PUC Exams|KSRTC Good News for PU Students: Do this to travel for free!
x

ಸಾಂದರ್ಭಿಕ ಚಿತ್ರ

PUC Exams|ಪಿಯು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ: ಉಚಿತವಾಗಿ ಪ್ರಯಾಣಿಸಲು ನೀವು ಹೀಗೆ ಮಾಡಿ!

ಚಾಲನಾ ಸಿಬ್ಬಂದಿಗಳು ಕೆಎಸ್‌ಆರ್‌ಟಿಸಿ ಹೊರಡಿಸಿರುವ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು. ಎಲ್ಲಾ ಘಟಕ ಮತ್ತು ಬಸ್ ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.


Click the Play button to hear this message in audio format

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಸಿಹಿ ಸುದ್ದಿಯೊಂದನ್ನು ನೀಡಿದ್ದು, ನಿಮ್ಮ ಬಳಿ ಪಾಸ್‌ ಇಲ್ಲದಿದ್ದರೂ ನೀವು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಿದೆ.

ಶುಕ್ರವಾರ (ಫೆ.13) ಕೆಎಸ್‌ಆರ್‌ಟಿಸಿ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಎಸ್‌.ರಾಜೇಶ್‌ ಆದೇಶ ಹೊರಡಿಸಿದ್ದು, "ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರ ತೋರಿಸಿದರೆ ಪ್ರಯಾಣಕ್ಕೆ ಅನುಮತಿ ನೀಡಬೇಕು ಎಂದು ನಿಗಮದ ಎಲ್ಲಾ ಚಾಲಕರು ಹಾಗೂ ನಿರ್ವಾಹಕರುಗಳಿಗೆ ತಿಳಿಸಿದ್ದು, ಬಸ್ಸುಗಳ ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೋರಿಕೆ ಮೇರೆಗೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳಬೇಕು. " ಎಂದು ಆದೇಶಿಸಿದ್ದಾರೆ.

ಚಾಲನಾ ಸಿಬ್ಬಂದಿಗಳು ಕೆಎಸ್‌ಆರ್‌ಟಿಸಿ ಹೊರಡಿಸಿರುವ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು. ಎಲ್ಲಾ ಘಟಕ ಮತ್ತು ಬಸ್ ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಿ ಆದೇಶವನ್ನು ಜಾರಿಗೊಳಿಸಲು ಕ್ರಮ ವಹಿಸುವಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಯಾವ ಬಸ್‌ಗಳಲ್ಲಿ ಅವಕಾಶ ?

ಫೆ.28 ರಿಂದ ಮಾ.17ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ʼದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರವನ್ನುʼ ತೋರಿಸಿ, ನಿಗಮದ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಪತ್ರ ಬರೆದಿದ್ದ ಪರೀಕ್ಷಾ ಮಂಡಳಿ

ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆ.28 ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರೆ ಕಾಲೇಜುಗಳಿಗೂ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುದರಿಂದ, ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರು ಫೆ.6 ರಂದು ಕೆಎಸ್‌ಆರ್‌ಟಿಸಿಗೆ ಪತ್ರ ಬರೆದಿದ್ದರು. ಈ ಮನವಿಗೆ ಸ್ಪಂದಿಸಿರುವ ಸಾರಿಗೆ ಇಲಾಖೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಆದೇಶಿಸಿದೆ.

5.36 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ

2024 ಹಾಗೂ 25ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5.36 ಲಕ್ಷ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರು. 2025 ಹಾಗೂ 26ನೇ ಸಾಲಿನಲ್ಲಿಯೂ ಅಂದಾಜು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದು, ಕೆಎಸ್‌ಆರ್‌ಟಿಸಿ ಹೊರಡಿಸಿರುವ ಆದೇಶ ಎಲ್ಲರಿಗೂ ಅನುಕೂಲವಾಗಲಿದೆ.

Read More
Next Story