ಟಿಯಿಂದ ನೋಡಬೇಕಿದೆ ಎಂದರು. ಕಳೆದ ನವೆಂಬರ್ ತಿಂಗಳಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಹುಲಿ ದಾಳಿಗೆ ಮೂವರು ಬಲಿಯಾಗಿದ್ದರು ಮತ್ತು ಒಬ್ಬರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಸಫಾರಿ ವಾಹನಗಳ ಅತಿಯಾದ ಸಂಚಾರದಿಂದ ವನ್ಯಜೀವಿಗಳು ವಿಚಲಿತವಾಗಿ ಕಾಡಿನಂಚಿನ ಗ್ರಾಮಗಳಿಗೆ ನುಗ್ಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಜನರ ಜೀವ ಉಳಿಸಲು ತಾತ್ಕಾಲಿಕವಾಗಿ ಸಫಾರಿ ಬಂದ್ ಮಾಡಲಾಗಿತ್ತು ಎಂದ ಹೇಳಿದರು.

ಹುಲಿಗಳ ಸಂಖ್ಯೆ ಹೆಚ್ಚಳ

ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 1972ರಲ್ಲಿ ಕೇವಲ 12 ಇದ್ದ ಹುಲಿಗಳ ಸಂಖ್ಯೆ, ಈಗ 175ಕ್ಕೆ ಏರಿದೆ. ಆದರೆ, ಹುಲಿಗಳ ಸಂಖ್ಯೆ ಹೆಚ್ಚಾದಂತೆ ಕಾಡಿನ ವಿಸ್ತೀರ್ಣ ಹೆಚ್ಚುತ್ತಿಲ್ಲ, ಬದಲಾಗಿ ಕ್ಷೀಣಿಸುತ್ತಿದೆ. ಇದು 'ಮಾನವ-ವನ್ಯಜೀವಿ ಸಂಘರ್ಷ'ಕ್ಕೆ ಪ್ರಮುಖ ಕಾರಣವಾಗಿದೆ. ಕಾಡಿನ 'ಧಾರಣಾ ಸಾಮರ್ಥ್ಯ' ಎಷ್ಟಿದೆ ಎಂಬುದನ್ನು ತಿಳಿಯಲು ತಜ್ಞರ ಸಮಿತಿಯಿಂದ ವರದಿ ತರಿಸಲಾಗುತ್ತಿದೆ. ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಗಳನ್ನೊಳಗೊಂಡ ಈ ಸಮಿತಿಯ ಪ್ರಾಥಮಿಕ ವರದಿಯ ಆಧಾರದ ಮೇಲೆಯೇ ಈಗ ಷರತ್ತುಬದ್ಧವಾಗಿ ಸಫಾರಿಯನ್ನು ಪುನಾರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅರಣ್ಯ ಇಲಾಖೆಯು ಕೇವಲ ನಿರ್ಬಂಧಗಳನ್ನು ಹೇರುವುದಷ್ಟೇ ಅಲ್ಲದೆ, ಸ್ಥಳೀಯರ ಹಿತವನ್ನೂ ಕಾಪಾಡುತ್ತಿದೆ. ಸಫಾರಿಯಿಂದ ಬರುವ ಒಟ್ಟು ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ. ಈ ಹಣವನ್ನು ಸ್ಥಳೀಯರಲ್ಲಿ ಜನಸಂಪರ್ಕ ಸಭೆ ನಡೆಸಲು, ಶಿಕ್ಷಣ ನೀಡಲು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಉದ್ಯೋಗ ಸೃಷ್ಟಿಗೆ ಬಳಸುವಂತೆ ಸೂಚನೆ ನೀಡಲಾಗಿದೆ. ಇದರಿಂದ ಕಾಡಿನಂಚಿನ ಜನರ ಮತ್ತು ಅರಣ್ಯ ಇಲಾಖೆಯ ನಡುವೆ ಉತ್ತಮ ಬಾಂಧವ್ಯ ಮೂಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಂಡೀಪುರದ 314 ಕಿ.ಮೀ ಗಡಿ ಪ್ರದೇಶದಲ್ಲಿ ಅತಿ ಹೆಚ್ಚು ಸಂಘರ್ಷ ನಡೆಯುವ 100 ಕಿ.ಮೀ ವ್ಯಾಪ್ತಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸ್ಥಾಪಿಸಿ, ಸಿಬ್ಬಂದಿಗಳು ದಿನದ 14 ಗಂಟೆಗಳ ಕಾಲ ಗಸ್ತು ತಿರುಗುವಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಮಗ್ರ ಕಮಾಂಡ್ ಸೆಂಟರ್ ಮೂಲಕ ಅರಣ್ಯದ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ ಎಂದು ಹೇಳಿದರು.

Read More
Next Story