ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ನಿಗದಿಗೆ ಪ್ರತ್ಯೇಕ ಸಮಿತಿ: ಸಚಿವ ರಾಮಲಿಂಗಾರೆಡ್ಡಿ
x

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ನಿಗದಿಗೆ ಪ್ರತ್ಯೇಕ ಸಮಿತಿ: ಸಚಿವ ರಾಮಲಿಂಗಾರೆಡ್ಡಿ

ಸಾರಿಗೆ ಸಂಸ್ಥೆಗಳ ಖರ್ಚು ವೆಚ್ಚಗಳನ್ನು ಆಧರಿಸಿ ವೈಜ್ಞಾನಿಕವಾಗಿ ದರ ನಿಗದಿಪಡಿಸಲು ಸರ್ಕಾರ ಸ್ವತಂತ್ರ ಸಮಿತಿ ರಚಿಸುತ್ತಿದ್ದು, ಇನ್ಮುಂದೆ ಟಿಕೆಟ್ ದರ ಏರಿಕೆಯಲ್ಲಿ ರಾಜಕೀಯ ಹಸ್ತಕ್ಷೇಪವಿರುವುದಿಲ್ಲ.


Click the Play button to hear this message in audio format

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳ ಟಿಕೆಟ್ ದರ ಏರಿಕೆ ಪ್ರಕ್ರಿಯೆಯಲ್ಲಿ ಇನ್ನು ಮುಂದೆ ರಾಜ್ಯ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡುವುದಿಲ್ಲ.

ಮೆಟ್ರೋ ಮತ್ತು ಬೆಸ್ಕಾಂ ಮಾದರಿಯಲ್ಲಿ ಪ್ರಯಾಣ ದರ ಪರಿಷ್ಕರಣೆಗಾಗಿ ಸ್ವತಂತ್ರ ಸಮಿತಿಯೊಂದನ್ನು ರಚಿಸಲಾಗುತ್ತಿದ್ದು, ಸಮಿತಿಯ ಅಧ್ಯಕ್ಷರ ನೇಮಕ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ಮಾಹಿತಿ ನೀಡಿದ್ದಾರೆ.

ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಹಾಗೂ ಮಾರುಕಟ್ಟೆಯ ಏರಿಳಿತಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ದರ ನಿಗದಿಪಡಿಸುವ ಉದ್ದೇಶದಿಂದ ಸರ್ಕಾರ ಈ ಹೊಸ ಹೆಜ್ಜೆ ಇಟ್ಟಿದೆ. ರಚನೆಯಾಗಲಿರುವ ನೂತನ ಸಮಿತಿಯು ಸಾರಿಗೆ ಸಂಸ್ಥೆಗಳ ಇಂಧನ ವೆಚ್ಚ, ಬಿಡಿಭಾಗಗಳ ದರದ ಏರಿಳಿತ ಮತ್ತು ಒಟ್ಟಾರೆ ನಿರ್ವಹಣಾ ವೆಚ್ಚಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಿದೆ. ಈ ಆರ್ಥಿಕ ಲೆಕ್ಕಾಚಾರಗಳ ಆಧಾರದ ಮೇಲೆ ಕಾಲಕಾಲಕ್ಕೆ ದರ ಪರಿಷ್ಕರಣೆಯ ಬಗ್ಗೆ ಸರ್ಕಾರಕ್ಕೆ ಸಮಿತಿಯೇ ಶಿಫಾರಸು ಮಾಡಲಿದೆ. ಇದರಿಂದಾಗಿ ದಿಢೀರನೆ ದೊಡ್ಡ ಮೊತ್ತದ ದರ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆ ಮಾಡುವ ಬದಲು, ವೈಜ್ಞಾನಿಕವಾಗಿ ಸಣ್ಣ ಪ್ರಮಾಣದ ಏರಿಕೆ ಮಾಡುವ ಮೂಲಕ ಸಂಸ್ಥೆ ಮತ್ತು ಸಾರ್ವಜನಿಕರ ಹಿತ ಕಾಯಲು ಸಾಧ್ಯವಾಗಲಿದೆ.

ಸದ್ಯಕ್ಕೆ ಟಿಕೆಟ್ ದರ ಏರಿಕೆ ಇಲ್ಲ

ಸಮಿತಿ ರಚನೆ ಪ್ರಕ್ರಿಯೆ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ದರ ಹೆಚ್ಚಳದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ನಿವಾರಿಸಲು ಈಗಾಗಲೇ ಸದನದಲ್ಲಿ ಸಮಿತಿ ರಚನೆಗೆ ಶಿಫಾರಸು ಮಾಡಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ನ್ಯಾಯಾಧೀಶರು ಅಥವಾ ಐಎಎಸ್ ಅಧಿಕಾರಿಯನ್ನು ನೇಮಿಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಸ್ ದರ ಏರಿಕೆಯ ವದಂತಿಗಳನ್ನು ತಳ್ಳಿಹಾಕಿದ ಅವರು, ಸದ್ಯಕ್ಕೆ ಟಿಕೆಟ್ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ, ಸಾರ್ವಜನಿಕರು ಇಂತಹ ಊಹಾಪೋಹಗಳಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಎಂಟಿಸಿಯಲ್ಲಿ 2014ರಲ್ಲಿ ಹಾಗೂ ಉಳಿದ ಸಂಸ್ಥೆಗಳಲ್ಲಿ 2020ರಲ್ಲಿ ಕೊನೆಯದಾಗಿ ದರ ಪರಿಷ್ಕರಣೆ ಮಾಡಲಾಗಿತ್ತು. ಪ್ರಸ್ತುತ ಸಂಸ್ಥೆಗಳ ಖರ್ಚುವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ಭವಿಷ್ಯದಲ್ಲಿ ಆಗಾಗ ದರ ಪರಿಷ್ಕರಣೆ ಅನಿವಾರ್ಯವಾದರೂ, ಸದ್ಯಕ್ಕೆ ದರ ಏರಿಕೆಯ ಪ್ರಶ್ನೆಯೇ ಇಲ್ಲ ಎಂದರು.

ಮೆಟ್ರೋ, ಬೆಸ್ಕಾಂ ಮಾದರಿಯ ವ್ಯವಸ್ಥೆ

ನಮ್ಮ ಮೆಟ್ರೋದಲ್ಲಿ ದರ ನಿಗದಿಪಡಿಸಲು ನಿವೃತ್ತ ನ್ಯಾಯಾಧೀಶರು ಅಥವಾ ನಿವೃತ್ತ ಅಧಿಕಾರಿಗಳನ್ನೊಳಗೊಂಡ 'ಫೇರ್ ಫಿಕ್ಸೇಶನ್ ಕಮಿಟಿ' (ಎಫ್‌ಎಫ್‌ಸಿ) ಕಾರ್ಯನಿರ್ವಹಿಸುತ್ತಿದ್ದು, ಇದು ಸರ್ಕಾರದ ಯಾವುದೇ ಒತ್ತಡವಿಲ್ಲದೆ ಆರ್ಥಿಕ ಲೆಕ್ಕಾಚಾರದ ಮೇಲೆ ದರ ನಿಗದಿ ಮಾಡುತ್ತದೆ. ಅದೇ ರೀತಿ ವಿದ್ಯುತ್ ದರವನ್ನು ಸರ್ಕಾರ ನಿಗದಿ ಮಾಡದೆ, ಕೆಇಆರ್‌ಸಿ ಎಂಬ ಸ್ವತಂತ್ರ ಸಂಸ್ಥೆ ಕಂಪನಿಗಳ ಖರ್ಚುವೆಚ್ಚ ಆಧರಿಸಿ ನಿರ್ಧರಿಸುತ್ತದೆ. ನಾಗರಿಕ ವಿಮಾನಯಾನದಲ್ಲಿಯೂ ಬೇಡಿಕೆ ಮತ್ತು ನಿರ್ವಹಣಾ ವೆಚ್ಚಗಳ ಆಧಾರದ ಮೇಲೆ ದರ ನಿಗದಿಪಡಿಸುವ ವ್ಯವಸ್ಥೆ ಇದೆ. ಇದೀಗ ರಾಜ್ಯ ಸಾರಿಗೆ ಬಸ್‌ಗಳಿಗೂ ಇದೇ ಮಾದರಿಯ ಸ್ವತಂತ್ರ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ನೂತನ ಸಮಿತಿಯ ಪೂರ್ಣ ಸ್ವರೂಪ ಶೀಘ್ರದಲ್ಲೇ ಹೊರಬೀಳಲಿದೆ.

ಹತ್ತು ಸಾವಿರ ಸಿಬ್ಬಂದಿ ನೇಮಕ

ಸಾರಿಗೆ ಸಂಸ್ಥೆಗಳ ಸಬಲೀಕರಣದ ಕುರಿತು ಮಾಹಿತಿ ನೀಡಿದ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಬಸ್ ಖರೀದಿ ಹಾಗೂ ಸಿಬ್ಬಂದಿ ನೇಮಕಾತಿ ಸರಿಯಾಗಿ ನಡೆಯದ ಕಾರಣ ಹಾಲಿ ಸರ್ಕಾರಕ್ಕೆ ಆರ್ಥಿಕ ಮತ್ತು ಆಡಳಿತಾತ್ಮಕ ಹೊರೆಯಾಗಿದೆ ಎಂದು ಟೀಕಿಸಿದರು. ಸಾರಿಗೆ ವ್ಯವಸ್ಥೆಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಈಗಾಗಲೇ ಸುಮಾರು ಹತ್ತು ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದೆ. ಇದರ ಜೊತೆಗೆ, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಸಾರಿಗೆ ಸಂಸ್ಥೆಗಳ ಬಲವರ್ಧನೆಗಾಗಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎರಡು ಸಾವಿರ ಹೊಸ ಬಸ್‌ಗಳನ್ನು ರಸ್ತೆಗಿಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.

Read More
Next Story