
ಸಾಂದರ್ಭಿಕ ಚಿತ್ರ
ನವೀಕರಿಸಬಹುದಾದ ಇಂಧನ ಬಳಕೆ| ದೇಶಕ್ಕೇ ಮಾದರಿಯಾದ ಕರ್ನಾಟಕ; 'ಗ್ರೀನ್ ಎನರ್ಜಿ ಕಾರಿಡಾರ್' ಸಿದ್ಧ!
ರಾಜ್ಯದ ಒಟ್ಟು 31 ಸಾವಿರ ಮೆ.ವ್ಯಾ. ವಿದ್ಯುತ್ ಸಾಮರ್ಥ್ಯದಲ್ಲಿ ಸರಿಸುಮಾರು 21 ಸಾವಿರ ಮೆ.ವ್ಯಾ. (ಶೇ. 𝟱𝟳 ರಷ್ಟು) ವಿದ್ಯುತ್‌ನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯಲಾಗುತ್ತಿದೆ.
ಭವಿಷ್ಯದ ವಿದ್ಯುತ್ ಅಗತ್ಯತೆಗಳಿಗೆ ಸಜ್ಜಾಗಿರುವ ಗ್ರಿಡ್ ನಿರ್ಮಾಣ, ಭೌಗೋಳಿಕ ಸವಾಲುಗಳು ಹಾಗೂ ಸಪ್ಲೇ ಚೈನ್ ನಿರ್ವಹಣೆಯನ್ನು ಕರ್ನಾಟಕ ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದೆ. ದೇಶದಲ್ಲಿಯೇ ರಾಜ್ಯ ನವೀಕರಿಸಬಹುದಾದ ವಿದ್ಯುತ್ ಬಳಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (𝗞𝗣𝗧𝗖𝗟) ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಶನಿವಾರ (ಮಾ.21) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೀಕರಿಸಬಹುದಾದ ವಿದ್ಯುತ್ ಬಳಕೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹಲವಾರು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಉತ್ತರ-ದಕ್ಷಿಣ ವಿದ್ಯುತ್ ಅಸಮತೋಲನ ನಿವಾರಣೆ
ರಾಜ್ಯದ ಒಟ್ಟು 31 ಸಾವಿರ ಮೆ.ವ್ಯಾ. ವಿದ್ಯುತ್ ಸಾಮರ್ಥ್ಯದಲ್ಲಿ ಸರಿಸುಮಾರು 21 ಸಾವಿರ ಮೆ.ವ್ಯಾ. (ಶೇ. 𝟱𝟳 ರಷ್ಟು) ವಿದ್ಯುತ್‌ನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯಲಾಗುತ್ತಿದೆ. ಹೆಚ್ಚಿನ ಬಿಸಿಲಿನಿಂದಾಗಿ ಉತ್ತರ ಕರ್ನಾಟಕವು ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯ ಕೇಂದ್ರವಾಗಿದ್ದರೆ, ವಿದ್ಯುತ್ ಬೇಡಿಕೆಯ ಬಹುಪಾಲು ದಕ್ಷಿಣ ಭಾಗಗಳಲ್ಲಿ (ಬೆಂಗಳೂರು) ಕೇಂದ್ರೀಕೃತವಾಗಿದೆ. ಈ ಭೌಗೋಳಿಕ ಸವಾಲನ್ನು ನಿಭಾಯಿಸಲು ಕೆಪಿಟಿಸಿಎಲ್ ಈಗಾಗಲೇ 7 ಸಾವಿರ ಮೆ.ವ್ಯಾ. ಸಾಮರ್ಥ್ಯವನ್ನು ನಿರ್ವಹಿಸುವ ಗ್ರೀನ್ ಎನರ್ಜಿ ಕಾರಿಡಾರ್‌ನ 1 ಮತ್ತು 2 ನೇ ಹಂತಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಮಾಹಿತಿ ನೀಡಿದರು.
19 ಗಿಗಾ ವ್ಯಾಟ್ ಬೃಹತ್ ಕಾರಿಡಾರ್ ಯೋಜನೆ
ಮುಂಬರುವ ವರ್ಷಗಳಲ್ಲಿ ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ವಿದ್ಯುತ್ ಒದಗಿಸಲು ನಾವು 19 ಗಿಗಾವ್ಯಾಟ್ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯನ್ನು ರೂಪಿಸುತ್ತಿದ್ದೇವೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಮೂರು 765 ಕೆ.ವಿ. ಸ್ಟೇಷನ್‌ಗಳು, 400 ಕೆ.ವಿ. 24 ಸಬ್‌ಸ್ಟೇಷನ್‌ಗಳು ಮತ್ತು ಸುಮಾರು 500 ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಮಾರ್ಗಗಳ ಸ್ಥಾಪನೆಯನ್ನು ಒಳಗೊಂಡಿರಲಿದೆ ಎಂದು ಯೋಜನೆಯ ಬಗ್ಗೆ ವಿವರಿಸಿದರು.
ಕೆಪಿಟಿಸಿಎಲ್ ಪ್ರಸ್ತುತ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಮತ್ತು ಪಂಪ್ಡ್ ಸ್ಟೋರೇಜ್ ಹೈಡ್ರೋಗಳತ್ತ ಹೆಚ್ಚಿನ ಗಮನ ಹರಿಸುತ್ತಿದೆ. "ಇದು ಪೀಕ್ ಲೋಡ್ ನಿರ್ವಹಣೆಯ ವೆಚ್ಚವನ್ನು ಗಣನೀಯವಾಗಿ ಇಳಿಸುತ್ತದೆ. ಗರಿಷ್ಠ ಬೇಡಿಕೆಯ ಸಮಯದಲ್ಲಿ ಆರ್‌ಇ ವಿದ್ಯುತ್‌ನ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುವುದರ ಜೊತೆಗೆ, ಶಕ್ತಿಯು ವ್ಯರ್ಥವಾಗದಂತೆ ತಡೆಯುತ್ತದೆ," ಎಂದರು.
ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹ
ವಿದ್ಯುತ್ ಉಪಕರಣಗಳ ರಾಷ್ಟ್ರವ್ಯಾಪಿ ಕೊರತೆಯನ್ನು ಪ್ರಸ್ತಾಪಿಸಿ,"ಭಾರತದಾದ್ಯಂತ ಉತ್ತಮ ಉಪಕರಣಗಳ ಬೇಡಿಕೆ ಹೆಚ್ಚಾಗಿದೆ, ಆದರೆ ಪೂರೈಕೆಯ ಕೊರತೆಯಿದೆ. ಇದನ್ನು ಪರಿಹರಿಸಲು, ವಿದ್ಯುತ್ ಉಪಕರಣಗಳನ್ನು ಉತ್ಪಾದಿಸುವ ಸ್ಥಳೀಯ ತಯಾರಕರಿಗೆ ನಾವು ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಅಗತ್ಯ ನೀತಿ ರೂಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ರಾಜ್ಯದ ಕೈಗಾರಿಕಾ ನೀತಿಯಲ್ಲಿ ಇಂಧನ ಕ್ಷೇತ್ರದ ಅಗತ್ಯತೆಗಳೊಂದಿಗೆ ಹೊಂದಿಸುವ ಮೂಲಕ, ಸ್ಥಳೀಯ ಉತ್ಪಾದನೆ ಮತ್ತು ಜೋಡಣೆಯನ್ನು ಉತ್ತೇಜಿಸುವ ಗುರಿಯನ್ನು ಕರ್ನಾಟಕ ಹೊಂದಿದೆ". ನವೀಕರಿಸಬಹುದಾದ ಇಂಧನ ಯುಗದಲ್ಲಿ ಉತ್ಪಾದನೆ ಮತ್ತು ವಿತರಣೆ ಎರಡನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲು ರಾಜ್ಯವು ಅಳವಡಿಸಿಕೊಂಡಿರುವ ಈ ಮಾದರಿಯು ದೇಶದ ಇತರ ರಾಜ್ಯಗಳಿಗೂ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.

