x

ಪೌರ ಕಾರ್ಮಿಕರಿಗೆ ಅಪಮಾನ: ಸಚಿವ ಕೃಷ್ಣ ಬೈರೇಗೌಡ ರಾಜೀನಾಮೆಗೆ ಪೌರಕಾರ್ಮಿಕರ ಆಗ್ರಹ

ಕಾಯಮಾತಿಗೆ ಮನವಿ ಮಾಡಿದ ಪೌರ ಕಾರ್ಮಿಕರನ್ನು ಅವಮಾನಿಸಿದ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಪೌರ ಕಾರ್ಮಿಕರ ಪರಿವರ್ತನಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಕಾರ್ಮಿಕರನ್ನು ಕಾಯಂ ಮಾಡುವುದಾಗಿ ಹೇಳಿದ್ದ ಸರ್ಕಾರ ಮಾತು ತಪ್ಪಿದೆ ಎಂದು ಸಂಘದ ಅಧ್ಯಕ್ಷ ಸಿ.ಎನ್.‌ ಆನಂದ್‌ ಆರೋಪಿಸಿದ್ದಾರೆ.


ಪೌರ ಕಾರ್ಮಿಕರು ಕಾಯಂ ಮಾಡುವಂತೆ ಮನವಿ ನೀಡಿದ್ದಕ್ಕೆ ಅವರನ್ನು ಅಪಮಾನಿಸಿದ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ʼದ ಫೆಡರಲ್ ಕರ್ನಾಟಕʼದ ಜತೆ ಪೌರ ಕಾರ್ಮಿಕರ ಪರಿವರ್ತನಾ ಸಂಘದ ಅಧ್ಯಕ್ಷ ಸಿ.ಎನ್. ಆನಂದ್ ಅವರು ಈ ಬಗ್ಗೆ ಮಾತನಾಡಿದ್ದಾರೆ.‌ ಸಚಿವರ ಹೇಳಿಕೆ ಖಂಡಿಸಿರುವ ಅವರು, ಮೊದಲು ಪೌರಕಾರ್ಮಿಕರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

12 ಸಾವಿರ ಪೌರ ಕಾರ್ಮಿಕರಿದ್ದಾರೆ, ಜನಸಂಖ್ಯೆ ಆಧಾರದ ಮೇಲೆ 32 ಸಾವಿರ ಪೌರ ಕಾರ್ಮಿಕರಿರಬೇಕು. ಇಷ್ಟು ಕಡಿಮೆ ಸಂಖ್ಯೆಯಿದ್ದರೂ ಪೌರ ಕಾರ್ಮಿಕರು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಪೌರ ಕಾರ್ಮಿಕರು ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳಾ ಕಾರ್ಮಿಕರ ಪಾಡು ಹೇಳತೀರದು, ಅವರಿಗೆ ಶೌಚಾಲಯ ಇರುವುದಿಲ್ಲ, ಎಷ್ಟೋ ಮಹಿಳೆ ಕಾರ್ಮಿಕರಿಗೆ ಅನೈರ್ಮಲ್ಯದಿಂದ ಗರ್ಭಪಾತ ಆಗಿದೆ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಪೌರಕಾರ್ಮಿಕರನ್ನು ಕಾಯಂ ಮಾಡುತ್ತೇವೆ ಎಂದು ಹೇಳಿತ್ತು. ಈಗ ಕಾಯಂ ಮಾಡದೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವೆಡೆ ಅಧಿಕಾರಿಗಳೇ ಪ್ರಭಾವ ಬಳಸಿಕೊಂಡು ಕೆಲ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅಂತವರು ಕೆಲಸ ಮಾಡದೇ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಸಚಿವರು ಅಂತಹವರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಿ, ಅದನ್ನು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಅಪಮಾನಿಸುವುದು ಸರಿಯಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.

ಕೃಷ್ಣ ಬೈರೇಗೌಡ ಅವರು ಎಸಿ ರೂಂನಲ್ಲಿ ಕುಳಿತರೆ ಪೌರ ಕಾರ್ಮಿಕರ ಸಮಸ್ಯೆ ಗೊತ್ತಾಗುವುದಿಲ್ಲ. ಕಸದ ಡಂಪಿಂಗ್ ಯಾರ್ಡಿನಲ್ಲಿ ಅರ್ಧ ಗಂಟೆ ಬಂದು ಕಳೆಯಲಿ, ನಮ್ಮ ಕಷ್ಟ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸುವ ಕೆಲಸವನ್ನು ಕೃಷ್ಣ ಬೈರೇಗೌಡ ಅವರು ಮೊದಲು ಮಾಡಲಿ, ಈ ರೀತಿ ಪೌರ ಕಾರ್ಮಿಕರಿಗೆ ಅವಮಾನ ಮಾಡುವ ಹೇಳಿಕೆ ಕೊಟ್ಟಿದ್ದಕ್ಕೆ ಕ್ಷಮೆ‌ ಕೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Read More
Next Story