
ಪಾಕಿಸ್ತಾನದೊಂದಿಗೆ ಗುಪ್ತ ಸಭೆ: ರಾಮ್ ಮಾಧವ್ ವಿರುದ್ಧ ಬಿ.ಕೆ. ಹರಿಪ್ರಸಾದ್ ಆಕ್ರೋಶ
ದೇಶದ ಜನರು ಸ್ವಾತಂತ್ರ್ಯ ಹೋರಾಟದ ಕನಿಷ್ಠ ಶೇ.25 ಇತಿಹಾಸವನ್ನು ತಿಳಿದುಕೊಂಡರೆ ಸಾಕು, ಖಾಕಿ ಚಡ್ಡಿ,ಕರಿ ಟೋಪಿಯವರು ಊರು ಬಿಟ್ಟು ಓಡಿಹೋಗುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.
ಬೆಂಗಳೂರು ಚುನಾವಣೆ ಉಸ್ತುವಾರಿಯಾಗಿರುವ ಆರೆಸ್ಸೆಸ್ ಮುಖಂಡ ರಾಮ್ ಮಾಧವ್ ಅವರು ಲಂಡನ್ ಮತ್ತು ಕೊಲಂಬೊದಲ್ಲಿ ಪಾಕಿಸ್ತಾನದ ಐಎಸ್ಐ ಮಾಜಿ ಮೇಜರ್ ಜನರಲ್ ಜೊತೆಗೆ ಗುಪ್ತ ಸಭೆಗಳನ್ನು ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಜೋಡೋ ಭವನದಲ್ಲಿ ನಡೆದ ದೇಶದ ಇತಿಹಾಸ, ಸ್ವಾತಂತ್ರ್ಯ ಸಂಗ್ರಾಮದ ಮಹತ್ವ ಮತ್ತು ಪ್ರಸ್ತುತ ರಾಜಕೀಯ ಸನ್ನಿವೇಶದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಪ್ರಚಾರಕರಾದ ರಾಮ್ ಮಾಧವ್ ಯಾವ ಅಧಿಕಾರ ಇಟ್ಟುಕೊಂಡು ದೇಶದ ವಿದೇಶಾಂಗ ನೀತಿಯ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ? ದೇಶದ ಜನರ ಬಳಿ ಈ ಸಭೆಗಳ ಮಾಹಿತಿ ಏಕೆ ಇಲ್ಲ? ಎಂದು ಪ್ರಶ್ನಿಸಿದರು. ಅಲ್ಲದೆ, ಆಪರೇಷನ್ ಸಿಂಧೂರ್‌ನಲ್ಲಿ ಯೋಧರು ಮೃತಪಟ್ಟಿಲ್ಲ ಎಂದು ಮೊದಲು ಹೇಳಿ, ನಂತರ ರಾಜನಾಥ್ ಸಿಂಗ್ ಅವರು ಸೈನಿಕರ ಸಾವನ್ನು ದೃಢಪಡಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಸೈನಿಕರ ಸಾವಿನ ವಿಚಾರದಲ್ಲೂ ಸುಳ್ಳು ಹೇಳುವ ಇವರು ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ನಮ್ಮ ಸರ್ಕಾರವಿದ್ದಾಗ ಭಯೋತ್ಪಾದನೆ ನಿಗ್ರಹವಾಗುವವರೆಗೆ ಮಾತುಕತೆ ಇಲ್ಲ ಎಂದು ಕಟ್ಟುನಿಟ್ಟಾಗಿದ್ದೆವು. ಆದರೆ ಇವರು ಪಾಕಿಸ್ತಾನದೊಂದಿಗೆ ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶದ ಜನರು ಸ್ವಾತಂತ್ರ್ಯ ಹೋರಾಟದ ಕನಿಷ್ಠ ಶೇ.25 ಇತಿಹಾಸವನ್ನು ತಿಳಿದುಕೊಂಡರೆ ಸಾಕು, ಖಾಕಿ ಚಡ್ಡಿ ಮತ್ತು ಕರಿ ಟೋಪಿಯವರು ಊರು ಬಿಟ್ಟು ಓಡಿಹೋಗುತ್ತಾರೆ. ನಮ್ಮ ಪೂರ್ವಜರು ಅಪಾರ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಂದು ಒಡೆದಿದ್ದ ರಾಜ ಸಂಸ್ಥಾನಗಳನ್ನು ಏಕೀಕೃತ ಭಾರತದ ಭಾಗವಾಗಿಸಲು ಸರ್ದಾರ್ ವಲಭಭಾಯಿ ಪಟೇಲ್ ಮತ್ತು ನೆಹರೂ ಅವರ ಪಾತ್ರ ಅತಿದೊಡ್ಡದು. 1952ರಲ್ಲಿ ಕೇವಲ 400 ಕೋಟಿ ಬಜೆಟ್ ಹೊಂದಿದ್ದ ದೇಶ, ನೆಹರೂ ಮತ್ತು ಇಂದಿರಾ ಗಾಂಧಿ ಅವರ ದೂರದೃಷ್ಟಿಯಿಂದ ಇಂದು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಇವೆಲ್ಲವನ್ನೂ ಸಾಧಿಸಿದ್ದು ಕಾಂಗ್ರೆಸ್ ಸರ್ಕಾರಗಳೇ ಹೊರತು ಮೋದಿ ಅಥವಾ ಆರೆಸ್ಸೆಸ್ ಅಲ್ಲ ಎಂದು ಸ್ಪಷ್ಟಪಡಿಸಿದರು.
ಗಾಂಧೀಜಿ ಅವರ ಸರ್ವಧರ್ಮ ಸಮಭಾವ, ಸಂವಿಧಾನ, ತ್ರಿವರ್ಣ ಧ್ವಜ ಮತ್ತು ಜಾತ್ಯತೀತ ತತ್ವಗಳನ್ನು ಅವರು ಒಪ್ಪಿಕೊಂಡರೆ ನಾವು ಅವರ ವಿರೋಧಿಗಳಲ್ಲ. ಆದರೆ, ಸ್ವಾತಂತ್ರ್ಯಪೂರ್ವದಲ್ಲೂ ಸ್ವಾತಂತ್ರ್ಯ ಹೋರಾಟದ ವಿರುದ್ಧವಿದ್ದವರು, ಇಂದಿಗೂ ಸಂವಿಧಾನ ಮತ್ತು ದೇಶದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇಂತಹ ದ್ವೇಷ ಮತ್ತು ಹಿಂಸೆಯ ಸಿದ್ಧಾಂತವನ್ನು ನಾವು ಮುಂದಿನ ಪೀಳಿಗೆಗೆ ಬಿಟ್ಟುಕೊಡಬಾರದು ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇವಾಲಯಗಳನ್ನು ಲೂಟಿ ಮಾಡಿದ್ದು ಯಾರು?
ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡ ಹರಿಪ್ರಸಾದ್, ನಾನು ಹಿಂದೂ, ಆದರೆ ನಾನು ನಂಬುವ ಹಿಂದೂ ಧರ್ಮ ಬಸವಣ್ಣ, ವಿವೇಕಾನಂದ, ನಾರಾಯಣಗುರುಗಳದ್ದು. ಗೋಡ್ಸೆ ಮತ್ತು ಗೋಲ್ವಾಲ್ಕರ್ ಅವರ ಸಿದ್ಧಾಂತದ ಹಿಂದೂ ಧರ್ಮ ನನ್ನದಲ್ಲ. ದೇಶದಲ್ಲಿ ದೇವಾಲಯಗಳನ್ನು ಲೂಟಿ ಮಾಡಿದವರು ಮೊಹಮ್ಮದ್ ಘಜ್ನಿ ಎಂದು ಓದಿದ್ದೇವೆ. ಆದರೆ, ಈಗ ದೇವಾಲಯಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿ, ಅದನ್ನು ಲೂಟಿ ಮಾಡುತ್ತಿರುವುದು ಆರೆಸ್ಸೆಸ್ ಮತ್ತು ಬಿಜೆಪಿಯವರು. ದಲಿತರು, ಶೂದ್ರರ ಮೇಲೆ ಧರ್ಮದ ಹೆಸರಿನಲ್ಲಿ ಗಲಾಟೆ ಮಾಡಿಸಿ, ಅವರನ್ನು ಜೈಲಿಗೆ ಕಳುಹಿಸುವ ಇವರು ನಮಗೆ ಧರ್ಮದ ಪಾಠ ಮಾಡುವುದು ಹಾಸ್ಯಾಸ್ಪದ. 7 ಧರ್ಮಗಳು, 21 ಅಧಿಕೃತ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳನ್ನು ಹೊಂದಿರುವ ಭಾರತದ ವೈವಿಧ್ಯತೆ ಜಗತ್ತಿನಲ್ಲೇ ಅದ್ಭುತವಾದದ್ದು. ಆದರೆ, ಈಗಿನ ಸರ್ಕಾರ 'ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ಧರ್ಮ' ಎನ್ನುವ ಮೂಲಕ ದೇಶದ ಆತ್ಮವನ್ನೇ ನಾಶ ಮಾಡಲು ಹೊರಟಿದೆ. ಇದು ಭಾರತದ ಅಸ್ತಿತ್ವಕ್ಕೆ ಮಾರಕ ಎಂದು ಎಚ್ಚರಿಸಿದರು.

