No recruitment for now | High Court postpones hearing on 56% reservation
x

ಕೆಎಟಿಗೆ ಇನ್ಮುಂದೆ ಕನ್ನಡದಲ್ಲೂ ಅರ್ಜಿ ಸಲ್ಲಿಸಬಹುದು. ಕನ್ನಡದಲ್ಲಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ್ದ ಕೆಎಟಿ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಧಿಕಾರಿಗಳ ಮುದ್ರಣ ದೋಷಕ್ಕೆ ನಿರುದ್ಯೋಗಿ ಬಲಿಪಶುವಾಗಬಾರದು: ಹೈಕೋರ್ಟ್

ತುಮಕೂರು ಮೂಲದ ಅಭ್ಯರ್ಥಿಗೆ ಮುಂದಿನ 8 ವಾರಗಳಲ್ಲಿ ಅಬಕಾರಿ ರಕ್ಷಕ ಹುದ್ದೆ ನೇಮಕಾತಿ ಆದೇಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.


Click the Play button to hear this message in audio format

"ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಯೇ ಇಂದಿನ ತುರ್ತು ಅಗತ್ಯ ಮತ್ತು ವಿಕಸಿತ ಭಾರತದ ಮೂಲ ಆಶಯವಾಗಿದೆ. ಶಾಲಾ ದಾಖಲೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಮಾಡುವ ಅಕ್ಷರ ಅಥವಾ ಮುದ್ರಣ ದೋಷಗಳಿಗೆ ಮುಗ್ಧ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಯಾವುದೇ ಕಾರಣಕ್ಕೂ ಹೊಣೆಗಾರರಲ್ಲ. ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ದೋಷಕ್ಕೆ ನಿರುದ್ಯೋಗಿ ಯುವಕನೊಬ್ಬ ತನ್ನ ಬದುಕಿನ ತುತ್ತಿನ ಚೀಲವನ್ನು ಕಳೆದುಕೊಳ್ಳುವಂತಾಗಬಾರದು" ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಮುದ್ರಣ ದೋಷದಿಂದಾಗಿ ಅರ್ಹತೆ ಇದ್ದರೂ ಉದ್ಯೋಗ ವಂಚಿತರಾಗಿದ್ದ ತುಮಕೂರು ಮೂಲದ ಅಭ್ಯರ್ಥಿಗೆ ಮುಂದಿನ 8 ವಾರಗಳಲ್ಲಿ ಅಬಕಾರಿ ರಕ್ಷಕ ಹುದ್ದೆ ನೇಮಕಾತಿ ಆದೇಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಮೂಲಕ ಬರೋಬ್ಬರಿ 16 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.

ಅರ್ಹತೆ ಇದ್ದರೂ ತಪ್ಪಿದ್ದ ಉದ್ಯೋಗ

ಕರ್ನಾಟಕ ಲೋಕಸೇವಾ ಆಯೋಗವು 2008ರಲ್ಲಿ ಅಬಕಾರಿ ಇಲಾಖೆಯಲ್ಲಿನ ಅಬಕಾರಿ ರಕ್ಷಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಈ ನೇಮಕಾತಿಗೆ ತುಮಕೂರು ತಾಲೂಕಿನ ಕಳ್ಳಿಪಾಳ್ಯ ಗ್ರಾಮದ ಮಂಜುನಾಥ್ ಕೆ. ಅರ್ಜಿ ಸಲ್ಲಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಠಿಣ ಪರಿಶ್ರಮ ವಹಿಸಿದ್ದ ಮಂಜುನಾಥ್ ಬರೋಬ್ಬರಿ 231 ಅಂಕಗಳನ್ನು ಗಳಿಸಿ ಮೆರಿಟ್ ಆಧಾರದಲ್ಲಿ ಉತ್ತಮ ರ್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದರು. ಆದರೆ, 2010ರಲ್ಲಿ ಕೆಪಿಎಸ್‌ಸಿ ನಡೆಸಿದ ಮೂಲ ದಾಖಲಾತಿಗಳ ಪರಿಶೀಲನೆ ವೇಳೆ ತಾಂತ್ರಿಕ ಎಡವಟ್ಟೊಂದು ಎದುರಾಯಿತು. ಮಂಜುನಾಥ್ ಅವರ ಶಾಲಾ ವರ್ಗಾವಣೆ ಪ್ರಮಾಣಪತ್ರ ಹಾಗೂ ಇತರ ಪೂರಕ ದಾಖಲೆಗಳಲ್ಲಿ ಅವರ ಜನ್ಮ ದಿನಾಂಕ '1982ರ ಜೂನ್ 15' ಎಂದಿತ್ತು. ಆದರೆ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೀಡಿದ್ದ ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿಯಲ್ಲಿ ಅಧಿಕಾರಿಗಳ ಮುದ್ರಣ ದೋಷದಿಂದಾಗಿ ಜನ್ಮ ದಿನಾಂಕ '1980ರ ಜೂನ್ 15' ಎಂದು ತಪ್ಪಾಗಿ ನಮೂದಾಗಿತ್ತು. ಇದರಿಂದಾಗಿ ಅಭ್ಯರ್ಥಿಗೆ ನಿಗದಿತ ವಯೋಮಿತಿ ಮೀರಿದೆ ಎಂಬ ಆಕ್ಷೇಪವೆತ್ತಿದ ಕೆಪಿಎಸ್‌ಸಿ, ತಿದ್ದುಪಡಿ ಮಾಡಿದ ಅಂಕಪಟ್ಟಿ ತರಲು ಕೆಲವೇ ದಿನಗಳ ತೀರಾ ಕಡಿಮೆ ಕಾಲಾವಕಾಶ ನೀಡಿತು. ಸರ್ಕಾರಿ ಕಚೇರಿಗಳಲ್ಲಿ ಕೆಲವೇ ದಿನಗಳಲ್ಲಿ ತಿದ್ದುಪಡಿ ದಾಖಲೆ ಪಡೆಯುವುದು ಅಸಾಧ್ಯವಾಗಿದ್ದರಿಂದ ಮಂಜುನಾಥ್‌ಗೆ ನಿಗದಿತ ಅವಧಿಯಲ್ಲಿ ದಾಖಲೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಕೆಪಿಎಸ್‌ಸಿ ಮಂಜುನಾಥ್ ಅವರ ಆಯ್ಕೆಯನ್ನು ರದ್ದುಪಡಿಸಿ, ಅವರಿಗಿಂತ ಕಡಿಮೆ ಅಂಕ ಗಳಿಸಿದ್ದ ಮತ್ತೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿ ಪ್ರಕಟಿಸಿತು.

ಸಿವಿಲ್ ನ್ಯಾಯಾಲಯದಿಂದ ಕೆಎಟಿ ಮೆಟ್ಟಿಲೇರಿದ ಪ್ರಕರಣ

ತಮಗೆ ಅನ್ಯಾಯವಾಗಿದ್ದನ್ನು ಪ್ರಶ್ನಿಸಿ ಮಂಜುನಾಥ್ ಮೊದಲು ಜನ್ಮ ದಿನಾಂಕ ತಿದ್ದುಪಡಿಗಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋದರು. ಈ ದಾವೆಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ, ಶಿಕ್ಷಣ ಇಲಾಖೆಯ ಅಧಿಕಾರಿಗಳು ದಾಖಲೆಗಳನ್ನು ಮರುಪರಿಶೀಲಿಸಿ, ತಮ್ಮ ಕಡೆಯಿಂದಲೇ ಮುದ್ರಣ ದೋಷವಾಗಿರುವುದನ್ನು ಒಪ್ಪಿಕೊಂಡು 2011ರಲ್ಲಿ ತಿದ್ದುಪಡಿ ಮಾಡಿದ ಹೊಸ ಅಂಕಪಟ್ಟಿಯನ್ನು ಮಂಜುನಾಥ್ ಅವರಿಗೆ ನೀಡಿದರು. ಹೀಗಾಗಿ ಸಿವಿಲ್ ದಾವೆ ನಿರರ್ಥಕವಾಯಿತು. ಬಳಿಕ, ತಿದ್ದುಪಡಿಯಾದ ಸರಿಯಾದ ದಾಖಲೆಯೊಂದಿಗೆ ಮಂಜುನಾಥ್ ತಮ್ಮ ಉದ್ಯೋಗಕ್ಕಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಮೆಟ್ಟಿಲೇರಿದರು. ಅರ್ಜಿಯ ಸಮಗ್ರ ವಿಚಾರಣೆ ನಡೆಸಿದ ಕೆಎಟಿ, ಅಭ್ಯರ್ಥಿಯ ಪರವಾಗಿ ಆದೇಶ ನೀಡಿ, ಅವರಿಗೆ ಅಬಕಾರಿ ರಕ್ಷಕ ಹುದ್ದೆ ನೀಡುವಂತೆ 2018ರಲ್ಲಿ ಸರ್ಕಾರಕ್ಕೆ ನಿರ್ದೇಶಿಸಿತು. ಆದರೆ, ಈ ಆದೇಶವನ್ನು ಜಾರಿಗೊಳಿಸದ ರಾಜ್ಯ ಸರ್ಕಾರ, ಕೆಎಟಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತು.

ಸರ್ಕಾರದ ವಾದಕ್ಕೆ ಹೈಕೋರ್ಟ್ ತೀವ್ರ ತರಾಟೆ

ಹೈಕೋರ್ಟ್‌ನಲ್ಲಿ ಸರ್ಕಾರದ ಪರ ವಕೀಲರು ವಾದ ಮಂಡಿಸಿ, "ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಜನ್ಮ ದಿನಾಂಕ ತಿದ್ದುಪಡಿ ಮಾಡಲು ಸಿವಿಲ್ ನ್ಯಾಯಾಲಯದ ಅಧಿಕೃತ ಡಿಕ್ರಿ (ಆದೇಶ) ಕಡ್ಡಾಯವಾಗಿದೆ. ಆದರೆ, ಈ ಪ್ರಕರಣದಲ್ಲಿ ಸಿವಿಲ್ ಕೋರ್ಟ್‌ನ ಯಾವುದೇ ಡಿಕ್ರಿ ಇಲ್ಲದೆಯೇ ಶಿಕ್ಷಣ ಇಲಾಖೆಯ ಅಧಿಕಾರಿಗಳು 2011ರಲ್ಲಿ ನಿಯಮಬಾಹಿರವಾಗಿ ಅಂಕಪಟ್ಟಿ ತಿದ್ದುಪಡಿ ಮಾಡಿದ್ದಾರೆ. ಹೀಗಾಗಿ ಇವರ ಆಯ್ಕೆ ರದ್ದುಪಡಿಸಿರುವುದು ಸರಿ" ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಸರ್ಕಾರದ ಈ ವಾದಕ್ಕೆ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ವಿಭಾಗೀಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ನ್ಯಾಯಪೀಠದ ಪ್ರಮುಖ ಅವಲೋಕನಗಳು

ಸರ್ಕಾರಿ ಅಧಿಕಾರಿಯೇ ಸ್ವತಃ ಮಾಡಿದ ತಪ್ಪನ್ನು ತಿದ್ದಿ ಹೊಸ ಅಂಕಪಟ್ಟಿ ನೀಡಿದ ಮೇಲೆ, ಆ ಸಿವಿಲ್ ದಾವೆ ತನ್ನಿಂತಾನೇ ನಿರರ್ಥಕವಾಗುತ್ತದೆ. ಈಗ ಸರ್ಕಾರವೇ ತನ್ನ ಅಧಿಕಾರಿಯ ತಪ್ಪನ್ನು ಮುಂದಿಟ್ಟುಕೊಂಡು, ಕಷ್ಟಪಟ್ಟು ಪರೀಕ್ಷೆ ಬರೆದ ಅರ್ಹ ನಿರುದ್ಯೋಗಿ ಅಭ್ಯರ್ಥಿಯ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಜನ್ಮ ದಿನಾಂಕದ ಪುರಾವೆಗಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಟಿಸಿ ಅಥವಾ ಸಂಚಿತ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಲು ಕೆಪಿಎಸ್‌ಸಿ ತನ್ನ ಅಧಿಸೂಚನೆಯಲ್ಲೇ ಅವಕಾಶ ನೀಡಿತ್ತು. ಮಂಜುನಾಥ್ ಅವರ ಟಿಸಿಯಲ್ಲಿ ಸರಿಯಾದ ಜನ್ಮ ದಿನಾಂಕ ಇದ್ದರೂ, ಅದನ್ನು ಪರಿಗಣಿಸದೆ ತಿರಸ್ಕರಿಸಿದ್ದು ಸ್ವತಃ ಕೆಪಿಎಸ್‌ಸಿ ಮಾಡಿದ ದೊಡ್ಡ ತಪ್ಪು. ಅಧಿಕಾರಶಾಹಿಯ ನಿರ್ಲಕ್ಷ್ಯ ಮತ್ತು ದಾಖಲೆಗಳ ದೋಷಕ್ಕೆ ಪ್ರಜೆಗಳನ್ನು ದಂಡಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ. ಅರ್ಹರಿಗೆ ಸಕಾಲದಲ್ಲಿ ಉದ್ಯೋಗ ನೀಡುವುದು ಆಡಳಿತದ ಜವಾಬ್ದಾರಿ ಎಂದು ಪೀಠ ಎಚ್ಚರಿಸಿತು.

Read More
Next Story