ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆ:  ಪರೀಕ್ಷೆ ತಡೆಯುವುದಾಗಿ ನಾರಾಯಣ ಗೌಡ ಎಚ್ಚರಿಕೆ
x
ಕರೆವೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

ರೈಲ್ವೆ ಪರೀಕ್ಷೆಯಲ್ಲಿ 'ಕನ್ನಡ' ಕಡೆಗಣನೆ: ಪರೀಕ್ಷೆ ತಡೆಯುವುದಾಗಿ ನಾರಾಯಣ ಗೌಡ ಎಚ್ಚರಿಕೆ

ಏನೂ ಮಾಡಲಾಗದೆ ಅಸಹಾಯಕರಾಗಿರುವ ಕೇಂದ್ರ ಸಚಿವರಾದ ವಿ. ಸೋಮಣ್ಣ, ಪ್ರಹ್ಲಾದ್ ಜೋಶಿ ಹಾಗೂ ಎಚ್.ಡಿ. ಕುಮಾರಸ್ವಾಮಿ ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.


Click the Play button to hear this message in audio format

ನೈರುತ್ಯ ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿರುವ ಕ್ರಮ ಇದೀಗ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ನಿರಂತರವಾಗಿ ಆಗುತ್ತಿರುವ ಈ ಅನ್ಯಾಯವನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರುಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ನಾಳೆ (ಮಾ. 17) ನಡೆಯಲಿರುವ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸಚಿವರು ರಾಜೀನಾಮೆ ಎಸೆಯಲಿ!

ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಟಿ.ಎ. ನಾರಾಯಣಗೌಡ , ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ರಾಜ್ಯದ ಕೇಂದ್ರ ಸಚಿವರುಗಳಾದ ವಿ. ಸೋಮಣ್ಣ, ಪ್ರಹ್ಲಾದ್ ಜೋಶಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ಎಸೆದು ಹೊರಬರಬೇಕು ಎಂದು ಆಗ್ರಹಿಸಿದರು.

"ನೀವೆಲ್ಲರೂ ದೊಡ್ಡ ಹುದ್ದೆಗಳನ್ನು ನಿಭಾಯಿಸಿದ ಹಿರಿಯರು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಆ ಸ್ಥಾನದಲ್ಲಿ ಮುಂದುವರಿಯುವುದು ಒಳಿತಲ್ಲ. ನಿಮಗೆ ಅಧಿಕಾರ ಕೊಟ್ಟಿದ್ದು ಇದೇ ಕನ್ನಡಿಗರು, ಮೊದಲು ಅವರ ಋಣ ತೀರಿಸಿ. ನೀವು ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಸಾಮೂಹಿಕ ರಾಜೀನಾಮೆ ನೀಡಿದರೆ ಮಾತ್ರ ದೆಹಲಿಯಲ್ಲಿ ಕೂಳಿತಿರುವ ಹಿಂದಿವಾಲಾಗಳು ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ತಮಿಳುನಾಡಿಗೆ ಹೀಗಾಗಿದ್ದರೆ ಅಲ್ಲಿನ ಸಂಸದರು ಸುಮ್ಮನೆ ಕೂರುತ್ತಿದ್ದರೆ?" ಎಂದು ಪ್ರಶ್ನಿಸಿದರು.

ಜೈಲಿನಲ್ಲೇ ಯುಗಾದಿ ಆಚರಿಸಲು ಸೈ

ಮಾ. 17ರಂದು ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಿಗದಿಯಾಗಿರುವ ರೈಲ್ವೆ ಪದೋನ್ನತಿ ಪರೀಕ್ಷೆಗಳನ್ನು ತಡೆಯಲು ಕರವೇ ನಿರ್ಧರಿಸಿದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿಯಿರುವ ವಿಭಾಗೀಯ ಕಚೇರಿ ಮುಂದೆ ನಿಗದಿಯಂತೆ ಬೃಹತ್ ಪ್ರತಿಭಟನೆ ನಡೆಯಲಿದೆ.

ಈ ಹೋರಾಟ ಹತ್ತಿಕ್ಕಲು ಕಾಟನ್‌ಪೇಟೆ ಪೊಲೀಸರು ನೀಡಿರುವ ನೋಟಿಸ್‌ಗೆ ಕ್ಯಾರೇ ಎನ್ನದಿರುವ ನಾರಾಯಣಗೌಡ, "ಇನ್ನೂ ನೂರು ನೋಟಿಸ್ ಕೊಟ್ಟರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕನ್ನಡದ ಮಕ್ಕಳ ಭವಿಷ್ಯ ಆತಂಕದಲ್ಲಿರುವಾಗ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ನಮ್ಮನ್ನು ಜೈಲಿಗೆ ಕಳಿಸಿದರೂ ಚಿಂತೆಯಿಲ್ಲ, ಈ ಬಾರಿ ಜೈಲಿನಲ್ಲೇ ಯುಗಾದಿ ಹಬ್ಬ ಆಚರಿಸುತ್ತೇವೆ" ಎಂದರು.

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೆ ನಕಾರ

"ನಮ್ಮನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಪ್ರತಿಭಟನೆ ಮಾಡಿ ಎನ್ನುತ್ತಾರೆ. ಅಲ್ಲಿ ಕೂತು ಪ್ರತಿಭಟಿಸಿದರೆ, ಪೊಲೀಸರ ಮುಖವನ್ನು ನಾವು, ನಮ್ಮ ಮುಖವನ್ನು ಪೊಲೀಸರು ನೋಡಿಕೊಂಡು ಕೂರಬೇಕಷ್ಟೆ. ದಪ್ಪ ಚರ್ಮದ ರೈಲ್ವೆ ಅಧಿಕಾರಿಗಳಿಗೆ ಅಲ್ಲಿನ ಕೂಗು ಕೇಳುವುದಿಲ್ಲ. ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲೇ ಹುಡುಕಬೇಕು, ಎಲ್ಲಿ ಅನ್ಯಾಯವಾಗಿದೆಯೋ ಅಲ್ಲೇ ಪ್ರಶ್ನಿಸಬೇಕು. ಹೀಗಾಗಿ ರೈಲ್ವೆ ಕಚೇರಿ ಮುಂದೆಯೇ ನಮ್ಮ ಹೋರಾಟ ನಡೆಯಲಿದೆ" ಎಂದು ಅವರು ಸ್ಪಷ್ಟಪಡಿಸಿದರು.

2008ರ ಹೋರಾಟದ ನೆನಪು

ರೈಲ್ವೆ ಇಲಾಖೆಯ ಈ ಮಲತಾಯಿ ಧೋರಣೆ ಹೊಸದೇನಲ್ಲ ಎಂಬುದನ್ನು ಸ್ಮರಿಸಿದ ಅವರು, "2008ರಲ್ಲಿ 4,000ಕ್ಕೂ ಹೆಚ್ಚು 'ಡಿ' ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಬಿಹಾರಿಗಳನ್ನು ತುಂಬುವ ಹುನ್ನಾರ ನಡೆದಿತ್ತು. ಅಂದು ಕರವೇ ನಡೆಸಿದ ತೀವ್ರ ಸ್ವರೂಪದ ಹೋರಾಟದ ಫಲವಾಗಿ ಕನ್ನಡಿಗರಿಗೆ ಕನ್ನಡದಲ್ಲೇ ಪರೀಕ್ಷೆ ಬರೆಯುವ ಅವಕಾಶ ಸಿಕ್ಕಿತ್ತು. ಆದರೆ ಈಗ ಮತ್ತೆ ಕನ್ನಡವನ್ನು ಕೈಬಿಟ್ಟು, ಉತ್ತರ ಭಾರತೀಯರಿಗೆ ಅನುಕೂಲ ಮಾಡಿಕೊಡುವ ಯತ್ನ ನಡೆಯುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ" ಎಂದರು.

ಅನಾಹುತಗಳಿಗೆ ರೈಲ್ವೆ ಇಲಾಖೆಯೇ ಹೊಣೆ

ಬೆಂಗಳೂರು ಮತ್ತು ಹುಬ್ಬಳ್ಳಿ ಪರೀಕ್ಷಾ ಕೇಂದ್ರಗಳ ಬಳಿ ಮಂಗಳವಾರ ಕರವೇಯ ಸಾವಿರಾರು ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅಥವಾ ಯಾವುದೇ ಅನಾಹುತಗಳು ಸಂಭವಿಸಿದರೆ ಅದಕ್ಕೆ ನೇರವಾಗಿ ರೈಲ್ವೆ ಇಲಾಖೆಯೇ ಹೊಣೆಯಾಗಲಿದೆ ಎಂದು ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದರು.

Read More
Next Story