KSRTC wins National Award for Dhwani Spandana, Avatar 4.0 project
x

ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್‌ (ಸಾಂದರ್ಭಿಕ ಚಿತ್ರ)

KSRTC |'ಧ್ವನಿ ಸ್ಪಂದನ', 'ಅವತಾರ್ 4.0' ಯೋಜನೆಗೆ ರಾಷ್ಟ್ರೀಯ ಪ್ರಶಸ್ತಿ ಗರಿ

ʼಅವತಾರ್‌ʼ ಕೆಎಸ್‌ಆರ್‌ಟಿಸಿಯ ಪ್ರಮುಖ ಡಿಜಿಟಲ್ ಆಸನ ಕಾಯ್ದರಿಸುವಿಕೆ ವ್ಯವಸ್ಥೆಯಾಗಿದ್ದು, ಪ್ರಯಾಣಿಕರು ವೆಬ್ ಹಾಗೂ ಮೊಬೈಲ್ ಮೂಲಕ ಯಾವುದೇ ಸ್ಥಳದಿಂದ ಟಿಕೆಟ್‌ಗಳನ್ನು ಸುಲಭವಾಗಿ ಕಾಯ್ದಿರಿಸಲು ಅವಕಾಶ ನೀಡುತ್ತದೆ.


Click the Play button to hear this message in audio format

ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಪ್ರಯಾಣಿಕರಿಗೆ ಅತ್ಯುತ್ತಮ ಹಾಗೂ ಸುರಕ್ಷಿತ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ದೇಶದಲ್ಲೇ ರಾಜ್ಯ ಸಾರಿಗೆ ಬಸ್‌ಗಳು ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಿಗಮದ ಜನಸ್ನೇಹಿ ಹಾಗೂ ತಾಂತ್ರಿಕ ಉಪಕ್ರಮಗಳಿಗೆ ಪ್ರತಿಷ್ಠಿತ 'ಎಲೆಟ್ಸ್ ಮೊಬಿಲಿಟಿ ಎಕ್ಸಲೆನ್ಸ್' ರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದೆ. ನಿಗಮದ ವಿನೂತನ ಯೋಜನೆಗಳಾದ 'ಧ್ವನಿಸ್ಪಂದನ' ಹಾಗೂ 'ಅವತಾರ್ 4.0' ಎರಡು ಪ್ರತ್ಯೇಕ ವಿಭಾಗಗಳಲ್ಲಿ ಈ ಅತ್ಯುನ್ನತ ಗೌರವಕ್ಕೆ ಭಾಜನವಾಗಿವೆ.

ವಿಕಲಚೇತನರ ಪ್ರಯಾಣ ಸುಗಮಗೊಳಿಸಿದ 'ಧ್ವನಿಸ್ಪಂದನ'

ನಾಗರಿಕ ಒಳಗೊಳ್ಳುವಿಕೆ ಮತ್ತು ಅಂತರ್ಗತ ಚಲನಶೀಲತೆ ವಿಭಾಗದಲ್ಲಿ ಕೆಎಸ್‌ಆರ್‌ಟಿಸಿಯ 'ಧ್ವನಿಸ್ಪಂದನ' ಉಪಕ್ರಮವು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಜರ್ಮನಿಯ ಜಿಐಝಡ್ (GiZ) ಸಂಸ್ಥೆಯ ಸಹಯೋಗದೊಂದಿಗೆ ಮೈಸೂರು ನಗರ ಸಾರಿಗೆಯ 200 ಬಸ್‌ಗಳಲ್ಲಿ ಈ ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ವಿಶೇಷವಾಗಿ ದೃಷ್ಟಿ ವಿಕಲಚೇತನ ಪ್ರಯಾಣಿಕರ ಪರಾವಲಂಬನೆಯನ್ನು ತಪ್ಪಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಹಾಗೂ ಸ್ವತಂತ್ರ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕೆಎಸ್‌ಆರ್‌ಟಿಸಿ ನಿರ್ದೇಶಕಿ ಗಾಯಿತ್ರಿ ಕೆ. ಎಂ. ಅವರು ನಿಗಮದ ಪರವಾಗಿ ಈ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸಿದರು.

ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್‌ಆರ್‌ಟಿಸಿ ನಿರ್ದೇಶಕಿ ಗಾಯಿತ್ರಿ ಕೆ. ಎಂ. ಪ್ರಶಸ್ತಿಯನ್ನು ಸ್ವೀಕರಿಸಿದರು.

ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದ 'ಅವತಾರ್ 4.0'

ಸಾರ್ವಜನಿಕ ಸಾರಿಗೆಯ ಅತ್ಯುತ್ತಮ ಡಿಜಿಟಲೀಕರಣ ವಿಭಾಗದಲ್ಲಿ ನಿಗಮದ ಮಹತ್ವಾಕಾಂಕ್ಷಿ 'ಅವತಾರ್ 4.0' ಯೋಜನೆಗೆ ಪ್ರಶಸ್ತಿ ಲಭಿಸಿದೆ. ಎನಿವೇರ್ ಎನಿಟೈಮ್ ಅಡ್ವಾನ್ಸ್ ರಿಸರ್ವೇಶನ್ ವ್ಯವಸ್ಥೆಯು ಪ್ರಯಾಣಿಕರಿಗೆ ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ವೆಬ್ ಮತ್ತು ಮೊಬೈಲ್ ಮೂಲಕ ಸುಲಭವಾಗಿ ಟಿಕೆಟ್ ಕಾಯ್ದಿರಿಸಲು ಅನುವು ಮಾಡಿಕೊಟ್ಟಿದೆ. ನೈಜ ಸಮಯದ ಆಸನ ಲಭ್ಯತೆ ಮತ್ತು ತಕ್ಷಣದ ದೃಢೀಕರಣದಂತಹ ಸೌಲಭ್ಯಗಳು ಪ್ರಯಾಣಿಕರ ಅನುಭವವನ್ನು ಮೇಲ್ದರ್ಜೆಗೇರಿಸಿವೆ. ಇದರ ಜೊತೆಗೆ ಅಳವಡಿಸಲಾಗಿರುವ ಡೈನಾಮಿಕ್ ಯುಪಿಐ (Dynamic UPI) ಪಾವತಿ ವ್ಯವಸ್ಥೆಯು ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣ ನಗದುರಹಿತವಾಗಿಸಿದ್ದು, ನಿಗಮದ ಆರ್ಥಿಕ ವ್ಯವಹಾರಗಳಲ್ಲಿ ವೇಗ, ಸುರಕ್ಷತೆ ಮತ್ತು ಅತ್ಯುನ್ನತ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ನೆರವಾಗಿದೆ.

Read More
Next Story