
ಕೆಪಿಎಸ್‌ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ಇಡಿ ನೋಟಿಸ್
ಪಶು ವೈದ್ಯಾಧಿಕಾರಿಗಳ ನೇಮಕಾತಿಯ ಕೋಟ್ಯಂತರ ರೂಪಾಯಿ ಪ್ರಕರಣ ಸಂಬಂಧ ಇ.ಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಮತ್ತು ಪಾರದರ್ಶಕವಾಗಿ ನಡೆಯಬೇಕಾದ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯ ಮೇಲೆ ಇದೀಗ ಭ್ರಷ್ಟಾಚಾರದ ಕಪ್ಪು ಮಸಿ ಅಂಟಿಕೊಂಡಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಲಂಚ ಪ್ರಕರಣವು ಇದೀಗ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದ್ದು, ಪ್ರಕರಣದ ತನಿಖೆಯು ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಕದ ತಟ್ಟಿದೆ. ಮಂಗಳವಾರ (ಆ.25) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ನಡೆಸಿದ ಪರೀಕ್ಷೆಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ ಎಂಬ ಗಂಭೀರ ಆರೋಪ ಇದೆ. ಪರೀಕ್ಷಾರ್ಥಿಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಅಭ್ಯರ್ಥಿಗಳಿಂದ ತಲಾ 70 ರಿಂದ 80 ಲಕ್ಷ ರೂಪಾಯಿಗಳವರೆಗೆ ಲಂಚದ ಹಣವನ್ನು ವಸೂಲಿ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯೋಗ್ಯತೆಗಿಂತ ಹಣಕ್ಕೆ ಮಣೆ ಹಾಕುವ ಈ ವ್ಯವಸ್ಥಿತ ಭ್ರಷ್ಟಾಚಾರವು ರಾಜ್ಯಾದ್ಯಂತ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಅಕ್ರಮದ ಸೂತ್ರಧಾರರು ಯಾರು ಮತ್ತು ಲಂಚದ ಹಣದ ಜಾಡು ಎಲ್ಲಿಗೆ ತಲುಪಿದೆ ಎಂಬುದನ್ನು ಪತ್ತೆ ಹಚ್ಚಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಜ್ಞಾನೇಂದ್ರ ಕುಮಾರ್ ನಿವಾಸದ ಮೇಲೆ ಇಡಿ ದಾಳಿ
ಭಾನುವಾರ ಮಧ್ಯಾಹ್ನ ಸಶಸ್ತ್ರ ಸಿಆರ್‌ಪಿಎಫ್ ತುಕಡಿಯ ಭದ್ರತೆಯೊಂದಿಗೆ ಇ.ಡಿ ಅಧಿಕಾರಿಗಳ ತಂಡವು ಜಯಮಹಲ್‌ನಲ್ಲಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ನಿವಾಸಕ್ಕೆ ದಿಢೀರ್ ದಾಳಿ ನಡೆಸಿತು. ಜ್ಞಾನೇಂದ್ರ ಕುಮಾರ್ ಮನೆಯಲ್ಲಿರಲಿಲ್ಲ. ಇ.ಡಿ ಅಧಿಕಾರಿಗಳು ಅವರ ಅನುಪಸ್ಥಿತಿಯಲ್ಲೇ ಸುದೀರ್ಘ ಕಾಲ ಮನೆಯನ್ನು ಜಾಲಾಡಿದರು. ನೇಮಕಾತಿ ಪ್ರಕ್ರಿಯೆಯ ಉಸ್ತುವಾರಿಯನ್ನು ಜ್ಞಾನೇಂದ್ರ ಕುಮಾರ್ ವಹಿಸಿಕೊಂಡಿದ್ದರಿಂದ, ಈ ನೇಮಕಾತಿ ಅಕ್ರಮದಲ್ಲಿ ಅವರ ಪಾತ್ರವೇನು? ಅವರು ಯಾರ ಜೊತೆ ಸಂಪರ್ಕದಲ್ಲಿದ್ದರು? ಅವರ ಆಸ್ತಿಪಾಸ್ತಿಗಳ ಮೂಲವೇನು? ಎಂಬಿತ್ಯಾದಿ ವಿಷಯಗಳ ಕುರಿತು ಇಡಿ ತಂಡವು ದಾಖಲೆಗಳನ್ನು ಪರಿಶೀಲಿಸಿತು. ಹಲವು ಗಂಟೆಗಳ ಕಾಲ ನಡೆದ ಈ ಶೋಧ ಕಾರ್ಯಾಚರಣೆಯು ಅಧಿಕಾರಶಾಹಿ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಬಾಗಿಲಿಗೆ ನೋಟಿಸ್ ಅಂಟಿಸಿದ ಅಧಿಕಾರಿಗಳು
ತಪಾಸಣೆ ಪೂರ್ಣಗೊಳಿಸಿದ ಇಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಜ್ಞಾನೇಂದ್ರ ಕುಮಾರ್ ಅವರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಈ ನೋಟಿಸ್ ಅನ್ವಯ, ಜ್ಞಾನೇಂದ್ರ ಕುಮಾರ್ ಅವರು ಮಂಗಳವಾರ (ಆಗಸ್ಟ್ 25) ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಪ್ರಾದೇಶಿಕ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು. ವಿಚಾರಣೆಗೆ ಹಾಜರಾಗುವಾಗ ತಮಗೆ ಲಭ್ಯವಿರುವ ನೇಮಕಾತಿಗೆ ಸಂಬಂಧಿಸಿದ ಆಸ್ತಿ ವಿವರ, ಹಣಕಾಸಿನ ವ್ಯವಹಾರಗಳು ಮತ್ತು ನೇಮಕಾತಿ ಪ್ರಕ್ರಿಯೆಯ ಫೈಲ್‌ಗಳನ್ನು ಜೊತೆಗೆ ತರುವಂತೆ ಸೂಚಿಸಲಾಗಿದೆ. ಒಬ್ಬ ಹಿರಿಯ ಐಎಎಸ್ ಅಧಿಕಾರಿಗೆ ನೇರವಾಗಿ ಇಡಿ ನೋಟಿಸ್ ನೀಡಿರುವುದು ಆಡಳಿತ ವರ್ಗದ ನೈತಿಕತೆಯ ಮೇಲೆ ಪ್ರಶ್ನೆ ಮೂಡಿಸಿದೆ. ಕೆಪಿಎಸ್‌ಸಿಯಂತಹ ಸಾಂವಿಧಾನಿಕ ಸಂಸ್ಥೆಯಲ್ಲಿ ನಡೆಯುವ ನೇಮಕಾತಿಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಹಣದ ವಹಿವಾಟು ನಡೆದಿರುವುದು ಸಾಬೀತಾದರೆ, ಅದು ರಾಜ್ಯ ಸರ್ಕಾರದ ವರ್ಚಸ್ಸಿಗೂ ಧಕ್ಕೆ ತರಲಿದೆ. ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಟ್ಟಲೆ ಓದಿ, ಕಷ್ಟಪಟ್ಟು ಪರೀಕ್ಷೆ ಬರೆದರೆ, ಬರೀ ಹಣ ಕೊಟ್ಟು ಹುದ್ದೆ ಪಡೆಯುವ ವ್ಯವಸ್ಥೆ ಸಮಾಜದ ಬುಡವನ್ನೇ ಅಲುಗಾಡಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಕರಣದಲ್ಲಿ ಕೇವಲ ಜ್ಞಾನೇಂದ್ರ ಕುಮಾರ್ ಅಷ್ಟೇ ಅಲ್ಲದೆ, ಅವರ ಜತೆ ಸಂಪರ್ಕದಲ್ಲಿದ್ದ ಇತರೆ ಅಧಿಕಾರಿಗಳು, ದಲ್ಲಾಳಿಗಳು ಮತ್ತು ಹಣದ ವ್ಯವಹಾರದಲ್ಲಿ ಭಾಗಿಯಾದ ಪ್ರಭಾವಿಗಳ ಹೆಸರುಗಳು ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇಡಿ ತನಿಖೆಯು ಈಗ ಹಣದ ಮೂಲ ಪತ್ತೆ ಹಚ್ಚುವತ್ತ ಕೇಂದ್ರೀಕೃತವಾಗಿದೆ. ಹವಾಲಾ ದಂಧೆ ಅಥವಾ ಅಕ್ರಮ ಹಣ ವರ್ಗಾವಣೆ ನಡೆದಿದ್ದರೆ, ಅದು ಪಿಎಂಎಲ್‌ಎ ಕಾಯ್ದೆಯ ಅಡಿಯಲ್ಲಿ ಜ್ಞಾನೇಂದ್ರ ಕುಮಾರ್ ಅವರಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

