HDKs statement again brings to the fore allegations of corruption in KAS main exam results
x

ಕರ್ನಾಟಕ ಲೋಕಸೇವಾ ಆಯೋಗ ಬಿಡುಗಡೆ ಮಾಡಿರುವ ಪಟ್ಟಿ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ

ಕೆಎಎಸ್‌ ಮುಖ್ಯಪರೀಕ್ಷೆ ಫಲಿತಾಂಶದಲ್ಲಿ ಭ್ರಷ್ಟಾಚಾರದ ಆರೋಪ, ಎಚ್‌ಡಿಕೆ ಹೇಳಿಕೆ ಮತ್ತೆ ಮುನ್ನೆಲೆಗೆ!

ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣನವರ ಕುಟುಂಬದ ಹಲವರಿಗೆ ಗ್ರೂಪ್‌-ಎ ಹುದ್ದೆಗಳನ್ನು ಕೊಡಿಸಿದ್ದೆ ಎಂಬ ಎಚ್‌.ಡಿ. ಕುಮಾರಸ್ವಾಮಿ ಮಾತು ಇದೀಗ ಸಾಮಾಜಿಕ ಜಾಲತಾಣದೆಲ್ಲೆಡೆ ಚರ್ಚೆಯಾಗುತ್ತಿದೆ.


Click the Play button to hear this message in audio format

ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚೆಗೆ ಪ್ರಕಟಿಸಿರುವ ಗೆಜೆಟೆಡ್‌ ಪ್ರೊಬೇಷನರಿ ಮುಖ್ಯಪರೀಕ್ಷೆಯ ಫಲಿತಾಂಶ ಪಟ್ಟಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಈ ಆರೋಪಗಳ ನಡುವೆ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಐದು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯೊಂದು ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ.

2020 ಅಕ್ಟೋಬರ್‌ 20 ರಂದು ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಶಿಕ್ಷಕರೊಂದಿಗೆ ನಡೆದ ಸಭೆಯೊಂದರಲ್ಲಿ ಮಾತನಾಡಿದ್ದ ಎಚ್‌.ಡಿ. ಕುಮಾರಸ್ವಾಮಿ, "1999-2000 ರಲ್ಲಿ ನನ್ನ ಅಧಿಕಾರ ಅವಧಿಯಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕಾತಿ ನಡೆದಿತ್ತು. ಈ ಸಂದರ್ಭದಲ್ಲಿ ಪುಟ್ಟಣ್ಣ ಇದೊಂದು ಕೆಲಸ ಮಾಡಿಸಿ ಕೊಡಿ ಎಂದು ಅರ್ಜಿ ಹಿಡಿದುಕೊಂಡು ಬಂದಿದ್ದರು. ಅವರ ಕುಟುಂಬದ 10 ರಿಂದ 12 ಮಂದಿ ಸದಸ್ಯರಿಗೆ ಗ್ರೂಪ್‌ ʼಎʼ ಉದ್ಯೋಗ ಕೊಡಿಸಿದ್ದೆ. ಆದರೆ ಇವಾಗ ತುಚ್ಛವಾಗಿ ನನ್ನ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ" ಎಂದು ಹೇಳಿದ್ದರು. ಈ ಮಾತು ಇದೀಗ ಮತ್ತೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.

ಉದ್ಯೋಗ ಕೊಡಿಸಿದ್ದೆ ಎಂದಾದರೆ ಅರ್ಹತೆಯನ್ನು ಮೀರಿ ಶಿಫಾರಸು ಮಾಡಿದ್ದೆ ಎಂಬ ಅರ್ಥ ಬರುತ್ತದೆ. ಹೀಗಾಗಿ ಸಿಎಂ ಆಗಿದ್ದ ಕಾಲದಲ್ಲಿ ಎಚ್​ ಡಿ ಕುಮಾರಸ್ವಾಮಿಯೂ ಕೆಪಿಎಸ್​​ ನೇಮಕದಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ದೂರಲಾಗುತ್ತಿದೆ. ಯಾಕೆಂದರೆ ಅಕ್ರಮದ ಬಗ್ಗೆ ಇದೀಗ ಚರ್ಚೆ ನಡೆಯುತ್ತಿರುವ ನಡುವೆ ಜೆಡಿಎಸ್​ ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಲಾಗಿದೆ. ಈ ಪೋಸ್ಟ್ ಅನ್ನು ಪ್ರಶ್ನಿಸಿರುವ ಹಲವರು ನೀವು ಕೂಡ ಕೆಪಿಎಸ್​​ಸಿನಲ್ಲಿ ಭ್ರಷ್ಟಾಚಾರ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.

ಪ್ರಸ್ತುತ ವಿದ್ಯಾರ್ಥಿಗಳ ಆರೋಪವೇನು ?

2025 ಮೇನಲ್ಲಿ ಕೆಪಿಎಸ್‌ಸಿ 384 ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಿತ್ತು. ಮಾ.1 ರಂದು 1:3 ರ ಅನುಪಾತದಲ್ಲಿ ಪಟ್ಟಿ ಪ್ರಕಟಿಸಿತ್ತು. ಆದರೆ ಈ ಪಟ್ಟಿಯಲ್ಲಿ ಒಂದೇ ಕೇಂದ್ರದ ಸಾಲು ಸಾಲು ನೋಂದಣಿ ಸಂಖ್ಯೆಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಒಂದೇ ಕುಟುಂಬದ ಹಲವರ ಹೆಸರುಗಳೂ ಈ ಪಟ್ಟಿಯಲ್ಲಿವೆ. ಈ ಅಧಿಸೂಚನೆಯಲ್ಲಿ ಕೆಪಿಎಸ್‌ಸಿ ಹೆಚ್ಚು ಭ್ರಷ್ಟಾಚಾರ ನಡೆಸಿದೆ ಎಂದು ಹಲವು ವಿದ್ಯಾರ್ಥಿ ಸಂಘಟನೆಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ.

ತನಿಖೆಗೆ ಜೆಡಿಎಸ್ ಆಗ್ರಹ

ಜೆಡಿಎಸ್‌ ತನ್ನ ಸಾಮಾಜಿಕ ಜಾಲತಾಣ (ಎಕ್ಸ್‌) ನಲ್ಲಿ ಈ ಕುರಿತು ಪ್ರತ್ರಿಯಿಸಿದ್ದು, "ಕೆಪಿಎಸ್‌ಸಿ ಪ್ರಕಟಿಸಿರುವ ಫಲಿತಾಂಶದಲ್ಲಿ ಒಂದೇ ರೂಮಿನ 15 ಅಭ್ಯರ್ಥಿಗಳು ಏಕಕಾಲಕ್ಕೆ ಆಯ್ಕೆಯಾಗುವ 'ಮ್ಯಾಜಿಕ್' ಕೇವಲ ಭ್ರಷ್ಟ ಕಾಂಗ್ರೆಸ್‌ ಸರ್ಕಾರದಲ್ಲಿ ಮಾತ್ರ ಸಾಧ್ಯ. ಕೆಎಎಸ್‌ ಪರೀಕ್ಷೆಯಲ್ಲಿ ಸಿರಿಯಲ್ ನಂಬರ್ ಪ್ರಕಾರವೇ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಎಂದರೆ ಇದು ಪರೀಕ್ಷೆಯೋ ಅಥವಾ ಪ್ರಭಾವಿಗಳ ಮಕ್ಕಳನ್ನು ಸೇರಿಸುವ 'ಸೆಲೆಕ್ಷನ್ ಪ್ರೊಸೆಸ್ಸೋ ? ಭ್ರಷ್ಟಾಚಾರದ ಕೂಪವಾಗಿರುವ ಕೆಪಿಎಸ್‌ಸಿಯಲ್ಲಿ ಹುದ್ದೆಗಳು ಬಿಕರಿಯಾಗುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿ. ಸಿಎಂ ಸಿದ್ದರಾಮಯ್ಯನವರೇ ಇದೇನಾ ನಿಮ್ಮ ಆಡಳಿತದ ಪಾರದರ್ಶಕತೆ ? ​​ಕೆಎಎಸ್ ಪರೀಕ್ಷಾ ಅಕ್ರಮದ ಬಗ್ಗೆ ಈ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಜ್ಯದ ಜನರ ಪರವಾಗಿ ಆಗ್ರಹಿಸುತ್ತೇವೆ" ಎಂದು ತಿಳಿಸಿದೆ.

ವರದಿ ಕೇಳಿದ ಸರ್ಕಾರ

ಕೆಪಿಎಸ್‌ಸಿ ಪ್ರಕಟಿಸಿರುವ ಮುಖ್ಯ ಪರೀಕ್ಷೆ ಫಲಿತಾಂಶದ ಪಟ್ಟಿಗೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಈ ಕುರಿತು ಶೀಘ್ರ ವರದಿ ನೀಡುವಂತೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಕೆಪಿಎಸ್‌ಸಿ ಹೇಳುವುದೇನು ?

ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಭಯ ಪಡುವ ಅಗತ್ಯವಿಲ್ಲ. ಒಂದೇ ಕೊಠಡಿಯ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಿರ್ಣರಾಗಿರುವುದು ಒಂದು ಇತಿಹಾಸ. ಇಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ. ಈ ಆರೋಪಗಳಿಗೆ ದಾಖಲೆ ಒದಗಿಸಿದರೆ ತನಿಖೆ ನಡೆಸಲಾಗುವುದು ಎಂದು ಕಾರ್ಯದರ್ಶಿ ಜ್ಯೋತಿ ಕೆ. ತಿಳಿಸಿದ್ದಾರೆ.

Read More
Next Story