
ಕೆಪಿಎಸ್‌ಸಿ ಗಜೆಟೆಡ್ ಪ್ರೊಬೇಷನರ್ ಪರೀಕ್ಷೆಗೆ ಚುನಾವಣಾ ಮಾದರಿ ಸರ್ಪಗಾವಲು
ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸುವ ಪ್ರತಿಯೊಬ್ಬ ಸಿಬ್ಬಂದಿಗೂ ಚುನಾವಣಾ ಸಿಬ್ಬಂದಿಗೆ ನೀಡುವ ಮಾದರಿಯಲ್ಲೇ ತರಬೇತಿ ನೀಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಿಎಂ ಆದೇಶ ನೀಡಿದರು.
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ರಾಜ್ಯದ 391 ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್ ‘ಎ’ ಮತ್ತು ‘ಬಿ’) ಹುದ್ದೆಗಳ ಭರ್ತಿಗಾಗಿ ನಡೆಸುತ್ತಿರುವ ಪೂರ್ವಭಾವಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ, ನಿಷ್ಪಕ್ಷಪಾತ ಮತ್ತು ಅಕ್ರಮ ರಹಿತವಾಗಿ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ಕೈಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ನೇಮಕಾತಿ ಪರೀಕ್ಷೆಗಳ ವಿಶ್ವಾಸಾರ್ಹತೆಯ ಮೇಲೆ ಸಾರ್ವಜನಿಕರಲ್ಲಿ ಮೂಡಿರುವ ಆತಂಕವನ್ನು ಹೋಗಲಾಡಿಸಲು, ಇಡೀ ಪರೀಕ್ಷಾ ವ್ಯವಸ್ಥೆಯನ್ನು ಚುನಾವಣಾ ಭದ್ರತಾ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗುವ ಪ್ರತಿಯೊಬ್ಬ ಸಿಬ್ಬಂದಿಗೂ ಚುನಾವಣಾ ಸಿಬ್ಬಂದಿಗೆ ನೀಡುವ ಮಾದರಿಯಲ್ಲೇ ತೀವ್ರ ತರಬೇತಿ ನೀಡಿ, ಅದರ ಅನುಪಾಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಳಮಟ್ಟದಲ್ಲೇ ಚಿವುಟಿಹಾಕಲು ಸಿಬ್ಬಂದಿಯ ಜವಾಬ್ದಾರಿ ಅತ್ಯಂತ ನಿರ್ಣಾಯಕ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಕೊಠಡಿ ಮೇಲ್ವಿಚಾರಕರು ಹಾಗೂ ತಪಾಸಣಾ ಸಿಬ್ಬಂದಿಗೆ ನೇರವಾಗಿ ತರಬೇತಿ ನೀಡಬೇಕು. ಯಾವುದೇ ಲೋಪ ಕಂಡುಬಂದಲ್ಲಿ ಮೇಲ್ವಿಚಾರಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ಅಳವಡಿಸಲಾದ ಯಶಸ್ವಿ ಮತ್ತು ಕಟ್ಟುನಿಟ್ಟಿನ ಭದ್ರತಾ ತಂತ್ರಜ್ಞಾನ ಹಾಗೂ ನಿಯಮಗಳನ್ನು ಈ ಕೆಪಿಎಸ್‌ಸಿ ಪರೀಕ್ಷೆಯಲ್ಲೂ ಯಥಾವತ್ತಾಗಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಮೊದಲೇ ಗುರುತಿಸಿ, ಅಂತಹ ಕಡೆಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಭದ್ರತಾ ತಪಾಸಣೆಗಾಗಿ ಅಗತ್ಯವಿರುವ ಲೋಹ ಶೋಧಕಗಳು ಸೇರಿದಂತೆ ಹೆಚ್ಚುವರಿ ಉಪಕರಣಗಳನ್ನು ಬಾಡಿಗೆ ಆಧಾರದ ಮೇಲಾದರೂ ಪಡೆದು ಸನ್ನದ್ಧವಾಗಿಟ್ಟುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ.
ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರು
ಪರೀಕ್ಷಾ ಅಕ್ರಮಗಳನ್ನು ತಡೆಯಲು ಪರೀಕ್ಷಾ ಇತಿಹಾಸದಲ್ಲೇ ಮೊದಲ ಬಾರಿಗೆ ಹಲವು ಆಡಳಿತಾತ್ಮಕ ಬದಲಾವಣೆಗಳನ್ನು ತರಲಾಗಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಗೂ ಇಬ್ಬರು ಮೇಲ್ವಿಚಾರಕರನ್ನು ಕಡ್ಡಾಯವಾಗಿ ನೇಮಿಸಲಾಗುವುದು. ಇಬ್ಬರು ಮೇಲ್ವಿಚಾರಕರಲ್ಲಿ ಒಬ್ಬರು ಕಡ್ಡಾಯವಾಗಿ ಸರ್ಕಾರಿ ಕಾಲೇಜು ಅಥವಾ ಸರ್ಕಾರಿ ಶಾಲಾ ಸಿಬ್ಬಂದಿಯಾಗಿರಬೇಕು. ಖಾಸಗಿ ಅಥವಾ ಅನುದಾನಿತ ಕಾಲೇಜುಗಳ ಸಿಬ್ಬಂದಿ ಮಾತ್ರವೇ ಕೊಠಡಿಯಲ್ಲಿ ಇರುವುದಕ್ಕೆ ಅವಕಾಶವಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಪ್ರವೇಶದ್ವಾರದಲ್ಲಿ ಒಮ್ಮೆ ಮತ್ತು ಕೊಠಡಿಯೊಳಗೆ ಪ್ರವೇಶಿಸಿದ ನಂತರ ಮೇಲ್ವಿಚಾರಕರು ಮತ್ತೊಮ್ಮೆ ಕೂಲಂಕಷ ದೇಹ ತಪಾಸಣೆ ನಡೆಸಲಿದ್ದಾರೆ. ಕೊಠಡಿಯ ಮುಂಭಾಗ ಹಾಗೂ ಹಿಂಭಾಗದಿಂದ ಅಭ್ಯರ್ಥಿಗಳ ಚಲನವಲನದ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ.
ಕ್ರಾಂತಿಕಾರಿ ಪಂಚಸೂತ್ರಗಳು
ಸಭೆಯಲ್ಲಿ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಎಚ್. ಪ್ರಸನ್ನ ಅವರು ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಆಯೋಗವು ಮೊದಲ ಬಾರಿಗೆ ಜಾರಿಗೆ ತರುತ್ತಿರುವ ಐದು ಕ್ರಾಂತಿಕಾರಿ ಸುಧಾರಣಾ ಕ್ರಮಗಳನ್ನು ವಿವರವಾಗಿ ಹಂಚಿಕೊಂಡರು. ಈ ಬಾರಿ ಒಎಂಆರ್ ಶೀಟ್‌ನಲ್ಲಿ ನಾಲ್ಕರ ಬದಲಿಗೆ ಐದು ವೃತ್ತಗಳಿರುತ್ತವೆ (A, B, C, D ಮತ್ತು E/Option 5). ಅಭ್ಯರ್ಥಿಗೆ ಪ್ರಶ್ನೆಗೆ ಉತ್ತರ ತಿಳಿದಿಲ್ಲದಿದ್ದರೆ ಅಥವಾ ಉತ್ತರ ಬರೆಯಲು ಇಷ್ಟವಿಲ್ಲದಿದ್ದರೆ, ಆತ ಕಡ್ಡಾಯವಾಗಿ 5ನೇ ಆಯ್ಕೆಯನ್ನು ಕಪ್ಪಾಗಿಸಬೇಕು. ಯಾವುದೇ ಪ್ರಶ್ನೆಯನ್ನು ಖಾಲಿ ಬಿಡುವಂತಿಲ್ಲ. ಪರೀಕ್ಷೆಯ ನಂತರ ಒಎಂಆರ್ ಶೀಟ್‌ಗಳಲ್ಲಿ ಅಕ್ರಮವಾಗಿ ಬರೆಯುವ ದಂಧೆಗೆ ಇದು ಸಂಪೂರ್ಣ ಕಡಿವಾಣ ಹಾಕಲಿದೆ. ಪರೀಕ್ಷಾರ್ಥಿಗಳಿಗೆ ತ್ರಿಪ್ರತಿಯ ಒಎಂಆರ್ ಹಾಳೆ ನೀಡಲಾಗುತ್ತದೆ.
ಮೊದಲ ಮೂಲ ಪ್ರತಿ ಕೆಪಿಎಸ್‌ಸಿ ಮೌಲ್ಯಮಾಪನಕ್ಕೆ, ಎರಡನೇ ಪ್ರತಿ ಜಿಲ್ಲಾಧಿಕಾರಿ/ಕೆಪಿಎಸ್‌ಸಿ ಸ್ಟ್ರಾಂಗ್ ರೂಮ್‌ನಲ್ಲಿ ಸುರಕ್ಷಿತ ದಾಖಲೆಯಾಗಿ ಸಂಗ್ರಹ. ಮೂರನೇ ಪ್ರತಿ ಅಭ್ಯರ್ಥಿಗಳು ಪರೀಕ್ಷೆಯ ನಂತರ ತಮ್ಮೊಂದಿಗೆ ಕೊಂಡೊಯ್ಯಲು ಅವಕಾಶ. ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿ, ಕಾರಿಡಾರ್ ಹಾಗೂ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಲಿದೆ. ಬ್ಲೂಟೂತ್, ಮೊಬೈಲ್‌ನಂತಹ ಎಲೆಕ್ಟ್ರಾನಿಕ್ ಡಿವೈಸ್ ಬಳಕೆ ತಡೆಯಲು ಜಾಮರ್‌ಗಳನ್ನು ಅಳವಡಿಸಲಾಗುವುದು. ಜಾಮರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಪರಿಶೀಲಿಸಿ ದೃಢೀಕರಿಸಬೇಕು. ಪಾರದರ್ಶಕತೆಯ ಪರಮಾವಧಿಯಾಗಿ, ಪರೀಕ್ಷೆ ಮುಗಿದ ಕೆಲವೇ ಗಂಟೆಗಳಲ್ಲಿ ಅಭ್ಯರ್ಥಿಗಳ ಸ್ಕ್ಯಾನ್ ಮಾಡಿದ ಒಎಂಆರ್ ಪ್ರತಿಗಳನ್ನು ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಇದಕ್ಕಾಗಿ ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಹೈ-ಸ್ಪೀಡ್ ಒಎಂಆರ್ ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರದ ಆವರಣದೊಳಗೆ ಕೇವಲ ಅನುಮತಿ ಪಡೆದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾತ್ರ ಪ್ರವೇಶ. ಪ್ರವೇಶಿಸುವ ಪ್ರತಿಯೊಬ್ಬರೂ ಕಠಿಣ ತಪಾಸಣೆಗೆ ಒಳಗಾಗಬೇಕು. ಅಧಿಕಾರಿಗಳೂ ಸೇರಿದಂತೆ ಯಾರೊಬ್ಬರೂ ಮೊಬೈಲ್ ಒಯ್ಯುವಂತಿಲ್ಲ.
ಖಾಸಗಿ ಅನುದಾನಿತ ಸಂಸ್ಥೆಗಳಿಗೆ ಎಚ್ಚರಿಕೆ
ಪರೀಕ್ಷಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ನೇರ ಎಚ್ಚರಿಕೆ ನೀಡಿದೆ. ಯಾವುದೇ ಖಾಸಗಿ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ, ಸಾಮೂಹಿಕ ನಕಲು ಅಥವಾ ಸಿಬ್ಬಂದಿಯ ಶಾಮೀಲಾತಿ ಕಂಡುಬಂದಲ್ಲಿ, ಅಂತಹ ಕಾಲೇಜುಗಳ ಮಾನ್ಯತೆ ಮತ್ತು ಸರ್ಕಾರಿ ಅನುದಾನವನ್ನು ತಕ್ಷಣವೇ ರದ್ದುಪಡಿಸಲಾಗುವುದು. ಅಕ್ರಮದಲ್ಲಿ ಭಾಗಿಯಾಗುವ ವ್ಯಕ್ತಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ನೇಮಕಾತಿ ಅಕ್ರಮಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಜಾಲಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅಭ್ಯರ್ಥಿಗಳು ಯಾವುದೇ ಆಮಿಷ, ಮಧ್ಯವರ್ತಿಗಳ ಮಾತು ಅಥವಾ ವಾಟ್ಸಾಪ್/ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಹರಿದಾಡುವ ಸುಳ್ಳು ವದಂತಿಗಳಿಗೆ ಬಲಿಯಾಗಬಾರದು. ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡುಬಂದರೆ ತಕ್ಷಣವೇ ಅಧಿಕೃತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಾಧ್ಯಮಗಳು ಕೂಡ ಅಧಿಕೃತ ಮೂಲಗಳಿಂದ ಮಾಹಿತಿ ಖಚಿತಪಡಿಸಿಕೊಂಡ ನಂತರವೇ ಸುದ್ದಿ ಪ್ರಕಟಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ. ಅಭ್ಯರ್ಥಿಗಳು ಸಂಪೂರ್ಣ ಆತ್ಮವಿಶ್ವಾಸ ಮತ್ತು ಏಕಾಗ್ರತೆಯಿಂದ ಪರೀಕ್ಷೆ ಬರೆಯುವಂತೆ ಕರೆ ನೀಡಲಾಗಿದೆ.
ಸಿಂಧುತ್ವ ಪ್ರಮಾಣಪತ್ರ ವಿತರಣೆ
ಮುಂದಿನ ದಿನಗಳಲ್ಲಿ ನಡೆಯಲಿರುವ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ನಕಲಿ ಅಭ್ಯರ್ಥಿಗಳ ಹಾವಳಿ ತಡೆಯಲು ಇ-ಆಡಳಿತ ಇಲಾಖೆಯ ಸಹಯೋಗದಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಗುರುತು ಪರಿಶೀಲನೆ ವ್ಯವಸ್ಥೆಯನ್ನು ಜಾರಿಗೆ ತರಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಗೆ ತಾಂತ್ರಿಕ ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಒಎಂಆರ್ ಸ್ಕ್ಯಾನಿಂಗ್ ಕೇಂದ್ರ ಸ್ಥಾಪಿಸಿ, ಪರೀಕ್ಷೆ ಮುಗಿದ ಅತಿ ಕಡಿಮೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸುವ ವ್ಯವಸ್ಥೆ ರೂಪಿಸಲಾಗುವುದು. ಇದೇ ಸಂದರ್ಭದಲ್ಲಿ, ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ತೊಡಕಾಗಿರುವ ಜಾತಿ ಮತ್ತು ಆದಾಯ ಸಿಂಧುತ್ವ ಪ್ರಮಾಣಪತ್ರ’ ವಿತರಣೆಯನ್ನು ಜಿಲ್ಲಾಧಿಕಾರಿಗಳು ಆದ್ಯತೆಯ ಮೇರೆಗೆ ತ್ವರಿತವಾಗಿ ವಿಲೇವಾರಿ ಮಾಡಬೇಕು. ಪ್ರಮಾಣಪತ್ರ ನೀಡುವಲ್ಲಿನ ವಿಳಂಬದಿಂದಾಗಿ ಆಯ್ಕೆಯಾದ ಅಭ್ಯರ್ಥಿಗಳು ಕೆಲಸಕ್ಕೆ ಸೇರ್ಪಡೆಗೊಳ್ಳುವುದು ತಡವಾಗುತ್ತಿದ್ದು, ಇದಕ್ಕೆ ಆಸ್ಪದ ನೀಡಬಾರದು ಎಂದು ಜಿಲ್ಲಾಡಳಿತಗಳಿಗೆ ತಾಕೀತು ಮಾಡಲಾಯಿತು.
